Advertisement
ಅನಿವಾರ್ಯವಾಗಿ ಅಭ್ಯಾಸಕ್ಕೆ ಸ್ಥಳ ಹುಡುಕಿಕೊಂಡು ಹೊರಟಿರುವ ಅಥ್ಲೀಟ್‌ಗಳು ವಿವಾದಾತ್ಮಕ ಮತ್ತು ಅಷ್ಟೇ ಗಲೀಜು ಪ್ರದೇಶದಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಇದೇ ಜಾಗದಲ್ಲಿ ಬಿಲ್ಗಾರರೂ ಅಭ್ಯಾಸ ನಡೆಸುತ್ತಿರುವುದರಿಂದ ಅವರಿಗೂ ಮತ್ತು ಜಾವೆಲಿನ್, ಡಿಸ್ಕಸ್ ಸ್ಪರ್ಧಿಗಳಿಗೂ ನಡುವೆ ಜಗಳ ಆರಂಭವಾಗಿದೆ.
Related Articles
Advertisement
ಇದು ಬರೀ 3 ವರ್ಷಗಳ ಒಪ್ಪಂದ, ಅಲ್ಲಿಯವರೆಗೆ ಸುಧಾರಿಸಿಕೊಳ್ಳಿ ಎಂದು ಕ್ರೀಡಾ ಇಲಾಖೆ ಅಥ್ಲೀಟ್‌ಗಳನ್ನೇ ಸಮಾಧಾನಪಡಿಸಿ ಕಳುಹಿಸಿತು. ಪೆಚ್ಚು ಮುಖ ಹಾಕಿಕೊಂಡು ಅವರೆಲ್ಲ ವಾಪಸ್ ಆದರು. ಮುಖ್ಯ ಕ್ರೀಡಾಂಗಣದಲ್ಲಿ ಅವಕಾಶ ಸಿಗದಿರುವುದರಿಂದ ಜಾವೆಲಿನ್, ಹ್ಯಾಮರ್ ಥ್ರೋ ಸ್ಪರ್ಧಿಗಳು ಅಭ್ಯಾಸಕ್ಕಾಗಿ ಮೀಸಲಿಟ್ಟ ಕ್ರೀಡಾಂಗಣಕ್ಕೆ ತೆರಳಿದರು. ಈ ವೇಳೆ ಅಲ್ಲಿ ಬಿಲ್ಗಾರಿಕೆ ಕ್ರೀಡಾಪಟುಗಳು ಅಭ್ಯಾಸ ನಡೆಸುತ್ತಿರುವುದರಿಂದ ಇಬ್ಬರ ನಡುವಿನ ವಾಗ್ವಾದಕ್ಕೆ ಕಾರಣವಾಯಿತು.
ಅಥ್ಲೀಟ್ಸ್ ದೂರೇನು?: ಡೆಕಾಥ್ಲಾನ್ ಕೋಚ್ ಎನ್.ಆರ್.ರಮೇಶ್ ಉದಯವಾಣಿಗೆ ಮಾತನಾಡಿದ್ದಾರೆ. ಅಥ್ಲೀಟ್‌ಗಳ ತೊಂದರೆಯನ್ನು ಬಿಚ್ಚಿಟ್ಟಿದ್ದಾರೆ. ಅಭ್ಯಾಸಕ್ಕೆ ಕ್ರೀಡಾಂಗಣ ಸಿಗದೆ ಇಂತಹದೊಂದು ಸಂದಿಗ್ಧ ಸನ್ನಿವೇಶ ನಿರ್ಮಾಣವಾಗಿದೆ. ಇದರಿಂದಾಗಿ ಅಥ್ಲೀಟ್‌ಗಳು ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಕಳೆದ 3 ವರ್ಷದಿಂದ ನಾವು ಬೇರೆ ದಾರಿ ಇಲ್ಲದೆ ಮುಖ್ಯ ಕ್ರೀಡಾಂಗಣದ ಪಕ್ಕದಲ್ಲಿರುವ ಅಭ್ಯಾಸಕ್ಕಾಗಿ ಮೀಸಲಿಟ್ಟ 200 ಮೀ. ಟ್ರ್ಯಾಕ್‌ನಲ್ಲಿ ಮಕ್ಕಳಿಗೆ ತರಬೇತಿ ನೀಡುತ್ತಿದ್ದೇನೆ. ಇದೇ ವೇಳೆ ಬಿಲ್ಗಾರಿಕೆಯವರೂ ಬರುವುದರಿಂದ ನಮ್ಮ ಅಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಹಲವು ಸಲ ವಾಗ್ವಾದಗಳು ನಡೆದಿದೆ. ಇತ್ತೀಚೆಯೂ ಬಿಲ್ಗಾರಿಕೆಯವರ ಜತೆಗೆ ಮಾತಿನ ಸಮರ ನಡೆದಿತ್ತು. ಈ ಬಗ್ಗೆ ಕ್ರೀಡಾ ಇಲಾಖೆಗೂ ಮಾಹಿತಿ ಇದೆ ಎಂದು ತಿಳಿಸಿದ್ದಾರೆ.
ಬಿಲ್ಗಾರಿಕೆಯವರು ಹೇಳುವುದೇನು?: ವಿವಾದದ ಬಗ್ಗೆ ರಾಜ್ಯ ಬಿಲ್ಗಾರಿಕೆ ಸಂಸ್ಥೆ ಕಾರ್ಯದರ್ಶಿ ಅನಂತ್ ರಾಜ್ ಉದಯವಾಣಿಯೊಂದಿಗೆ ಮಾತನಾಡಿದ್ದಾರೆ. ಹೆಚ್ಚಿನ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದ್ದಾರೆ. ಒಂದು ಕಡೆ ಬಿಲ್ಗಾರಿಕೆ ಅಭ್ಯಾಸ ನಡೆಸುವಾಗ ಮತ್ತೂಂದು ಕಡೆ ಜಾವೆಲಿನ್, ಡಿಸ್ಕಸ್ ಸ್ಪರ್ಧಿಗಳೂ ಅಭ್ಯಾಸ ನಡೆಸುತ್ತಿರುತ್ತಾರೆ. ಈ ವೇಳೆ ಬಾಣಗಳು ಜಾವೆಲಿನ್, ಡಿಸ್ಕಸ್ ಸ್ಪರ್ಧಿಗಳಿಗೆ ತಗುಲಿದರೆ ಅಥವಾ ಜಾವೆಲಿನ್ ಇನ್ಯಾರಿಗಾದರೂ ತಗುಲಿ ಜೀವಾಪಾಯವಾದರೆ ಏನು ಮಾಡುವುದು ಎನ್ನುವುದು ಅವರ ಆತಂಕ.
200 ಮೀ. ಟ್ರ್ಯಾಕ್ ಬಿಲ್ಗಾರಿಕೆಗೆ ಸೇರಿದ್ದಲ್ಲ: ಕೆಎಎಅಭ್ಯಾಸಕ್ಕಾಗಿ ಮೀಸಲಿಟ್ಟ 200 ಮೀ. ಟ್ರ್ಯಾಕ್ ನಿಜವಾಗಿಯೂ ಯಾರಿಗೆ ಸೇರಿದ್ದು ಎನ್ನುವ ಉದಯವಾಣಿ ಪ್ರಶ್ನೆಗೆ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ ಕಾರ್ಯದರ್ಶಿ ಚಂದ್ರಶೇಖರ್ ರೈ ಪ್ರತಿಕ್ರಿಯಿಸಿದ್ದಾರೆ. ಇದು ಅಥ್ಲೀಟ್‌ಗಳ ಹಕ್ಕು ಇಲ್ಲಿ ಅಥ್ಲೀಟ್‌ಗಳಿಗೆ ಮೊದಲ ಆಧ್ಯತೆ. ನಂತರ ಉಳಿದವರು ಎಂದು ತಿಳಿಸಿದ್ದಾರೆ. ಈ ಮೂಲಕ ಬಿಲ್ಗಾರರು ಇಲ್ಲಿ ಹಕ್ಕು ಸಾಧಿಸುವಂತಿಲ್ಲ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ. ಜಿಂದಾಲ್‌ನವರಿಂದಾಗಿ 400 ಮೀ. ಟ್ರ್ಯಾಕ್‌ನಲ್ಲಿ ನಮಗೆ ಅಭ್ಯಾಸ ನಡೆಸಲಾಗುತ್ತಿಲ್ಲ. ಇನ್ನು ನಮಗೆ ಬಾಕಿ ಇರುವುದು 200 ಮೀ. ಟ್ರ್ಯಾಕ್. ಇದಕ್ಕೆ ಬಿಲ್ಗಾರಿಕೆಯವರ ಸಮಸ್ಯೆ ಎದುರಾಗಿದೆ. ಹಾಗಾದರೆ ನಮ್ಮ ಜಾವೆಲಿನ್, ಶಾಟ್‌ಪುಟ್, ಡಿಸ್ಕಸ್ ಪಟುಗಳು ಅಭ್ಯಾಸ ಮಾಡುವುದೆಲ್ಲಿ ಎಂದು ಅವರು ಕ್ರೀಡಾ ಇಲಾಖೆಯನ್ನು ಪ್ರಶ್ನಿಸಿದ್ದಾರೆ. ಒಂದೇ ಕಡೆ ಅಭ್ಯಾಸ, ಅಪಾಯ ಕಟ್ಟಿಟ್ಟ ಬುತ್ತಿ!
ಬಿಲ್ಗಾರಿಕೆ, ಜಾವೆಲಿನ್, ಹ್ಯಾಮರ್ ಥ್ರೋ, ಡಿಸ್ಕಸ್ ಒಂದೇ ಕಡೆ ಅಭ್ಯಾಸ ನಡೆಸುವುದರಿಂದ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆ ಇದೆ. ಒಂದು ವೇಳೆ ಗುರಿ ತಪ್ಪಿ, ಅಥವಾ ಕೈ ತಪ್ಪಿ ಎಸೆದ ಬಿಲ್ಲು ಅಥವಾ ಜಾವೆಲಿನ್ ಸ್ಪರ್ಧಿಗಳ ದೇಹಕ್ಕೆ ತಾಗಿ ಪ್ರಾಣ ಹಾನಿಯಾಗುವ ಆತಂಕ ಪ್ರತಿ ದಿನವೂ ಇಲ್ಲಿ ಅಭ್ಯಾಸ ನಡೆಸಲು ಬರುವ ಅಥ್ಲೀಟ್‌ಗಳನ್ನು ಕಾಡುತ್ತದೆ. ಗಲೀಜು ಜಾಗದಲ್ಲಿ ಅಭ್ಯಾಸ
ಅಭ್ಯಾಸಕ್ಕಾಗಿ ಮೀಸಲಿಟ್ಟ 200 ಮೀ. ಟ್ರ್ಯಾಕ್‌ನ ಕ್ರೀಡಾಂಗಣವನ್ನು ಕ್ರೀಡಾ ಇಲಾಖೆ ಸರಿಯಾಗಿ ನಿರ್ವಹಣೆ ಮಾಡಿಲ್ಲ. ಅಲ್ಲಲ್ಲಿ ಕಸ ಕಡ್ಡಿಗಳು, ಪೊದೆಗಳು ತುಂಬಿಕೊಂಡಿದ್ದು ಕ್ರೀಡಾಪಟುಗಳು ಮೂಗು ಮುಚ್ಚಿಕೊಂಡೆ ಅಭ್ಯಾಸ ನಡೆಸಬೇಕಿದೆ. ಒಟ್ಟಾರೆ ಅಭ್ಯಾಸ ನಡೆಸುವ ಜಾಗ ಕ್ರೀಡಾಸಕ್ತಿಯನ್ನು ಬೆಳೆಸುವುದಕ್ಕೆ ಸ್ವಲ್ಪವೂ ಪೂರಕವಾಗಿಲ್ಲ. ಬದಲಿಗೆ ಸ್ಪರ್ಧಿಗಳಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. -ಹೇಮಂತ್ ಸಂಪಾಜೆ