Advertisement

ಕಾಂತಮಂಗಲ ಸೇತುವೆ ಕುಸಿಯುವ ಆತಂಕ!

03:45 AM Jun 28, 2018 | Team Udayavani |

ವಿಶೇಷ ವರ‌ದಿ – ಸುಳ್ಯ: ಮೂಲರಪಟ್ಣ ಸೇತುವೆ ಮುರಿದು ಬಿದ್ದು ಜನರಿಗೆ ಸಮಸ್ಯೆ ಒಡ್ಡಿದ್ದರೆ ಇಲ್ಲೊಂದು ಸೇತುವೆ ದುರಸ್ತಿಗಾಗಿ ಜಿಲ್ಲಾಧಿಕಾರಿಗಳ ಅನುದಾನಕ್ಕೆ ಕಾದು ಕುಳಿತಿದೆ. ಇದು ಸುಳ್ಯ-ಕಾಸರಗೋಡು ಅಂತಾರಾಜ್ಯ ಸಂಪರ್ಕ ರಸ್ತೆಯಡಿ ಬರುವ ಕಾಂತಮಂಗಲದ ಸೇತುವೆ. ಅಜ್ಜಾವರ, ಮಂಡೆಕೋಲು ಮೂಲಕ ಕೇರಳ ಭಾಗವನ್ನು ಸಂಪರ್ಕಿಸುವ ಈ ಸೇತುವೆ ಸುಳ್ಯ ನಗರದಂಚಿನಲ್ಲಿ ಪಯಸ್ವಿನಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಇದು ಕುಸಿದರೆ ಪರ್ಯಾಯ ರಸ್ತೆ ಸನಿಹದಲ್ಲಿಲ್ಲ.

Advertisement

ದುರಸ್ತಿಗೆ ಅನುದಾನವಿಲ್ಲ..!
ಈ ಸೇತುವೆಗೆ 35 ವರ್ಷವಾಗಿರಬಹುದು. ನಿಖರ ದಾಖಲೆಗಳು ಇಲಾಖೆಯಲ್ಲಿಲ್ಲ. ಪುತ್ತೂರು ಉಪ ವಿಭಾಗದ ವ್ಯಾಪ್ತಿಗೆ ಸೇರಿದ ವೇಳೆ ಈ ಸೇತುವೆ ನಿರ್ಮಿಸಲಾಗಿತ್ತು. ಹಲವು ಗ್ರಾಮ ಸಭೆ, ತಾಲೂಕು ಸಭೆಗಳಲ್ಲೂ ಇದರ ದುಸ್ಥಿತಿ ಬಗ್ಗೆ ಪ್ರಸ್ತಾಪಿಸಲಾಗಿದೆ. ಹೊಸ ಸೇತುವೆ ಬದಲು ತಾತ್ಕಾಲಿಕ ದುರಸ್ತಿ ಮಾಡಿ ಅಂದರೆ ಪಂಚಾಯತ್‌ ರಾಜ್‌ ಇಲಾಖಾ ಅಧಿಕಾರಿಗಳು ಅನುದಾನ ಇಲ್ಲ ಎಂದಿದ್ದಾರೆ. ಪ್ರಾಕೃತಿಕ ವಿಕೋಪ ಚರ್ಚಾ ಸಭೆಯಲ್ಲಿ ದುರಸ್ತಿಗೆ ಶಾಸಕರು ಸೂಚಿಸಿದ್ದರು. ಅನುದಾನ ಕ್ರೋಢೀಕರಿಸುವ ಬಗ್ಗೆ ತೀರ್ಮಾನ ಆಗಿಲ್ಲ.

ನದಿ ಭಾಗ ಕಾಣುತ್ತೆ
ಸೇತುವೆ ಒಂದು ಭಾಗದಲ್ಲಿ ಮೇಲ್ಪದರ ಸಂಪೂರ್ಣ ಶಿಥಿಲಗೊಂಡಿದ್ದು, ಬಿರುಕಿನಲ್ಲಿ ಪಯಸ್ವಿನಿ ನದಿಯನ್ನು ಕಾಣಬಹುದು. ಕಬ್ಬಿಣದ ಪ್ಲೇಟುಗಳು ತುಕ್ಕು ಹಿಡಿದಿದ್ದು, ಮರು ಅಳವಡಿಕೆಯಾಗಬೇಕು. ಮೇಲ್ಪದರ ಡಾಮರು ಪೂರ್ತಿ ಎದ್ದು ಹೋಗಿ ಹೊಂಡ ಸೃಷ್ಟಿಯಾಗಿದೆ. ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗದ ಸೂಚನೆಯಂತೆ ಘನ ವಾಹನ ಓಡಾಟ ನಿಷೇಧಿಸಿ ಅಜ್ಜಾವರ ಗ್ರಾ.ಪಂ. ಫ‌ಲಕ ಅಳವಡಿಸಿದೆ. ಕೆಲವು ಘನ ವಾಹನಗಳು ಅಧಿಕಾರಿಗಳ ಕಣ್ತಪ್ಪಿಸಿ ಓಡಾಡುತ್ತಿವೆ.

ಲೋಕಾಯುಕ್ತ ಚಾಟಿ..!
ಸೇತುವೆ ದುಸ್ಥಿತಿ ಬಗ್ಗೆ ಲೋಕಾಯುಕ್ತರಿಗೆ 2017 ನ. 11ರಂದು ದೂರು ಸಲ್ಲಿಸಲಾಗಿದ್ದು, ತುರ್ತಾಗಿ ಸ್ಪಂದಿಸುವಂತೆ ಇಲಾಖೆಗೆ ಸೂಚಿಸಿದೆ. ಪಂಚಾಯತ್‌ ರಾಜ್‌ ಇಲಾಖೆ 5 ಲಕ್ಷ ರೂ. ವೆಚ್ಚ ಅಂದಾಜು ಪಟ್ಟಿ ತಯಾರಿಸಿ, ಜಿಲ್ಲಾಧಿಕಾರಿಗೆ ಅನುದಾನ ಕೋರಿ ಪತ್ರ ಬರೆಯಲಾಗಿದೆ. ಲೋಕಾಯುಕ್ತ ಸಂಸ್ಥೆ ಜು.2 ರೊಳಗೆ ಕೈಗೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸಲು ಸೂಚಿಸಿದೆ.

ದುರಸ್ತಿಗೆ ಕ್ರಮ
ಈ ಹಿಂದೆ ಮಳೆ ಹಾನಿ ಯೋಜನೆಯಡಿ 5 ಲಕ್ಷ ರೂ. ಅನುದಾನ ಕೋರಲಾಗಿತ್ತು. ಅದು ಬಂದಿಲ್ಲ. ಈ ಬಾರಿ ಮತ್ತೆ ಪ್ರಸ್ತಾವನೆ ಸಲ್ಲಿಸಿದ್ದು, ಮಳೆ ಕಡಿಮೆ ಆದ ತತ್‌ ಕ್ಷಣ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು.
– ಚೆನ್ನಪ್ಪ ಮೊಯಿಲಿ, ಪ್ರಭಾರ ಸಹಾಯಕ ಎಂಜಿನಿಯರ್‌, ಪಂಚಾಯತ್‌ರಾಜ್‌ ಇಲಾಖೆ, ಸುಳ್ಯ

Advertisement
Advertisement

Udayavani is now on Telegram. Click here to join our channel and stay updated with the latest news.

Next