Advertisement

ಜೈಲ್‌ ಭರೋ ಚಳವಳಿಗೆ ಕಾಂತಾ ಕರೆ

03:26 PM Mar 06, 2017 | Team Udayavani |

ಕಲಬುರಗಿ: ತೊಗರಿ ಬೆಲೆ ಕುಸಿದರೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ನೆರವಿಗೆ ಬಾರದೇ ನಿರ್ಲಕ್ಷ ವಹಿಸಿರುವುದರಿಂದ ಎಲ್ಲ ರೈತ ಹಾಗೂ ಕನ್ನಡಪರ ಘಟನೆಗಳು  ಸೇರಿ ಜೈಲ್‌ಭರೋ ಚಳವಳಿ ಹಮ್ಮಿಕೊಳ್ಳಬೇಕೆಂದು ಮಾಜಿ ಸಚಿವ ಎಸ್‌.ಕೆ. ಕಾಂತಾ ಕರೆ ನೀಡಿದರು. 

Advertisement

ನಗರದ ಕಲಾನಿಕೇತನದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತೊಗರಿ ಖರೀದಿ ಕೇಂದ್ರಗಳ ಪುನರಾರಂಭ ಬಗ್ಗೆ ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ಲಕ್ಷತನದಿಂದಾಗಿ ತೊಗರಿ ಬೆಲೆ ಕುಸಿತವಾಗಿದೆ ಎಂದರು. ಹೈಕ ಭಾಗದ ವಾಣಿಜ್ಯಿಕ ಬೆಲೆ ತೊಗರಿಗೆ ಕನಿಷ್ಠ ಬೆಂಬಲ ಬೆಲೆ ಸಹ ನೀಡಲಾಗುತ್ತಿಲ್ಲ.

ಈ ವರೆಗೆ ಹೋರಾಟ ಮಾಡಿದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡು ಕೇವಲ ಹುಸಿ ಭರವಸೆ ನೀಡುತ್ತಾ ಬಂದಿವೆ. ಈಗ ತೊಗರಿ ಕೇಂದ್ರಗಳನ್ನು ಮುಚ್ಚಲಾಗಿದೆ. ಇದರಿಂದ ರೈತರಿಗೆ ತೊಗರಿಗೆ ಬೆಲೆ ಸಿಗದೇ ರೈತರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ ಎಂದರು. ಕೇಂದ್ರ ಸರ್ಕಾರ ತೊಗರಿಗೆ ಕೇವಲ 5050 ರೂ.ಗಳ ಬೆಂಬಲ ಬೆಲೆ ಘೋಷಿಸಿದೆ.

ರಾಜ್ಯ ಸರ್ಕಾರ ಕೇವಲ 4500 ರೂ. ಪ್ರೋತ್ಸಾಹ ಧನ ನೀಡುವುದಾಗಿ ಹೇಳಿತ್ತು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡರ ಅಧಿಕೃತ ಘೋಷಣೆಯಂತೆ 5550 ರೂ.ಗಳಂತೆ ಪ್ರತಿ ಕ್ವಿಂಟಾಲ್‌ ತೊಗರಿ ಖರೀದಿಸಬೇಕು. ಆ ಬೆಲೆ ಸಿಗುತ್ತಿಲ್ಲ. ಕೇವಲ 3800 ರೂ. ಬೆಲೆ ಸಿಕ್ಕಿದೆ. ಈಗ ತೊಗರಿ ಕೇಂದ್ರಗಳನ್ನು ಸಹ ಸ್ಥಗಿತಗೊಳಿಸಲಾಗಿದೆ. ಈ ಅನ್ಯಾಯವನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲ.

ಇದಕ್ಕೆ ಜೈಲ್‌ಭರೋ ಚಳವಳಿಯೊಂದೇ ಮಾರ್ಗ ಎಂದರು. ರಾಜ್ಯ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ಮಾತನಾಡಿ, ಸರ್ಕಾರಗಳ ಮಧ್ಯಪ್ರವೇಶದ ನಂತರ ಪ್ರತಿ ಕ್ವಿಂಟಾಲ್‌ ತೊಗರಿಗೆ 4379 ರೂ.ನಂತೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ರಾಜ್ಯದಲ್ಲಿ ಈ ಬಾರಿ 7 ಲಕ್ಷ ಟನ್‌ ತೊಗರಿ ಉತ್ಪಾದನೆಯಾಗಿದ್ದು, ಜಿಲ್ಲೆಯಲ್ಲಿಯೇ 4 ಲಕ್ಷ ಟನ್‌ಗರಿ ಉತ್ಪಾದನೆಯಾಗಿದೆ.

Advertisement

ದೇಶದ ಬೆಳೆಕಾಳುಗಳ ಬೇಡಿಕೆ 22 ಮಿಲಿಯನ್‌ ಟನ್‌ ಇದೆ. ಉತ್ಪಾದನೆ ಒಟ್ಟಾರೆ 17 ಮಿಲಿಯನ್‌ ಟನ್‌ ಇದೆ. 5 ಮಿಲಿಯನ್‌ ಟನ್‌ ಕೊರತೆಯಿದ್ದಾಗ ಕುಸಿತಕ್ಕೆ ವಿದೇಶಗಳಿಂದ ಆಮದು ಮಾಡಿಕೊಂಡಿರುವುದೇ ಕಾರಣವಾಗಿದೆ.ಕಳೆದ ವರ್ಷ 57 ಲಕ್ಷ ಟನ್‌, ಪ್ರಸ್ತುತ 27.86 ಲಕ್ಷ ಟನ್‌ ಬೆಳೆಕಾಳು ಆಮದು ಮಾಡಿಕೊಳ್ಳಲಾಗಿದೆ ಎಂದರು. ರಾಜ್ಯ ಸರ್ಕಾರದ ಉತ್ಪಾದನಾ ವೆಚ್ಚ 6403 ರೂ.ನಂತೆ ಪ್ರತಿ ಕ್ವಿಂಟಾಲ್‌ಗೆ ಆಮದು ಮಾಡಿಕೊಳ್ಳುತ್ತಿದೆ.

ರಾಜ್ಯ ಸರ್ಕಾರ 6500 ರೂ.ಗಳ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲು ಕೇಂದ್ರಕ್ಕೆ ತ್ತಾಯಿಸಿದೆ. ಕೇಂದ್ರ ಸರ್ಕಾರ ಹೊರದೇಶಗಳಿಂದ ಕ್ವಿಂಟಾಲಿಗೆ 10,114 ರೂ.ಗಳಂತೆ ಆಮದು ಮಾಡಿಕೊಂಡಿದೆ. ಆದರೂ, ತೊಗರಿ ಬೆಳೆಗಾರರಿಗೆ ಯೋಗ್ಯ ಬೆಲೆ ನೀಡದಿರುವುದು ತೀರಾ ಅನ್ಯಾಯ. ಆದ್ದರಿಂದ ಕೇಂದ್ರದ ಮೇಲೆ ಒತ್ತಡ ಹೇರಲು ರಾಜ್ಯ ಸರ್ಕಾರ ನಿಯೋಗವೊಂದನ್ನು ತೆಗೆದುಕೊಂಡು ಹೋಗಲು ಒತ್ತಾಯಿಸಿದರು.

ಮಾರುಕಟ್ಟೆಯಲ್ಲಿ ನಿಗದಿತ ಬೆಲೆ ಸಿಗುತ್ತಿಲ್ಲ. ದಿನಗಟ್ಟಲೇ ಕಾಯುವ ಸ್ಥಿತಿ ಬಂದಿದೆ. ಆದ್ದರಿಂದ ತೊಗರಿ ಮಂಡಳಿಯೇ ಎಪಿಎಂಸಿಯಲ್ಲಿ ಟೆಂಡರ್‌ ಹಾಕಿದಲ್ಲಿ ರೈತರಿಗೆ ಪ್ರತಿ ಕ್ವಿಂಟಾಲ್‌ಗೆ 5500 ರೂ. ಗಳ ಬೆಲೆ ಸಿಗುತ್ತದೆ ಎಂದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜಂಟಿ ಸಹಭಾಗಿತ್ವದಲ್ಲಿ ತೊಗರಿ ಖರೀದಿಸಲಾಗುತ್ತಿದ್ದು, ರಾಜ್ಯದಲ್ಲಿನ 7 ಲಕ್ಷ ಟನ್‌ನಲ್ಲಿ ಕೇವಲ ಒಂದು ಲಕ್ಷ ಟನ್‌ ಖರೀದಿಸಲಾಗಿದೆ.

ಮಾ.15 ರಂದು ತೊಗರಿ ಖರೀದಿ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಇದನ್ನು ಏ.30 ರವರೆಗೆ ವಿಸ್ತರಿಸಬೇಕೆಂದು ಒತ್ತಾಯಿಸಿದರು. ನಫೆಡ್‌ ಮೂಲಕ 5 ಲಕ್ಷ ಟನ್‌ ಖರೀದಿಸಬೇಕು. ವಿದೇಶಿ ಆಮದು ಮೇಲೆ ಶೇ.30 ರಷ್ಟು ಸುಂಕ ವಿಧಿಸಬೇಕು, ಚೀಲಗಳ ಕೊರತೆ ನಿವಾರಿಸುವಂತೆ ಹಾಗೂ ಸ್ವಾಮಿನಾಥನ್‌ ವರದಿ ಜಾರಿಗೆ ತರುವಂತೆ ಒತ್ತಾಯಿಸಿದರು. 

ಸಭೆಯಲ್ಲಿ ಅಖೀಲ ಭಾರತ ಕಿಸಾನ್‌ ಸಭಾ ಜಿಲ್ಲಾಧ್ಯಕ್ಷ ಮೌಲಾಮುಲ್ಲಾ, ರಾಜ್ಯ ರೈತ ಸಂಘ ಹಸಿರು ಸೈನ್ಯ ಜಿಲ್ಲಾಧ್ಯಕ್ಷ ಅಂಬರೀಷ ಪಾಟೀಲ, ತೊಗರಿ ಬೆಳೆಗಾರರ ಹೋರಾಟ ಸಮಿತಿಯ ಚಿತ್ತಾಪುರ ಘಟಕದ ಅಧ್ಯಕ್ಷ ಮಂಜುನಾಥ ಪಾಟೀಲ, ಪ್ರಾಂತ ರೈತ ಸಂಘದ ಕಾರ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ, ಶರಣಬಸಪ್ಪ ಮಮಶೆಟ್ಟಿ, ಅಶೋಕ ಮ್ಯಾಗೇರಿ, ಸುಭಾಷ ಹೊಸ್ಮನಿ, ಶರಣಬಸಪ್ಪ ಸಾಹು, ವಿಠಲ ಪೂಜಾರಿ, ಪಾಂಡುರಂಗ ಮಾವಿನಕರ ಹಾಗೂ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next