ಕಾನ್ಪುರ: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯ ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ (Green Park Stadium) ನಡೆಯುತ್ತಿದೆ. ಆದರೆ ಈ ಪಂದ್ಯಕ್ಕೆ ಮಳೆ ಅಡ್ಡಿಯಾಗುತ್ತಿದೆ. ಮೊದಲ ದಿನದಾಟದಲ್ಲಿ ಕೇವಲ 35 ಓವರ್ ಮಾತ್ರ ನಡೆದಿದ್ದು, ಎರಡನೇ ದಿನವಾದ ಶನಿವಾರ (ಸೆ.28) ಮೊದಲ ಸೆಶನ್ ಮಳೆಗೆ ಕೊಚ್ಚಿ ಹೋಗಿದೆ.
ಮಳೆಯ ಕಾರಣದಿಂದ ಎರಡನೇ ದಿನದ ಆಟ ಆರಂಭವಾಗಲೇ ಇಲ್ಲ. ಹೀಗಾಗಿ ಭಾರತೀಯ ತಂಡವು ಬಸ್ ಮೂಲಕ ತಂಡದ ಹೋಟೆಲ್ ಗೆ ಹಿಂತಿರುಗಿದೆ ಎಂದು ವರದಿಯಾಗಿದೆ. ಗ್ರೀನ್ ಪಾರ್ಕ್‌ನಲ್ಲಿ ಎರಡನೇ ದಿನದ ಮೊದಲ ಸೆಶನ್ ರದ್ದಾಗಿದ್ದು, ಎರಡನೇ ಸೆಶನ್ ಕೂಡಾ ಮಳೆ ಆಪೋಶನವಾಗುವ ಸಾಧ್ಯತೆಯಿದೆ.
ಬಾಂಗ್ಲಾದೇಶದ ಆಟಗಾರರು ಸಹ ತಂಡದ ಹೋಟೆಲ್ ಗೆ ತೆರಳಿದ್ದಾರೆ ಎಂದು ಇಎಸ್‌ಪಿಎನ್ ಕ್ರಿಕ್ ಇನ್ಫೋ ವರದಿ ಮಾಡಿದೆ. ಇಂದಿನ ಪಂದ್ಯ ಬಹುತೇಕ ರದ್ದಾಗುವ ಸಾಧ್ಯತೆಯಿದೆ.
ಹವಾಮಾನ ಮುನ್ಸೂಚನೆಯು ಮಧ್ಯಾಹ್ನದ ನಂತರವೂ ಮಳೆ ಬರುವ ವರದಿ ನೀಡಿದೆ. ಮೈದಾನದಲ್ಲಿ ಕವರ್ ಹಾಕಿರುವ ಕಾರಣ ಅಭ್ಯಾಸ ಮಾಡುವುದು ಅಸಾಧ್ಯವಾಗಿದೆ. ಹೀಗಾಗಿ ಭಾರತೀಯ ತಂಡವು ಹೋಟೆಲ್‌ಗೆ ಹಿಂತಿರುಗಲು ಮತ್ತು ವಿಶ್ರಾಂತಿ ಪಡೆಯಲು ಆಯ್ಕೆ ಮಾಡಿಕೊಂಡಿದೆ ಎನ್ನಲಾಗಿದೆ.
ಕಾನ್ಪುರ ಟೆಸ್ಟ್ ನಲ್ಲಿ ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಆಯ್ಕೆ ಮಾಡಿದೆ. ಬಾಂಗ್ಲಾದೇಶ ತಂಡವು ಮೂರು ವಿಕೆಟ್ ಕಳೆದುಕೊಂಡು 107 ರನ್ ಗಳಿಸಿದೆ. 40 ರನ್ ಗಳಿಸಿರುವ ಮೊಮಿನುಲ್ ಹಕ್ ಮತ್ತು ಆರು ರನ್ ಗಳಿಸಿರುವ ಮುಶ್ಫೀಕರ್ ರಹೀಂ ವಿಕೆಟ್ ಕಾಯ್ದುಕೊಂಡಿದ್ದಾರೆ.