Advertisement

6 ತಿಂಗಳಲ್ಲಿ 5 ಕೋ.ರೂ. ಮೌಲ್ಯದ 17 ಕೆ.ಜಿ. ಚಿನ್ನ ಪತ್ತೆ

09:49 AM Jun 22, 2019 | keerthan |

ಮಂಗಳೂರು: ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳು ಅಕ್ರಮ ಚಿನ್ನ ಸಾಗಾಟ ಪ್ರಕರಣ ಪತ್ತೆಗೆ ಸಂಬಂಧಿಸಿ ಕಳೆದ 6 ತಿಂಗಳಲ್ಲಿ 3 ಹ್ಯಾಟ್ರಿಕ್‌ ಸಾಧನೆಗಳನ್ನು ದಾಖಲಿಸಿದ್ದಾರೆ.

Advertisement

ಗುರುವಾರ ಶಾರ್ಜಾದಿಂದ ವಿಮಾನದಲ್ಲಿ ಬಂದಿಳಿದ ಕೋಯಿಕ್ಕೋಡ್‌ ಜಿಲ್ಲೆಯ ಪರಪ್ಪನಂಗಡಿಯ ಪ್ರಯಾಣಿಕ ಸೈನುದ್ದೀನ್‌ ರಮೀಸ್‌ ತನ್ನ 2 ಪಾದಗಳು, ಒಳ ಉಡುಪು ಮತ್ತು ಗುದದ್ವಾರ ದಲ್ಲಿ ಬಚ್ಚಿಟ್ಟು ಸಾಗಿಸಿದ 60 ಲಕ್ಷ ರೂ. ಮೌಲ್ಯದ ಎರಡೂವರೆ ಕಿಲೋ ಚಿನ್ನವನ್ನು ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ವಿಮಾನದಿಂದ ಇಳಿದು ನಿರ್ಗಮನ ದ್ವಾರದ ಕಡೆ ಹೋಗುತ್ತಿದ್ದ ರಮೀಸ್‌ನನ್ನು ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದಾಗ ಅಂಗಾಲಿನಲ್ಲಿ ಚಿನ್ನ ಅಡಗಿಸಿ ಇರಿಸಿರುವುದು ಪತ್ತೆಯಾಯಿತು. ತಪಾಸಣೆ ಮುಂದುವರಿಸಿದಾಗ ಒಳ ಉಡುಪಿನಲ್ಲಿ ಪೇಸ್ಟ್‌ ರೂಪದಲ್ಲಿ ಹಾಗೂ ಕಚ್ಚಾ ಚೈನ್‌ ರೂಪದಲ್ಲಿ ಚಿನ್ನವನ್ನು ಬಚ್ಚಿಟ್ಟಿರುವುದು ಕಂಡು ಬಂತು. ಗುದದ್ವಾರದಲ್ಲಿ ಪೇಸ್ಟ್‌ ರೂಪದ ಚಿನ್ನ ಪತ್ತೆಯಾಯಿತು. ಒಟ್ಟು ಪೇಸ್ಟ್‌ ರೂಪದಲ್ಲಿ 2 ಕಿಲೊ ಹಾಗೂ ಕಚ್ಚಾ ಚೈನ್‌ ರೂಪದಲ್ಲಿ 583 ಗ್ರಾಂ ಚಿನ್ನ ಸಿಕ್ಕಿದೆ.

ಇದಕ್ಕಿಂತ ಹಿಂದೆ ಜೂ. 15ರಂದು ಪತ್ತೆಯಾದ ಹ್ಯಾಟ್ರಿಕ್‌ ಪ್ರಕರಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ಮೂವರು ಪ್ರಯಾಣಿಕರು ತಮ್ಮ ಗುದದ್ವಾರದಲ್ಲಿ ಬಚ್ಚಿಟ್ಟು ಸಾಗಿಸಿದ 62 ಲಕ್ಷ ರೂ. ಮೌಲ್ಯದ 1.84 ಕೆ.ಜಿ. ಮೌಲ್ಯದ ಚಿನ್ನ ವಶಪಡಿಸಿದ್ದರು. ಜೂ. 14ರಂದು ರಾತ್ರಿ ಕಸ್ಟಮ್ಸ್‌ ಅಧಿಕಾರಿಗಳು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳ ಸಹಕಾರದಲ್ಲಿ ಇಬ್ಬರು ಪ್ರಯಾಣಿಕರು ಗುದದ್ವಾರದಲ್ಲಿ ಅಡಗಿಸಿಟ್ಟು ಸಾಗಿಸಿದ್ದ 31 ಲಕ್ಷ ರೂ. ಮೌಲ್ಯದ 906 ಗ್ರಾಂ. ಚಿನ್ನವನ್ನು ವಶಪಡಿಸಿಕೊಂಡಿದ್ದರು.

ಮೇ 14ರಂದು ಕಸ್ಟಮ್ಸ್‌ ಅಧಿಕಾರಿ
ಗಳು ಅಕ್ರಮ ಸಾಗಾಟ ಪತ್ತೆಗೆ ಸಂಬಂಧಿಸಿ ಇನ್ನೊಂದು ಹ್ಯಾಟ್ರಿಕ್‌ ಸಾಧನೆ ಮಾಡಿದ್ದರು. ಅಂದು ಮೂವರು ಪ್ರಯಾಣಿಕರು ಸಾಗಿಸುತ್ತಿದ್ದ 11 ಲಕ್ಷ ರೂ. ಮೌಲ್ಯದ 679 ಬಾಕ್ಸ್‌ ವಿದೇಶಿ ಮೂಲದ ಸಿಗರೇಟ್‌ ಗಳನ್ನು ಪತ್ತೆಹಚ್ಚಿ ವಶಪಡಿಸಿದ್ದಲ್ಲದೆ 1.35 ಲಕ್ಷ ರೂ. ದಂಡ ವಿಧಿಸಲಾಗಿತ್ತು. ಇಲಾಖೆಯಲ್ಲಿ ಗರಿಷ್ಠ ಸಿಬಂದಿ ಕೊರತೆ ಮತ್ತು ಇತರ ಮೂಲ ಸೌಲಭ್ಯಗಳ ಕೊರತೆ ಇದ್ದರೂ ಈ ಸಾಧನೆಯನ್ನು ದಾಖಲಿಸಲಾಗಿದೆ ಎಂದು ಕಸ್ಟಮ್ಸ್‌ ಆಯುಕ್ತ ಸುಮಿತ್‌ ಕುಮಾರ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

6 ತಿಂಗಳಲ್ಲಿ 17 ಕೆ.ಜಿ. ಚಿನ್ನ
ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾರಂಭಗೊಂಡ (2018 ಡಿಸೆಂಬರ್‌) ಬಳಿಕ ಮತ್ತು 2019ರಲ್ಲಿ ಇದುವರೆಗೆ ಕಸ್ಟಮ್ಸ್‌ ಅಧಿಕಾರಿಗಳು ಅಕ್ರಮ ಚಿನ್ನ ಸಾಗಾಟದ 19 ಪ್ರಕರಣಗಳನ್ನು ಪತ್ತೆ ಹಚ್ಚಿ ಒಟ್ಟು 5.5 ಕೋಟಿ ರೂ. ಮೌಲ್ಯದ 17 ಕಿಲೊ ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next