ಈ ಹಿಂದೆ “ಮೂಕ ಹಕ್ಕಿ’ ಎಂಬ ಚಿತ್ರ ಮಾಡಿದ್ದ ನೀನಾಸಂ ಮಂಜು, ಈಗ ಇನ್ನೊಂದು ಚಿತ್ರವನ್ನು ಸದ್ದಿಲ್ಲದೆ ಶುರು ಮಾಡಿದ್ದಾರೆ. ಅದೆ “ಕನ್ನೇರಿ’. “ಕಾಡಿನ ವಸಂತಗಳು’ ಎಂಬ ಉಪಶೀರ್ಷಿಕೆ ಇರುವ ಈ ಚಿತ್ರದಲ್ಲಿ ಸುಧಾರಾಣಿ, ತಬಲಾ ನಾಣಿ, ಅರ್ಚನಾ ಮುಂತಾದವರು ನಟಿಸುತ್ತಿದ್ದಾರೆ. ಬುಧವಾರ ಬೆಳಿಗ್ಗೆ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಕೂಡಾ ಮುಗಿದಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎಸ್.ಎ. ಚಿನ್ನೇಗೌಡ ಅವರು ಮೊದಲ ದೃಶ್ಯಕ್ಕೆ ಕ್ಯಾಮೆರಾ ಚಾಲನೆ ಮಾಡಿದ್ದಾರೆ.
“ಕೆನ್ನೇರಿ’ ಚಿತ್ರವು ಕೋಟಗಾನಹಳ್ಳಿ ರಾಮಯ್ಯನವರ “ಜೇನು ಆಕಾಶದ ಅರಮನೆಯೊ’ ಕಾದಂಬರಿಯನ್ನಾಧರಿಸಿದೆ. ನೀನಾಸಂ ಮಂಜು ಅವರ ಮೊದಲ ಚಿತ್ರ “ಮೂಕ ಹಕ್ಕಿ’ಯೂ, ರಾಮಯ್ಯನವರ ಕಥೆಯನ್ನಾಧರಿಸಿತ್ತು. ಆ ಚಿತ್ರಕ್ಕೆ ಸಂಭಾಷಣೆಯನ್ನೂ ಅವರೇ ರಚಿಸಿದ್ದಾರೆ. ಈಗ “ಕೆನ್ನೇರಿ’ ಚಿತ್ರಕ್ಕೂ ರಾಮಯ್ಯನವರ ಕಥೆ ಮತ್ತು ಸಂಭಾಷಣೆಯಿದೆ. ಸಾಹಿತ್ಯವನ್ನೂ ಅವರೇ ರಚಿಸಿದ್ದಾರೆ. ಚಿತ್ರವನ್ನು ಉಮೇಶ್ ಎಂ ಕತ್ತಿ ನಿರ್ಮಿಸಿದರೆ, ಚಿತ್ರಕ್ಕೆ ಕದ್ರಿ ಮಣಿಕಾಂತ್ ಅವರ ಸಂಗೀತವಿದೆ. ಇನ್ನು ಗುರುಪ್ರಸಾದ್ ಚಿತ್ರದ ಛಾಯಾಗ್ರಹಣ ಮಾಡುತ್ತಿದ್ದಾರೆ.
“ಕನ್ನೇರಿ’ ಎಂದರೇನು ಎಂಬ ಪ್ರಶ್ನೆ ಬರಬಹುದು? ಈ ಪ್ರಶ್ನೆಯನ್ನು ಮಂಜು ಅವರ ಮುಂದಿಟ್ಟರೆ, ಕುರುಬರ ಭಾಷೆಯಲ್ಲಿ ವಸಂತ ಕಾಲ ಎಂದು ಉತ್ತರಿಸುತ್ತಾರೆ. ಈ ಚಿತ್ರದ ಕಥೆಯು ಮುತ್ತಮ್ಮ ಎಂಬ ವಿರಾಜಪೇಟೆಯ ಹುಡುಗಿಯ ಸುತ್ತ ಸುತ್ತುದಂತೆ. ಕೊಡಗಿನ ಕಾಡಿನಲ್ಲಿರುವ ಆ ಹುಡುಗಿ ಬೆಂಗಳೂರಿನಲ್ಲಿ ಖ್ಯಾತ ಗಣಿತಶಾಸ್ತ್ರಜ್ಞರೊಬ್ಬರ ಮನೆಯಲ್ಲಿ ಕೆಲಸಕ್ಕೆ ಸೇರುತ್ತಾಳೆ. ಕಾಡಿನಲ್ಲಿದ್ದ ಅವಳು ನಾಡಿನಲ್ಲಿ ಹೇಗೆ ಹೊಂದಿಕೊಳ್ಳುತ್ತಾಳೆ ಎಂಬುದು ಚಿತ್ರದ ಕಥೆ’ ಎನ್ನುತ್ತಾರೆ ಮಂಜು.
ಇಲ್ಲಿ ಮುತ್ತಮ್ಮನಾಗಿ ಅರ್ಚನ ಕಾಣಿಸಿಕೊಂಡರೆ, ಸುಧಾರಾಣಿ ಅವರು ಗಣಿತಶಾಸ್ತ್ರಜ್ಞರಾಗಿ ನಟಿಸುತ್ತಿದ್ದಾರೆ. ಇದಲ್ಲದೆ ಚಿತ್ರದಲ್ಲಿ ದೊಡ್ಡ ಕಲಾವಿದರೊಬ್ಬರು ನಟಿಸುತ್ತಿದ್ದಾರಂತೆ. ಆದರೆ, ಆ ಕಲಾವಿದರ್ಯಾರು ಎಂಬುದನ್ನು ಮಂಜು ಈಗಲೇ ಬಿಟ್ಟುಕೊಡುವುದಕ್ಕೆ ತಯಾರಿಲ್ಲ. “ಒಂದು ಹಂತದ ಮಾತುಕತೆಯಾಗಿದೆ. ಎಲ್ಲಾ ಪಕ್ಕಾ ಆದ ನಂತರ ಬಹಿರಂಗಪಡಿಸಲಾಗುತ್ತಿದೆ. ಮೇಲಾಗಿ ಚಿತ್ರ ಪ್ರಾರಂಭವಾಗುವುದಕ್ಕೆ ಸ್ವಲ್ಪ ಸಮಯವಿದೆ. ಒಳ್ಳೆಯ ದಿನವಿತ್ತು ಎಂಬ ಕಾರಣಕ್ಕೆ ಮುಹೂರ್ತ ಮಾಡಿದ್ದೇವೆ. ಆಗಸ್ಟ್‌ನಲ್ಲಿ ಬೆಂಗಳೂರು, ಕೊಡಗು, ಉತ್ತರ ಕರ್ನಾಟಕದಲ್ಲಿ 40 ದಿನಗಳ ಒಂದೇ ಹಂತದ ಚಿತ್ರೀಕರಣ ಮಾಡುವ ಯೋಚನೆ ಇದೆ’ ಎನ್ನುತ್ತಾರೆ ಮಂಜು.