ಕಾಸರಗೋಡು: ಕಾಂಞಂಗಾಡು ರೈಲು ನಿಲ್ದಾಣವನ್ನು ಅಮೃತ್ ಭಾರತ್ ಸ್ಟೇಶನ್ ಯೋಜನೆಯಲ್ಲಿ ಒಳಪಡಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ರೈಲ್ವೇ ಅಮಿನಿಟಿ ಬೋರ್ಡ್‌ನ ಅಧ್ಯಕ್ಷ ಪಿ.ಕೆ. ಕೃಷ್ಣದಾಸ್ ತಿಳಿಸಿದ್ದಾರೆ.
ಕಾಂಞಂಗಾಡಿನ ರೈಲು ನಿಲ್ದಾಣವನ್ನು ಅವರು ಸಂದರ್ಶನ ನಡೆಸಿ ಜನಪ್ರತಿನಿಧಿಗಳು, ರಾಜಕೀಯ ಪ್ರತಿನಿಧಿಗಳನ್ನು ಭೇಟಿ ಮಾಡಿ ಮನವಿ ಸ್ವೀಕರಿಸಿದ ಅನಂತರ ಪತ್ರಕರ್ತರೊಂದಿಗೆ ಮಾತನಾಡಿದರು.
ಅಮೃತ್ ಸ್ಟೇಶನ್ ಯೋಜನೆಯಲ್ಲಿ ಸೇರ್ಪಡೆಗೊಂಡಲ್ಲಿ ಕಾಂಞಂಗಾಡಿನ ರೈಲು ನಿಲ್ದಾಣದ ಅಭಿವೃದ್ಧಿಗೆ 10 ಕೋಟಿ ರೂ. ಮೊತ್ತ ಲಭ್ಯವಾಗಲಿದ್ದು , ಈ ನಿಲ್ದಾಣದ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಪಿ.ಕೆ. ಕೃಷ್ಣದಾಸ್ ಮಾಹಿತಿ ನೀಡಿದರು.
ಪಿ.ಕೆ.ಕೃಷ್ಣದಾಸ್ ಅವರೊಂದಿಗೆ ಕಾಂಞಂಗಾಡು ನಗರಸಭಾ ಅಧ್ಯಕ್ಷೆ ಕೆ.ವಿ. ಸುಜಾತಾ, ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿಯ ಅಧ್ಯಕ್ಷ ರವೀಶ ತಂತ್ರಿ ಕುಂಟಾರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ವೇಲಾಯುಧನ್, ಜಿಲ್ಲಾ ಉಪಾಧ್ಯಕ್ಷ ಎಂ.ಬಲರಾಜ್, ನಗರಸಭಾ ಸದಸ್ಯರು, ವ್ಯಾಪಾರಿ ಸಮಿತಿ ಮುಖಂಡರು ಪಾಲ್ಗೊಂಡಿದ್ದರು.