ಇಡೀ ಜಗತ್ತು ನಂಬಿರುವುದು ಕೆಆರ್‌ಎಸ್‌ನ ರುವಾರಿ ಸರ್.ಎಂ.ವಿ ಅಂತ. ಆದರೆ ಪ್ರೊ.ಪಿ. ನಂಜರಾಜ ಅರಸು ಇನ್ನೊಂದು ಕಥೆ ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.
Advertisement
ನೀವು ಈ ಪುಸ್ತಕ ಬರೆದಿರುವುದರ ಹಿಂದಿನ ಉದ್ದೇಶವೇನು?ಕನ್ನಂಬಾಡಿ ಕಟ್ಟೆ ವಿಚಾರದಲ್ಲಿ ನೆಲದಡಿ ಹೂಳಲ್ಪಟ್ಟ ಸತ್ಯ ಸಂಗತಿ ಆಚೆ ಬರಬೇಕು. ಕಟ್ಟೆ ಕಟ್ಟಲು ತನ್ನೆಲ್ಲಾ ನೆರವು ನೀಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಸ್ಮರಿಸಬೇಕು. ವಿಶ್ವೇಶ್ವರಯ್ಯ ಅವರಿಗೆ ಸಿಕ್ಕ ಅತಿಯಾದ ಪ್ರಚಾರದಿಂದಾಗಿ ತುಳಿಯಲ್ಪಟ್ಟ ಏಳು ಜನ ಮುಖ್ಯ ಎಂಜಿನಿಯರುಗಳನ್ನು ಹೊರತರಬೇಕು ಎಂಬುದೇ ಹೊರತು, ಇಲ್ಲಿ ಯಾರನ್ನೋ ಟೀಕಿಸುವ, ದ್ವೇಷಿಸುವ ಉದ್ದೇಶವಿಲ್ಲ.
ದಾಖಲೆಗಳಿಲ್ಲದೆ ನಾನೇನೂ ಬರೆಯುವವನಲ್ಲ. ಹೀಗಾಗಿ ದಾಖಲೆ ಸಂಗ್ರಹಿಸುವುದಕ್ಕೆ ಸಾಕಷ್ಟು ಓಡಾಡಬೇಕಾಯಿತು. ಸರ್ಕಾರದ ಭಂಡಾರದಲ್ಲಿದ್ದ ಅತ್ಯಂತ ಮಹತ್ವದ, ಗೌಪ್ಯ ಮಾಹಿತಿಗಳನ್ನು ಹೇಗೋ ಕಾಡಿ ಪಡೆದೆ. ಆದರೆ ಯೋಜನೆಯನ್ನು ಮೊಟ್ಟ ಮೊದಲಿಗೆ ರೂಪಿಸಿದ ಡಾಸ್ ಭಾವಚಿತ್ರವನ್ನು ಸಂಪಾದಿಸಲಾಗಲಿಲ್ಲ. ಅದಕ್ಕಾಗಿ ಇನ್ನೂ ಹುಡುಕಾಟ ನಡೆಸಿದ್ದೇನೆ. ಈ ಪುಸ್ತಕ ಬರೆಯಬೇಕು ಅನಿಸಿದ್ದೇಕೆ?
ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ನವರು ರಾಜಕೀಯ ಪ್ರವೇಶ ಮಾಡಿ 40 ವರ್ಷವಾಯಿತು ಎಂಬ ಕಾರಣಕ್ಕೆ ಅಭಿಮಾನಿಗಳು ಮೈಸೂರಲ್ಲಿ ಕಾರ್ಯಕ್ರಮ ಏರ್ಪಡಿಸಿದ್ದರು. ಅದರಲ್ಲಿ ವಿಚಾರಸಂಕಿರಣವೂ ಇತ್ತು. ಡಾ.ಬಂಜಗೆರೆ ಜಯಪ್ರಕಾಶ್ ಮಾತನಾಡುತ್ತಾ “ಕನ್ನಂಬಾಡಿ ಅಣೆಕಟ್ಟು ಕಟ್ಟಿದ್ದು ಟಿಪ್ಪು ಸುಲ್ತಾನ’ ಅನ್ನುವ ಅರ್ಥದಲ್ಲಿ ಮಾತನಾಡಿದರು. ನನ್ನ ಸರದಿಬಂದಾಗ ಕನ್ನಂಬಾಡಿ ಕಟ್ಟೆ ಕಟ್ಟುವ ಮುನ್ನವೇ ನಮ್ಮ ಜನ ಸುಮಾರು 600 ವರ್ಷಗಳ ಹಿಂದೆಯೇ 30ಕ್ಕೂ ಹೆಚ್ಚು ಕಟ್ಟೆಗಳನ್ನು ಕಟ್ಟಿದ್ದಾರೆ. ವಾಸ್ತವವಾಗಿ ಕನ್ನಂಬಾಡಿ ಕಟ್ಟೆಯ ಮೂಲ ಯೋಜನೆ ವಿಶ್ವೇಶ್ವರಯ್ಯ ಅವರದ್ದಲ್ಲ. ಕ್ಯಾಪ್ಟನ್‌ಡಾಸ್ ಎನ್ನುವ ಬ್ರಿಟಿಷ್ ಎಂಜಿನಿಯರ್‌ದ್ದು ಎಂದೆ. ಭಾಷಣ ಮುಗಿದ ನಂತರ ಊಟದ ಬಿಡುವಿನಲ್ಲಿ ಸಿದ್ದರಾಮಯ್ಯ, ಡಾ.ಎಚ್.ಸಿ.ಮಹದೇವಪ್ಪ, ಆರ್.ಧ್ರುವನಾರಾಯಣ ಹಾಗೂ ಎಚ್.ಎಸ್.ಮಹದೇವ ಪ್ರಸಾದ್ ಇಷ್ಟೂ ಜನ “ಮೇಷ್ಟ್ರೆ, ನಾವೆಲ್ಲಾ ಅಂದು ಕೊಂಡಿರೋದು ಕನ್ನಂಬಾಡಿ ಕಟ್ಟುವ ಚಿಂತನೆ ಮಾಡಿದ್ದು, ಯೋಜನೆ ರೂಪಿಸಿದ್ದು, ಕಟ್ಟಿಸಿದ್ದು ಎಲ್ಲವೂ ವಿಶ್ವೇಶ್ವರಯ್ಯನವರೇ ಎಂದು. ನೀವೇನೋ ಹೇಳ್ತಿದ್ದೀರಿ. ಆಧಾರ ಏನು?’ ಎಂದು ಹತ್ತಾರು ಪ್ರಶ್ನೆ ಕೇಳಿದರು. ನಾನೂ ಉತ್ತರ ಕೊಟ್ಟೆ. ಅದಾದ ಕೆಲ ದಿನಗಳ ನಂತರ ಯಾವುದೋ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು ಕನ್ನಂಬಾಡಿ ಕಟ್ಟಿಸಿದ್ದು ವಿಶ್ವೇಶ್ವರಯ್ಯನವರು ಎಂದು ಬಿಡುವುದೇ? ಆವತ್ತೇ ನಾನು ಅಂದುಕೊಂಡೆ ಕನ್ನಂಬಾಡಿ ಕಟ್ಟೆ ನಿರ್ಮಾಣದ ಸತ್ಯವನ್ನು ಬರೆಯಬೇಕು ಅಂತ.
Related Articles
ದಾಖಲೆ ಇಲ್ಲದೆ ನಾನು ಏನನ್ನೂ ಬರೆಯುವವನಲ್ಲ ಎಂದು ಈ ಮೊದಲೇ ಹೇಳಿದೆನಲ್ಲ? ಎಲ್ಲವನ್ನೂ ಕಾಡಿಬೇಡಿ ಹೊಂದಿಸಿಕೊಂಡೇ ಬರೆದಿದ್ದೇನೆ. ಕೆಲವೊಂದಿಷ್ಟನ್ನು ಪುಸ್ತಕದಲ್ಲೂ ಅಚ್ಚು ಹಾಕಿಸಿದ್ದೇನೆ. ಯಾವ ಪೂರ್ವಾಗ್ರಹದಿಂದಲೂ ಈ ಪುಸ್ತಕ ಬರೆದಿಲ್ಲ. ಜನರಿಗೆ ಸತ್ಯ ತಿಳಿಸಬೇಕು ಎಂಬುದಷ್ಟೆ ನನ್ನ ಉದ್ದೇಶ.
Advertisement
ನಿಮ್ಮ ಪ್ರಕಾರ ವಿಶ್ವೇಶ್ವರಯ್ಯನವರಿಗೂ ಕನ್ನಂಬಾಡಿ ಕಟ್ಟೆಗೂ ಯಾವ ರೀತಿಯ ಸಂಬಂಧ ಇದೆ?ಕ್ಯಾಪ್ಟನ್ ಡಾಸ್, ಕೂಲಿ ಕಾರ್ಮಿಕನನ್ನು ಉಳಿಸಲು ನೀರಿಗಿಳಿದು ಕೊಚ್ಚಿಕೊಂಡು ಹೋದಾಗ ಅಂದಿನ ದಿವಾನ ಟಿ.ಆನಂದರಾವ್ ಅವರು ಬಾಂಬೆ ಸರ್ಕಾರಕ್ಕೆ ಪತ್ರ ಬರೆಯುತ್ತಾರೆ. ವಿಶ್ವೇಶ್ವರಯ್ಯ ನವರನ್ನು ಮೈಸೂರು ಸಂಸ್ಥಾನಕ್ಕೆ ಕಳುಹಿಸಿಕೊಡಲು ಕೋರುತ್ತಾರೆ. ಶಿಕ್ಷಣ, ಕೈಗಾರಿಕೆಗೆ ಆದ್ಯತೆ ಕೊಡುವುದಾದರೆ ಬರುತ್ತೇನೆ ಎಂಬ ಷರತ್ತಿನ ಮೇಲೆ ವಿಶ್ವೇಶ್ವರಯ್ಯನವರು ಬಂದರು. ಆಮೇಲೆ ಮುಖ್ಯ ಎಂಜಿನಿಯರ್ ಆಗಿ ಕನ್ನಂಬಾಡಿ ಯೋಜನೆಯ ಮೇಲುಸ್ತುವಾರಿ ವಹಿಸಿದ್ದು ಒಂದೇ ವರ್ಷ. ನಂತರ ದಿವಾನರಾಗಿ, 1918ರಲ್ಲಿ ರಾಜೀನಾಮೆ ಕೊಡುತ್ತಾರೆ. ಕನ್ನಂಬಾಡಿ ಅಣೆಕಟ್ಟೆಯ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು 1932ರಲ್ಲಿ. ಹೀಗಾಗಿ ಈ ಮಧ್ಯೆ ದುಡಿದ ಏಳು ಮುಖ್ಯ ಎಂಜಿನಿಯರ್‌ಗಳ ಹೆಸರನ್ನೇಕೆ ಯಾರೂ ಹೇಳುವುದಿಲ್ಲ? ನಕ್ಷೆ ರೂಪಿಸಿದ್ದು, ನಿರ್ಮಾಣ ಕಾರ್ಯ ಆರಂಭಿಸಿದ್ದು ವಿಶ್ವೇಶ್ವರಯ್ಯ ನಿಜ. ಆದರೆ, ಯೋಜನೆಗೆ ಅವರು ಕೇಳಿದಷ್ಟು ದುಡ್ಡು ಕೊಡುವ ಮಹಾರಾಜ ಲೆಕ್ಕಕ್ಕೇ ಇಲ್ಲವೇ? ಎಲ್ಲಕ್ಕೂ ವಿಶ್ವೇಶ್ವರಯ್ಯ ಅವರಿಗೇ ಕ್ರೆಡಿಟ್ ಕೊಟ್ಟಿರುವುದಕ್ಕೆ ನನಗೆ ಬೇಜಾರು. ಹಾಗಾದರೆ ವಿಶ್ವೇಶ್ವರಯ್ಯನವರ ಪ್ರತಿಭೆ ಬಗ್ಗೆ ಏನು ಹೇಳ್ತಿರಾ?
ವಿಶ್ವೇಶ್ವರಯ್ಯ ಜೀನಿಯಸ್. ಆ ಬಗ್ಗೆ ಎರಡನೇ ಮಾತೇ ಇಲ್ಲ. ಆದರೆ, ಕೇವಲ ಒಂದೇ ವರ್ಷ ಮುಖ್ಯ ಎಂಜಿನಿಯರಾಗಿ ಕೆಲಸ ಮಾಡಿದ ವಿಶ್ವೇಶ್ವರಯ್ಯನವರಿಗೆ ಅನಗತ್ಯ ಪ್ರಚಾರ ಏಕೆ ಕೊಡಬೇಕು? ಇವರ ವಿಚಾರದಲ್ಲಿ ಮಾತ್ರ ಹುದ್ದೆಗಿಂತಲೂ ವಿಶ್ವೇಶ್ವರಯ್ಯನವರ ಹೆಸರೇ ಮುಖ್ಯವಾಗುತ್ತದೆ. ಆ ಹುದ್ದೆಯಿಂದಾಗಿಯೇ ಈ ಕೆಲಸ ಮಾಡಲು ಸಾಧ್ಯವಾಗಿದ್ದಲ್ಲವೆ? ಪುಸ್ತಕದಲ್ಲಿ ಕನ್ನಂಬಾಡಿ ಕಟ್ಟೆ ಹೊರತಾಗಿ ಏನೇನಿದೆ ?
ಕಾವೇರಿ ನದಿಯ ಹುಟ್ಟು, ಬೆಳವಣಿಗೆ ಎಲ್ಲ ವಿವರವನ್ನೂ ಕೊಟ್ಟಿದ್ದೇನೆ. ಕಾವೇರಿ ಬಗೆಗಿನ ಅತ್ಯಂತ ಸೂಕ್ಷ್ಮ ವಿಷಯಗಳಿವೆ. ಕಾವೇರಿ ನದಿ ನೀರು ಹಂಚಿಕೆ ಒಪ್ಪಂದದ ಹಿಂದಿನ ಹಗರಣಗಳ ಸಂಪೂರ್ಣ ವಿವರ ಇದೆ. ಜಯಲಲಿತಾ ಕೊಟ್ಟ ಕಿರುಕುಳವನ್ನೂ ದಾಖಲಿಸಿದ್ದೇನೆ. ಕಾವೇರಿ ಬಗೆಗಿನ ಮಿನಿ ಎನ್‌ಸೈಕ್ಲೊಪೀಡಿಯಾ ರೀತಿ ಇದೆ ಈ ಪುಸ್ತಕ.1 360ರಲ್ಲಿ ಕನ್ನಡಿಗರೇ ಕಟ್ಟಿದ ಮೊದಲ ಕಟ್ಟೆ ಮಾಧವಮಂತ್ರಿ ಅಣೆಕಟ್ಟೆಯಿಂದಿಡಿದು, 1630ರಲ್ಲಿ ರಣಧೀರ ಕಂಠೀರವ ಒಡೆಯರ್ ಕಟ್ಟಿಸಿದ ಬಂಗಾರ ದೊಡ್ಡಿ ಕಟ್ಟೆ, 1680ರಲ್ಲಿ ಚಿಕ್ಕದೇವರಾಜ ಕಟ್ಟಿಸಿದ ಎರಡು ಅಣೆಕಟ್ಟೆ, ಹನುಮಂತ ಕಟ್ಟೆ, ಚುಂಚನಕಟ್ಟೆ ಹೀಗೆ ಒಟ್ಟು ಸುಮಾರು 13 ಕಟ್ಟೆಗಳ ಬಗ್ಗೆ ವಿವರಣೆ ಇದೆ. 1870ರಲ್ಲಿ ನಿರ್ಮಾಣವಾದ ಸ್ಯಾಂಕಿ ಟ್ಯಾಂಕ್, ಕೊಡಗು ಗಡಿಯಲ್ಲಿರುವ ರಾಮಸ್ವಾಮಿ ಕಣಿವೆ ಯೋಜನೆಯನ್ನು ತಗಾದೆಯಿಂದ ಕೈಬಿಟ್ಟಿದ್ದು, 1830ರಲ್ಲಿ ಕಟ್ಟೇಪುರ ಬಳಿ 18 ರಿಂದ 20 ಅಡಿ ಎತ್ತರದ ಕೃಷ್ಣರಾಜೇಂದ್ರ ಅಣೆಕಟ್ಟೆ ನಿರ್ಮಾಣ ಎಲ್ಲವೂ ಇದರಲ್ಲಿದೆ. ಈ ಸತ್ಯ ಇತಿಹಾಸದ ಪುಟಗಳಲ್ಲಿ ದಾಖಲಾಗಲಿಲ್ಲ ಏಕೆ?
ದಾಖಲಿಸುವವರ ಭಟ್ಟಂಗಿತನ. ಪಠ್ಯಪುಸ್ತಕಗಳಲ್ಲೂ ಕನ್ನಂಬಾಡಿ ಕಟ್ಟಿದ್ದು ವಿಶ್ವೇಶ್ವರಯ್ಯ ಎಂದೇ ಉಲ್ಲೇಖೀಸಲಾಗಿದೆ. ಮೇಷ್ಟ್ರು ಅದನ್ನೇ ಪಾಠ ಮಾಡುತ್ತಾರೆ. ಮಕ್ಕಳೂ ಅದನ್ನೇ ಸತ್ಯವೆಂದು ತಿಳಿದುಕೊಳ್ಳುತ್ತಾರೆ. ಜತೆಗೆ ಕುವೆಂಪು ಸೇರಿದಂತೆ ಅಂದಿನ ಸಾಹಿತಿಗಳು, ಬ್ರಾಹ್ಮಣೇತರರೂ ವಿಶ್ವೇಶ್ವರಯ್ಯನವರನ್ನೇ ಹೊಗಳಿದರು. ಸಿನಿಮಾದಲ್ಲಿ ರಾಜಕುಮಾರ್, ವಿಶ್ವೇಶ್ವರಯ್ಯ ಕನ್ನಂಬಾಡಿ ಕಟ್ಟಿಸದಿದ್ದರೆ… ಎಂದು ಹಾಡಿದ ಮೇಲೆ ಮುಗಿದೇ ಹೋಯಿತು. ಇನ್ನು ಈ ಸತ್ಯ ಯಾರಿಗೆ ಗೊತ್ತಾಗುತ್ತದೆ? ನಿಮ್ಮ ಪುಸ್ತಕದ ಬಗ್ಗೆ ಈಗ ವಿರೋಧ ವ್ಯಕ್ತವಾಗುತ್ತಿದೆಯಲ್ಲಾ?
ಪುಸ್ತಕ ಬಿಡುಗಡೆ ದಿನವೇ 500 ಪ್ರತಿ ಖರ್ಚಾಗಿದೆ. ಪುಸ್ತಕ ಓದಿ ಟೀಕೆ ಮಾಡುವವರಿಗೆ ದಾಖಲೆ ಸಮೇತ ಉತ್ತರ ಕೊಡಬಹುದು. ಓದದೇ ಟೀಕೆ ಮಾಡುವವರ ಬಗ್ಗೆ ಏನು ಮಾತನಾಡುತ್ತೀರಿ?
ಕ್ಯಾಫ್ಟನ್ ಡಾಸ್ ಬಗ್ಗೆ ನಿಮಗೆ ಒಲವೇಕೆ?
ಕಾವೇರಿ ಪ್ರವಾಹದಿಂದ ಕೃಷ್ಣರಾಜ ಕಟ್ಟೆಯ ತಾತ್ಕಾಲಿಕ ಹೊರ ಕಾಲುವೆ ದುರಸ್ತಿಯ ವೇಳೆ ದೈತ್ಯ ಅಲೆಗೆ ಬಡ ಕೂಲಿಯೊಬ್ಬ ಸಿಲುಕಿಕೊಂಡ. ಆಗ ಬ್ರಿಟಿಷ್ ಇಂಜಿನಿಯರ್ ಆಗಿದ್ದ, 31 ವರ್ಷದ ತರುಣ ಡಾಸ್. ಬ್ಲಿಡಿ ಇಂಡಿಯನ್ ಕೂಲಿ, ಲೆಟ್ ಹಿಮ್ ಡೈ ಎನ್ನಲಿಲ್ಲ. ಬದಲಿಗೆ ಅವನನ್ನು ಉಳಿಸಿ ತಾನು ಪ್ರವಾಹದಲ್ಲಿ ಕೊಚ್ಚಿ ಹೋದ. ಅವನ ಹೆಸರಲ್ಲಿ ದತ್ತಿ ಪ್ರಶಸ್ತಿ ಕೊಡಬೇಕೆಂದು ಬಡ ಕೂಲಿಕಾರ್ಮಿಕರೆಲ್ಲ 600 ರೂ. ಸಂಗ್ರಹಿಸಿ 1922ರಲ್ಲಿ ದತ್ತಿ ನಿಧಿ ಸ್ಥಾಪಿಸಿದರು. ಆದರೆ ಆ ದತ್ತಿ ನಿಧಿಯನ್ನೇ ಮರೆತು ಬಿಟ್ಟಿದೆ. ಇನ್ನು ನಮ್ಮ ಇತಿಹಾಸಕಾರರೂ ಅವನ ಸೇವೆಯನ್ನು ದಾಖಲಿಸದೆ ಸಾಯಿಸಿದರು. ಹೀಗಾಗಿ ಈ ಪುಸ್ತಕ ಮಾರಾಟದಲ್ಲಿ ಪ್ರಕಾಶಕರು ನನಗೆ ಕೊಡುವ ಗೌರವ ಧನವನ್ನು ಒಟ್ಟುಗೂಡಿಸಿ, ಮೈಸೂರಿನ ಬಿಷಪ್ ಅವರ ಜೊತೆಗೂ ಮಾತನಾಡಿ ಮೈಸೂರಲ್ಲಿರುವ ಡಾಸ್ ದತ್ತಿ ನಿಧಿಗೆ ಜೀವ ತುಂಬುವ ಕೆಲಸ ಮಾಡುತ್ತೇನೆ. ಗಿರೀಶ್ ಹುಣಸೂರು