Advertisement

ಕನ್ನಡ್ಕ:ಅಕ್ರಮ ಕೆಂಪು ಕಲ್ಲುಗಣಿಗಾರಿಕೆ ಘಟಕ ಪತ್ತೆ 

11:09 AM Sep 27, 2018 | |

ಪುತ್ತೂರು:ಬಡಗನ್ನೂರು ಗ್ರಾ.ಪಂ. ವ್ಯಾಪ್ತಿಯ ಪಡುವನ್ನೂರು ಗ್ರಾಮದ ಕನ್ನಡ್ಕದಲ್ಲಿ ನಿವೇಶನ ರಹಿತರಿಗಾಗಿ ಮೀಸಲಿಟ್ಟ ಜಾಗದಲ್ಲಿಯೇ ಕೆಂಪು ಕಲ್ಲಿನ ಕೋರೆ ಕಾರ್ಯಾಚರಿಸುತ್ತಿದ್ದು, ಈ ಅಕ್ರಮವನ್ನು ಪತ್ತೆ ಮಾಡಿದ ಅಧಿಕಾರಿಗಳು ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಗಡಿಭಾಗದ ಗ್ರಾಮಗಳಾದ ಬಡಗನ್ನೂರು, ನೆಟ್ಟಣಿಗೆಮುಟ್ನೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕೆಂಪು ಕಲ್ಲಿನ ಕೋರೆಗಳು ಕಾರ್ಯಾಚರಿಸುತ್ತಿದ್ದು, ಇಲ್ಲಿ ಅಕ್ರಮ ಯಾವುದೋ? ಸಕ್ರಮ ಯಾವುದೋ? ಎನ್ನುವುದು ಅಧಿಕಾರಿಗಳಿಗೆ ಹಾಗೂ ಕೋರೆಯ ಮಾಲಕರಿಗೆ ಮಾತ್ರ ಗೊತ್ತು ಎನ್ನುತ್ತಾರೆ ಸ್ಥಳೀಯರು.

Advertisement

ಗ್ರಾಮಸ್ಥರು ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು, ತಹಶಿಲ್ದಾರ್‌, ಗ್ರಾಮಕರಣಿಕರಿಗೆ ಮನವಿ ನೀಡಿ ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಮನವಿ ಮಾಡಿಕೊಂಡಿದ್ದರು. ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಕಲ್ಲಿನ ಕೋರೆಗೆ ದಾಳಿ ನಡೆಸಿದ್ದಾರೆ. ಬಡಗನ್ನೂರು ಗ್ರಾ.ಪಂ. ನಿವೇಶನ ರಹಿತರಿಗೆ ಮೀಸಲಿಟ್ಟ ಜಾಗದಲ್ಲಿ ಉದ್ಯಮಿಯೊಬ್ಬರು ಕೆಂಪುಕಲ್ಲಿನ ಕೋರೆ ನಡೆಸುತ್ತಿದ್ದರು. ಸುಮಾರು 125 ಅಡಿ ಉದ್ದ ಹಾಗೂ 25 ಅಡಿ ಅಗಲದಲ್ಲಿ ಮೊದಲ ಹಂತದಲ್ಲಿ ಕೆಂಪು ಕಲ್ಲುಗಳನ್ನು ತೆಗೆಯಲು ಆರಂಭಿಸಿ ಮುಂದಕ್ಕೆ ಇಡೀ ಜಾಗವನ್ನು ಕಲ್ಲಿನ ಕೋರೆಗೆ ಬಳಸುವ ಉದ್ದೇಶವನ್ನು ಹೊಂದಿದ್ದರು.

ಕಾರ್ಯರೂಪಕ್ಕೆ ಬಾರದ ನಿರ್ಣಯ
ಬಡಗನ್ನೂರು ಗ್ರಾ.ಪಂ. ಗ್ರಾಮ ಸಭೆಯಲ್ಲಿ ನೆರೆಯ ರಾಜ್ಯ ಕೇರಳದಿಂದ ಕರ್ನಾಟಕದ ಸುಳ್ಯಪದವು ಮೂಲಕ ಇತರ ಭಾಗಗಳಿಗೆ ಕೆಂಪು ಕಲ್ಲುಗಳನ್ನು ಲಾರಿಗಳ ಮೂಲಕ ನಿರಂತರವಾಗಿ ಸಾಗಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಗ್ರಾಮಸ್ಥರು, ಕೇರಳದಿಂದ ಬರುವ ಕೆಂಪು ಕಲ್ಲು ಸಾಗಾಟದ ಲಾರಿಯನ್ನು ತಡೆದು ಟೋಲ್‌ಗೇಟ್‌ ನಿರ್ಮಾಣ ಮಾಡುವಂತೆ ಒತ್ತಾಯಿಸಿದ್ದರು. ಗ್ರಾಮಸ್ಥರ ಆಗ್ರಹಕ್ಕೆ ಟೋಲ್‌ಗೇಟ್‌ ನಿರ್ಮಾಣಕ್ಕೆ ಪಂಚಾಯತ್‌ ನಿರ್ಣಯಿಸಿತ್ತು. ಈವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ನೆಟ್ಟಣಿಗೆಮುಟ್ನೂರು ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಅಕ್ರಮ ಗಣಿಗಾರಿಕೆ ವಿಷಯ ಪ್ರಸ್ತಾವಗೊಂಡಿದ್ದರೂ ಕ್ರಮ ಆಗಿಲ್ಲ. ಬಡಗನ್ನೂರು ಗ್ರಾಮ ಪಂಚಾಯತ್‌ ಕಾರ್ಯದರ್ಶಿ, ಗಣಿ ಇಲಾಖೆಯೇ ಸೂಕ್ತ ಕ್ರಮ ಕೈಗೊಳ್ಳಬೇಕು ಹೊರತು ಪಂಚಾಯತ್‌ನಿಂದ ಸಾಧ್ಯವಿಲ್ಲ ಎಂದಿದ್ದರು.

ಗಣಿಗಾರಿಕೆ ಪರವಾನಿಗೆ ಸರಳೀಕರಣಗೊಳಿಸಿ
ಮನೆಗಳನ್ನು ಕಟ್ಟಲು ಕೆಂಪು ಕಲ್ಲು ಅತೀ ಅಗತ್ಯ. ಕಲ್ಲುಗಳ ಬೇಡಿಕೆ ಹೆಚ್ಚಿದಾಗ ಅಕ್ರಮಗಳು ಆರಂಭವಾಗುತ್ತವೆ. ಕೆಂಪು ಕಲ್ಲಿನ ಗಣಿಗಾರಿಕೆಯ ಪರವಾನಿಗೆ ಪಡೆಯಬೇಕಾದರೆ ಲಕ್ಷಾಂತರ ರೂ. ಖರ್ಚು ಮಾಡಬೇಕಾಗುತ್ತದೆ. ಇದರಿಂದಾಗಿ ಮಾಲಕರು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಸರಕಾರ ಪರವಾನಿಗೆಯನ್ನು ಸರಳಗೊಳಿಸಿದರೆ ಎಲ್ಲವೂ ಸುಸೂತ್ರವಾಗಿ ನಡೆಯಬಹುದು ಎಂಬುದು ಸ್ಥಳೀಯರ ಅಭಿಪ್ರಾಯ.

ಗಡಿಭಾಗದಲ್ಲಿ ಅವ್ಯಾಹತ 
ಗಡಿಭಾಗದ ನೆಟ್ಟಣಿಗೆ ಮುಟ್ನೂರು ಗ್ರಾ.ಪಂ.ನ ಮೇನಾಲ, ಸಣ್ಣಪಾದೆ, ಕರ್ನೂರು. ಬಡಗನ್ನೂರು ಗ್ರಾ.ಪಂ. ವ್ಯಾಪ್ತಿಯ ಪಡುವನ್ನೂರು ಗ್ರಾಮದ ಮೈಕುಳಿ, ಪದಡ್ಕ ಮೊದಲಾದ ಕಡೆ ನಿರಂತರವಾಗಿ ಕೆಂಪು ಕಲ್ಲಿನ ಗಣಿಗಾರಿಕೆ ನಡೆಯುತ್ತಿದೆ. 

Advertisement

ಮಾಹಿತಿ ಬಂದಿದೆ
ನೆಟ್ಟಣಿಗೆಮುಟ್ನೂರು ಪಡುವನ್ನೂರು, ಬಡಗನ್ನೂರು ಮೊದಲಾದ ಕಡೆ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಸರಕಾರದ ಕಾನೂನಿನಂತೆ ಕ್ರಮ ಕೈಗೊಳ್ಳಲಾಗುವುದು. ಪರವಾನಿಗೆ ಸರಳೀಕರಣ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಕನ್ನಡ್ಕದ ಅಕ್ರಮದ ಬಗ್ಗೆ ಮಾಹಿತಿ ಇಲ್ಲ.
– ಪದ್ಮಿನಿ,
ಮಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ

 ಯಂತ್ರಗಳ ಮುಟ್ಟುಗೋಲು
ಕನ್ನಡ್ಕದಲ್ಲಿ ನಡೆದ ಅಕ್ರಮ ಗಣಿಗಾರಿಕೆ ವಿರುದ್ಧ ಮೇಲಧಿಕಾರಿಗಳಿಗೆ ವರದಿ ನೀಡಲಾಗಿದೆ. ಬಳಕೆ ಮಾಡಿದ ಕಲ್ಲುಗಳು, ಯಂತ್ರಗಳನ್ನು ಮುಟ್ಟುಗೋಲು ಹಾಕಿದ್ದೇವೆ. ಮೇಲಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳುತ್ತಾರೆ.
– ರಾಧಾಕೃಷ್ಣ,
ಗ್ರಾಮಕರಣಿಕರು 

Advertisement

Udayavani is now on Telegram. Click here to join our channel and stay updated with the latest news.

Next