ದಾವಣಗೆರೆ: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸಾವಿರಾರು ಹುದ್ದೆ ಭರ್ತಿ ವೇಳೆ ಕನ್ನಡಿಗರಿಗೆ ಆದ್ಯತೆ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ)ಯ ಕಾರ್ಯಕರ್ತರು ಶುಕ್ರವಾರ ಹಕ್ಕೊತ್ತಾಯ ಮಂಡಿಸಿದರು.
ಸರ್ಕಾರ ಯಾವುದೇ ಕಾರಣಕ್ಕೂ ಅನ್ಯ ಭಾಷಿಗರ ನೇಮಕಕ್ಕೆ ಮುಂದಾಗಬಾರದು. ನಮ್ಮ ರಾಜ್ಯದಲ್ಲಿ ಖಾಲಿ ಇರುವ ಹುದ್ದೆ ಭರ್ತಿಗೆ ಅನ್ಯಭಾಷಿಕರಿಗೆ ಮಣೆಹಾಕದೆ ಕನ್ನಡಿಗರಿಗೆ ಆದ್ಯತೆ ನೀಡಬೇಕೆಂದು ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ಸಂಘಟನೆಯ ಪ್ರಮುಖರು, ಸರ್ಕಾರಿ ಶಾಲೆಯಲ್ಲಿ ಓದಿ, ಪದವಿ ಪಡೆದವರಿಗೆ ಕನ್ನಡಿಗ ಯುವಕ, ಯುವತಿಯರ ನೇಮಕಕ್ಕೆ ಸರ್ಕಾರ ಒತ್ತುನೀಡಬೇಕು.
ಇದುವರೆಗೆ ಸರ್ಕಾರ ಉತ್ತಮವಾದ ಕೆಲಸ ಮಾಡಿಕೊಂಡು ಬಂದಿದೆ. ಅನ್ನಭಾಗ್ಯ, ಕೀÒರಭಾಗ್ಯ ಮುಂತಾದ ಉತ್ತಮ ಯೋಜನೆಗಳನ್ನು ಜಾರಿಮಾಡಿದೆ. ಈಗ ಖಾಲಿ ಹುದ್ದೆ ಭರ್ತಿ ವೇಳೆ ಸಹ ಇದೇ ಪ್ರಬುದ್ಧತೆ ತೋರಿಸಬೇಕು. ಸರ್ಕಾರಿ ಶಾಲೆಯಲ್ಲಿ ಓದಿದವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಭರ್ತಿಮಾಡಿಕೊಳ್ಳುವ ಮೂಲಕ ಸರ್ಕಾರಿ ಶಾಲೆಯತ್ತ ಮಕ್ಕಳು ಮತ್ತೆ ಮುಖ ಮಾಡುವಂತೆ ಮಾಡಬೇಕು ಎಂದರು.
ಗುತ್ತಿಗೆ ಆಧಾರದ ನೇಮಕಾತಿಗೂ ಸಹ ಸರ್ಕಾರ ಅವಕಾಶ ಮಾಡಿಕೊಡಬಾರದು. ನೇರ ನೇಮಕಾತಿಗೆ ಆದ್ಯತೆ ನೀಡಬೇಕು. ಗುತ್ತಿಗೆ ಆಧಾರದಲ್ಲಿ ನೇಮಕಮಾಡಿಕೊಳ್ಳುವುದರಿಂದ ನೌಕರರಿಗೆ ಸಮಸ್ಯೆ ಆಗುವುದು ಮಾತ್ರವಲ್ಲದೆ, ಖಾಸಗಿಯವರನ್ನು ಉದ್ಧಾರ ಮಾಡಿದಂತೆ ಆಗುತ್ತದೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಮಾಜಿ ಸದಸ್ಯ ಕೆ.ಜಿ. ಶಿವಕುಮಾರ್ ಹಕ್ಕೊತ್ತಾಯ ಕಾರ್ಯಕ್ರಮಕ್ಕೆ ಚಾಲನೆನೀಡಿದರು. ವೇದಿಕೆಯ ಸಂಘಟನಾ ಕಾರ್ಯದರ್ಶಿ ಶಿವಕುಮಾರ ಪಿ. ಸುಂಕಾಪುರ್, ಸಂಚಾಲಕ ಆದಾಪುರ ನಾಗರಾಜ, ಕಾನೂನು ಘಟಕದ ಅಧ್ಯಕ್ಷೆ ಜೆ.ಸಿ. ವಸುಂಧರ, ಎನ್.ಆರ್. ಚಂದ್ರಶೇಖರ್, ಮಹಿಳಾ ಘಟಕದ ಅಧ್ಯಕ್ಷೆ ಉಮಾ ತೋಟಪ್ಪ, ಬಸವರಾಜ್ ದೇಗಿನಾಳ್ ಇತರರು ಇದ್ದರು.