ರಾಜ್ಯೋತ್ಸವ ಕನ್ನಡಿಗರ ಹಬ್ಬ. ನಾಡು-ನುಡಿ, ಜಲ-ನೆಲ ರಕ್ಷಣೆಯ ಜತೆಗೆ ಕರ್ನಾಟಕದ ಭವ್ಯ ಸಂಸ್ಕೃತಿ, ಪರಂಪರೆ, ಇತಿಹಾಸ ಸ್ಮರಿಸಿ ಅದನ್ನು ಉಳಿಸಿಕೊಂಡು ನಾಡು ಕಟ್ಟುವ ಸಂಕಲ್ಪ ತೊಡುವ ದಿನ. 64ನೇ ರಾಜ್ಯೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲೂ ಕನ್ನಡ ಭಾಷೆಗೆ, ಕನ್ನಡಿಗರಿಗೆ, ಕನ್ನಡತನಕ್ಕೆ ಧಕ್ಕೆ ಉಂಟಾಗುವ ಆತಂಕವಂತೂ ದೂರವಾಗಿಲ್ಲ. ಕನ್ನಡಿಗರು ಸಹನಶೀಲರು, ಸೌಹಾದ್ಯì ಪ್ರಿಯರು. ಹೊರಗಡೆಯಿಂದ ಬಂದು ಇಲ್ಲಿ ನೆಲೆಸಿರುವವರು ಇದನ್ನೇ ದುರುಪಯೋಗಪಡಿಸಿಕೊಂಡು ಕನ್ನಡ ಭಾಷೆ ಹಾಗೂ ಕನ್ನಡಿಗರನ್ನು ಅಸಡ್ಡೆ ಮಾಡುವ ಪ್ರವೃತ್ತಿಯೂ ಇದೆ. ಎಲ್ಲೆಡೆ ಕನ್ನಡ ನಾಮಫಲಕ ಕಡ್ಡಾಯ, ಕನ್ನಡಿಗರಿಗೆ ಉದ್ಯೋಗ, ಕನ್ನಡಕ್ಕೆ ಮೊದಲ ಆದ್ಯತೆ, ಆಡಳಿತ ಸಂಪೂರ್ಣ ಕನ್ನಡದಲ್ಲೇ ಇರಬೇಕು, ಕನ್ನಡಿಗರಿಗೆ ಖಾಸಗಿ ವಲಯದಲ್ಲೂ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಬೇಕು ಎಂದು ಹೇಳುತ್ತಲೇ ಇದ್ದೇವೆ. ಆದರೆ, ಇದ್ಯಾವುದೂ ಪೂರ್ಣ ಪ್ರಮಾಣದಲ್ಲಿ ಈಡೇರಿಲ್ಲ.
ಅಂಗಡಿ-ಮುಂಗಟ್ಟು, ಹೋಟೆಲ್‌ಗಳ ಮುಂದೆ ಕನ್ನಡ ನಾಮಫಲಕ ಇದ್ದರೂ ಒಳಗೆ ಕನ್ನಡತನ ಇರುವುದಿಲ್ಲ. ಕನ್ನಡ ಬಲ್ಲವರೂ ಇರುವುದಿಲ್ಲ. ಅಲ್ಲಿರುವವರ ಭಾಷೆಯಲ್ಲೇ ನಾವು ವ್ಯವಹರಿಸಬೇಕಾದ ಅನಿವಾರ್ಯತೆ. ರಾಜಧಾನಿ ಬೆಂಗಳೂರಿನಲ್ಲಂತೂ ಇದು ಹೆಚ್ಚು ಎಂದು ಹೇಳಬಹುದು.
ಇನ್ನು, ಬ್ಯಾಂಕಿಂಗ್ ವಲಯ, ರೈಲ್ವೆ ಸೇರಿದಂತೆ ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ಕನ್ನಡಿಗರಿಗೆ ನ್ಯಾಯಬದ್ಧವಾಗಿ ಉದ್ಯೋಗಗಳು ಸಿಗುತ್ತಿಲ್ಲ. ಎಲ್ಲವೂ ಉತ್ತರ ಭಾರತೀಯರ ಪಾಲಾಗುತ್ತಿವೆ ಎಂಬ ಕೂಗು ಮೊದಲಿ ನಿಂದಲೂ ಇದೆ. ಈ ವಿಚಾರದಲ್ಲಿ ನ್ಯಾಯ ಇನ್ನೂ ಸಿಕ್ಕಿಲ್ಲ.
ನವೆಂಬರ್ 1ರಂದು ಮಾತ್ರ ಕನ್ನಡ ರಾಜ್ಯೋತ್ಸವ ಆಚರಿಸಿ, ನಾಡು-ನುಡಿ, ಜಲ-ನೆಲ, ಸಂಸ್ಕೃತಿ, ಪರಂಪರೆ ರಕ್ಷಿಸುವ ಬಗ್ಗೆ ಮಾತನಾಡಿ ಸುಮ್ಮನಾದರೆ ಸಾಲದು. ವರ್ಷವಿಡೀ ಕನ್ನಡದ ಬಗ್ಗೆ ಕಾಳಜಿ ಇರಬೇಕು. ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಕೈಗೊಳ್ಳುವ ನಿರ್ಣಯಗಳು ಜಾರಿಯಾಗಬೇಕು. ಆ ಬಗ್ಗೆ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕು.
ಕನ್ನಡ ಸಾಹಿತ್ಯ ಪರಿಷತ್ ಸೇರಿ ಕನ್ನಡಪರ ಸಂಘಟನೆಗಳು ತಮ್ಮದೇ ಆದ ರೀತಿಯಲ್ಲಿ ಕನ್ನಡ ಕಟ್ಟುವ ಹಾಗೂ ಕನ್ನಡ ಉಳಿಸುವ ಕೆಲಸದಲ್ಲಿ ತೊಡಗಿವೆ. ರಾಜ್ಯ ಸರ್ಕಾರವೂ ಈ ನಿಟ್ಟಿನಲ್ಲಿ ಸಂಪೂರ್ಣ ಮನಸ್ಸು ಮಾಡಬೇಕು. ಶಕ್ತಿಕೇಂದ್ರ ವಿಧಾನಸೌಧದಿಂದ ಹಿಡಿದು ಗ್ರಾಮ ಪಂಚಾಯಿತಿವರೆಗೆ ಆಡಳಿತ ಸಂಪೂರ್ಣ ಕನ್ನಡಮಯ ಮಾಡುವ ನಿಟ್ಟಿನಲ್ಲಿ ಸರ್ಕಾರ ಬದ್ಧತೆ ತೋರಬೇಕು. ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ವಿಚಾರದಲ್ಲಿ ತೀರ್ಮಾನ ಕೈಗೊಂಡು ಅದು ಅನುಷ್ಠಾನವಾಗುವಂತೆ ನೋಡಿಕೊಳ್ಳಬೇಕು.
ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಔದ್ಯೋಗಿಕ ನೀತಿಗೆ ತಿದ್ದುಪಡಿ ತಂದು ಖಾಸಗಿ ಕೈಗಾರಿಕೆಗಳು, ಉದ್ಯಮಗಳಲ್ಲಿ ಸಿ ಮತ್ತು ಡಿ ವೃಂದದ ಹುದ್ದೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುವ ಷರತ್ತು ವಿಧಿಸಲು ಸಂಪುಟದಲ್ಲಿ ತೀರ್ಮಾನ ಕೈಗೊಂಡಿದೆ. ಇದು ಸ್ವಾಗತಾರ್ಹ. ಇದೇ ರೀತಿ ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲೂ ಕನ್ನಡಿಗರಿಗೆ ಅನ್ಯಾಯ ವಾಗದಂತೆ ಹಾಗೂ ರಾಜ್ಯದ ವಿಚಾರದಲ್ಲಿ ನಾಡು-ನುಡಿ, ಜಲ- ನೆಲ ವಿಚಾರ ಬಂದಾಗ ರಾಜ್ಯದ ಎಲ್ಲ ಸಂಸದರು ಒಗ್ಗೂಡಿ ಕೇಂದ್ರದ ಮೇಲೆ ಒತ್ತಡ ಹೇರಬೇಕು. ಕನ್ನಡಕ್ಕೆ ಮೊದಲ ಆದ್ಯತೆ, ಕನ್ನಡಿಗರಿಗೆ ಮೊದಲ ಪ್ರಾಶಸ್ತ್ಯ ಸಿಗುವಂತಾಗಬೇಕು. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ.