Advertisement

ಬ್ಯಾಂಕಿಂಗ್‌ ಪರೀಕ್ಷೆಯಲ್ಲಿ ಕನ್ನಡಿಗರಿಗೆ ಅನ್ಯಾಯ: ದೂರು

05:30 PM Jul 01, 2018 | |

ಬೆಳಗಾವಿ: ಐಬಿಪಿಎಸ್‌ ಹಾಗೂ ಆರ್‌ಆರ್‌ಬಿ ಬ್ಯಾಂಕಿಂಗ್‌ ಪರೀಕ್ಷೆಗಳ ನೇಮಕಾತಿಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಈ ಬಾರಿಯೂ ಐಬಿಪಿಎಸ್‌ ಹಾಗೂ ಆರ್‌ ಆರ್‌ಬಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ. ರಾಜ್ಯದಲ್ಲಿರುವ ಐಬಿಪಿಎಸ್‌ ಹಾಗೂ ಆರ್‌ಆರ್‌ಬಿ ಹುದ್ದೆಗಳಿಗೆ ಇತರೆ ಯಾವುದೇ ರಾಜ್ಯಗಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಕಳೆದ ಕೆಲವು ವರ್ಷಗಳಿಂದ ಬಹುತೇಕ ಹುದ್ದೆಗಳು ಹೊರ ರಾಜ್ಯದವರಿಂದ ತುಂಬಲ್ಪಡುವುದರಿಂದ ಕರ್ನಾಟಕದ ಉದ್ಯೋಗ ಆಕಾಂಕ್ಷಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.

Advertisement

ಐಬಿಪಿಎಸ್‌ ಹಾಗೂ ಆರ್‌ಆರ್‌ಬಿ ಅಧಿಸೂಚನೆಯಂತೆ ಹೊರ ರಾಜ್ಯದ ಅಭ್ಯರ್ಥಿಗಳು ಕರ್ನಾಟಕದಲ್ಲಿ ಆಯ್ಕೆಯಾಗಿ ಆರು ತಿಂಗಳಲ್ಲಿ ಕನ್ನಡ ಕಲಿಯಬೇಕೆಂಬ ನಿಯಮವಿದ್ದರೂ ಹೊರ ರಾಜ್ಯದ ಬಹುತೇಕ ಸಿಬ್ಬಂದಿ ಕನ್ನಡ ಕಲಿಯುವುದಿಲ್ಲ. ಜತೆಗೆ ಈ ಬಗ್ಗೆ ಆಸಕ್ತಿಯೂ ತೋರುವುದಿಲ್ಲ. ಇದರಿಂದ ಗ್ರಾಮೀಣ ಭಾಗದ ಜನರಿಗೆ ತೊಂದರೆ ಆಗುತ್ತಿದೆ ಎಂದು ಆರೋಪಿಸಿದರು.

ರಾಜ್ಯ ಸರಕಾರವು ಕೇಂದ್ರದ ಅಧೀನದಲ್ಲಿರುವ ಐಬಿಪಿಎಸ್‌ ಹಾಗೂ ಆರ್‌ ಆರ್‌ಬಿ ಮೇಲೆ ಒತ್ತಡ ಹೇರಿ ಹೊರಡಿಸಿರುವ ಅಧಿಸೂಚನೆಯಲ್ಲಿ ಬದಲಾವಣೆ ತರುವಂತೆ ಮಾಡಬೇಕು. ಕರ್ನಾಟಕದಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ ಮೊದಲು ಕನ್ನಡಿಗರಿಗೆ ಆದ್ಯತೆ ಕೊಡಬೇಕು. ರಾಜ್ಯದಲ್ಲಿ ನಡೆಯುವ ಪರೀಕ್ಷೆಯಲ್ಲಿ ಕೇವಲ ಕರ್ನಾಟಕದ ಅಭ್ಯರ್ಥಿಗಳು ಮಾತ್ರ ಭಾಗವಹಿಸುವಂತೆ ಆದೇಶ ಹೊರಡಿಸಬೇಕು ಎಂದು ಕೇಂದ್ರ ಸರಕಾರದ ಮೇಲೆ ಒತ್ತಡ ತರಬೇಕು. ಕನ್ನಡ ನಾಡು-ನುಡಿ ಪರವಾಗಿ ರಾಜ್ಯ ಸರಕಾರ ನಿಲುವು ತಾಳಬೇಕು ಎಂದು ಒತ್ತಾಯಿಸಿದರು. 

ಕರವೇ ಜಿಲ್ಲಾ ಯುವ ಘಟಕ ಅಧ್ಯಕ್ಷ ದೀಪಕ ಗುಡುಗನಟ್ಟಿ, ರಮೇಶ ಯರಗನ್ನವರ, ವಿನಾಯಕ ಭೋವಿ, ಶಿವಾನಂದ ತಂಬಾಕಿ, ಸುನೀಲ ಗಿರೆಪ್ಪಗೌಡರ, ಗೋಪಿ ರಾಥೋಡ, ವಿನಾಯಕ ಹಟ್ಟಿಹೊಳಿ, ಗಿರೀಶ ಪಾಟೀಲ ಸೇರಿದಂತೆ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next