ಧರ್ಮತ್ತಡ್ಕ: ಕೇರಳ ಲೋಕಸೇವಾ ಆಯೋಗ ನಡೆಸುವ ವಿವಿಧ ಹುದ್ದೆಗಳಿಗೆ ಕನ್ನಡಿಗರು ತಯಾರಿ ನಡೆಸಬೇಕು. ತನ್ಮೂಲಕ ಕನ್ನಡಿಗರು ವಿವಿಧ ಇಲಾಖೆಗಳ ಹುದ್ದೆಗಳಿಗೇರುವಂತಾಗ ಬೇಕು ಎಂದು ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಅಧ್ಯಕ್ಷರಾದ ಎಸ್. ನಾರಾಯಣ ಭಟ್ ಅಭಿಪ್ರಾಯಪಟ್ಟರು.
ಅವರು ಧರ್ಮತಡ್ಕ ಯುವಕ ಸಂಘ ವಾಚನಾಲಯದಲ್ಲಿ ಆರಂಭಗೊಂಡ ಉಚಿತ ಪಿ.ಎಸ್.ಸಿ. ತರಗತಿಯನ್ನು ಉದ್ಘಾಟಿಸಿ ಮಾತನಾಡಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿ ಸಲು ನಿಯಮಿತವಾದ ಅಭ್ಯಾಸಬೇಕು. ದಿನದಲ್ಲಿ ಒಂದಿಷ್ಟು ಸಮಯವನ್ನು ಇದಕ್ಕಾಗಿ ಮೀಸಲಿಡಬೇಕು. ಹಾಗಾದರೆ ಯಶಸ್ಸು ಪಡೆಯುವುದು ಕಷ್ಟವಲ್ಲ ಎಂದರು.
ಕಾರ್ಯಕ್ರಮದಲ್ಲಿ ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಸದಸ್ಯರಾದ ಪಿ.ರಾಮಚಂದ್ರ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ ಕಾಸರಗೋಡಿನ ಹಳ್ಳಿ ಹಳ್ಳಿಗಳಲ್ಲಿ ಇಂತಹ ತರಗತಿಗಳು ಆರಂಭವಾಗಲಿ. ಕಾಸರಗೋಡಿನ ಕಚೇರಿಗಳಲ್ಲಿ ಕನ್ನಡಿಗರಿಗೇ ಉದ್ಯೋಗ ಸಿಗುವಂತಾಗಲಿ ಎಂದರು.
ಶ್ರೀ ದುರ್ಗಾಪರಮೇಶ್ವರಿ ಶಾಲಾ ಮುಖ್ಯೋಪಾಧ್ಯಾಯರಾದ ಎನ್.ರಾಮಚಂದ್ರ ಭಟ್ ಮಾತನಾಡಿ ನಿಯಮಿತವಾದ, ಶಿಸ್ತುಬದ್ಧವಾದ ಅಭ್ಯಾಸದಿಂದ ಉದ್ಯೋಗ ಪಡೆಯ ಬಹುದು. ಇಂತಹ ತರಗತಿಗಳಲ್ಲಿ ಶಿಬಿರಾರ್ಥಿಗಳು ಪರಸ್ಪರ ವಿಷಯಗಳನ್ನು ಹಂಚಿಕೊಳ್ಳುವುದರಿಂದ ಕಲಿಕೆ ಸುಲಭವಾಗುತ್ತದೆ ಎಂದರು.
ಲೋಕಸೇವಾ ಆಯೋಗದ ಪರೀಕ್ಷೆಗಳ ಬಗ್ಗೆ ಕಾಟುಕುಕ್ಕೆ ಹೈಯರ್ ಸೆಕೆಂಡರಿ ಶಾಲೆಯ ಇತಿಹಾಸ ಅಧ್ಯಾಪಕರಾದ ಮಹೇಶ ಏತಡ್ಕ, ಪಟ್ಲ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಅರ್ಥಶಾಸ್ತ್ರ ಅಧ್ಯಾಪಿಕೆ ವಾಣಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು.
ವಾಚನಾಲಯದ ಅಧ್ಯಕ್ಷ ಅಧ್ಯಾಪಕ ರವಿಲೋಚನ ಸಿ.ಎಚ್. ಸ್ವಾಗತಿಸಿ, ಸಂಘದ ಕಾರ್ಯದರ್ಶಿ ರವಿಚಂದ್ರ ಇಟ್ಟಿಗುಂಡಿ ವಂದಿಸಿದರು. ಮೂವತ್ತು ಉದ್ಯೋಗಾರ್ಥಿಗಳು ತರಗತಿಯಲ್ಲಿ ಭಾಗವಹಿಸಿದರು.