ಕೋಲ್ಕತಾ: ಹರ್ಯಾಣ ಸ್ಟೀಲರ್ಸ್ -ಜೈಪುರ ಪಿಂಕ್ ಪ್ಯಾಂಥರ್ಸ್ ನಡುವಿನ ಪ್ರೊ ಕಬಡ್ಡಿ ಪಂದ್ಯ 32-32 ರೋಚಕ ಟೈನಲ್ಲಿ ಅಂತ್ಯಗೊಂಡಿತು. ಕೊನೆಯ ನಿಮಿಷದಲ್ಲಿ ಕನ್ನಡಿಗ ಪ್ರಶಾಂತ್ ಕುಮಾರ್ ರೈ (5 ರೈಡಿಂಗ್ ಅಂಕ) ಚಾಕಚಕ್ಯತೆ, ಧರ್ಮರಾಜ್ ಚೆರಾÉಥನ್ (3 ಅಂಕ) ತೋರಿದ ಅನುಭವದ ಆಟದಿಂದಾಗಿ ಹರ್ಯಾಣ ಸೋಲಿನಿಂದ ಸ್ವಲ್ಪದರಲ್ಲೇ ಪಾರಾಯಿತು.
ಬುಧವಾರದ ಇನ್ನೊಂದು ಪಂದ್ಯದಲ್ಲಿ ಆತಿಥೇಯ ಬೆಂಗಾಲ್ ವಾರಿಯರ್ 29-26 ಅಂತರದಿಂದ ಯು ಮುಂಬಾಗೆ ಸೋಲುಣಿಸಿತು.
ಸೋಲಿನಿಂದ ಪಾರಾದ ಸ್ಟೀಲರ್ಸ್
ಮೊದಲ ಪಂದ್ಯ ಕೊನೆಯ ನಿಮಿಷದ ತನಕ ಕುತೂಹಲದಿಂದ ಸಾಗಿತು. ಗೆಲುವಿನ ಕನಸು ಕಂಡಿದ್ದ ಜೈಪುರಕ್ಕೆ ಕೊನೆಯ ನಿಮಿಷದಲ್ಲಿ ನೀರು ಕುಡಿಸಿ ಸ್ಟೀಲರ್ಸ್ ಮೆರೆದಾಡಿತು. ವಿಕಾಸ್ ಕಂಡೋಲ (7 ರೈಡಿಂಗ್ ಅಂಕ), ರವಿ ಕುಮಾರ್ (5 ಟ್ಯಾಕಲ್ ಅಂಕ) ಮಿಂಚಿನ ಆಟವಾಡಿದರು. ಜೈಪುರ ಪರ ದೀಪಕ್ ಹೂಡಾ (14 ರೈಡಿಂಗ್ ಅಂಕ), ಸಂದೀಪ್ ಧುಲ್ (5 ಟ್ಯಾಕಲ್ ಅಂಕ) ಮಿಂಚಿದರೂ ನಿರಾಸೆ ಅನುಭವಿಸಬೇಕಾಗಿ ಬಂತು.
ಪಂದ್ಯದ ಕೊನೆಯ 4 ನಿಮಿಷದಲ್ಲಿ ಜೈಪುರ ಬಿರುಸಿನ ಆಟಕ್ಕಿಳಿದು ಹರ್ಯಾಣವನ್ನು ಆಲೌಟ್ ಮಾಡಿಯೇ ಬಿಟ್ಟಿತು. ಹಿನ್ನಡೆ ಅಂತರವನ್ನು 29-28ಕ್ಕೆ ತಂದು ನಿಲ್ಲಿಸಿತು. ಈ ಅವಧಿಯಲ್ಲಿ ದೀಪಕ್ ಹೂಡಾ ರೈಡಿಂಗ್ ಅಮೋಘವಾಗಿತ್ತು. ಅನಂತವೂ ದೀಪಕ್ ಮಿಂಚಿದ್ದರಿಂದ ಜೈಪುರ 32-29ಕ್ಕೆ ಮುನ್ನಡೆಯಿತು. ಆದರೆ ಧರ್ಮರಾಜ್ ಚೆರಾÉಥನ್ ಹಾಗೂ ಕನ್ನಡಿಗ ಪ್ರಶಾಂತ್ ಕುಮಾರ್ ಕೊನೆಯ ನಿಮಿಷದಲ್ಲಿ ರೈಡಿಂಗ್‌ನಿಂದ ತಂದ 2 ಅಂಕದಿಂದ ಸೋಲಿನತ್ತ ಸಾಗಿದ್ದ ಹರ್ಯಾಣ ಟೈ ಸಾಧಿಸಿ ನಿಟ್ಟುಸಿರು ಬಿಟ್ಟಿತು.
– ಹೇಮಂತ್ ಸಂಪಾಜೆ