Advertisement

ದ. ಕ್ಯಾಲಿಫೋರ್ನಿಯಾ: ನಿಮ್ಮಲ್ಲಿಗೆ ಕನ್ನಡಕೂಟ ವಿವಿಧ ಕಾರ್ಯಕ್ರಮ

04:02 PM Feb 20, 2021 | Team Udayavani |

ದಕ್ಷಿಣ ಕ್ಯಾಲಿಫೋರ್ನಿಯಾ :  ಕನ್ನಡ ಅಕಾಡೆಮಿ 2020ರ ಜನವರಿಯಲ್ಲಿ ಸ್ಥಾಪನೆಯಾಗಿದ್ದು, ಇದರ ಮೂಲ ಉದ್ದೇಶ ಹೊರನಾಡ ಕನ್ನಡಿಗರ ಮಕ್ಕಳಿಗೆ ಕನ್ನಡವನ್ನು ಕಲಿಸುವುದಾಗಿದೆ. ಕಲೆ, ನೆಲೆ ಹಾಗೂ ಬಲೆ ಎಂಬ ಮೂರು ಅಂಶಗಳನ್ನು ಆಧಾರವಾಗಿಟ್ಟುಕೊಂಡು ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದಾಗಿ ಕನ್ನಡ ಅಕಾಡೆಮಿ ಅಧ್ಯಕ್ಷ ಶಿವ ಗೌಡರ್‌ ತಿಳಿಸಿದರು.

Advertisement

ದಕ್ಷಿಣ ಕ್ಯಾಲಿಫೋರ್ನಿಯಾ ಕರ್ನಾಟಕ ಸಾಂಸ್ಕೃತಿಕ ಸಂಘದಿಂದ ಜ. 21ರಂದು ನಡೆದ ನಿಮ್ಮಲ್ಲಿಗೆ ಕನ್ನಡ ಕೂಟ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈಗಾಗಲೇ 2,000ಕ್ಕೂ ಹೆಚ್ಚು  ಮಕ್ಕಳು ಬೇರೆ ದೇಶಗಳಲ್ಲಿ ಕನ್ನಡವನ್ನು ಕಲಿಯುತ್ತಿದ್ದಾರೆ. ಕನ್ನಡ  ಅಕಾಡೆಮಿಯು 400 ಶಿಕ್ಷಕರಿಗೆ ತರಬೇತಿ ನೀಡಿದೆ. ಹಾಗೆಯೇ ಪ್ರೌಢಶಾಲೆಯ ಮಕ್ಕಳು ಕನ್ನಡವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಳ್ಳುವ ನಿಟ್ಟಿನಲ್ಲಿ ಕೂಡ ಕೆಲಸ ಮಾಡುತ್ತಿದೆ ಎಂದರು.

ಮೈಸೂರು ವಿಶ್ವವಿದ್ಯಾನಿಲಯದ ಮೂಲಕ Basic Kannada Certifi cate Course (BKCC)ಗಳನ್ನು ತೆರೆಯಲಾಗಿದೆ. ಒಂದು ವರ್ಷದ ಅವಧಿಯಲ್ಲಿ ಕನ್ನಡ ಅಕಾಡೆಮಿ ಕನ್ನಡವನ್ನು ಜಾಗತಿಕ ಮಟ್ಟದಲ್ಲಿ ತರಲು ಸಾಕಷ್ಟು ಕೆಲಸ ಮಾಡಿದೆ. ಇದರ ಹಿಂದೆ 70 ಜನ ಸ್ವಯಂ ಸೇವಕರು ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ 35 ಜನ ವಿದೇಶದಲ್ಲಿ ಹುಟ್ಟಿ ಬೆಳೆದ ಮಕ್ಕಳು ಕೆಲಸ ಮಾಡುತ್ತಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಂಡ ಅವರು, ಕನ್ನಡ ಉತ್ಸಾಹಿ ಸದಸ್ಯರುಗಳ ಪ್ರಶ್ನೆಗಳಿಗೆ ತಮ್ಮ 14 ವರ್ಷದ ಕನ್ನಡ ಕಲಿಕೆ ಅನುಭವವನ್ನು ಬಿಚ್ಚಿಟ್ಟರು.

Advertisement

ಶಿವಗೌಡರ್‌ ಅವರನ್ನು ದೀಪಾ ಶೇಷಾದ್ರಿ ಪರಿಚಯಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಗುರುಪ್ರಸಾದ ರಾವ್‌ ವಂದಿಸಿದರು.

ಡಾ| ಸುದರ್ಶನ್ಅವರೊಂದಿಗೆ ಸಂವಾದ :

ಜ. 23ರಂದು ನಡೆದ ನಿಮ್ಮಲಿಗೆ ಕನ್ನಡ ಕೂಟದಲ್ಲಿ ಬೆಂಗಳೂರಿನ ಕರುಣಾ ಟ್ರಸ್ಟ್‌ನ ಸ್ಥಾಪಕರಾದ ಡಾ| ಸುದರ್ಶನ್‌ ಅವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.

ಕರುಣಾ ಅಮೆರಿಕ ಟ್ರಸ್ಟ್‌ನ ಹಲವಾರು ಕಾರ್ಯಕ್ರಮಗಳಿಗೆ ಕರ್ನಾಟಕ ಸಾಂಸ್ಕೃತಿಕ ಸಂಘ ಬೆಂಬಲ ನೀಡುತ್ತಿದೆ. ಈ ಟ್ರಸ್ಟ್‌ನ ಅಧ್ಯಕ್ಷ ಸೂರ್ಯಪ್ರಕಾಶ್‌ ಅವರು  ಡಾ| ಸುದರ್ಶನ್‌ ಅವರೊಂದಿಗೆ ಮಾತುಕತೆ ನಡೆಸಿದರು.

ಸಂಘದ ಸದಸ್ಯರಿಗೆ ಟ್ರಸ್ಟ್ ಬಗ್ಗೆ ತಿಳಿದಿದ್ದರೂ ಸುದರ್ಶನ್‌ ಬಗ್ಗೆ ಅಷ್ಟಾಗಿ ತಿಳಿದಿರಲಿಲ್ಲ. ಹೀಗಾಗಿ ಈ ಕಾರ್ಯಕ್ರಮ ಬಹಳ ಸೂಕ್ತವೆನಿಸಿತು.

ಸುದರ್ಶನ್‌ ಅವರು ಹುಟ್ಟಿದ್ದು ಯಮಲೂರು. 12ನೇ ವಯಸಿನಲ್ಲಿ ವೈದ್ಯಕೀಯ ಸೌಲಭ್ಯ ಸಿಗದೆ ತಂದೆಯನ್ನು ಕಳೆದುಕೊಂಡ ಅವರು ತಾವು ವೈದ್ಯರಾಗಬೇಕು ಎಂದು ಬಯಸಿದರು. ಮುಂದೆ ಇವರು ಬಿಎಂಎಸ್ ಕಾಲೇಜಿನಲ್ಲಿ ವೈದ್ಯಕೀಯ ವ್ಯಾಸಂಗ ಮಾಡಿದ್ದು, ಅಲ್ಲಿ ಪರಿಚಯವಾದ ಡಾ| ನರಸಿಂಹನ್‌ ಎಂಬುವರು ಬುಡಕಟ್ಟು ಜನಾಂಗದ ಸೇವೆಯಲ್ಲಿ ತೊಡಗಿದ್ದರು. ಅದು ಸುದರ್ಶನ್‌ ಅವರ ಮೇಲೆ ಬೀರಿದ ಪರಿಣಾಮವನ್ನು ವಿವರಿಸಿದರು.

ವಿವೇಕಾನಂದ ಮತ್ತು ರಾಮಕೃಷ್ಣ ಪರಮಹಂಸರ ತತ್ವದ ಮೇಲಿನ ಪ್ರಭಾವ ಇದ್ದ ಇವರು ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರವನ್ನು ಬಿಳಿಗಿರಿ ರಂಗನ ಬೆಟ್ಟದ ಸೋಲಿಗ ಬುಡಕಟ್ಟು ಜನಾಂಗದ ಸೇವೆಗಾಗಿ ತೆರೆದರು. ಇದೇ ರೀತಿಯ 71 ಕೇಂದ್ರಗಳು ಭಾರತದ ಎಲ್ಲ ಕಡೆ ಇವೆ. ಇವರ ಜನಸೇವೆಗಾಗಿ 2000 ಇಸವಿಯಲ್ಲಿ ಪದ್ಮಶ್ರೀ ಪುರಸ್ಕಾರ ದೊರೆಯಿತು. ಇದನ್ನಲ್ಲದೆ ಸೋಲಿಗ ಮಕ್ಕಳಿಗಾಗಿ ಶಾಲೆ, ಪರಿಸರ ಜ್ಞಾನ, ಮಾನಸಿಕ ಅರೋಗ್ಯ, ಮೊಬೈಲ್‌ ವೈದ್ಯಕೀಯ ತಪಾಸಣೆ ಹೀಗೆ ಬೇರೆ ಬೇರೆ ರೀತಿಯಲ್ಲಿ ಬುಡಕಟ್ಟು ಜನಾಂಗದ ಏಳ್ಗೆಗಾಗಿ ಹಗಲಿರುಳು ದುಡಿಯುತ್ತಿದ್ದಾರೆ ಎನ್ನುವುದನ್ನು ತಮ್ಮ ಮಾತುಗಳಲ್ಲಿ ಕ್ಯಾಲಿಫೋರ್ನಿಯಾದ ಕನ್ನಡಿಗರಿಗೂ ತಿಳಿಸಿದರು.

ಸುಮಾರು ಒಂದು ಗಂಟೆಯ ಸುದೀರ್ಘ‌ ಮಾತುಕತೆಯನ್ನು ಕೂಟದ ಉಪ್ಪಧ್ಯಕ್ಷರಾದ ಗುರುಪ್ರಸಾದ್‌ ರಾವ್‌ ವಂದನಾರ್ಪಣೆಯೊಂದಿಗೆ ಮುಕ್ತಾಯಗೊಳಿಸಿದರು.

ವೀಣಾ ಕೃಷ್ಣ ಅವರಿಂದ ಸಂಗೀತ ಕಾರ್ಯಕ್ರಮ :

ನಿಮ್ಮಲ್ಲಿಗೆ ಕನ್ನಡ ಕೂಟ ಕಾರ್ಯಕ್ರಮದಲ್ಲಿ ಜ. 28ರಂದು ವೀಣಾ ಕೃಷ್ಣ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ಸಂಘದ ಸದಸ್ಯೆ ನಿರ್ಮಲಾ ಅವರು ವೀಣಾ ಕೃಷ್ಣ ಅವರನ್ನು ಪರಿಚಯಿಸಿ, ವೀಣಾ ಕೃಷ್ಣ ಅವರು ಕಳೆದ 30 ವರ್ಷಗಳಿಂದ ಲಾಸ್‌ ಏಂಜಲೀಸ್‌ನಲ್ಲಿ ನೆಲೆಸಿದ್ದಾರೆ. ಇವರ ತಾತ ಕೊನ್ನೂರು ಶ್ರೀಕಂಠ ಶಾಸ್ತ್ರೀಗಳು ಆಸ್ಥಾನ ವಿದ್ವಾಂಸರಾಗಿದ್ದರು. ತಾಯಿ ವಾದ್ದೇವಿ ಶಾಸ್ತ್ರಿಯವರು  ಸಂಪ್ರದಾಯ ಹಾಡುಗಳ ಗಣಿ ಎಂದೇ ಹೆಸರುವಾಸಿ, ಇವರು “ಕಲ್ಪವಲ್ಲಿ’  ಪ್ರಶಸ್ತಿ ವಿಜೇತೆ ಕೂಡ.

ಪ್ರಾರ್ಥನೆಯೊಂದಿಗೆ ಸಂಗೀತ ಕಾರ್ಯಕ್ರಮವನ್ನು ಆರಂಭಿಸಿದ ವೀಣಾ ಅವರು, ಜತಿಸ್ವರ, ಶೈಲಜಾ ಶ್ರೀಕಂಠಯ್ಯ ಅವರ ಹಲವು ಭಕ್ತಿ ಗೀತೆಗಳು, ಗುರುವಾರ ಸಂಜೆ ರಾಯರನ್ನು ನೆನೆಯುವ, ಅಯ್ಯಪ್ಪ ಸ್ವಾಮಿಯನ್ನು ಆರಾಧಿಸುವ ಗೀತೆಗಳೊಂದಿಗೆ, ತಾಯಿ ವಾಗ್ದೇವಿ ಅವರ ಸಂಪ್ರದಾಯ ಹಾಡುಗಳನ್ನು ಮತ್ತೂಮ್ಮೆ ಹಾಡಿ ನಮ್ಮ ಸಂಸ್ಕೃತಿಯ ಸಿರಿವಂತಿಕೆಯನ್ನು ಮನನ ಮಾಡಿದರು.

ಮದುಮಗಳನ್ನು, ಮಧುಮಗನನ್ನು ಹಸಗೆ ಕರೆಯುವ ಹಾಡು, ದಂಪತಿಗೆ ಆರತಿ ಮಾಡುವ ಹಾಡು, ಮಗುವಿಗೆ ತೊಟ್ಟಿಲ ಶಾಸ್ತ್ರ ಮಾಡುವಾಗಿನ ಹಾಡು, ಮಗುವಿಗೆ ಆರತಿ ಎತ್ತುವ ಹಾಡು, ಆಶೀರ್ವಾದದ ಹಾಡು ಹೀಗೆ ಪ್ರತಿಯೊಂದು ಶಾಸ್ತ್ರದ ಹಾಡಿನ ತುಣುಕನ್ನು ನಮಗೆ ನೀಡಿದರು. ಇನ್ನೂ ಬೇಕೆನ್ನುವಷ್ಟರಲ್ಲಿ ಒಂದುವರೆ ತಾಸು ಕಳೆದಿತ್ತು. ಅವರ ಅಕ್ಕನವರು ರಚಿಸಿದ  ರಾಮಚಂದ್ರ ಸಾರ್ವಭೌಮ ರಾಗಿತಾ ಮನೋಹರ ಶಾಮಸುಂದರಾಂಗದೇವ ನಿನಗೆ ಮಂಗಳಂ ಎಂಬ ಮಂಗಳದೊಂದಿಗೆ ಕಾರ್ಯಕ್ರಮವನ್ನು ಮುಗಿಸಿದರು.  ಸಂಘದ ಪದಾಧಿಕಾರಿ ಉಮೇಶ್‌ ಸತ್ಯ ನಾರಾಯಣ ಅವರು ವಂದಿಸಿದರು.

ದಕ್ಷಿಣ ಕ್ಯಾಲಿಫೋರ್ನಿಯಾ ಕರ್ನಾಟಕ ಸಾಂಸ್ಕೃತಿಕ ಸಂಘದ ಕೆಸಿಎ ಎಸ್‌ಸಿ ಯುವ ಸೆರಿಟೊಸ್‌ ಕನ್ನಡ ಶಾಲೆ ಮಕ್ಕಳಿಂದ ಸುಗ್ಗಿ ಸಂಭ್ರಮ

ದಕ್ಷಿಣ ಕ್ಯಾಲಿಫೋರ್ನಿಯಾ ಕರ್ನಾಟಕ ಸಾಂಸ್ಕೃತಿಕ ಸಂಘದ ಕೆಸಿಎ ಎಸ್‌ಸಿ ಯುವ ಸಮಿತಿ ವತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜ. 30ರಂದು ನಡೆಯಿತು.  ಈ ಸಂದರ್ಭದಲ್ಲಿ  ಸೆರಿಟೊಸ್‌ ಕನ್ನಡ ಶಾಲೆಯ ಮಕ್ಕಳಿಂದ ಸುಗ್ಗಿ ಸಂಭ್ರಮ ಮನೋರಂಜನ ಕಾರ್ಯಕ್ರಮದಲ್ಲಿ ನೃತ್ಯ, ಏಕಲವ್ಯ ನಾಟಕ ಪ್ರದರ್ಶನ, ಉಲ್ಟಪಲ್ಟ ಹಾಸ್ಯ ನಾಟಕ ಪ್ರದರ್ಶನ, ಎಳ್ಳುಬೆಲ್ಲ ತಯಾರಿ ಮಾಹಿತಿ,  ಕರಕುಶಲ ವಸ್ತು ತಯಾರಿ ಕುರಿತು ಮಕ್ಕಳಿಂದಲೇ ಮಾಹಿತಿ ಕಾರ್ಯಕ್ರಮ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next