Advertisement

ಕನ್ನಡದ ಖ್ಯಾತ ಸಾಹಿತಿ, ವಿಮರ್ಶಕ ಡಾ. ಜಿ.ಎಸ್ ಅಮೂರ ನಿಧನ: ಮುಖ್ಯಮಂತ್ರಿ ಸಂತಾಪ

11:25 AM Sep 28, 2020 | Mithun PG |

ಬೆಂಗಳೂರು: ಕನ್ನಡದ ಖ್ಯಾತ ಸಾಹಿತಿ, ವಿಮರ್ಶಕ ಡಾ.ಜಿ.ಎಸ್ ಅಮೂರ (95) ಅವರು ಇಂದು ಮುಂಜಾನೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

Advertisement

ಕಳೆದ ಹತ್ತು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜಿ.ಎಸ್.ಅಮೂರ ಇಂದು ಬೆಳಗ್ಗೆ 5 ಗಂಟೆಗೆ ಜೆ.ಪಿನಗರದ ಮೂರನೇ ಹಂತದಲ್ಲಿರುವ ಮಗನ ನಿವಾಸದಲ್ಲಿ ನಿಧನರಾಗಿದ್ದಾರೆ‌.

ಹಾವೇರಿ ಜಿಲ್ಲೆ ಬೊಮ್ಮನಹಳ್ಳಿಯಲ್ಲಿ 1925 ರಲ್ಲಿ ಜನಿಸಿದ್ದ ಗುರುರಾಜ ಶ್ಯಾಮಾಚಾರ ಆಮೂರರು ಕನ್ನಡ ಸಾಹಿತ್ಯ ವಿಮರ್ಶೆಯಲ್ಲಿ ದಿಗ್ಗಜರಾಗಿದ್ದರು.  ಧಾರವಾಡದಲ್ಲಿ ಶಿಕ್ಷಣ ಪಡೆದ ಅವರು ಔರಂಗಾಬಾದನ ಮರಾಠವಾಡಾ ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿ ವೃತ್ತಿಜೀವನ ಪ್ರಾರಂಭಿಸಿ, ಆಗಲೇ ‘ಕಾಮಿಡಿಯ ಪರಿಕಲ್ಪನೆ’ಎಂಬ ಮಹಾಪ್ರಬಂಧ ಬರೆದು ಗೌರವ ಡಾಕ್ಟರೇಟ್ ಪಡೆದಿದ್ದರು.  ಕನ್ನಡ ಮತ್ತು ಆಂಗ್ಲ ಭಾಷೆಯ ಮೇಲೆ ಪಾಂಡಿತ್ಯ ಹೊಂದಿದ್ದರು.

ಸೀಮೋಲಂಘನ, ಭುವನದ ಭಾಗ್ಯ, ಅರ್ಥಲೋಕ ಸೇರಿದಂತೆ 50ಕ್ಕೂ ಹೆಚ್ಚು ವಿವಿಧ ವಿಮರ್ಶಾ ಬರಹಗಳು, ಸಣ್ಣ ಕಥೆಗಳ ವಿಮರ್ಶ ಬರಹಗಳು ಅವರ ಸಾಹಿತ್ಯ ಶ್ರೇಷ್ಠತೆಯ ಕೊಡುಗೆಗಳಾಗಿವೆ. ಅವರ ಕೊರಡು ಕೊನರಿದಾಗ ಕೃತಿ ವಿಶಿಷ್ಟವಾದದ್ದು. ಇನ್ನುಳಿದಂತೆ ಬೇಂದ್ರೆ ಅವರ ಸಾಹಿತ್ಯವನ್ನು ವಿಭಿನ್ನ ನೆಲೆಯಲ್ಲಿ ಕಟ್ಟಿಕೊಟ್ಟಿರುವ ಆಮೂರರು ಗಿರೀಶ್ ಕಾರ್ನಾಡ್  ರ ರಂಗಭೂಮಿ ವಿಚಾರಗಳನ್ನು ರಂಗ ವಿಮರ್ಶಾ ವಿಧಾನಗಳಲ್ಲಿ ಕಟ್ಟಿ ಕೊಟ್ಟಿದ್ದಾರೆ. ಸಾಹಿತಿ ಅನಂತಮೂರ್ತಿ ಅವರು ಅಮೂರರನ್ನು ಕನ್ನಡ ಸಾಹಿತ್ಯ ಲೋಕದ ಭೀಷ್ಮ ಎಂದೇ ಸದಾ ಕರೆಯುತ್ತಿದ್ದರು.

ಆಧುನಿಕ ಕನ್ನಡ ಸಾಹಿತ್ಯ ವಿಮರ್ಶಕರಲ್ಲಿ ಅಗ್ರಮಾನ್ಯರೆಂದು ಪರಿಗಣಿಸಲ್ಪಟ್ಟಿರುವ ಡಾ: ಅಮೂರ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ಪಂಪ ಪ್ರಶಸ್ತಿ ಸೇರಿದಂತೆ ೪೦ ಕ್ಕೂ ಹೆಚ್ಚು ಪ್ರಶಸ್ತಿ ಪುರಸ್ಕಾರಗಳು ಅವರಿಗೆ ಸಂದಿವೆ. ಇತ್ತೀಚೆಗಷ್ಟೆ ಅವರಿಗೆ ನೃಪತುಂಗ ಪ್ರಶಸ್ತಿಯನ್ನು ಘೋಷಿಸಲಾಗಿತ್ತು. ಪ್ರಶಸ್ತಿಯನ್ನು ಸ್ವೀಕರಿಸುವ ಮುನ್ನವೇ ಅವರು ಇಹಲೋಕ ತ್ಯೆಜಿಸಿದ್ದಾರೆ. ಇವರ ಅಗಲಿಕೆಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Advertisement

ಡಾ: ಜಿ.ಎಸ್.ಅಮೂರ ನಿಧನದಿಂದ ಕನ್ನಡ ಸಾಹಿತ್ಯಲೋಕದ ಪ್ರಮುಖ ಕೊಂಡಿಯೊಂದು ಕಳಚಿದಂತಾಗಿದೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಅವರ ಅಭಿಮಾನಿಗಳು ಮತ್ತು ಶಿಷ್ಯವೃಂದಕ್ಕೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಜಿ.ಎಸ್.ಅಮೂರ  ಅವರ ಅಂತ್ಯಕ್ರಿಯೆ ಮಧ್ಯಾಹ್ನ 1.30ಕ್ಕೆ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಪುತ್ರ ರವಿ ಆಮೂರ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next