ಹೊನ್ನಾವರ: ಕನ್ನಡದ ಸಂಸ್ಕೃತಿ, ಪರಂಪರೆ ಮತ್ತು ಅಸ್ಮಿತೆ ಉಳಿದರೆ ಮಾತ್ರ ಕನ್ನಡ ಉಳಿಯುತ್ತದೆ. ಇದನ್ನು ಉಳಿಸುವ ಜವಾಬ್ದಾರಿ ಸಾಹಿತಿಗಳಿಗೆ, ಸಾಹಿತ್ಯಕ್ಕೆ ಸೇರಿದ್ದಾಗಿದೆ. ಇದಕ್ಕಾಗಿ ಓದುವ ಸಂಸ್ಕೃತಿಯನ್ನು ಕನ್ನಡದಲ್ಲಿ ಬೆಳೆಸಬೇಕಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ| ವಸುಂಧರಾ ಭೂಪತಿ ಹೇಳಿದರು.
ಮೂಡ್ಕಣಿಯ ಶಂಭುಲಿಂಗೇಶ್ವರ ಸಭಾಭವನದಲ್ಲಿ ಸಾಹಿತಿ ಪ್ರೊ| ಶ್ರೀಪಾದ ಹೆಗಡೆ ಕಣ್ಣಿ ಸರ್ವಾಧ್ಯಕ್ಷತೆಯಲ್ಲಿ ನಡೆದ ತಾಲೂಕು ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡಿಗರಿಗೆ ಕನ್ನಡ ನಾಡಿನಲ್ಲಿ ಉದ್ಯೋಗದಲ್ಲಿ ಆದ್ಯತೆ ಸಿಗಬೇಕು. ತಮಿಳುನಾಡಿನಲ್ಲಿ ತಮಿಳರಿಗೆ ಶೇ. 95, ಮಹಾರಾಷ್ಟ್ರದಲ್ಲಿ ಮರಾಠಿಗರಿಗೆ ಶೇ. 85, ತೆಲಂಗಾಣ ಮತ್ತು ಕೇರಳದಲ್ಲಿ ಶೇ. 100ಕ್ಕೆ 100 ಉದ್ಯೋಗಾವಕಾಶ ಸಿಗುತ್ತಿರುವಾಗ ಕರ್ನಾಟಕದಲ್ಲಿ ಕೇವಲ 20ರಷ್ಟು ಕನ್ನಡಿಗರಿಗೆ ಉದ್ಯೋಗ ಸಿಗುತ್ತಿದೆ. ಇದು ಸರ್ಕಾರದ ಅಧಿಕೃತ ಅಂಖೆಸಂಖ್ಯೆ. ಕನ್ನಡಿಗರಿಗೆ ಕನ್ನಡ ನೆಲದಲ್ಲಿ ಸ್ಥಾನ ಇಲ್ಲವಾದರೆ ಹೇಗೆ ಎಂದು ಪ್ರಶ್ನಿಸಿದ ಅವರು, ಕನ್ನಡ ಭಾಷೆಯನ್ನು, ಕನ್ನಡದ ಅಭಿಮಾನ, ಪ್ರೀತಿಯನ್ನು ಬೆಳೆಸುವ ಕೆಲಸ ಸಾಹಿತ್ಯ ಇನ್ನೂ ಹೆಚ್ಚಾಗಿ ಮಾಡಬೇಕಾಗಿದೆ ಎಂದರು.
ಪುಸ್ತಕ ಪ್ರಾಧಿಕಾರ ಆನ್‌ಲೈನ್ ಪುಸ್ತಕ ಮಾರಾಟ ಆರಂಭಿಸಿದ್ದು, ಒಂದು ವರ್ಷದಲ್ಲಿ ಆರು ಲಕ್ಷ ಪುಸ್ತಕಗಳು ಮಾರಾಟವಾಗಿವೆ. ಭಾರತದ ಎಲ್ಲ ಭಾಷೆಗಳ ಶ್ರೇಷ್ಠ ಕೃತಿಗಳನ್ನು ಪುಸ್ತಕ ಪ್ರಾಧಿಕಾರ ಪ್ರಕಟಿಸುತ್ತಿದೆ. ಕಳೆದ ವರ್ಷ 567 ಪುಸ್ತಕ ಪ್ರಕಟವಾಗಿದೆ. ಅಂಧರಿಗೆ ಮತ್ತು ಓದಲು ಬಿಡುವಿಲ್ಲದವರಿಗೆ ಕೇಳುವ ಪುಸ್ತಕವನ್ನು ಪ್ರಕಟಿಸಲಾಗಿದೆ. ಪ್ರಕಾಶಕರಿಂದ ಪುಸ್ತಕ ಖರೀದಿಸಿ ಶಾಲೆಗಳಿಗೆ ವಿತರಿಸಲಾಗುತ್ತಿದೆ. ಇದಕ್ಕೆ ಸಾಹಿತಿಗಳು ಕೈ ಜೋಡಿಸಬೇಕು ಎಂದರು.
ಹೊನ್ನಾವರ ಹೊನ್ನಿನ ಊರು, ಇಲ್ಲಿಯವರು ಸಾಹಿತ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಪಂಪನಿಂದ ಆರಂಭವಾಗಿ ಇತ್ತೀಚಿನವರೆಗೆ ಉತ್ತರ ಕನ್ನಡಿಗರ ಕೊಡುಗೆ ಮಹತ್ವದ್ದಾಗಿದೆ. ತಾಲೂಕು ಸ್ಥಳದಲ್ಲಿ ಇಂತಹ ಸಮ್ಮೇಳನ ನಡೆಯುತ್ತಿರುವುದು ಕನ್ನಡದ ಬೆಳವಣಿಗೆಗೆ ಪೂರಕ ಎಂದು ಹೇಳಿದರು.
ಸಾಹಿತಿ ಸರ್ಜಾ ಶಂಕರ, ತಾ.ಪಂ. ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ ಇದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಪಿ.ಟಿ. ನಾಯ್ಕ ರಾಷ್ಟ್ರ ಧ್ವಜಾರೋಹಣ ಮಾಡಿದರು. ಟಿ.ಟಿ. ನಾಯ್ಕ ಮೆರವಣಿಗೆಗೆ ಚಾಲನೆ ನೀಡಿದರು. ತಾಲೂಕು ಅಧ್ಯಕ್ಷ ನಾಗರಾಜ ಹೆಗಡೆ ಅಪಗಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಆಶಯ ನುಡಿಗಳನ್ನಾಡಿದರು. ವಿನಾಯಕ ನಾಯ್ಕ ಸ್ವಾಗತಿಸಿದರು. ಶೋಭಿತ್ ಮೂಡ್ಕಣಿ ದ್ವಾರಗಳ ಮಹಾನುಭಾವರನ್ನು ಪರಿಚಯಿಸಿದರು. ಸುಧೀಶ ನಾಯ್ಕ ಮತ್ತು ಕಲ್ಪನಾ ಹೆಗಡೆ ನಿರ್ವಹಿಸಿದರು. ಭವಾನಿಶಂಕರ ವಂದಿಸಿದರು.