Advertisement

ಸೇನೆ ಸೇರಲು ಕನ್ನಡಿಗರಿಗೆ ತರಬೇತಿ

03:45 AM Feb 12, 2017 | Team Udayavani |

ಬೆಂಗಳೂರು: ಭಾರತೀಯ ಸೇನೆಯಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಉಚಿತವಾಗಿ ಅಗತ್ಯ ತರಬೇತಿ ನೀಡುವ ಯೋಜನೆಯೊಂದು ಸಿದ್ಧಗೊಂಡಿದೆ.

Advertisement

ಬೆಳಗಾವಿ ಮತ್ತು ಮಡಿಕೇರಿ ಸೈನಿಕ ತರಬೇತಿ ಸಂಸ್ಥೆ ಎರಡು ತಿಂಗಳ ಕಾಲ ಊಟ ಮತ್ತು ವಸತಿ ವ್ಯವಸ್ಥೆಯ ಸಹಿತ ದಿನಕ್ಕೆ 11 ಗಂಟೆ ಕಾಲ ತರಬೇತಿಗೊಳಿಸಿ ಕನ್ನಡಿಗರ ಯುವಕರನ್ನು ಸೇನೆಗೆ ಸಜ್ಜುಗೊಳಿಸುವುದು ಇದರ ಉದ್ದೇಶ.

ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ ಇಂತದ್ದೊಂದು ಯೋಜನೆ ರೂಪಿಸಿದ್ದು, ಪ್ರಾಯೋಗಿಕವಾಗಿ ಮೊದಲ ಹಂತದಲ್ಲಿ 1 ಸಾವಿರ ಯುವಕರಿಗೆ ಮಾರ್ಚ್‌ನಿಂದ ತರಬೇತಿ ಪ್ರಾರಂಭವಾಗಲಿದೆ. ಭೂ ಸೇನೆ, ವಾಯುಸೇನೆ, ನೌಕಾದಳ, ಅರೆಸೇನಾಪಡೆಯಲ್ಲಿ ಸೇರಲು ಅಗತ್ಯವಾದ ತರಬೇತಿ ನೀಡುವುದು ಈ ಯೋಜನೆಯ ಉದ್ದೇಶ. ದೇಶದ ಸೇನಾ ವ್ಯವಸ್ಥೆ, ಅಲ್ಲಿ ಕಾರ್ಯ ನಿರ್ವಹಿಸುವ ವಿಧಾನ ಎಲ್ಲವನ್ನೂ ಈ ತರಬೇತಿ ಸಂದರ್ಭದಲ್ಲಿ ಹೇಳಿಕೊಡಲಾಗುವುದು.ಇದಕ್ಕೆ ಬೇಕಾದ ಅರ್ಹತೆ ಎಂದರೆ, ಅಭ್ಯರ್ಥಿಗಳು ಕನಿಷ್ಠ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರಬೇಕು. 18 ರಿಂದ 21 ವರ್ಷ ವಯಸ್ಸಿನವರಾಗಿರಬೇಕು. ಜತೆಗೆ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಕುರಿತು ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಐದೂವರೆ ನಿಮಿಷದಲ್ಲಿ 1 ಕಿ.ಮಿ.ಓಟ ಪೂರೈಸಬೇಕು. ಆಸಕ್ತರು ಜಿಲ್ಲಾ ಉದ್ಯೋಗ ತರಬೇತಿ ಕೇಂದ್ರದ ಮೂಲಕವೂ ತರಬೇತಿಗೆ ಅರ್ಜಿ ಸಲ್ಲಿಸಬಹುದು. www.koushalyasiri.in  ಆನ್‌ಲೈನ್‌ ಮೂಲಕವೂ ಸಲ್ಲಿಸಬಹುದು.

ಈಗಾಗಲೇ ಎಂಟು ಸಾವಿರಕ್ಕೂ ಹೆಚ್ಚು ಅರ್ಜಿಗಳು ತರಬೇತಿ ಕೋರಿ ಬಂದಿದ್ದು, ಆ ಪೈಕಿ 1 ಸಾವಿರ ಯುವಕರನ್ನು ಮಾತ್ರ ಆಯ್ಕೆ ಮಾಡಲಾಗುವುದು ಎಂದು ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುರಳೀಧರ ಹಾಲಪ್ಪ ತಿಳಿಸಿದ್ದಾರೆ.

ಭಾರತೀಯ ಸೇನೆಯಲ್ಲಿ ಕನ್ನಡಿಗರ ಸಂಖ್ಯೆ ತೀರಾ ಕಡಿಮೆ. ಹಿಂದೊಮ್ಮೆ ಕೊಡಗು, ವಿಜಯಪುರ, ಬೆಳಗಾವಿ ಭಾಗದವರು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಯಲ್ಲಿದ್ದರು. ಭಾರತೀಯ ಸೇನೆಯಲ್ಲಿ ಯೋಧರಿಂದ ಮೇಜರ್‌ ಜನರಲ್‌ ಮಟ್ಟದವರೆಗೆ ಕನ್ನಡಿಗರ ಸಂಖ್ಯೆಯೂ ಹೆಚ್ಚಾಗಿತ್ತು. ಇತ್ತೀಚಿನ ದಿನಗಳಲ್ಲಿ ಸೇನೆಯಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆಯಾಗುತ್ತಿದೆ. ಇದರ ಪ್ರಮಾಣ ಹೆಚ್ಚಿಸುವುದು ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ಸರ್ಕಾರವೂ ಪ್ರೋತ್ಸಾಹ ಮತ್ತು ನೆರವು ನೀಡುತ್ತಿದೆ. ನಾವು ಎರಡು ತಿಂಗಳು ನೀಡುವ ತರಬೇತಿ ಬಹಳ ಉಪಯುಕ್ತ. ಇದೊಂದು ರೀತಿಯ ಇಂಟೆನ್ಸಿàವ್‌ ಟ್ರೈನಿಂಗ್‌ ಎಂದೇ ಹೇಳಬಹುದು ಎನ್ನುತ್ತಾರೆ ಅವರು.

Advertisement

ಉದ್ಯೋಗ ಮೇಳ: ನಿಗಮವು ಯುವ ಸಮೂಹಕ್ಕೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಮಟ್ಟದಲ್ಲಿ ಉದ್ಯೋಗ ಮೇಳಗಳನ್ನು ಆಯೋಜಿಸುತ್ತಿದೆ. ಕಾರವಾರ, ಶಿವಮೊಗ್ಗ, ರಾಯಚೂರು ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿ ಎರಡನೇ ಹಂತದಲ್ಲಿ ಉಳಿದ ಜಿಲ್ಲೆಗಳಲ್ಲಿ ಉದ್ಯೋಗ ಮೆಳ ಆಯೋಜಿಸಲು ಮುಂದಾಗಿದೆ.

ಜತೆಗೆ, ಯುವ ಸಮೂಹಕ್ಕೆ ಅಗತ್ಯ ತರಬೇತಿ, ವ್ಯಕ್ತಿತ್ವ ವಿಕಸನ ತರಗತಿಗಳನ್ನು ಆಯೋಜಿಸುತ್ತಿದೆ. ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರಗಳನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರಗಳಾಗಿ ಪರಿವರ್ತಿಸಿ ವಿದ್ಯಾವಂತ ನಿರುದ್ಯೋಗಿಗಳಿಗೆ ಸೂಕ್ತ ಮಾರ್ಗದರ್ಶನದ ಜತೆಗೆ ಉದ್ಯೋಗಾವಕಾಶದ ಬಗ್ಗೆ ಸಲಹೆ-ಸೂಚನೆ ನೀಡುತ್ತಿದೆ.

ಗ್ರಾಮೀಣ ಹೆಣ್ಣು ಮಕ್ಕಳಿಗೆ ಹೊಲಿಗೆ ಯಂತ್ರ, ಕಂಪ್ಯೂಟರ್‌ ತರಬೇತಿ, ಮೊಬೈಲ್‌ ರಿಪೇರಿ ಕುರಿತು ಕಾರ್ಯಾಗಾರ ನಡೆಸಲು ಸಂಚಾರಿ ಬಸ್ಸುಗಳ ಮೂಲಕ ಹಳ್ಳಿಗಳಿಗೆ ಹೋಗುವುದು. ಗಿರಿಜನ ಹಾಡಿಗಳಲ್ಲಿ ತರಬೇತಿ, ಮಹಿಳೆಯರಿಗೆ ವಾಹನ ಚಾಲನೆ ಮತ್ತು ತರಬೇತಿ. ಯುವ ಸಮೂಹ ಸ್ವಯಂ ಉದ್ಯೋಗ ಕೈಗೊಳ್ಳಲು ಬ್ಯಾಂಕ್‌ ಸಾಲದ ಬಗ್ಗೆ ಸಲಹೆ ಸೂಚನೆ ನೀಡುವ ಕೆಲಸವನ್ನೂ ನಿಗಮ ಮಾಡುತ್ತಿದೆ ಎನ್ನುತ್ತಾರೆ ಹಾಲಪ್ಪ.

Advertisement

Udayavani is now on Telegram. Click here to join our channel and stay updated with the latest news.

Next