Advertisement

ಸಹಿಷ್ಣುತೆಯ ವಿವೇಕದ ಮಾರ್ಗ ಹೇಳಿದ್ದು ಪ್ರಾಚೀನ ಕನ್ನಡ ಸಾಹಿತ್ಯ

04:19 PM Nov 24, 2019 | Naveen |

ಸಾಗರ: ಪರರ ವಿಚಾರ, ಪರಧರ್ಮವನ್ನು ಸಹಿಸಿಕೊಳ್ಳಬೇಕು ಎಂಬ ವಿವೇಕದ ಮಾರ್ಗ ಪ್ರಾಚೀನ ಕನ್ನಡ ಸಾಹಿತ್ಯ ಪರಂಪರೆಯಲ್ಲಿದೆ. ಮಾನವೀಯತೆ, ಮನುಷ್ಯನ ಘನತೆ, ಹಕ್ಕುಬಾಧ್ಯತೆ, ಅಭಿವ್ಯಕ್ತಿಗಳಿಗೆ ಈ ಸಾಹಿತ್ಯ ಪರಂಪರೆ ಅತ್ಯಂತ ಅರ್ಥಪೂರ್ಣವಾಗಿ ಸ್ಪಂದಿಸಿದೆ ಎಂದು ಇಂದಿರಾ ಗಾಂಧಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ| ಜಿ. ಸಣ್ಣಹನುಮಪ್ಪ ವಿಶ್ಲೇಷಿಸಿದರು.

Advertisement

ನಗರದ ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ “ಪ್ರಾಚೀನ ಕನ್ನಡ ಸಾಹಿತ್ಯ-ಅನುಸಂಧಾನದ ಮಾರ್ಗಗಳು’ ಎಂಬ ವಿಷಯದ ಕುರಿತು ಅವರು ಮಾತನಾಡಿದರು. ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಸಾಮಾನ್ಯರ ಬದುಕಿಗೆ ಧ್ವನಿಯಾಗುವ ಜೀವಪರ ಪ್ರಜ್ಞೆ ಅತ್ಯಂತ ಗಾಢವಾಗಿ ವ್ಯಕ್ತವಾಗಿದೆ ಎಂದು ಹೇಳಿದರು.

“ಕವಿರಾಜ ಮಾರ್ಗ’ ಸೇರಿ ಕನ್ನಡದ ಹಲವು ಪ್ರಾಚೀನ ಸಾಹಿತ್ಯ ಕೃತಿಗಳು ಸಮುದಾಯದ ಕುರಿತು ದೇಸಿ ಪರಂಪರೆಯ ಪ್ರಜ್ಞೆಯನ್ನು ಪ್ರತಿಪಾದಿಸಿದೆ. ಪ್ರಭುತ್ವದ ವಿರುದ್ಧ ಧ್ವನಿ ಎತ್ತುವ ಮಾರ್ಗದಿಂದ ಯಾವತ್ತೂ ಅವು ಹಿಂದೆ ಬಿದ್ದಿಲ್ಲ. ಬಡವರ, ದಲಿತರ, ಸ್ತ್ರೀಯರ, ಧ್ವನಿ ಇಲ್ಲದವರ ಸಮುದಾಯಗಳ ಅಭಿವ್ಯಕ್ತಿಯಂತಿರುವ ಕನ್ನಡ ಪ್ರಾಚೀನ ಸಾಹಿತ್ಯ ಕೃತಿಗಳು ಜನಪದ ಸಮುದಾಯದ ವಿವೇಕಗಳನ್ನು ಬಳಸಿಕೊಂಡು ಕಾಲಾತೀತವಾದ ದರ್ಶನವನ್ನು ಒದಗಿಸಿವೆ ಎಂದು ದಾಖಲಿಸಿದರು.

ಕನ್ನಡದ ಆದಿಕವಿ ಪಂಪ ದೇಸಿಯತೆ ಎನ್ನುವುದು ಯಾವತ್ತೂ ಚಲನಶೀಲ ಪ್ರಜ್ಞೆಯೇ ಹೊರತು ಸ್ಥಗಿತವಾದ ಪ್ರಜ್ಞೆಯಲ್ಲ ಎಂಬ “ಆಗುವಿಕೆ’ಯನ್ನು ತನ್ನ ಕೃತಿಗಳಲ್ಲಿ ಸಮರ್ಥವಾಗಿ ಹಿಡಿದಿಟ್ಟಿದ್ದಾನೆ. ಇದಕ್ಕಾಗಿ ಆತ ಜೈನ, ಬೌದ್ಧ ಪರಂಪರೆಯ ಆಶಯಗಳನ್ನು ಆಶ್ರಯಿಸಿದ್ದಾನೆಯೇ ಹೊರತು ವೈದಿಕ ಪರಂಪರೆಯನ್ನಲ್ಲ. ಯುದ್ಧದ ನಿರರ್ಥಕತೆಯನ್ನು ಪ್ರಾಚೀನ ಕನ್ನಡ ಕವಿಗಳು ತಮ್ಮ ಕೃತಿಗಳಲ್ಲಿ ಹೇಳಿರುವುದು ಈ ಕಾಲದ ಯುದ್ಧೋನ್ಮಾದ ಸ್ಥಿತಿಯ ಸನ್ನಿವೇಶಕ್ಕೂ ಹಿಡಿದ ಕೈಗನ್ನಡಿಯಂತಿದೆ ಎಂದರು.

ವಚನ ಸಾಹಿತ್ಯದ ಕಾಲವನ್ನು ಕನ್ನಡದ ನೆಲಕ್ಕೆ ನಾಲಿಗೆ ಮೂಡಿದ ಕಾಲ. ಸ್ಥಗಿತಗೊಂಡ ಮಾದರಿಗಳನ್ನು ತಿರಸ್ಕರಿಸುವ ಮೂಲಕ ಜನಸಾಮಾನ್ಯರ ಭಾಷೆಗೆ ಹತ್ತಿರವಾಗುವ ರೀತಿಯಲ್ಲಿ ಲೋಕಕಲ್ಯಾಣದ ಆಶಯಗಳನ್ನು ಬಿತ್ತಿದ್ದು ಇದರ ವೈಶಿಷ್ಟ್ಯತೆ. ಜಾತಿಯ ಅಹಂಕಾರ, ಪ್ರತಿಷ್ಠೆಯನ್ನು ಮುರಿದು ಕಟ್ಟಿದ ವಚನ ಸಾಹಿತ್ಯ ಕನ್ನಡದ ಉಪನಿಷತ್ತು ಇದ್ದಂತೆ. ಈ ಮೂಲಕ ಮಾನವೀಯತೆಯ ಅಂತಃಸತ್ವ ಅಂತರ್ಜಲದಂತೆ ಅಲ್ಲಿ ಮಾರ್ದನಿಸಿದೆ.

Advertisement

ಪ್ರಭುತ್ವ ಪ್ರಜ್ಞೆಯನ್ನು ಬೆತ್ತಲೆಗೊಳಿಸಿದ, ಅಧಿಕಾರದ ಬಗೆಗಿನ ವ್ಯಾಮೋಹವನ್ನು ನಿರಸನಗೊಳಿಸಿದ ಪ್ರಾಚೀನ ಕನ್ನಡ ಸಾಹಿತ್ಯ ಕನ್ನಡ ನಾಡಿನ ಅಸ್ಮಿತೆಯ ಅಭಿವ್ಯಕ್ತಿಯಂತಿದೆ ಎಂದರು. ಹಿರಿಯ ಲೇಖಕ ಡಾ| ಜಿ.ಎಸ್‌. ಭಟ್‌ ಅಧ್ಯಕ್ಷತೆ ವಹಿಸಿದ್ದರು. ಡಾ| ಸಫ್ರಾಜ್‌ ಚಂದ್ರಗುತ್ತಿ, ಡಾ| ಶಂಕರ ಶಾಸ್ತ್ರಿ ಪ್ರತಿಕ್ರಿಯಿಸಿದರು. ಗಂಗಮ್ಮ ಸ್ವಾಗತಿಸಿದರು. ಆಯಿಷಾಬಾನು ನಿರೂಪಿಸಿದರು

Advertisement

Udayavani is now on Telegram. Click here to join our channel and stay updated with the latest news.

Next