ಸರಿ ಸುಮಾರು 175 ಕ್ಕೂ ಹೆಚ್ಚು ಮೂಕಿ ಚಿತ್ರಗಳು ಅದಾಗಲೇ ಬಂದಾಗಿತ್ತು. ಆ ಬಳಿಕ ಕನ್ನಡದಲ್ಲಿ “ಸತಿ ಸುಲೋಚನ’ ಎಂಬ ಮೊದಲ ವಾಕ್ಚಿತ್ರ ಮಾರ್ಚ್ 3, 1934 ರಂದು ಬಿಡುಗಡೆಯಾಗುವ ಮೂಲಕ ಕನ್ನಡ ಚಿತ್ರರಂಗದ ಉದಯವಾಯಿತು. ಅಂದು ಶುರುವಾದ ಸಿನಿಮಾಯಾನ ಎಂಟು ದಶಕಗಳನ್ನು ಪೂರೈಸಿದೆ. ಕನ್ನಡ ಚಿತ್ರರಂಗದಲ್ಲಿ ಹಲವು ದಾಖಲೆ ಸಿನಿಮಾಗಳು ಬಂದಿವೆ. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಕನ್ನಡ ಚಿತ್ರರಂಗ ಗುರುತಿಸಿಕೊಂಡಿದೆ. ಇಷ್ಟೆಲ್ಲಾ ಹೆಗ್ಗಳಿಕೆಗೆ ಕಾರಣ ಆಗಿದ್ದು ಮೊದಲ ಸಿನಿಮಾ “ಸತಿ ಸುಲೋಚನ’ ಆರಂಭ.
ಈ ಚಿತ್ರ ಬಿಡುಗಡೆಯಾದ ಮಾರ್ಚ್ 3 ದಿನವನ್ನು ಕನ್ನಡ ವಾಕ್ಚಿತ್ರ ಹುಟ್ಟುಹಬ್ಬ ಎಂದು ಆಚರಿಸಲಾಗುತ್ತಿದೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ಇದರ ಅಂಗವಾಗಿ ಕಳೆದ ವರ್ಷ ಹತ್ತು ಮಂದಿ ಸಿನಿಮಾ ಸಾಧಕರನ್ನು ಗುರುತಿಸಿ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿತ್ತು. ಈ ಬಾರಿ 15 ಮಂದಿ ಶ್ರೇಷ್ಠ ಸಾಧಕರ ಹೆಸರಲ್ಲಿ ಸಿನಿಮಾದ ಹಲವು ವಿಭಾಗದಲ್ಲಿ ದುಡಿದು, ಸಾಧಿಸಿದ ಹದಿನೈದು ಮಂದಿ ಗಣ್ಯರಿಗೆ ವಾರ್ಷಿಕ ಪ್ರಶಸ್ತಿ ನೀಡುತ್ತಿದೆ. ಈ ಬಾರಿ ಪ್ರಶಸ್ತಿ ಪಡೆಯುತ್ತಿರುವವರ ಪಟ್ಟಿಯನ್ನು ಅಕಾಡೆಮಿ ಅಧ್ಯಕ್ಷ ಎಸ್.ವಿ.ರಾಜೇಂದ್ರ ಸಿಂಗ್‌ಬಾಬು ಬಿಡುಗಡೆ ಮಾಡಿದ್ದಾರೆ.
ಜಿ.ಕೆ.ಶ್ರೀನಿವಾಸಮೂರ್ತಿ (ಆರ್. ನಾಗೇಂದ್ರರಾವ್ ಪ್ರಶಸ್ತಿ), ಆದವಾನಿ ಲಕ್ಷ್ಮೀದೇವಿ (ಎಂ.ವಿ.ರಾಜಮ್ಮ ಪ್ರಶಸ್ತಿ), ಎಂ.ಎಸ್. ಉಮೇಶ್ (ಟಿ.ಎನ್ ಬಾಲಕೃಷ್ಣ ಪ್ರಶಸ್ತಿ), ಎಸ್. ದೊಡ್ಡಣ್ಣ (ತೂಗುದೀಪ ಶ್ರೀನಿವಾಸ್ ಪ್ರಶಸ್ತಿ), ಕೆ.ವಿ. ರಾಜು (ಬಿ.ಆರ್.ಪಂತುಲು ಪ್ರಶಸ್ತಿ), ಸಿ. ಜಯರಾಮ್ (ಡಿ. ಶಂಕರಸಿಂಗ್ ಪ್ರಶಸ್ತಿ), ಕುಮಾರ್ ಶೆಟ್ಟರ್ (ಬಿ.ಜಯಮ್ಮ ಪ್ರಶಸ್ತಿ), ಪಾಲ್ ಎಸ್.ಚಂದಾನಿ (ಎನ್.ವೀರಾಸ್ವಾಮಿ ಪ್ರಶಸ್ತಿ), ಬಿ.ಕೆ.ಸುಮಿತ್ರಾ (ಜಿ.ವಿ.ಅಯ್ಯರ್ ಪ್ರಶಸ್ತಿ), ಡಾ.ಬಿ.ಎಲ್. ವೇಣು (ಹುಣಸೂರು ಕೃಷ್ಣಮೂರ್ತಿ ಪ್ರಶಸ್ತಿ), ಎಸ್.ವಿ. ಶ್ರೀಕಾಂತ್ (ಬಿ.ಎಸ್. ರಂಗ ಪ್ರಶಸ್ತಿ), ಬಿ.ವಿ. ರಾಧಾ (ಪಂಡರೀಬಾಯಿ ಪ್ರಶಸ್ತಿ), ದೇವಿ (ಎಂ.ಪಿ. ಶಂಕರ್ ಪ್ರಶಸ್ತಿ), ಎನ್.ಎಲ್. ರಾಮಣ್ಣ (ಶಂಕರ್‌ನಾಗ್ ಪ್ರಶಸ್ತಿ) ಮತ್ತು ರಾಮ್‌ಶೆಟ್ಟಿ ಅವರಿಗೆ (ಕೆ.ಎನ್.ಟೇಲರ್ ಪ್ರಶಸ್ತಿ) ನೀಡಿ ಗೌರವಿಸಲಾಗುತ್ತಿದೆ.
ಪ್ರಶಸ್ತಿ ಪುರಸ್ಕೃತರಿಗೆ 50 ಸಾವಿರ ನಗದು, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುತ್ತದೆ. ಅಂದಹಾಗೆ, ಮಾರ್ಚ್ 3 ರಂದು ಸಂಜೆ 6 ಕ್ಕೆ ಟೌನ್‌ಹಾಲ್‌ನಲ್ಲಿ ನಡೆಯಲಿರುವ ಸಮಾರಂಭವನ್ನು ಸಚಿವೆ ಉಮಾಶ್ರೀ ಉದ್ಘಾಟಿಸಲಿದ್ದಾರೆ. ಸಚಿವರಾದ ಎಂ.ಕೃಷ್ಣಪ್ಪ ಹಾಗೂ ಹಿರಿಯ ನಟ ಅಂಬರೀಷ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅತಿಥಿಗಳಾಗಿ ಹಿರಿಯ ಕಲಾವಿದೆ ಡಾ.ಜಯಮಾಲ, ಡಾ.ಭಾರತಿ ವಿಷ್ಣುವರ್ಧನ್, ನಟ ರವಿಚಂದ್ರನ್, ವಾರ್ತಾ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್, ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಭಾಗವಹಿಸಲಿದ್ದಾರೆ.
ಅಕಾಡೆಮಿ ಅಧ್ಯಕ್ಷ ಎಸ್.ವಿ. ರಾಜೇಂದ್ರಸಿಂಗ್‌ಬಾಬು ಅಧ್ಯಕ್ಷತೆ ವಹಿಸುತ್ತಿದ್ದಾರೆ. ಈ ಬಾರಿಯೂ ಕನ್ನಡ ಚಿತ್ರರಂಗಕ್ಕೆ ಗಣನೀಯ ಸೇವೆ ಸಲ್ಲಿಸಿದ, ಅನುಭವ ಹೊಂದಿದ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಸರ್ವಸದಸ್ಯರ ಸಭೆಯಲ್ಲಿ ಭಾರತಿ ವಿಷ್ಣುವರ್ಧನ್, ಸಾ.ರಾ.ಗೋವಿಂದು, ನಂಜುಂಡೇಗೌಡ್ರು ಸೇರಿದಂತೆ ಕನ್ನಡ ಚಿತ್ರರಂಗದ ವಿವಿಧ ಸಂಘ,ಸಂಸ್ಥೆಗಳ ಅಧ್ಯಕ್ಷರು ಸದಸ್ಯರಾಗಿದ್ದು, ಅವರ ಸಮ್ಮುಖದಲ್ಲಿ ಈ ಆಯ್ಕೆ ಮಾಡಲಾಗಿದೆ ಎಂಬುದು ರಾಜೇಂದ್ರ ಸಿಂಗ್ ಬಾಬು ಅವರ ಮಾತು.