Advertisement

ರಾಜ್ಯದಲ್ಲಿ ಕನ್ನಡವನ್ನು ಅನುಷ್ಠಾನಗೊಳಿಸಬೇಕು

04:09 PM Feb 01, 2018 | Team Udayavani |

ತುಮಕೂರು: ಕನ್ನಡ ನಾಡು ನುಡಿ ಸಂಸ್ಕೃತಿ ಪರಂಪರೆ ಕುರಿತು ತನ್ನದೆ ಆದ ರೀತಿಯಲ್ಲಿ ಸಂಸ್ಕೃತಿಯ ಚಿಂತಕರಾಗಿ ರಾಜ್ಯದಲ್ಲಿ ಛಾಪು ಮೂಡಿಸುತ್ತಿರುವ ಕನ್ನಡಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಹಿರಿಯ ಲೇಖಕ ಪ್ರೊ. ಎಸ್‌.ಜಿ. ಸಿದ್ದರಾಮಯ್ಯ ಅವರು ನೀಡಿರುವ ವಿಶೇಷ ಸಂದರ್ಶನದಲ್ಲಿ ರಾಜ್ಯದಲ್ಲಿ ಕನ್ನಡವನ್ನು ಅನುಷ್ಠಾನಗೊಳಿಸಬೇಕು ಎಲ್ಲಾ ಕ್ಷೇತ್ರದಲ್ಲಿ ಕನ್ನಡ ಇರಬೇಕು ಸರ್ಕಾರದಲ್ಲಿ ಕನ್ನಡದ ಅನುಷ್ಠಾನ ಸಮರ್ಪಕವಾಗಿ ಆಗಲೇಬೇಕು ಕೇಂದ್ರ ಸರ್ಕಾರದ ಬಲವಂತದ ಹಿಂದಿ ಏರಿಕೆಯ ವಿರುದ್ಧ ಪ್ರಬಲ ದ್ವನಿ ಎತ್ತಿರುವ ಇವರು ಬ್ಯಾಂಕಿಂಗ್‌ ರೈಲ್ವೆ ಇಲಾಖೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗಬೇಕು ಎಂದು ಪ್ರಬಲವಾಗಿ ಪ್ರತಿಪಾದಿಸಿದ್ದಾರೆ.

Advertisement

ದ್ರಾವಿಡ ಭಾಷೆಗಳ ಉಳಿವಿಗಾಗಿ ಒಗ್ಗೂಡಿ ಹೋರಾಟ ಮಾಡುವುದು ಇಂದು ಅನಿವಾರ್ಯ ವಾಗಿದೆ 70 ವರ್ಷಗಳಿಂದ ಪ್ರಾದೆಶಿಕ ಭಾಷೆಗಳ ಮೇಲೆ ದಬ್ಟಾಳಿಕೆ ನಡೆಯುತ್ತಿದೆ ಇದೆಲ್ಲದರ ಬಗ್ಗೆ ಸಾಹಿತ್ಯ ಸಮ್ಮೇಳನಳಲ್ಲಿ ಸಮಗ್ರ ಚಿಂತನೆ ನಡೆಯಬೇಕು. ಸಮಸ್ಯೆಗಳ ಬಗ್ಗೆ ಸಮಾಲೋಚನೆ ಮಾಡಿ ಪರಿಹಾರ ಕಂಡುಕೊಳ್ಳಬೇಕು ನಮ್ಮ ಹಿರಿಯ ಸಾಹಿತಿಗಳ ಸ್ಮರಣೆಯ ಜೊತೆಗೆ ಅವರ ನಿಲುವುಗಳು ಅವರ ವಿಚಾರಗಳು ನಮಗೆ ಔಷಧ ಆಗಬೇಕು ಪೂರ್ವಾಗ್ರಹ ಪೀಡಿತ ಸಮಾಜದಲ್ಲಿ ಸಾಮಾಜಿಕ ಚಿಂತನೆಗಳು ಮೇಳೈಸಬೇಕು ಎಂದು ತಮ್ಮ ಗಟ್ಟಿ ನಿಲುವನ್ನು ಕನ್ನಡಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಸ್‌.ಜಿ. ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ.
 
ಕನ್ನಡ ಸಾಹಿತ್ಯ ಸಮ್ಮೇಳನ ಯಾವ ಸಂದೇಶ ನೀಡಬೇಕು..?  ಸಾಹಿತ್ಯ ಸಮ್ಮೇಳನಗಳು ಜನ ಮನದಲ್ಲಿ ಉಳಿಯಬೇಕು ಜೊತೆಗೆ ನಮ್ಮ ಹಿರಿಯರ ಮಾರ್ಗದರ್ಶನ ಅಲ್ಲಿ ಮೇಳೈಸಬೇಕು. ಬರೀ ಸಮಸ್ಯೆಗಳ ಬಗ್ಗೆ ಚರ್ಚೆಯಾಗಿ ಕೊನೆಗೊಳ್ಳಬಾರದು ಸಮ್ಮೇಳನಗಳಲ್ಲೇ ನಮ್ಮ ನಾಡುನುಡಿ ಸಂಸ್ಕೃತಿ ಪರಂಪರೆ ಸೇರಿದಂತೆ ಜನ ಸಾಮಾನ್ಯರಿಗೆ ಅನುಕೂಲವಾಗುವ ಯಾವುದೇ ವಿಚಾರವಾದರೂ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು ಇದರ ಜೊತೆಗೆ ನಮ್ಮ ಹಿರಿಯ ನೆನಪುಗಳು ಮತ್ತು ಅವರ ಮಾರ್ಗದರ್ಶನಗಳು ರೋಗ ಗ್ರಸ್ತ ಸಮಾಜಕ್ಕೆ ಔಷಧಿಯಾಗಬೇಕು. 

 ರಾಜ್ಯದಲ್ಲಿ ಕನ್ನಡ ಅನುಷ್ಠಾನಕ್ಕೆ ಯಾವ ಕ್ರಮ ಕೈಗೊಂಡಿದ್ದೀರಿ ? ರಾಜ್ಯದ ಎಲ್ಲಾ ಕ್ಷೇತ್ರದಲ್ಲಿ ಕನ್ನಡ ಅನುಷ್ಠಾನವಾಗಬೇಕು. ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ ಇದನ್ನು ಅನುಷ್ಠಾನಕ್ಕೆ ತರಬೇಕು ಎಂದು ಕನ್ನಡಾಭಿವೃದ್ಧಿ ಪ್ರಾಧಿಕಾರ ದಿಟ್ಟ ಹೆಜ್ಜೆ ಇಟ್ಟು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಕರ್ನಾಟಕದಲ್ಲಿ ಕೆಲಸ ಮಾಡುವ ಐಎಎಸ್‌. ಐಪಿಎಸ್‌ ಅಧಿಕಾರಿಗಳು ತಾವು ಇರುವ ಮಣ್ಣಿನ ನೆಲದ ಭಾಷೆಗೆ ಆದ್ಯತೆ ನೀಡಬೇಕು. ರಾಜ್ಯದಲ್ಲಿ ಕೆಲಸ ಮಾಡಿರುವ ಹಲವಾರು ಅಧಿಕಾರಿಗಳು ಬೇರೆ ಬೇರೆ ರಾಜ್ಯದವರಾದರೂ ನಾಡಿನ ಭಾ ಷೆಗೆ ಒತ್ತು ನೀಡಿದ್ದಾರೆ. ಇದನ್ನು ಇತರೆ ಅಧಿಕಾರಿಗಳು ಗಮನ ನೀಡಬೇಕು ಮಾತೃ ಭಾಷೆಯಲ್ಲಿಯೇ ವ್ಯವಹಾರಗಳು ನಡೆಯಬೇಕು. 

 ಕೇಂದ್ರದ ಹಿಂದಿ ಹೇರಿಕೆ ಬಗ್ಗೆ ನಿಮ್ಮ ನಿಲುವೇನು ? ಕೇಂದ್ರ ಸರ್ಕಾರ ಕಳೆದ ಮೂರು ವರ್ಷಗಳಿಂದ ಹಿಂದಿಯನ್ನು ಎಲ್ಲಾ ರಾಜ್ಯಗಳ ಮೇಲೆ ಬಲವಂತವಾಗಿ ಹೇರುವ ಪ್ರಕ್ರಿಯೆಯನ್ನು ಮಾಡುತ್ತಿದೆ. ಹಿಂದಿ ಹೇರಿಕೆಯ ವಿರುದ್ದ ಹೋರಾಟಗಳು ತೀವ್ರವಾಗಬೇಕು. ಕಳೆದ 70 ವರ್ಷಗಳ ಗಣತಂತ್ರ ವ್ಯವಸ್ಥೆಯಲ್ಲಿ ಪ್ರಾದೇಶಿಕ ಭಾಷೆಗಳ ಮೇಲೆ ಈ ರೀತಿಯ ದಬ್ಟಾಳಿಕೆ ನಡೆದಿಲ್ಲ. ಈ ರೀತಿಯ ದಬ್ಟಾಳಿಕೆ ಆದರೆ ಪ್ರಾದೇಶಿಕ ಭಾಷೆಗಳಿಗೆ ಗಂಡಾಂತರ ಉಂಟಾಗುತ್ತದೆ. ಹಿಂದಿ ಒಂದೇ ರಾಷ್ಟ್ರೀಯ ಭಾಷೆಯಲ್ಲ. ದೇಶದಲ್ಲಿ 22 ಭಾಷೆಗಳಿದೆ ರಾಷ್ಟ್ರೀಯ ಭಾವನೆಗಳು ಒಕ್ಕೂಟದ ವ್ಯವಸ್ಥೆಯಲ್ಲಿದೆ ಆದರೆ ಪ್ರಾದೇಶಿಕ ಭಾಷೆಗಳಿಗೆ ಗಂಡಾಂತರ ತರುವ ಕೆಲಸ ಆಗಬಾರದು. ಕೇಂದ್ರದ ಈ ನಿಲುವು ಖಂಡಿಸಿ ದ್ರಾವಿಡ ಭಾಷಾ ಒಕ್ಕೂಟ ರಚಿಸಿದ್ದೇವೆ ಇದರ ಅಡಿಯಲ್ಲಿ ಬಲವಂತ ಹಿಂದಿ ಹೇರಿಕೆಯ ವಿರುದ್ಧ ಒಗ್ಗೂಡಿ ಹೋರಾಟ ಮಾಡುತ್ತೇವೆ.

 ಕೇಂದ್ರಿಯ ವಿದ್ಯಾಲಯಗಳಲ್ಲಿ ಮಾತೃ ಭಾಷೆ ಕಡೆಗಣನೆ ಬಗ್ಗೆ ಅಭಿಪ್ರಾಯವೇನು..?  ಕೇಂದ್ರ ಸರ್ಕಾರ ಕೇಂದ್ರಿಯ ವಿದ್ಯಾಲಯಗಳಲ್ಲಿ ಮೊದಲ ಭಾಷೆಯಾಗಿ ಹಿಂದಿ ಇಂಗ್ಲಿಷ್‌ಗೆ ಆದ್ಯತೆ ನೀಡಿದೆ. ಅಲ್ಲಿ ಪ್ರಾದೇಶಿಕ ಭಾಷೆಗೆ ಆದ್ಯತೆ ನೀಡಬೇಕು. ಆದರೆ ಅಂತಹ ಕಡೆಗಳಲ್ಲಿ ಕನ್ನಡವನ್ನು ಕಡೆಗಣಿಸಲಾಗಿದೆ. ಬಲವಂತದ ಹಿಂದಿ ಏರಿಕೆ ಆಗಬಾರದು. ಕನ್ನಡಕ್ಕೆ ಆದ್ಯತೆ ನೀಡಬೇಕು. ಬ್ಯಾಂಕಿಂಗ್‌ ಮತ್ತು ರೈಲ್ವೆ ಇಲಾಖೆಯಲ್ಲಿ ನಮ್ಮ ನೆಲದ ಮಕ್ಕಳಿಗೆ ಶೇ. 5 ರಷ್ಟು ಮಾತ್ರ ನೌಕರಿ ಸಿಗುತ್ತಿದೆ ಈ ಎಲ್ಲಾ ಕ್ಷೇತ್ರಗಳಲ್ಲಿ ಕನ್ನಡ ಅನುಷ್ಠಾನವಾಗಬೇಕು.

Advertisement

ಕನ್ನಡ ಸಾಹಿತ್ಯಾಸಕ್ತರಿಗೆ ನಿಮ್ಮ ಸಂದೇಶವೇನು? ನಾನು ಸಂದೇಶ ನೀಡುವಷ್ಟು ಬೆಳೆದಿಲ್ಲ. ಕನ್ನಡ ನಾಡು ನುಡಿ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ಕನ್ನಡಕ್ಕೆ ಆದ್ಯತೆ ನೀಡಿ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಸಮಸ್ಯೆಗಳ ಬಗ್ಗೆ ಹೆಚ್ಚು ಸಮಾಲೋಚನೆ ನಡೆಸಬೇಕು ಕನ್ನಡಿಗರು ಒಟ್ಟಿಗೆ ಸೇರಬೇಕು ಸಂಭ್ರಮಿಸಬೇಕು.

 ಚಿ.ನಿ. ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next