Advertisement

Goa: ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲು ಗೋವಾ ಕನ್ನಡಿಗರು ಹೋರಾಡಬೇಕಿದೆ

12:49 PM Oct 13, 2023 | Team Udayavani |

ಪಣಜಿ: ಗೋವಾದಲ್ಲಿರುವ ಕನ್ನಡ ಶಾಲೆಗಳಿಗೆ ವಿದ್ಯಾರ್ಥಿಗಳ ಸಂಖ್ಯೆ ಇಳಿಕೆಯಾಗುತ್ತಿರುವುದರಿಂದ ಹಲವು ಕನ್ನಡ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಈ ಶಾಲೆಗಳನ್ನು ಉಳಿಸಿಕೊಳ್ಳಲು ಗೋವಾ ಕನ್ನಡಿಗರು ಹೋರಾಡಬೇಕಿದೆ.

Advertisement

ವಾಸ್ಕೊದ ಸಾಸ್ಮೋಲಿಂ ಬೈನಾದಲ್ಲಿರುವ ಶಾರದಾಮಂದಿರ ಪ್ರೌಢಶಾಲೆಯ ಕಟ್ಟಡ ಕೂಡ ಶಿಥಿಲಾವಸ್ಥೆಗೆ ತಲುಪಿದ್ದು, ಮೂಲಸೌಕರ್ಯಗಳ ಕೊರತೆಯೂ ಎದ್ದು ಕಾಣುತ್ತಿದೆ. ಇಷ್ಟೇ ಅಲ್ಲದೆಯೇ ಕೆಲವು ಕನ್ನಡ ಶಾಲೆಗಳಲ್ಲಿ ಅಗತ್ಯ ಮೂಲ ಸೌಕರ್ಯಗಳ ಕೊರತೆಯಿಂದಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕೂಡ ಹಲವು ತೊಂದರೆ ಅನುಭವಿಸುವಂತಾಗಿದೆ. ಹೊರನಾಡ ಗೋವೆಯಲ್ಲಿ ಕನ್ನಡ ಶಾಲೆಗಳು ಉಳಿಯಬೇಕಾದರೆ ಕರ್ನಾಟಕ ಸರ್ಕಾರದ ಮೂಲಕ ಗೋವಾದಲ್ಲಿರುವ ಕನ್ನಡ ಸಂಘಟನೆಗಳು ಮಾತ್ರವಲ್ಲದೆಯೇ ಕರ್ನಾಟಕದಲ್ಲಿರುವ ವಿವಿಧ ಕನ್ನಡ ಸಂಘಟನೆಗಳು ಕೂಡ ಹೋರಾಟಕ್ಕಿಳಿಯುವ ಅನಿವಾರ್ಯತೆ ಎದುರಾಗಿದೆ.

ಗೋವಾದಲ್ಲಿ ಲಕ್ಷಾಂತರ ಕನ್ನಡಿಗರು…
ಗೋವಾ ರಾಜ್ಯದಲ್ಲಿ ಕಳೆದ ಅನೇಕ ವರ್ಷಗಳಿಂದ ಲಕ್ಷಾಂತರ ಜನರು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಗೋವಾದಲ್ಲಿ ಸುಮಾರು 4 ಲಕ್ಷಕ್ಕೂ ಹೆಚ್ಚು ಜನ ಕನ್ನಡಿಗರು ನೆಲೆಸಿದ್ದಾರೆ. ಗೋವಾ ರಾಜ್ಯದ ಒಟ್ಟೂ ಮತದಾರರ ಪೈಕಿ ಶೇ. ಕಾಲು ಭಾಗದಷ್ಟು ಮತದಾರರು ಕನ್ನಡಿಗರೇ ಆಗಿದ್ದಾರೆ ಎಂಬುದು ವಿಶೇಷ. ಹೀಗಿದ್ದರೂ ಕೂಡ ಗೋವಾದಲ್ಲಿರುವ ಕನ್ನಡ ಶಾಲೆಗಳಿಗೆ ವಿದ್ಯಾರ್ಥಿಗಳ ಕೊರತೆಯಿಂದಾಗಿ ಮುಚ್ಚುವ ಹಂತಕ್ಕೆ ತಲುಪಿಸುವುದು ಖೇದಕರ ಸಂಗತಿಯೇ ಸರಿ. ಗೋವಾದಲ್ಲಿ ಕನ್ನಡ ಶಾಲೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ತೀರಾ ಬಡ ಕುಟುಂಬದವರು. ವಿದ್ಯಾರ್ಥಿಗಳ ಕೊರತೆಗೆ ಇನ್ನೊಂದು ಕಾರಣವೆಂದರೆ ಕೆಲ ಶಾಲೆಗಳಲ್ಲಿ ಮೂಲ ಸೌಕರ್ಯಗಳ ಕೊರತೆಯಿರುವುದು.

ಸಾಸ್ಮೋಲಿಂ ಬೈನಾ ಕನ್ನಡ ಶಾಲೆ ದುಸ್ಥಿತಿ…!
ವಾಸ್ಕೊದ ಸಾಸ್ಮೋಲಿಂ ಬೈನಾ ಶಾರದಾ ಮಂದಿರ ಪ್ರೌಢ ಶಾಲೆ ಕಟ್ಟಡ ಹಾಗೂ ಪರಿಸರ ಸ್ವಚ್ಛತೆಯಿಲ್ಲದಿರುವುದು ವಿದ್ಯಾರ್ಜನೆಗೆ ಸೂಕ್ತ ವಾತಾವರಣವೇ ಇಲ್ಲದಂತಹ ದುಸ್ಥಿತಿ ಎದುರಾಗಿದೆ. ಈ ಶಾಲೆಯ ತರಗತಿ ಕೋಣೆಗಳು ಕೂಡ ದುರಸ್ಥಿ ಕಂಡಿಲ್ಲ. ವಿದ್ಯಾರ್ಥಿಗಳಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆಯೂ ಇಲ್ಲದೆಯೇ ಪರದಾಡುವಂತಾಗಿದೆ. ಈ ಕಟ್ಟಡ ಸುಣ್ಣ ಬಣ್ಣ ಕಾಣದೆಯೇ ಹಲವು ದಶಕಗಳೇ ಕಳೆದಿವೆ. ಕಟ್ಟಡದ ಸಿಮೆಂಟ್ ಪ್ಲಾಸ್ಟರ್ ಅಲ್ಲಲ್ಲಿ ಕಿತ್ತು ಬೀಳುತ್ತಿದೆ. ಇಂತಹ ಸ್ಥಿತಿಯಲ್ಲಿ ಈ ಕನ್ನಡ ಶಾಲೆಯಲ್ಲಿ ಸುಮಾರು 36 ಜನ ಬಡ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಈ ಶಾಲೆಯಲ್ಲಿ ಶಿಕ್ಷಕರು ಕೂಡ ಆತಂಕದಿಂದಲೇ ಪಾಠ ಮಾಡುವಂತಹ ಸ್ಥಿತಿ ಎದುರಾಗಿದೆ. ಕೂಡಲೇ ಈ ಶಾಲೆಗೆ ಕನ್ನಡ ಸಂಘಟನೆಗಳು ಮತ್ತು ಸರ್ಕಾರದ ನೆರವು ಅಗತ್ಯವಿದೆ. ಕೂಡಲೇ ಶಾಲೆಗೆ ಅಗತ್ಯವಿರುವಲ್ಲಿ ಸಿಮೆಂಟ್ ಪ್ಲಾಸ್ಟರ್, ಹಾಗೂ ನೆಲಕ್ಕೆ ಟೈಲ್ಸ, ಕಟ್ಟಡದ ಮೇಲ್ಛಾವಣಿಗೆ ತಗಡಿನ ಶೀಟ್, ಹೀಗೆ ವಿವಿಧ ಅಗತ್ಯ ಸೌಲಭ್ಯ ಕಲ್ಪಿಸಲು ಸರ್ಕಾರ ಮತ್ತು ದಾನಿಗಳ ನೆರವಿನ ಅಗತ್ಯವಿದೆ.

ಕೂಡಲೇ ಸ್ಫಂಧಿಸಿದ ಗೋವಾ ರಾಜ್ಯ ಬಿಜೆಪಿ ಕರ್ನಾಟಕ ಸೆಲ್ ಕನ್ವೀನಿಯರ್…
ಗೋವಾ ವಾಸ್ಕೊ ಬೈನಾದಲ್ಲಿರುವ ಶಾರದಾ ಮಂದಿರ ಪ್ರೌಢ ಶಾಲೆಗೆ ಭೇಟಿ ನೀಡಿದ್ದ ಗೋವಾ ರಾಜ್ಯ ಬಿಜೆಪಿ ಕರ್ನಾಟಕ ಸೆಲ್‍ನ ಕನ್ವೀನಿಯರ್ ಹಾಗೂ ಉದ್ಯಮಿ ಮುರಳಿ ಮೋಹನ್ ಶೆಟ್ಟಿ ರವರು ಈ ಶಾಲೆಗೆ ಅಗತ್ಯ ವಿರುವ ಶೌಚಾಲಯದ ವ್ಯವಸ್ಥೆಯನ್ನೂ ಕೂಡಲೆ ಕಲ್ಪಿಸಿ ಕೊಡುವ ಭರವಸೆ ನೀಡಿದ್ದಾರೆ. ಇಷ್ಟೇ ಅಲ್ಲದೆಯೇ ಈ ಶಾಲೆಯ ದುಸ್ಥಿತಿಯನ್ನು ಕಂಡು ಬೇಸರ ವ್ಯಕ್ತಪಡಿಸಿದ ಅವರು ಶಾಲೆಗೆ ತುರ್ತಾಗಿ ಅಗತ್ಯವಿರುವ ಸೌಲಭ್ಯಗಳನ್ನು ಕೂಡ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಶಾಲೆಗೆ ಅಗತ್ಯ ಶೌಚಾಲಯದ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿರುವ ಮುರಳಿ ಮೋಹನ್ ಶೆಟ್ಟಿ ರವರಿಗೆ ಶಾಲೆಯ ಮುಖ್ಯೋಪಾಧ್ಯಾಯರಾದ ಪಿ.ವಿ.ಪಾಟೀಲ್ ರವರು ಶಾಲೆಯ ಪರವಾಗಿ ಧನ್ಯವಾದ ಸಲ್ಲಿಸಿದರು.

Advertisement

ಗೋವೆಯಲ್ಲಿ ಕನ್ನಡ ಶಾಲೆ ಉಳಿವಿಗೆ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ…
ಕನ್ನಡ ಭಾಷೆ, ನಾಡು,ನುಡಿಗಾಗಿ ಕರ್ನಾಟಕ ಸರ್ಕಾರವು ಅದೆಷ್ಟೋ ನೆರವು ನೀಡುತ್ತದೆ. ಆದರೆ ಹೊರ ರಾಜ್ಯ ಗೋವೆಯಲ್ಲಿ ಕನ್ನಡ ಶಾಲೆಗಳ ಬಗ್ಗೆ ಯಾವುದೇ ಗಮನ ಹರಿಸದಿರುವುದು ವಿಷಾದನೀಯ ಸಂಗತಿಯೇ ಆಗಿದೆ. ಗೋವಾದಲ್ಲಿ ಕನ್ನಡ ಮಾಧ್ಯಮದ 2 ಪ್ರೌಢ ಶಾಲೆಗಳಿವೆ. ಅಂತೆಯೇ ಹತ್ತಾರು ಪ್ರಾಥಮಿಕ ಶಾಲೆಗಳೂ ಇವೆ. ಈ ಶಾಲೆಗಳ ಸದ್ಯದ ಸ್ಥಿತಿಗತಿಗಳ ಬಗ್ಗೆ ಸರ್ಕಾರ ಮತ್ತು ವಿವಿಧ ಕನ್ನಡ ಸಂಘಟನೆಗಳು ಗಮನ ಹರಿಸಬೇಕಾಗಿದೆ. ಈಗಾಗಲೇ ಗೋವಾದಲ್ಲಿ ಹಲವು ಕನ್ನಡ ಶಾಲೆಗಳು ಬಂದ್ ಆಗಿದ್ದು, ಮುಂಬರುವ ದಿನಗಳಲ್ಲಿ ಇನ್ನೂ ಹಲವು ಕನ್ನಡ ಶಾಲೆಗಳು ಮುಚ್ಚುವ ಆತಂಕದಲ್ಲಿವೆ. ಹೊಸದಾಗಿ ಕನ್ನಡ ಶಾಲೆ ಆರಂಭಿಸುವುದಂತೂ ದೂರದ ಮಾತು, ಇನ್ನು ಇರುವ ಕನ್ನಡ ಶಾಲೆಗಳನ್ನಾದರೂ ಉಳಿಸಿಕೊಳ್ಳುವ ಪ್ರಯತ್ನ ನಡೆಯಬೇಕಾಗಿದೆ. ಇಲ್ಲವಾದರೆ ಗೋವಾ ಕನ್ನಡಿಗರ ಮಕ್ಕಳು ಕನ್ನಡ ಭಾಷೆ ಶಿಕ್ಷಣದಿಂದ ವಂಚಿತರಾಗುವ ದಿನ ದೂರವಿಲ್ಲ.

ಇದನ್ನೂ ಓದಿ: ಚನ್ನಮ್ಮ, ಟಿಪ್ಪು ಸುಲ್ತಾನ್ ಸ್ವಾಭಿಮಾನಿ ಹೋರಾಟದ ಸ್ಫೂರ್ತಿ: ಸಿಎಂ ಸಿದ್ದರಾಮಯ್ಯ

Advertisement

Udayavani is now on Telegram. Click here to join our channel and stay updated with the latest news.

Next