ಜೋಯಿಡಾ: ತಾಲೂಕಿನ ಯರಮುಖದಲ್ಲಿನ ಬ್ರಿಟಿಷ್ ಕಾಲದ ಸಹಿಪ್ರಾ ಶಾಲೆ ಕಟ್ಟಡ ಕುಸಿದು ಬೀಳುವ ಹಂತದಲ್ಲಿದೆ. ನೂತನ ಕಟ್ಟಡಕ್ಕೆ ಜಾಗದ ಮಾಲಿಕರ ತಕರಾರು ಇದ್ದು, ಅಧಿಕಾರಿಗಳ ನಿರ್ಲಕ್ಷಕ್ಕೆ ಮಕ್ಕಳು ಬಲಿಯಾಗುವ ಸಾಧ್ಯತೆ ಬಗ್ಗೆ ಪಾಲಕರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.
1958 ರಲ್ಲಿ ನಿರ್ಮಿಸಿದ ಈ ಶಾಲಾ ಕಟ್ಟಡ ಅಂದು ಸಂಪೂರ್ಣ ಮಣ್ಣಿನ ಕಟ್ಟಲಾಗಿತ್ತು. ಖಾಸಗಿ ಜಾಗೆಯಲ್ಲಿ ನಿರ್ಮಿಸಿದ ಈ ಕಟ್ಟಡಕ್ಕೆ, ಜಾಗದ ಮಾಲಿಕನಿಗೆ ಅಂದು ಜಾಗೆಯ ಪರಿಹಾರ ನೀಡುವ ಭರವಸೆ ನೀಡಲಾಗಿತ್ತು. ಆದರೆ ಕಟ್ಟಡಕ್ಕೆ ಇಂದಿಗೆ 60 ವರ್ಷ ಕಳೆದರೂ ಜಾಗದ ಮಾಲಿಕನಿಗೆ ಶಿಕ್ಷಣ ಇಲಾಖೆ ಪರಿಹಾರ ನೀಡಿಲ್ಲ. ಮಣ್ಣಿನಗೋಡೆಯ ಕಟ್ಟಡವಾಗಿದ್ದರಿಂದ ಮಳೆ, ಗಾಳಿಗೆ ಕೃಷಗೊಂಡು, ಶಾಲೆಯ ಹಿಂಭಾಗದ ಗೋಡೆ ಈಗ ವಾಲಿ ನಿಂತಿದ್ದು, ಬೀಳುವ ಲಕ್ಷಣ ಕಾಣುತ್ತಿದೆ. ಈ ಬಗ್ಗೆ ಅನೇಕ ಸಾರಿ ಇಲಾಖೆಗೆ ತಿಳಿಸಿದ್ದರೂ, ನಿರ್ಲಕ್ಷಿಸಿದ ಅದಿಕಾರಿಗಳ ಕ್ರಮಕ್ಕೆ ಮಾಲಿಕರು ಕಟ್ಟಡ ಕಟ್ಟಲು ಪರವಾನಗಿ ನೀಡದೆ, ಅದೇ ಬಿರುಕು ಬಿಟ್ಟ ಗೋಡೆಯ ನಡುವೆ ಮಕ್ಕಳು ಈ ದುಸ್ಥಿತಿಯ ಅರಿವಿಲ್ಲದೆ ಶಾಲೆ ಕಲಿಯುತ್ತಿದ್ದಾರೆ. ಇದು ಪಾಲಕರು ಸೇರಿದಂತೆ ಶಿಕ್ಷಕರಲ್ಲಿಯೂ ಆತಂಕ ಉಂಟುಮಾಡಿದೆ.
ಮಕ್ಕಳ ಪ್ರಾಣದ ಜೊತೆ ಅಧಿಕಾರಿಗಳ ಆಟ: 60 ವರ್ಷದ ಹಿಂದಿನ, ಅದರಲ್ಲೂ ಮಣ್ಣಿನಿಂದ ನಿರ್ಮಾಣಗೊಂಡ ಈ ಶಾಲಾ ಕಟ್ಟಡ ಅದೇಷ್ಟೋ ಹಿಂದೆಯೇ ಕೆಡವಬೇಕಾಗಿತ್ತು. ಮಣ್ಣಿನ ಕಟ್ಟಡ ಈ ಶಾಲೆಯ ಗೋಡೆ ವಾಲುತ್ತಿದ್ದರೂ ಅಧಿಕಾರಿಗಳು ಹೊಸ ಕಟ್ಟಡ ನಿರ್ಮಾಣಕ್ಕೆ ಕಿಂಚಿತ್ತೂ ಮುಂಜಾಗ್ರತೆ ವಹಿಸುತ್ತಿಲ್ಲ ಎಂದರೆ ಇಲ್ಲಿ ಕಲಿಯುವ ಮಕ್ಕಳ ಬಗ್ಗೆ, ಅವರ ಪ್ರಣಾಪಾಯದ ಸನ್ನಿವೇಶಗಳ ಬಗ್ಗೆ ಚಿಂತೆಯಿಲ್ಲವೇ..? ಎನ್ನುವ ಪ್ರಶ್ನೆ ಪಾಲಕರು ಕೇಳುತ್ತಿದ್ದಾರೆ.
ಜಾಗದ ಮಾಲಿಕರಿಗೆ ಅನ್ಯಾಯ:60 ವರ್ಷಗಳ ಹಿಂದಿನಿಂದಿಲೂ ಈ ಶಾಲೆಯ ಜಾಗದ ಮಾಲಿಕರಾದ ನಾರಾಯಣ ದಬ್ಗಾರ ಮತ್ತು ಇಂದುಮತಿ ದೇಸಾಯಿ ಇವರೊಂದಿಗೆ ಜಾಗೆಯ ಪರಿಹಾರ ನೀಡುವ ಒಡಂಬಡಿಕೆ ಮಾಡಿಕೊಂಡಿದ್ದ ಶಿಕ್ಷಣ ಇಲಾಖೆ ಇಂದಿಗೂ ಪರಿಹಾರ ನೀಡದೆ ಅನ್ಯಾಯ ಮಾಡಿದ್ದಾರೆ. ಆದರೂ ಮಾಲಿಕರು ಇಂದಿನವರೆಗೂ ಈ ಶಾಲೆಯ ಜಾಗಕ್ಕೆ ಹಣ ಕೇಳದೆ ಶಾಲೆ ನಡೆಯಲಿ ಎಂದು ಮಕ್ಕಳಿಗಾಗಿ ಮಾನವೀಯತೆ ಮೆರೆದಿದ್ದರು. 10 ವರ್ಷದ ಹಿಂದೆ ಶಾಲೆಯ ಹೊಸ ಕೊಠಡಿ ನಿರ್ಮಿಸುವಾಗ 1 ಲಕ್ಷ ಹಣ ನಗದು ಮಾಲಿಕರಿಗೆ ನೀಡುವುದಾಗಿ ಹೇಳಿ, ಶಾಲಾ ಕಟ್ಟಡ ಕಟ್ಟಿದ ನಂತರ ಹಣ ನೀಡದೇ ಅಂದಿನ ಅಧಿಕಾರಿಗಳು ಮೋಸ ಮಾಡಿದ್ದಾರೆಂದು ಮಾಲಕರು ಹೇಳುತ್ತಿದ್ದಾರೆ.
ಈಗ ಮತ್ತೆ ಶಾಲೆಯ 2 ಕೊಠಡಿಗಳು ಬೀಳುವ ಹಂತದಲ್ಲಿದ್ದು, ಹೊಸ ಕಟ್ಟಡ ಆಗಬೇಕಿದೆ. ಈಗಾಗಲೇ ಬಂದಿರುವ ಕಟ್ಟಡದ ಅನುದಾನ ರೂ. 20 ಲಕ್ಷದಲ್ಲಿ ಕಟ್ಟಡ ಕಟ್ಟಬಹುದಾಗಿದೆ. ಆದರೆ ಜಾಗದ ಮಾಲಿಕರು ಹಿಂದೆ ತಮಗಾದ ಅನ್ಯಾಯದಿಂದ ಈಗ ಹೊಸ ಕಟ್ಟಡ ಕಟ್ಟಲು ಅವಕಾಶ ನೀಡುತ್ತಿಲ್ಲ.