Advertisement

ಕನ್ನಡ ಸಂಘ ಪುಣೆ: ಗಮನ ಸೆಳೆದ ವಾರ್ಷಿಕ ಪ್ರತಿಭಾ ಪ್ರದರ್ಶನ

06:42 PM Mar 06, 2020 | Suhan S |

ಪುಣೆ, ಮಾ. 5: ಕನ್ನಡ ಸಂಘ ಪುಣೆ ವತಿಯಿಂದ ದಿ ಡಾ| ಶಾಮರಾವ್‌ ಕಲ್ಮಾಡಿ ಅವರ 101ನೆಯ ಜನ್ಮದಿನಾಚರಣೆಯನ್ನು ಮಾ. 1ರಂದು ಪ್ರತಿವರ್ಷದಂತೆ ಸಂಘದ ಕನ್ನಡ ಮಾಧ್ಯಮ ಹೈಸ್ಕೂಲ್‌ ಸಭಾಂಗಣದಲ್ಲಿ ಪ್ರತಿಭಾ ಪ್ರದರ್ಶನವನ್ನು ಹಮ್ಮಿಕೊಳ್ಳುವ ಮೂಲಕ ಆಚರಿಸಲಾಯಿತು.

Advertisement

ಸಂಘದ ಸದಸ್ಯರು ಹಾಗೂ ಪರಿವಾರದ ಸದಸ್ಯರಿಗೆ ತಮ್ಮ ಸುಪ್ತ ಪ್ರತಿಭೆಗಳನ್ನು ಪ್ರದರ್ಶಿಸಲು ಸೂಕ್ತ ವೇದಿಕೆ ಒದಗಿಸಿದ್ದಲ್ಲದೆ ನೆರೆದಿದ್ದ ಪ್ರೇಕ್ಷಕರು ಭರ್ಜರಿ ಮನೋರಂಜನೆಯನ್ನು ಪಡೆದರು. ಸಂಘದ ಕಾರ್ಯದರ್ಶಿ ಮಾಲತಿ ಕಲ್ಮಾಡಿ, ಉಪ ಕೋಶಾಧಿಕಾರಿ ರಾಧಿಕಾ ಶರ್ಮ, ಜನಸಂಪರ್ಕಾಧಿರಿ ರಾಮದಾಸ್‌ ಆಚಾರ್ಯ, ಕವಿ ಪಾಂಗಾಳ ವಿಶ್ವನಾಥ್‌ ಶೆಟ್ಟಿ, ಕನ್ನಡ ಶಾಲಾ ಹೈಸ್ಕೂಲ್‌ ಮುಖ್ಯೋಪಾಧ್ಯಾಯರಾದ ಚಂದ್ರಕಾಂತ ಹಾರಕುಡೆ, ಹಿರಿಯ ಸದಸ್ಯೆ ರತ್ನಾ ಆಚಾರ್ಯ, ಪ್ರಾಥಮಿಕ ಶಾಲಾ ಪ್ರಾಧ್ಯಾಪಕಿ ಜ್ಯೋತಿ ಕಡಕೊಲ್‌ ಉಪಸ್ಥಿತರಿದ್ದು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಜನ ಸಂಪರ್ಕಾಧಿಕಾರಿ ರಾಮದಾಸ್‌ ಆಚಾರ್ಯರು ಸ್ವಾಗತಿಸಿ ಮಾತನಾಡಿ, ಕನ್ನಡ ಸಂಘ ಇತ್ತೀಚಿನ ದಿನಗಳಲ್ಲಿ ಪುಣೆಯಲ್ಲಿ ಅಭೂತಪೂರ್ವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಖ್ಯವಾಗಿ ಎಸ್‌. ಎಲ್‌. ಬೈರಪ್ಪನವರ ಕನ್ನಡ ನಾಟಕ ಮಂದ್ರ,ಗಾನ, ನೃತ್ಯ ಮತ್ತು ಮೂರು ಭಾಷೆಗಳಲ್ಲಿ ನಿರೂಪಣೆಯೊಂದಿಗೆ ನಡೆದ ದಾಸ ಮಂಜರಿ ಭಾರತ ರತ್ನ ಪಂಡಿತ್‌ ಭೀಮಸೇನ್‌ ಜೋಷಿಯವರ ಅಭಿವಂದನಾ ಸಂಗೀತ ಇವು ಪುಣೆಯ ರಸಿಕರ ಮನ ಸೂರೆಗೊಂಡು ಪ್ರಶಂಸೆಗೆ ಪಾತ್ರವಾದವು ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ನಾಲ್ಕು ವರ್ಷದ ಚಿಕ್ಕ ಮಕ್ಕಳಿಂದ ಹಿಡಿದು ಎಂಬತ್ತು ವರ್ಷದ ಹಿರಿಯ ನಾಗರಿಕರು ತಮ್ಮ ಅಪೂರ್ವ ಪ್ರತಿಭೆಗಳನ್ನು ಪ್ರದರ್ಶಿಸಿ ಪ್ರೇಕ್ಷಕರನ್ನು ಅಚ್ಚರಿಗೊಳಿಸಿ ಪ್ರಶಂಸೆಗೆ ಪಾತ್ರರಾದರು. ನಾಲ್ಕು ವರ್ಷದ ಸಾರಾ ಭಟ್‌ ಸುಶ್ರಾವ್ಯ ಸಂಸ್ಕೃತ ಶ್ಲೋಕ, 10 ವರ್ಷದ ಶ್ರೀಜಾ ಆಚಾರ್ಯಳ ಮನಮೋಹಕ ಮಾಕನ್‌ ಕಥಕ್‌ ನೃತ್ಯ, ಮೇಘ ಮತ್ತು ಮೇಧಾ ಅವಳಿ ಸಹೋದರಿಯರ ಅಮೋಘ ಕಥಕ್‌ ನೃತ್ಯ, ಜ್ಯೇಷ್ಠ ನಾಗರಿಕರಾದ ವಿಶ್ವನಾಥ್‌ ಶೆಟ್ಟಿ ಅವರಿಂದ ಕಾವ್ಯ ವಾಚನ ನಡೆಯಿತು.

ಅನಂತ್‌ ನಾರಾಯಣ್‌ ಅವರ ಮೌತ್‌ ಆರ್ಗನ್‌ ವಾದನ ರಾಮದಾಸ್‌ ಆಚಾರ್ಯ ರಿಂದ ಮಂಕುತಿಮ್ಮನ ಕಗ್ಗ ವಿಶ್ಲೇಷಣೆ, ಕನ್ನಡ ಸಂಘದ ಆಫೀಸಿನ ಮಹಾರಾಷ್ಟ್ರೀಯ ಉದ್ಯೋಗಿಗಳ ಮಕ್ಕಳಿಂದ ಸುಶ್ರಾವ್ಯ ಕನ್ನಡ ಗೀತೆಗಳು, ಶ್ಲೋಕಗಳು ನೆರೆದ ಪ್ರೇಕ್ಷಕರ ಮನರಂಜಿಸಿದವು ಸಭಾಗೃಹ ಪ್ರೇಕ್ಷಕರಿಂದ ತುಂಬಿತ್ತು. ಕನ್ನಡ ಮಾಧ್ಯಮ ಶಾಲಾ ಶಿಕ್ಷಕಿ ಪೂಜಾ ಪೂಜಾರಿ ಕಾರ್ಯಕ್ರಮವನ್ನು ನಿರೂಪಿಸಿದರು. ವರ್ಷ ಪೂರ್ತಿ ಹತ್ತು ಹಲವು ಕಾರ್ಯಕ್ರಮಗಳು ಸಂಘದ ವತಿಯಿಂದ ಆಯೋಜನೆ ಗೊಳ್ಳುತ್ತಿದ್ದು ವೈಶಿಷ್ಟಪೂರ್ಣ ಸಾಂಸ್ಕೃತಿಕ ಕಾರ್ಯ ಕ್ರಮಗಳಿಗೆ ಕನ್ನಡಿಗರು ಮಾತ್ರವಲ್ಲದೆ ಸ್ಥಳೀಯ ಮರಾಠಿ ಭಾಷಿಕರೂ ತುಂಬು ಹೃದಯದಿಂದ ಭಾಗವಹಿಸಿ ಕನ್ನಡ-ಮರಾಠಿ ಸಾಂಸ್ಕೃತಿಕ ಬಾಂಧವ್ಯ ವೃದ್ಧಿಸುವಲ್ಲಿ ಸಹಕರಿಸುತ್ತಿದ್ದಾರೆ.

Advertisement

 

ಚಿತ್ರ-ವರದಿ: ಕಿರಣ್‌ ಬಿ. ರೈ ಕರ್ನೂರು

Advertisement

Udayavani is now on Telegram. Click here to join our channel and stay updated with the latest news.

Next