ಹಾವೇರಿಯಲ್ಲಿ ನಡೆಯಬೇಕಿರುವ 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಅನಿಶ್ಚಿತತೆ ಎದುರಾಗಿದೆ. ಸಮ್ಮೇಳನ ನಡೆಯುತ್ತದೆಯೋ ಇಲ್ಲವೊ ಎಂಬುದನ್ನು ಮೂಕನಾಗಿ ನೋಡುವ ಸ್ಥಿತಿ ಬಂದಿದೆ ಎಂದು ಖುದ್ದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ| ಮಹೇಶ್ ಜೋಷಿ ಹೇಳಿರುವುದು ಚರ್ಚೆಗೆ ಕಾರಣವಾಗಿದೆ.
ಸಾಹಿತ್ಯ ಪರಿಷತ್ ಅಧ್ಯಕ್ಷರೇ ಹೀಗೆ ಹೇಳಿರುವುದು ನೋಡಿದರೆ ರಾಜ್ಯ ಸರಕಾರಕ್ಕೆ ಸಮ್ಮೇಳನವನ್ನು ನಡೆಸುವ ಆಸಕ್ತಿ ಇಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ. ಕನ್ನಡದ ಕೆಲಸ ಆದ್ಯತೆಯ ಕೆಲಸವಾಗಬೇಕು. ಕನ್ನಡ ಕಡ್ಡಾಯಕ್ಕೆ ಕಾನೂನಾತ್ಮಕ ಬಲ ಕೊಡಲು ವಿಧಾನಮಂಡಲ ಅಧಿವೇಶನದಲ್ಲಿ ಮಸೂದೆ ಸಹ ಮಂಡಿಸಲಾಗಿದೆ. ಕನ್ನಡಕ್ಕೆ ತಮ್ಮ ಬದ್ಧತೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಪ್ರದರ್ಶಿಸಿಕೊಂಡೇ ಬಂದಿದ್ದಾರೆ. ಹಾಗಿದ್ದರೂ ಸಾಹಿತ್ಯ ಸಮ್ಮೇಳನದ ಬಗ್ಗೆ ಅನಾದರ ಏಕೆ ಎನ್ನುವುದು ಸ್ಪಷ್ಟವಾಗಿಲ್ಲ.
ಕೊರೊನಾ ಅನಂತರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಲವು ಬಾರಿ ಮುಂದೂಡಿಕೆಯಾಗಿದ್ದು, ಈಗ ನವೆಂಬರ್ 11ಕ್ಕೆ ದಿನ ನಿಗದಿಯಾಗಿದೆ. ರಾಜ್ಯ ಸರಕಾರ ಅನುದಾನ ಬಿಡುಗಡೆ ಮಾಡ ಬೇಕಾಗಿದೆ. ಜತೆಗೆ, ಲಾಂಛನ ಬಿಡುಗಡೆ ಮಾಡಬೇಕಾಗಿದೆ. ಇದು ವರೆಗೂ ಹಲವು ಸಭೆಗಳನ್ನು ನಡೆಸಿ ಸಿದ್ಧತೆಗಳ ಬಗ್ಗೆ ಸಮಾಲೋಚನೆ ನಡೆಸಬೇಕಿತ್ತು. ಆದರೆ, ಇದ್ಯಾವುದೂ ಆಗಿಲ್ಲ.
ಪ್ರತೀವರ್ಷ ಸಾಹಿತ್ಯ ಸಮ್ಮೇಳನವನ್ನು ಜಾತ್ರೆಯ ಮಾದರಿಯಲ್ಲಿ ನಡೆಸುವ ಬಗ್ಗೆ ಸಾಕಷ್ಟು ಸಮಯಗಳಿಂದ ಚರ್ಚೆಗಳು ನಡೆದುಕೊಂಡೇ ಬರುತ್ತಿವೆ. ಸಾಹಿತ್ಯ ಸಮ್ಮೇಳನಗಳಲ್ಲಿ ನಾಡು-ನುಡಿ ಪರ ಕೈಗೊಳ್ಳುವ ನಿರ್ಣಯಗಳು ಯಾವುದೂ ಜಾರಿಗೆ ಬರುವುದಿಲ್ಲ ಎಂಬ ಆರೋಪ ಇದ್ದೇ ಇದೆ. ಹೆಸರಿಗೆ ಮಾತ್ರ ಸಮ್ಮೇಳನ ಮಾಡಿ ಕೈತೊಳೆದು ಕೊಳ್ಳಲಾಗುತ್ತದೆ. ಈ ಬಗ್ಗೆಯೂ ಸರಕಾರ ಗಂಭೀರ ಗಮನ ಹರಿಸಬೇಕಾಗುತ್ತದೆ.
ಕನ್ನಡ ಸಾಹಿತ್ಯ ಪರಿಷತ್‌ಗೆ ಸ್ವಾಯತ್ತತೆ ನೀಡಬೇಕೆಂಬ ಚರ್ಚೆಯೂ ಬಹು ಹಿಂದಿನದು. ಸಾಹಿತ್ಯ ಪರಿಷತ್ ಪ್ರತೀ ಹಂತದಲ್ಲೂ ಸರಕಾರದ ಮುಂದೆ ತಲೆಬಾಗಿ ನಿಂತುಕೊಳ್ಳುವುದು ನಮ್ಮ ಸಾರಸ್ವತ ಲೋಕಕ್ಕೆ ಬಗೆಯುವ ಅವಮಾನ ಎಂದರೂ ತಪ್ಪಲ್ಲ. ಇಂಥ ವ್ಯವಸ್ಥೆಯನ್ನು ತಪ್ಪಿಸಬೇಕಿದೆ, ಪರಿಷತ್‌ಗೆ ಬಲ ನೀಡುವ ಬದಲು ಈಚೆಗೆ ಸರಕಾರವು ಕಸಾಪ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿದೆ. ಇದರ ಬದಲು ಪರಿಷತ್‌ಗೆ ಹಾಗೂ ಅದರ ಅಧ್ಯಕ್ಷರಿಗೆ ಸಂಪೂರ್ಣ ಸ್ವಾಯತ್ತತೆ ನೀಡುವುದು ವಿಹಿತ.
ಪರಿಷತ್‌ನ ಚಟವಟಿಕೆಗಳ ಮೇಲೆ ಸರಕಾರ ನಿಯಂತ್ರಣ ಹೇರುವುದು ಅಸಮರ್ಥನೀಯವೇ. ರಾಜ್ಯ ಸರಕಾರ, ಕನ್ನಡ ಮತ್ತು ಸಂಸ್ಕೃತಿ ಸಚಿವರು ಅಥವಾ ಇಲಾಖೆ ಅಧಿಕಾರಿಗಳು ಈ ಬಗ್ಗೆ ತತ್‌ಕ್ಷಣ ಗಮನಹರಿಸಬೇಕು. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಎದುರಾಗಿರುವ ಅಡೆತಡೆ ನಿವಾರಿಸಬೇಕು. ಸಮ್ಮೇಳನ ಸಿದ್ಧತೆ ಪ್ರಾರಂಭಿಸಿ ಮುಂದಿನ ಕೆಲಸ ಕಾರ್ಯಗಳಿಗೆ ಅನುದಾನ ಬಿಡುಗಡೆ ಮಾಡುವ ಕೆಲಸ ಮಾಡಬೇಕು.
ಈಗಿನ ಲೆಕ್ಕಾಚಾರದಂತೆ ತಿಂಗಳು ಮೇಲೆ ಇನ್ನು ಏಳು ದಿನಗಳು ಮಾತ್ರ ಸಮ್ಮೇಳನಕ್ಕೆ ಬಾಕಿ ಉಳಿದಿವೆ. ಈಗಾಗಲೇ ಅರ್ಧದಷ್ಟು ಕೆಲಸ ಮುಗಿದಿರಬೇಕಾಗಿತ್ತು. ಅಲ್ಲದೆ ಕೊರೊನಾ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿ ಈಗ ನಡೆಯುತ್ತಿದೆ. ಜನರಲ್ಲೂ ಈ ಬಗ್ಗೆ ಗೊಂದಲ ಮೂಡಿಸದೇ ಅಕ್ಷರ ಜಾತ್ರೆಯನ್ನು ಸುಸೂತ್ರವಾಗಿ ನಡೆಸಲು ಬೇಕಾದ ಎಲ್ಲ ಕೆಲಸಗಳನ್ನು ಮಾಡಬೇಕು.