Advertisement

ನ.24ರಿಂದ ಮೈಸೂರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ

06:15 AM Sep 13, 2017 | Team Udayavani |

ಬೆಂಗಳೂರು: 83ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ನ.24, 25 ಹಾಗೂ 26ರಂದು ಮೈಸೂರಿನಲ್ಲಿ ನಡೆಯಲಿದ್ದು, ಸಮ್ಮೇಳನ ನಡೆಯುವ ಸ್ಥಳ, ಸಮ್ಮೇಳನಾಧ್ಯಕ್ಷರ ಆಯ್ಕೆ ಸೇರಿ ಇತರೆ ಪ್ರಕ್ರಿಯೆಗಳು ಇನ್ನಷ್ಟೇ ಆರಂಭವಾಗಬೇಕಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌ ಹೇಳಿದರು.

Advertisement

ನಗರದ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು,”83ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮೈಸೂರಿನಲ್ಲಿ ನ.24ರಿಂದ ಮೂರು ದಿನ ನಡೆಸಲು ನಿರ್ಧರಿಸಲಾಗಿದೆ.

ಸಮ್ಮೇಳನಾಧ್ಯಕ್ಷರ ಆಯ್ಕೆ ಕುರಿತಂತೆ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು. ಸಮ್ಮೇಳನಾಧ್ಯಕ್ಷರ ಬಗ್ಗೆ ಈವರೆಗೆ ಯಾವ ಹೆಸರೂ ಪ್ರಸ್ತಾಪವಾಗಿಲ್ಲ. ಅರ್ಹರು ಬಹಳ ಮಂದಿಯಿದ್ದು, ಚರ್ಚಿಸಿ ಒಮ್ಮತದಿಂದ ಆಯ್ಕೆ ಮಾಡಲಾಗುವುದು ಎಂದು ಹೇಳಿದರು.

“ಸಮ್ಮೇಳನ ನಡೆಸಲು ಮೈಸೂರಿನ ಅರಮನೆ ಆವರಣ, ಮಹಾರಾಜ ಕಾಲೇಜು ಆವರಣ ಹಾಗೂ ವಸ್ತು ಪ್ರದರ್ಶನ ಪ್ರಾಧಿಕಾರದ ಸ್ಥಳವನ್ನು ಸ್ಥಳೀಯ ಪದಾಧಿಕಾರಿಗಳು ಗುರುತಿಸಿದ್ದು, ಇದರಲ್ಲಿ ಸೂಕ್ತ ಸ್ಥಳವನ್ನು ಆಯ್ಕೆ ಮಾಡಬೇಕಿದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಸಮ್ಮೇಳನವನ್ನು ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಸಮ್ಮೇಳನದಲ್ಲಿ ಭಾಗವಹಿಸುವವರಿಗೆ ಕುಡಿಯುವ ನೀರು, ವಸತಿ ಸೌಲಭ್ಯ ಇತರೆ ವ್ಯವಸ್ಥೆ ಕಲ್ಪಿಸುವ ಜತೆಗೆ ಸ್ವಯಂಸೇವಕರಿಗೆ ಯಾವುದೇ ಕೊರತೆಯಿಲ್ಲ. ಪ್ರತಿ 500 ಮಂದಿಗೆ ಒಂದು ಊಟದ ಕೌಂಟರ್‌ ತೆರೆಯಲಾಗುವುದು .ರಾಯಚೂರಿನ ಸಮ್ಮೇಳನದಲ್ಲಿ
ಒಂದೂವರೆ ಲಕ್ಷ ಮಂದಿ ಪಾಲ್ಗೊಂಡಿದ್ದರು.

Advertisement

ಮೈಸೂರಿನ ಸಮ್ಮೇಳನದಲ್ಲಿ ಎರಡು ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು “ವಿಷಯ ಆಯ್ಕೆ ಸಮಿತಿ: ಸಮ್ಮೇಳನದ ಹಿನ್ನೆಲೆಯಲ್ಲಿ 10ಕ್ಕೂ ಹೆಚ್ಚು ವಿಚಾರಗೋಷ್ಠಿಗಳು ನಡೆಯಲಿದ್ದು, ವಿಷಯ ಆಯ್ಕೆಗಾಗಿ ಸಮಿತಿ ರಚಿಸಲಾಗುವುದು.
ಡಾ.ಮೂಡ್ನಾಕೂಡು ಚಿನ್ನಸ್ವಾಮಿ, ಡಾ.ಎಚ್‌.ಎಸ್‌. ವೆಂಕಟೇಶಮೂರ್ತಿ, ಡಾ.ಕೆ.ವೈ.ನಾರಾಯಣಸ್ವಾಮಿ, ಪ್ರೊ.ಎಂ.ಎಚ್‌. ಆಶಾದೇವಿ ಹಾಗೂ ಕಾ.ತ. ಚಿಕ್ಕಣ್ಣ ಸಮಿತಿಯಲ್ಲಿರಲಿದ್ದಾರೆ’ ಎಂದು ಹೇಳಿದರು.

“ಮುಂಬೈನಲ್ಲಿ ಹೊರನಾಡ ಕನ್ನಡಿಗರ ಸಮ್ಮೇಳನ ನಡೆಸಲು ಚಿಂತಿಸಲಾಗಿದೆ. ಅದೇ ರೀತಿ ಮುಂದಿನ ವರ್ಷ ಹೊರದೇಶ ಕನ್ನಡಿಗರ ಪ್ರಥಮ ಸಮಾವೇಶ ನಡೆಸಲು ಚಿಂತನೆ ನಡೆದಿದೆ’ ಎಂದು ಹೇಳಿದರು.

ಮೈಸೂರು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ, ಮಾಜಿ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್‌, ನಿಕಟಪೂರ್ವ ಅಧ್ಯಕ್ಷ ಎಂ.ಚಂದ್ರಶೇಖರ್‌, ಗೌರವ ಕಾರ್ಯದರ್ಶಿ ಕೆ.ಎಸ್‌.ನಾಗರಾಜ್‌, ಸಂಚಾಲಕ ವಸಂತಕುಮಾರ್‌, ಕಸಾಪ ಕೋಶಾಧ್ಯಕ್ಷ ಮಲ್ಲಿಕಾರ್ಜುನಪ್ಪ, ರಾಜ್ಯ ಸಂಯೋಜಕ ಬಿ.ಎನ್‌.ಪರಡ್ಡಿ ಇದ್ದರು. 

3 ನಿರ್ಣಯಗಳು ಈಡೇರಿವೆ
ಕಳೆದ ಬಾರಿಯ ಸಮ್ಮೇಳನದ ನಾಲ್ಕು ಪ್ರಮುಖ ನಿರ್ಣಯಗಳಲ್ಲಿ ಮೂರು ಈಡೇರಿದೆ. ಒಂದರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರಿಗೆ ಹೊರನಾಡಿನ ಅಭ್ಯರ್ಥಿಗಳು ಸೇರಿ ಶೇ.5ರಷ್ಟು ಮೀಸಲಾತಿಯನ್ನು ರಾಜ್ಯ ಸರ್ಕಾರ ಕಲ್ಪಿಸಿದೆ. ಹಾಗೆಯೇ ಕೇಂದ್ರೀಯ ವಿದ್ಯಾಲಯಗಳಲ್ಲಿ ಕನ್ನಡ ಕಲಿಕೆಯನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ರಾಷ್ಟ್ರಕವಿ ಗೌರವವನ್ನು ಮತ್ತೆ ನೀಡಬೇಕೆಂದು ಮನವಿ ಸಲ್ಲಿಸಿದೆ. ಒಟ್ಟಾರೆ ಹಲವು ನಿರ್ಣಯ ಈಡೇರಿದಂತಾಗಿದೆ ಎಂದು ಕಸಾಪ ಅಧ್ಯಕ್ಷ ಮನು ಬಳಿಗಾರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next