Advertisement

600 ಕಿ.ಮೀ. ದೂರದಿಂದ ಬಂದು ಸಾಹಿತ್ಯ ಸೇವೆ 

06:25 AM Nov 21, 2017 | Team Udayavani |

ಮೈಸೂರು: ಕನ್ನಡದ ಪರಿಚಾರಕರಾಗಿ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಪ್ರಚಾರ ಮಾಡುತ್ತಾ 600 ಕಿ.ಮೀ.
ದೂರದಿಂದ ಬೈಕ್‌ನಲ್ಲೇ ಮೈಸೂರಿಗೆ ಆಗಮಿಸಿರುವ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ
ಹೂವಿನ ಹಿಪ್ಪರಗಿ ಗ್ರಾಮದ ಭೀಮರಾಯ ಹೂಗಾರ, 83ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ವಿವಿಧ ಬಡಾವಣೆಗಳಲ್ಲಿ ಪ್ರಚಾರವನ್ನೂ ಕೈಗೊಂಡಿದ್ದಾರೆ.

Advertisement

ಬಿ.ಕಾಂ ಪದವೀಧರರಾಗಿ, ಹೂಗಾರ್‌ ಹೋಂ ಅಗರಬತ್ತಿ ಕಾರ್ಖಾನೆಯಲ್ಲಿ ಕೆಲಸ ಮಾಡುವ ಭೀಮರಾಯ, 2005ರಿಂದ ಬರೆಯುವ ಹವ್ಯಾಸ ಬೆಳೆಸಿಕೊಂಡರು. ಮೊಟ್ಟ ಮೊದಲಿಗೆ ಸಾವಿರ ಸಾಧನೆಯ ವಚನಗಳು ಕೃತಿಯನ್ನು ಹೊರತಂದರು. ನಂತರ ನೀಲವರ್ಣ ಪ್ರಕಾಶನ ಹೆಸರಿನಲ್ಲಿ ಸ್ವಂತ ಪ್ರಕಾಶನ ಸಂಸ್ಥೆ ಸ್ಥಾಪಿಸಿಕೊಂಡಿದ್ದು, ಈವರೆಗೆ ನುಡಿಮುತ್ತುಗಳು, ಕಥೆ, ಕವನ, ಕಾದಂಬರಿ ಸೇರಿದಂತೆ 25 ಪುಸ್ತಕಗಳನ್ನು ಬರೆದು, ಪ್ರಕಟ ಮಾಡಿದ್ದಾರೆ. 

ಪ್ರಧಾನಿ ಅಭಿನಂದನೆ: “ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸ್ವತ್ಛ ಭಾರತ ಯೋಜನೆಯ ಬಗ್ಗೆ ನಾನು ಬರೆದ
ಸ್ವತ್ಛ ಭಾರತಕ್ಕಾಗಿ ಸಾವಿರ ನುಡಿ ಮುತ್ತುಗಳು ಕೃತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರಶಂಸೆ ವ್ಯಕ್ತಪಡಿಸಿ, 
ಅಭಿನಂದನಾ ಪತ್ರ ಕಳುಹಿಸಿದ್ದಾರೆ’ ಎಂದು ಭೀಮರಾಯ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಬರೆಯುವ ಹವ್ಯಾಸ ರೂಢಿಸಿಕೊಂಡ ನಂತರ ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆದರೂ ಪ್ರತಿನಿಧಿಯಾಗಿ ಭಾಗವಹಿಸುತ್ತಾ ಬಂದಿರುವ ಇವರು, ಈ ಬಾರಿ ಮೈಸೂರಿನಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇ ಳನಕ್ಕೆ ವಿನೂತನ ರೀತಿಯಲ್ಲಿ ಪ್ರಚಾರ ಕಾರ್ಯ ಕೈಗೊಳ್ಳಬೇಕೆಂಬ ಉದ್ದೇಶದಿಂದ ತಮ್ಮ ದ್ವಿಚಕ್ರ ವಾಹನವನ್ನು ಕೆಂಪು ಮತ್ತು ಹಳದಿ ಸ್ಟಿಕ್ಕರ್‌ನಿಂದ ಕನ್ನಡ ಬಾವುಟದಂತೆ ಮಾರ್ಪಡಿಸಿ ಅದಕ್ಕೆ “ಸಾಹಿತ್ಯ ಸಾರಿಗೆ’ ಎಂದು ಹೆಸರಿಟ್ಟಿದ್ದಾರೆ.

ಹಿಂಬದಿ ಆಸನದ ಮೇಲೆ ತ್ರಿಕೋನಾಕಾರದ ಪೆಟ್ಟಿಗೆ ಕಟ್ಟಿಕೊಂಡು ಅದರಲ್ಲಿ ತಾವು ಬರೆದಿರುವ ಕೃತಿಗಳನ್ನು
ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ. ನ.17ರಂದು ಬೆಳಗ್ಗೆ 7ಗಂಟೆಗೆ ತಮ್ಮ ಅಲಂಕೃತ ಟಿವಿಎಸ್‌ ವೀಗೋ ಸಾಹಿತ್ಯ
ಸಾರಿಗೆಯಲ್ಲಿ ಹೊರಟ ಭೀಮರಾಯ, 600 ಕಿ.ಮೀ. ಕ್ರಮಿಸಿ ನ.19ರಂದು ಮಧ್ಯಾಹ್ನ 1 ಗಂಟೆಗೆ ಮೈಸೂರು ತಲುಪಿದ್ದಾರೆ. ಮಾರ್ಗಮಧ್ಯೆ ಎರಡು ರಾತ್ರಿಗಳನ್ನು ಕೂಡ್ಲಿಗಿ ಹಾಗೂ ಆದಿಚುಂಚನಗಿರಿಯಲ್ಲಿ ಕಳೆದಿದ್ದಾರೆ.

ಮಾರ್ಗ ಮಧ್ಯೆ ಕನ್ನಡ ಸಾಹಿತ್ಯ ಪರಿಷತ್‌ ಮತ್ತು ಕನ್ನಡ ಪರ ಸಂಘಟನೆಗಳವರಿಂದ ಉತ್ತಮ ಬೆಂಬಲ ಸಿಕ್ಕಿದೆ. ಮೈಸೂರು ತಲುಪಿದ ನಂತರ ಇಲ್ಲಿನ ಬಡಾವಣೆಗಳಿಗೆ ಹೋಗಿ ಸಾಹಿತ್ಯ ಸಮ್ಮೇಳನದ ಬಗ್ಗೆ ಪ್ರಚಾರ ಮಾಡುತ್ತಿದ್ದೇನೆ. ಮಂಗಳವಾರ ಸಾಹಿತ್ಯ ಸಮ್ಮೇಳನದ ಪ್ರಚಾರ ರಥದ ಜತೆ ಹೋಗಿ ಪ್ರಚಾರ ಮಾಡುತ್ತೇನೆ.
– ಭೀಮರಾಯ ಹೂಗಾರ

Advertisement

– ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next