Advertisement

ಕಸಾಪ ಅಧ್ಯಕ್ಷರ ಅವಧಿ 3 ವರ್ಷಕ್ಕೆ ನಿಗದಿ 

06:05 AM Aug 21, 2018 | Team Udayavani |

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿಯ ಅಧಿಕಾರವಧಿ ಐದು ವರ್ಷಕ್ಕೆ ವಿಸ್ತರಿಸಿದ್ದ ನಿರ್ಣಯ ರದ್ದುಪಡಿಸಿ  ಈ ಹಿಂದಿನಂತೆ ಮೂರು ವರ್ಷಕ್ಕೆ ಸೀಮಿತಗೊಳಿಸಿ ಜಿಲ್ಲಾ ನೋಂದಣಾಧಿಕಾರಿಗಳ ಹಾಗೂ ಸಹಕಾರ ಸಂಘಗಳ ಉಪ ನಿಬಂಧಕರು ಆದೇಶ ಹೊರಡಿಸಿದ್ದಾರೆ.

Advertisement

ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಬೈಲಾಗೆ ತಿದ್ದುಪಡಿ ಮಾಡಿ ಕಾರ್ಯಕಾರಿ ಸಮಿತಿ ಅಧಿಕಾರಾವಧಿಯನ್ನು 3 ರಿಂದ 5ವರ್ಷಕ್ಕೆ ಹೆಚ್ಚಿಸಿಕೊಂಡಿದ್ದ ಕ್ರಮ ವಿರೋಧಿಸಿ ಕನ್ನಡ ಸಂಘರ್ಷ ಅಧ್ಯಕ್ಷ ರಾಮಣ್ಣ ಕೋಡಿಹೊಸಹಳ್ಳಿ ಅವರು ನ್ಯಾಯಲಯದ ಮೊರೆ ಹೋಗಿದ್ದರು. ನ್ಯಾಯಾಲಯವು  ಜಿಲ್ಲಾ ನೋಂದಣಾಧಿಕಾರಿ ಹಾಗೂ ಸಹಕಾರ ಸಂಘಗಳ ಉಪ ನಿಬಂಧಕರ ಬಳಿ ಬಗೆಹರಿಸಿಕೊಳ್ಳುವಂತೆ ಸೂಚಿಸಿತ್ತು.

ಸೋಮವಾರ  ಈ ಕುರಿತು ವಿಚಾರ ನಡೆಸಿದ ಜಿಲ್ಲಾ ನೋಂದಣಾಧಿಕಾರಿಗಳ ಹಾಗೂ ಸಹಕಾರ ಸಂಘಗಳ ಉಪ ನಿಬಂಧಕರು, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಅವಧಿಯನ್ನು 3ವರ್ಷಕ್ಕೆ ಸೀಮಿತಗೊಳಿಸಿ ಆದೇಶಿಸಿದ್ದಾರೆ.ಅಲ್ಲದೆ ಹಾಲಿ ಅಧ್ಯಕ್ಷರ ಮೂರು ವರ್ಷಗಳ ಅಧಿಕಾರ ಅವಧಿ ಮುಗಿಯುವ ಮುನ್ನವೇ ನೂತನ ಅಧ್ಯಕ್ಷರ ಆಯ್ಕೆಗೆ ಕ್ರಮಕೈಗೊಳ್ಳಬೇಕು ಎಂದು ಮಹತ್ವದ ತೀರ್ಪು ನೀಡಿದ್ದಾರೆ.

ಈ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಅವಧಿಯನ್ನು 3ರಿಂದ 5 ವರ್ಷಕ್ಕೆ ಹೆಚ್ಚಿಸಿಕೊಳ್ಳುವ ಸಂಬಂಧ ಉಡುಪಿ ಜಿಲ್ಲೆಯ ಕೋಟಾದಲ್ಲಿ ಕಳೆದ ಮಾರ್ಚ್‌ 13ರಂದು ಕನ್ನಡ ಸಾಹಿತ್ಯ ಪರಿಷತ್ತಿನ ವಿಶೇಷ ಸಕಲ ಸಭೆ ನಡೆದಿತ್ತು. ಈ ಸಭೆಯಲ್ಲಿ ಹಾಲಿ ಕಾರ್ಯಕಾರಿ ಸಮಿತಿಯ ಅವಧಿಯನ್ನು 3ರಿಂದ 5 ವರ್ಷಕ್ಕೆ ಹೆಚ್ಚಿಸುವ ನಿರ್ಣಯ ಕೈಗೊಳ್ಳಲಾಗಿತ್ತು.

ಈ ಕ್ರಮವನ್ನು ವಿರೋಧಿಸಿ ಕನ್ನಡ ಸಂಘರ್ಷ ಸಮಿತಿ ಕಳೆದ ಫೆ.28 ರಂದು ಜಿಲ್ಲಾ ನೋಂದಣಾಧಿಕಾರಿಗಳಿಗೆ ದೂರು ಸಲ್ಲಿಸಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಜಿಲ್ಲಾ ನೋಂದಣಾಧಿಕಾರಿಗಳ ಹಾಗೂ ಸಹಕಾರ ಸಂಘಗಳ ಉಪ ನಿಬಂಧಕರು ಈ ತೀರ್ಪು ನೀಡಿದ್ದಾರೆ.

Advertisement

ಈ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಹಾಲಿ ಅಧ್ಯಕ್ಷ ಡಾ.ಮನು ಬಳಿಗಾರ್‌, ಈ ಆದೇಶದ ವಿರುದ್ಧ ನ್ಯಾಯಾಂಗ ಮೆಟ್ಟಿಲೇರುವ ಬಗ್ಗೆ ಚಿಂತನೆ ನಡೆಸಲಾಗಿದೆ. ಹಿರಿಯ ವಕೀಲರ ಸಲಹೆ ಪಡೆದು ಮುಂದುವರಿಯುವುದಾಗಿ ಎಂದು ಪ್ರತಿಕ್ರಿಯಿಸಿದ್ದಾರೆ.

ಡಿಸೆಂಬರ್‌ನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ
ಧಾರವಾಡ:
84ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಡಿಸೆಂಬರ್‌ ಮೊದಲ ವಾರದಲ್ಲಿ ನಡೆಯುವುದು ಬಹುತೇಕ ಖಚಿತವಾಗಿದ್ದು, ನಗರದ ಕರ್ನಾಟಕ ಕಲಾ ಮಹಾವಿದ್ಯಾಲಯ (ಕೆಸಿಡಿ)ಆವರಣದಲ್ಲಿಯೇ ಆಯೋಜಿಸಲು ನಿರ್ಧರಿಸಲಾಗಿದೆ.

ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆಯಲ್ಲಿ ಧಾರವಾಡದ ಹಿರಿಯ ಸಾಹಿತಿಗಳು, ಚಿಂತಕರು, ಕಲಾವಿದರು, ಸಾಂಸ್ಕೃತಿಕ ಸಂಘಟಕರ ಸಭೆಯಲ್ಲಿ ಸಮ್ಮೇಳನವನ್ನು 2018ರ ನವೆಂಬರ್‌ ಕೊನೆಯ ವಾರ ಅಥವಾ ಡಿಸೆಂಬರ್‌ ಮೊದಲ ವಾರದಲ್ಲಿ ಆಯೋಜಿಸಬೇಕು. ಪ್ರಧಾನ ವೇದಿಕೆಯನ್ನು ಕೆಸಿಡಿ ಮೈದಾನದಲ್ಲಿಯೇ ನಿರ್ಮಿಸಿ, ಇನ್ನುಳಿದಂತೆ ಅಕ್ಕಪಕ್ಕದಲ್ಲಿರುವ ವಿಜ್ಞಾನ ಮಹಾವಿದ್ಯಾಲಯ, ಸೃಜನಾ ರಂಗಮಂದಿರ, ರಂಗಾಯಣ, ಆಲೂರು ಭವನ, ಡಯಟ್‌ ಸಭಾಭವನಗಳನ್ನು ಬಳಸಿಕೊಳ್ಳಬಹುದು ಎಂಬ ಸಲಹೆ ವ್ಯಕ್ತವಾಯಿತು.

84ನೇ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಗೆ 8-10 ಹೆಸರುಗಳಿವೆ. ಧಾರವಾಡ ಅಥವಾ ಉತ್ತರ ಕರ್ನಾಟಕದವರಾಗಬೇಕು ಎಂಬ ಬೇಡಿಕೆಯೂ ಇದೆ. ಸೂಕ್ತ ಸರ್ವಾಧ್ಯಕ್ಷರನ್ನು ಆಯ್ಕೆ ಮಾಡುತ್ತೇವೆ.
-ಡಾ|ಮನು ಬಳಿಗಾರ್‌, ಕಸಾಪ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next