Advertisement

ಗುಣಮಟ್ಟದ ಪುಸ್ತಕ ಪ್ರಕಟ ಆಶಾಭಾವ: ಕ.ಸಾ.ಪ. ಅಧ್ಯಕ್ಷ ಮಹೇಶ ಜೋಶಿ

12:45 PM Jun 13, 2022 | Team Udayavani |

ಹಾವೇರಿ: ಭವ್ಯ ಪರಂಪರೆಯ ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಅಖೀಲ ಭಾರತ ಸಾಹಿತ್ಯ ಸಮ್ಮೇಳನವು ಅತ್ಯಂತ ವೈಶಿಪೂರ್ಣ ಹಾಗೂ ವಿದ್ವತ್‌ಪೂರ್ಣವಾಗಿರಬೇಕು. ಗುಣಮಟ್ಟದ ಚರ್ಚೆ, ಸಂವಾದದ ಜೊತೆಗೆ ಉತ್ತಮ ಪುಸ್ತಕಗಳು ಹೊರಬರಬೇಕು ಎಂಬ ಆಶಯದಿಂದ ಕಾರ್ಯಾಗಾರ ಹಮ್ಮಿಕೊಂಡಿದ್ದು, ಜಿಲ್ಲೆಯ ಉದಯೋನ್ಮುಖ ಬರಹಗಾರರು ಇದರ ಸದುಪಯೋಗ ಪಡೆಯಬೇಕೆಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ, ನಾಡೋಜ ಮಹೇಶ ಜೋಶಿ ಹೇಳಿದರು.

Advertisement

ನಗರದ ದಾನೇಶ್ವರಿ ನಗರದ ಜಿಲ್ಲಾ ಪದವಿ ಪೂರ್ವ ನೌಕರರ ಸಭಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಬೆಂಗಳೂರು ಮತ್ತು ಜಿಲ್ಲಾ ಕಸಾಪ ಘಟಕದ ಆಶ್ರಯದಲ್ಲಿ ರವಿವಾರ ಹಮ್ಮಿಕೊಂಡಿದ್ದ ಜಿಲ್ಲೆಯ ಬರಹಗಾರರ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬರವಣಿಗೆ ಎಂಬುದು ಅಪಾರ ಬೌದ್ಧಿಕ ಶ್ರಮ, ಪೂರ್ಣ ಪ್ರಮಾಣದ ಬದ್ಧತೆ ಅಪೇಕ್ಷಿಸುತ್ತದೆ. ಪೂರ್ವಾಗ್ರಹ ಸಿದ್ಧಾಂತಗಳು ಕಸಾಪ ಪ್ರಕಟಣೆಯ ಪುಸ್ತಕಗಳಲ್ಲಿ ಬರದೇ ವಾಸ್ತವ ನೆಲೆಗಟ್ಟಿನಲ್ಲಿ ಪ್ರಕಟವಾಗಬೇಕು. ಜಿಲ್ಲೆಯು ಸಾಧು ಸಂತರ, ಸಾಹಿತಿಗಳ, ಅನುಭಾವಿಗಳ ತವರೂರಾಗಿದ್ದು, ಇಲ್ಲಿಯೂ ಹಲವಾರು ಪ್ರತಿಭಾವಂತ ಬರಹಗಾರರಿದ್ದಾರೆ. ಅವರನ್ನು ಮುಖ್ಯವಾಹಿನಿಗೆ ತರಲು ಇಂತಹ ಕಾರ್ಯಾಗಾರ ಹಮ್ಮಿಕೊಂಡಿದ್ದು, ಗುಣಮಟ್ಟದ ಪುಸ್ತಕಗಳು ಪ್ರಕಟವಾಗುವ ಆಶಾಭಾವನೆಯಿದೆ ಎಂದು ಹೇಳಿದರು.

ಗೊಟಗೋಡಿಯ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ| ಟಿ.ಸಿ. ಗುರುಪ್ರಸಾದ ಮಾತನಾಡಿ, ಬದುಕಿನ ಸುಖ ದುಃಖ ತಲ್ಲಣಗಳಿಗೆ ಬರಹಗಳು ಮುಖಾಮುಖೀಯಾಗುತ್ತವೆ. ಅಂತಹ ಸಂದರ್ಭದಲ್ಲಿ ನಮ್ಮ ಬರಹಗಳು ಓದುಗರಿಗೆ ಸಂಜೀವಿನಿಯಾಗಬೇಕು. ಸಮಾಜದ ಸ್ವಾಸ್ಥ್ಯ ಕೆಡಲು ಅವಕಾಶವಾಗದೇ ಮುನ್ನುಡಿಯಾಗಬೇಕು. ಜಿಲ್ಲೆಯಲ್ಲಿ ಹಲವಾರು ಮಹನೀಯರು ಎಲೆಮರೆ ಕಾಯಿಯಂತೆ ಎಲ್ಲ ರಂಗಗಳಲ್ಲಿ ಸೇವೆ ಮಾಡಿದ್ದಾರೆ. ಅಂತಹ ಮಹನೀಯರನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರುವಂತೆ ಬರಹಗಾರರು ಕೆಲಸ ಮಾಡಬೇಕು ಎಂದು ಹೇಳಿದರು.

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ನ ಪ್ರಶಿಕ್ಷಕ ಕೆ. ರಾಜಕುಮಾರ ಮಾತನಾಡಿ, ಸಮ್ಮೇಳನದಲ್ಲಿ ಒಟ್ಟು 86 ಪುಸ್ತಕಗಳನ್ನು ಹೊರತರುವ ಯೋಜನೆ ಹಾಕಿಕೊಂಡಿದ್ದು, 8 ತಾಲೂಕು ದರ್ಶನ, ಒಂದು ಜಿಲ್ಲಾ ದರ್ಶನ ಸೇರಿದಂತೆ ಏಕವ್ಯಕ್ತಿ ಚಿತ್ರಣ, ಸ್ವಾತಂತ್ರ್ಯ ಹೋರಾಟದಲ್ಲಿ ಜಿಲ್ಲೆಯ ಕೊಡುಗೆ, ಏಕೀಕರಣದಲ್ಲಿನ ಹೋರಾಟ, ಸಾಮಾಜಿಕ ಕಳಕಳಿಯ ಸಂಘಸಂಸ್ಥೆಗಳು ಹೀಗೆ ಬಹು ಆಯಾಮದ ಕೃತಿಗಳನ್ನು ತರಲಾಗುತ್ತಿದೆ. ಭಾಷಾ ಶುದ್ಧತೆ, ಅಲಂಕಾರ, ಓದಿಸಿಕೊಂಡು ಹೋಗುವಂತೆ ಪುಸ್ತಕಗಳು ಬರಬೇಕಾಗಿದ್ದು, ಹೊಸ ತಲೆಮಾರು ಲೇಖಕರನ್ನು ಹೆಚ್ಚು ಬಳಸಿಕೊಳ್ಳುವ ಆಲೋಚನೆಯಿದೆ ಎಂದು ಹೇಳಿದರು.

Advertisement

ಧಾರವಾಡದ ಸಾಹಿತಿ ಶಾಮಸುಂದರ ಬಿದರಕುಂದಿ ಮಾತನಾಡಿ, ಧಾರವಾಡದಲ್ಲಿ ನಡೆದ ಸಮ್ಮೇಳನದಲ್ಲಿ ಹಲವು ಮೌಲಿಕ ಕೃತಿಗಳನ್ನು ಹೊರತಂದಿದ್ದು, ಸ್ಥಳೀಯ ಸಾಹಿತಿ ಬರಹಗಾರರಿಗೆ ಹೆಚ್ಚಿನ ಆದ್ಯತೆ ನೀಡಿಲಾಗಿತ್ತು. ಹೊಸಬರು ಹೆಚ್ಚಾಗಿದ್ದರೂ ಗುಣಮಟ್ಟದಲ್ಲಿ ಯಾವುದೇ ರಾಜೀ ಮಾಡಿಕೊಂಡಿರಲಿಲ್ಲ. ಆದ್ದರಿಂದ ಸಂಗ್ರಹಯೋಗ್ಯ ಪುಸ್ತಕಗಳು ಹೊರಬಂದವು. ಆದಷ್ಟು ಸ್ಥಳೀಯ ಹೋರಾಟಗಾರರು, ಸಾಹಿತಿಗಳು, ಸಮಾಜ ಸೇವಕರು ಹಾಗೂ ಜಿಲ್ಲೆಯ ಸಮಗ್ರ ಮಾಹಿತಿಯುಳ್ಳ ಜಿಲ್ಲಾ ದರ್ಶನ ಪುಸ್ತಕ ಪ್ರಕಟವಾಗಬೇಕು ಎಂದು ಹೇಳಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, ಜಿಲ್ಲೆಯ ಉದಯೋನ್ಮುಖ ಬರಹಗಾರರಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಇಂಥಹ ಕಾರ್ಯಾಗಾರದ ಮೂಲಕ ತಮ್ಮ ಪ್ರತಿಭೆ ಅನಾವರಣವಾಗಲು ಸಹಾಯಕವಾಗುತ್ತಿದೆ. ಪುಸ್ತಕ ಪ್ರಕಟಣೆಗೆ ಮುಂಚೆ ಇನ್ನೂ ಹಲವಾರು ಕಮ್ಮಟ ಏರ್ಪಡಿಸಿ ಹೆಚ್ಚಿನ ಮಾರ್ಗದರ್ಶನ ಮಾಡಲಾಗುವುದು ಎಂದರು.

ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿದರು. ಕೇಂದ್ರ ಕಸಾಪ ಕಾರ್ಯದರ್ಶಿ ನೇ.ಭ. ರಾಮಲಿಂಗಶೆಟ್ಟಿ, ಕೋಶಾಧ್ಯಕ್ಷ ಬಿ.ಎಂ.ಪಟೇಲ್‌ ಪಾಂಡು, ಪತ್ರಕರ್ತ ಶ್ರೀಧರ ಮೂರ್ತಿ, ನಾಗರಾಜ ದ್ಯಾಮನಕೊಪ್ಪ, ಎಸ್‌.ಎನ್‌. ದೊಡ್ಡಗೌಡರ, ಕೆ.ಎಚ್‌. ಮುಕ್ಕಣ್ಣನವರ, ಕೆ.ಎಸ್‌. ಕೌಜಲಗಿ, ಶ್ರೀಶೈಲ ಹುದ್ದಾರ, ಶಶಿಧರ ಯಲಿಗಾರ, ಪ್ರಕಾಶ ಮನ್ನಂಗಿ, ಪಿ.ಟಿ. ಲಕ್ಕಣ್ಣನವರ, ಎ.ಬಿ. ರತ್ನಮ್ಮ, ನಾಗರಾಜ ಅಡಿಗ, ಪ್ರಭು ಅರಗೋಳ ಇತರರು ಇದ್ದರು. ಜಿಲ್ಲಾ ಕಸಾಪ ಕಾರ್ಯದರ್ಶಿ ಎಸ್‌.ಎಸ್‌. ಬೇವಿನಮರದ ಸ್ವಾಗತಿಸಿದರು. ತಾಲೂಕು ಕಸಾಪ ಅಧ್ಯಕ್ಷ ವೈ.ಬಿ. ಆಲದಕಟ್ಟಿ ನಿರೂಪಿಸಿದರು. ಬಿ.ಪಿ. ಶಿಡೇನೂರ ವಂದಿಸಿದರು.

ನುಭವಿಗಳ ತವರೂರಾಗಿದ್ದು, ಇಲ್ಲಿಯೂ ಹಲವಾರು ಪ್ರತಿಭಾವಂತ ಬರಹಗಾರಿದ್ದಾರೆ. ಅವರನ್ನು ಮುಖ್ಯವಾಹಿಗೆ ತರಲು ಇಂತಹ ಕಾರ್ಯಾಗಾರ ಹಮ್ಮಿಕೊಂಡಿದ್ದು, ಗುಣಮಟ್ಟದ ಪುಸ್ತಕಗಳು ಪ್ರಕಟವಾಗುವ ಆಶಾಭಾವನೆಯಿದೆ. –ಮಹೇಶ ಜೋಶಿ, ಕಸಾಪ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next