ಕೋಟ/ಉಡುಪಿ: ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಆಡಳಿತಾವಧಿಯನ್ನು ಮೂರರಿಂದ ಐದು ವರ್ಷಗಳಿಗೆ ಏರಿಸುವುದು ಸಹಿತ ಒಟ್ಟು 13 ಪ್ರಸ್ತಾವಗಳನ್ನು ಪರಿಷತ್‌ನ ಸರ್ವ ಸದಸ್ಯರ ವಿಶೇಷ ಸಭೆ ಅನುಮೋದಿಸಿದೆ. ಕಸಾಪ ರಾಜ್ಯಾಧ್ಯಕ್ಷ ಮನು ಬಳಿಗಾರ್ ಅಧ್ಯಕ್ಷತೆಯಲ್ಲಿ ಗುರುವಾರ ಕೋಟ ಕಾರಂತ ಕಲಾಭವನದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಸಂಬಂಧ ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕಸಾಪ ಅಧ್ಯಕ್ಷ ಮನುಬಳಿಗಾರ್, ಉಪಸ್ಥಿತರಿದ್ದ 802 ಸದಸ್ಯರಲ್ಲಿ ಕೇವಲ ಏಳು ಮಂದಿ ತಿದ್ದುಪಡಿಗಳಿಗೆ ವಿರೋಧ ವ್ಯಕ್ತಪಡಿಸಿದರು. ವಿರೋಧ ವ್ಯಕ್ತಪಡಿಸಿದ ಸದಸ್ಯರಲ್ಲಿ ಮೂವರ ಅನಿಸಿಕೆಗಳನ್ನು ಕೇಳಲಾಯಿತು. ಮತ್ತೂಮ್ಮೆ ತಿದ್ದುಪಡಿಯ ಪರವಾಗಿರುವವರನ್ನು ಕೈ ಎತ್ತುವ ಮೂಲಕ ಗುರುತಿಸಿ ಬಹುಮತ ಪಡೆಯಲಾಯಿತು. ಕೊನೆಯಲ್ಲಿ ಎಲ್ಲ ತಿದ್ದುಪಡಿ ವಿಧೇಯಕ ಬಹುಮತದಿಂದ ಅಂಗೀಕಾರಗೊಂಡಿದೆ ಎಂದು ಹೇಳಿದ ರು. ಜತೆಗೆ ಎರಡು ಲಕ್ಷ ಸದಸ್ಯರಿರುವಾಗ ಚುನಾವಣೆಗೆ 45 ಲಕ್ಷ ರೂ. ಖರ್ಚಾಗುತ್ತಿತ್ತು. ಈಗ 3 ಲಕ್ಷ ಸದಸ್ಯರಿದ್ದಾರೆ. ಈಗ ಚುನಾವಣೆಗೆ 65-70 ಲಕ್ಷ ರೂ. ಅಗತ್ಯವಿದೆ. ಹೀಗಾಗಿ ಐದು ವರ್ಷಗಳಿಗೆ ಏರಿಸಲಾಗಿದೆ ಎಂದು ನಿರ್ಧಾರವನ್ನು ಸಮರ್ಥಿಸಿಕೊಂಡರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ಗುರುವಾರ ವಜಾಗೊಂಡಿದೆ ಎಂದರು.
20 ವರ್ಷಗಳಲ್ಲಿ ಇಂತಹ ಸಭೆ ನಡೆದಿರಲಿಲ್ಲ, ಇದೊಂದು ಐತಿಹಾಸಿಕ ಸಭೆ ಎಂದರು. ವಿಶೇಷವೆಂದರೆ, ಈ ಸಭೆಯನ್ನು ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ನಡೆಸಲಾಯಿತು. ಸಭೆಯ ನಡಾವಳಿಗಳನ್ನು ವಿಡಿಯೋ ಚಿತ್ರೀಕರಣ ಮಾಡಲಾಯಿತು.
ತಿದ್ದುಪಡಿಯಾದ ಪ್ರಸ್ತಾವನೆಗಳು
– ಅಧ್ಯಕ್ಷರ ಅವಧಿ 3ರಿಂದ 5 ವರ್ಷಗಳಿಗೇರಿಕೆ
– ಕಾರ್ಯಕಾರಿ ಸಮಿತಿಯಲ್ಲಿ ಪರಿಶಿಷ್ಟ ಜಾತಿಯವರ ಸ್ಥಾನ ಎರಡಕ್ಕೇರಿಕೆ.
– ಪರಿಶಿಷ್ಟ ಪಂಗಡದವರಿಗೆ ಒಂದು ಸ್ಥಾನ ಲಭಿಸಲಿದೆ.
– ಮಹಿಳೆಯರಿಗೆ ಇದ್ದ ಒಂದು ಸ್ಥಾನ ಎರಡಕ್ಕೇರಿಕೆ. ಈ ಮೂರು ನಾಮನಿರ್ದೇಶನಗಳು ತಾಲೂಕು, ಜಿಲ್ಲೆ, ರಾಜ್ಯ, ಗಡಿನಾಡ ಘಟಕಕ್ಕೆ ಅನ್ವಯ
– ಹೊಸದಾಗಿ ಸ್ಥಾಪನೆಗೊಂಡ ತೆಲಂಗಾಣ ರಾಜ್ಯದ ಗಡಿನಾಡ ಘಟಕ ಆರಂಭ.
– ಚುನಾವಣೆಗಾಗಿ ಬೆಂಗಳೂರಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಒಂದೊಂದು ಮತಗಟ್ಟೆ
– 500 ಮತಗಳಿರುವ ಕ್ಷೇತ್ರಕ್ಕೆ ಮತಗಟ್ಟೆ ಸ್ಥಾಪಿಸಲಾಗುವುದು.
– ಆಜೀವ ಸದಸ್ಯತ್ವ ಶುಲ್ಕ 250 ರೂ.ಗಳಿಂದ 500 ರೂ., ಕನ್ನಡ ನುಡಿ ಚಂದಾದಾರರಿಗೆ 500 ರೂ., ಪೋಷಕ ಸಂಸ್ಥೆಗಳ ಮೊತ್ತ 25,000 ರೂ.ಗಳಿಂದ 50,000 ರೂ.ಗೇರಿಕೆ, ದಾತೃ ಸಂಸ್ಥೆಗಳ ಮೊತ್ತ 10,000 ರೂ.ನಿಂದ 20,000 ರೂ. ಏರಿಕೆ, ಆಜೀವ ಸಂಸ್ಥೆಗಳ ಮೊತ್ತ 2,500 ರೂ.ಗಳಿಂದ 5,000 ರೂ.ಗೇರಿಕೆ, ಮಹಾಪೋಷಕ ಸಂಸ್ಥೆಗಳು 1 ಲ.ರೂ.
ಚುನಾವಣಾ ಪ್ರವಾಸದ ವೇಳೆ ರಾಜ್ಯಪ್ರವಾಸ ಕೈಗೊಂಡಾಗ ಬಹಳ ಜನರು ಬೈಲಾಗೆ ತಿದ್ದುಪಡಿ ತರಬೇಕು ಎಂದು ಮನವಿ ಮಾಡಿದ್ದರು. ಕೆಲವೇ ಕೆಲವು ಮಂದಿ ಅಷ್ಟೇ ವಿರೋಧ ಮಾಡಿದ್ದರು. ನನ್ನ ಅವಧಿಯಿಂದಲೇ ಅಧ್ಯಕ್ಷರ ಅಧಿಕಾರ ಅವಧಿ ವಿಸ್ತರಣೆಯಾಗಲಿದೆ.
– ಮನು ಬಳಿಗಾರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ