Advertisement

ಕನ್ನಡ ಭಾಷೆ ಅಜರಾಮರ: ತಹಶೀಲ್ದಾರ್‌ ಪಟ್ಟರಾಜ ಗೌಡ

05:11 PM Nov 02, 2020 | Suhan S |

ಚನ್ನಗಿರಿ: ವಿಶ್ವದಲ್ಲಿ ಅತ್ಯಂತ ಪ್ರಾಚೀನ ಇತಿಹಾಸ ಕನ್ನಡ ಭಾಷೆ ಕ್ಷೀಣಿಸುತ್ತಿದೆ ಎಂಬುದು ಅಘಾತಕಾರಿ ಅಂಶವಾಗಿದೆ ಎಂದು ತಹಶೀಲ್ದಾರ್‌ ಪಟ್ಟರಾಜ ಗೌಡ ಆತಂಕ ವ್ಯಕ್ತಪಡಿಸಿದರು.

Advertisement

ಭಾನುವಾರ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿರುವ ಕನ್ನಡ ತನ್ನದೇ ಆದ ಸಾಂಸ್ಕೃತಿಕಶ್ರೀಮಂತಿಕೆ ಹೊಂದಿದೆ. ಪ್ರತಿಯೊಬ್ಬರೂ ಕನ್ನಡಭಾಷೆಯನ್ನು ಪೋಷಿಸಿ ಬೆಳೆಸಲು ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಪ್ರಾದೇಶಿಕವಾಗಿ ಕರ್ನಾಟಕ ವೈವಿಧ್ಯಮಯವಾಗಿರುವಂತೆ ಬಳಕೆಯಲ್ಲಿರುವ ಕನ್ನಡ ಭಾಷೆಯ ಸ್ವರೂಪದಲ್ಲಿಯೂ ಸಾಕಷ್ಟು ವೈವಿಧ್ಯತೆ ಇದೆ. ಬೇರೆ ಬೇರೆ ಪ್ರದೇಶಗಳಲ್ಲಿ ವಾಸಿಸುವ ಅದರಲ್ಲೂ ಜನಪದರು ಬಳಸುವ ಭಾಷೆ ಸತ್ವಪೂರ್ಣವಾಗಿದ್ದು ಅಧ್ಯಯನ ಯೋಗ್ಯವಾಗಿದೆ. ಭಾಷಿಕ ನೆಲೆಯಿಂದ ಜನಪದ ಸಂಸ್ಕೃತಿ ಕುರಿತು ಸಂಶೋಧನೆ ಕೈಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಕನ್ನಡ ಭಾಷೆ ಸದಾಕಾಲ ತನ್ನ ಸ್ವರೂಪದಲ್ಲಿ ಬದಲಾವಣೆ ಮಾಡಿಕೊಂಡು ಅಸ್ತಿತ್ವದಲ್ಲಿ ಇರುತ್ತದೆ ಎಂದರು.

ಜನಪದ ಭಾಷೆ-ಸಂಕಥನಗಳು ವಾಸ್ತವ ಮತ್ತು ಚರಿತ್ರೆಯನ್ನು ಏಕಕಾಲಕ್ಕೆ ಕಟ್ಟಿಕೊಡುತ್ತದೆ. ಜನಪದರ ಭಾಷೆಯನ್ನು ಮೊದಲು ಸಂಗ್ರಹಿಸಿ ಆ ನಂತರ ಭಾಷಾಧ್ಯಯನದ ಸೂತ್ರಗಳನ್ನು ಬಳಸಿಕೊಂಡು ಭಾಷಾ ಚರಿತ್ರೆಯನ್ನು ರೂಪಿಸಿಕೊಳ್ಳಲು ಸಾಧ್ಯ. ಭಾಷಾ ಸಂಕಲನವೊಂದು ವರ್ತಮಾನಕ್ಕೆ ಸಂಬಂಧಿಸಿದ್ದು ಮತ್ತು ಕಾಲಾತೀತಿವಾಗಿರುವುದರಿಂದಸಂಕಲನಗಳ ಮೂಲಕವೇ ನೂತನ ಸಂಶೋಧನೆಗಳನ್ನು ಕೈಗೊಳ್ಳಬಹುದಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಸಾಹಿತಿ ಕಾಕನೂರು ನಾಗರಾಜ್‌ ಮಾತನಾಡಿ. ಆಧುನಿಕ ಭರಾಟೆಯಲ್ಲಿ ಬೆಂಗಳೂರಿನಲ್ಲಿ ಕನ್ನಡವನ್ನು ಹುಡುಕುವ ದಯನೀಯ ಸ್ಥಿತಿ ಇದೆ. ಬೇರೆನಗರಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ ಎಂದು ವಿಷಾದಿಸಿದರು. ಕರ್ನಾಟಕದಲ್ಲಿ ಕನ್ನಡ ಸಾರ್ವಭೌಮ ಭಾಷೆ. ಕನ್ನಡ ನಾಡು ಕಾವೇರಿಯಿಂದ ಗೋದಾವರಿವರೆಗೆ ಹರಡಿತ್ತು ಎನ್ನುವುದನ್ನು ಕವಿವಾಣಿ, ಇಂತಹ ಕನ್ನಡ ನಾಡು ಜಗತ್ತಿನ ಪ್ರಜಾತಂತ್ರ ವ್ಯವಸ್ಥೆಗೆ ಬಹುದೊಡ್ಡ ಕೊಡುಗೆ ನೀಡಿದೆ ಎಂಬುದುಸಹ ಗಮನಾರ್ಹ. ಪ್ರಜಾಪ್ರಭುತ್ವ ವ್ಯವಸ್ಥೆ ಮೊದಲು ಸ್ಥಾಪಿತಗೊಂಡಿದ್ದೇ ಕರ್ನಾಟಕದಲ್ಲಿ. ಪ್ರಜಾಪ್ರಭುತ್ವ ವಿಚಾರದಲ್ಲಿ ನಾವು ಇಂಗ್ಲೆಂಡ್‌ ಅನ್ನು ಸ್ಮರಿಸುತ್ತೇವೆ. ಮ್ಯಾಗ್ನಾಕಾರ್ಟ್‌ ಒಪ್ಪಂದ, ಹೌಸ್‌ ಆಫ್‌ ಕಾಮರ್ಸ್‌, ಹೌಸ್‌ ಆಫ್‌ ಲಾರ್ಡ್ಸ್‌ ಹುಟ್ಟಿಕೊಂಡ ಬಗೆ ಹೀಗೆ ಹಲವು ವಿಚಾರಗಳನ್ನು ಉದಾಹರಿಸುತ್ತೇವೆ. ಆದರೆ ವಾಸ್ತವದಲ್ಲಿ ಬಸವಣ್ಣನರ ಕಾಲದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮೂರ್ತ ರೂಪ ದೊರೆಯಿತು ಎಂದು ತಿಳಿಸಿದರು.

Advertisement

ಬಸವಣ್ಣನ ಕಾಲದ ಚಿಂತಕರ ಚಾವಡಿ ಮೂಲಕ ಪ್ರಜಾತಂತ್ರ ವ್ಯವಸ್ಥೆಯ ಬೀಜ ಬಿತ್ತಲಾಯಿತು. ಯಾವುದೇ ಸಮಸ್ಯೆಗೆ ಚರ್ಚೆ, ಸಂವಾದದ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎನ್ನುವುದಕ್ಕೆ ಆಗಲೇ ಸ್ಪಷ್ಟ ರೂಪ ದೊರೆಯಿತು. ಆಗಿನ ಚಿಂತಕರ ಚಾವಡಿಯ ಮೊದಲ ಸಭಾಧ್ಯಕ್ಷ ಅಲ್ಲಮ ಪ್ರಭು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಅಲ್ಲಮರ ನೇತೃತ್ವದ ಸಭಾ ಮಂಟಪಗಳಲ್ಲಿ ಕನ್ನಡದಲ್ಲಿ ಚರ್ಚೆಗಳಾಗುತ್ತಿದ್ದವು. ಇದೇ ಭಾಗದ ಐಹೊಳೆ, ಪಟ್ಟದ ಕಲ್ಲಿನ ವಾಸ್ತುಶಿಲ್ಪಗಳು ಸಂಸತ್ತಿನ ಕಟ್ಟಡ ನಿರ್ಮಾಣಗೊಳ್ಳಲು ಪ್ರೇರಣೆಯಾಗಿವೆ. ಮೈಸೂರಿನ ಅರಸರ ಕಾಲದ ಪ್ರಜಾಪ್ರತಿನಿಧಿ  ಸಭೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಪುಷ್ಠಿ ನೀಡಿತು. ಇಂತಹ ಭವ್ಯ ನಾಡು ಕನ್ನಡ ನಾಡು ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು. ಜಿಪಂ ಸದಸ್ಯೆ ಮಂಜುಳಾ, ತಾಪಂ ಅಧ್ಯಕ್ಷೆ ಕವಿತಾ, ತಾಪಂ ಸದಸ್ಯ ಬಾಂಬೆ ಕುಮಾರ್‌, ಡಿವೈಎಸ್‌ಪಿ ಪ್ರಶಾಂತ್‌ ಮುನ್ನೋಳಿ, ಪುರಸಭೆ ಮುಖ್ಯಾಧಿಕಾರಿ ಬಸವರಾಜ್‌, ಬಿಇಒ ಮಂಜುನಾಥ್‌ ಇತರರು ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next