Advertisement

ಸಾರಿಗೆ ಸಂಸ್ಥೆ ಕೊಡುಗೆ ಅಪಾರ

04:58 PM Nov 02, 2020 | Suhan S |

ಮುದ್ದೇಬಿಹಾಳ: ರಾಜ್ಯದ ಸಾರಿಗೆ ಸಂಸ್ಥೆಯಲ್ಲಿ ಕನ್ನಡ ಭಾಷೆ ಹಾಸು ಹೊಕ್ಕಾಗಿದೆ. ಕನ್ನಡದ ಉಳಿವಿಗೆ ಈ ಸಂಸ್ಥೆ ನೌಕರರ ಕೊಡುಗೆ ಅಪಾರವಾಗಿದೆ ಎಂದು ಶಾಸಕ, ಕರ್ನಾಟಕ ಆಹಾರ ಮತ್ತು ನಾಗರಿಕಸರಬರಾಜು ನಿಗಮದ ಅಧ್ಯಕ್ಷ ಎ.ಎಸ್‌. ಪಾಟೀಲ ನಡಹಳ್ಳಿ ಹೇಳಿದರು.

Advertisement

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಘಟಕದಲ್ಲಿ ರವಿವಾರ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಸರ್ಕಾರಿ ಬಸ್‌ಗಳಲ್ಲಿ ಕನ್ನಡದಮಹಾನುಭಾವರ ನುಡಿಗಳನ್ನು ಹಾಕುವ ಮೂಲಕ ಕನ್ನಡತನ ಮೆರೆಯುತ್ತಿರುವುದು ಮಾದರಿಯಾಗಿದೆ. ಪ್ರತಿಯೊಬ್ಬರೂ ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎನ್ನುವುದನ್ನು ಮರೆಯಬಾರದು ಎಂದರು.

ಜನಸ್ನೇಹಿಯಾಗಿ, ಉತ್ತಮವಾಗಿ ಕೆಲಸ ಮಾಡುವ ಸಾರಿಗೆ ಸಂಸ್ಥೆ ಚಾಲಕರು, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿಗೆ ಹೆಚ್ಚು ಪ್ರೋತ್ಸಾಹ ದೊರಕುವಂತೆ ಸಾರಿಗೆ ಅಧಿಕಾರಿಗಳು ನೋಡಿಕೊಳ್ಳಬೇಕು. ವಿಮಾನ, ಹಡಗು, ರೈಲು, ಬಸ್‌ ಸಾರಿಗೆ ವ್ಯವಸ್ಥೆಯಲ್ಲಿ ಅತಿ ಹೆಚ್ಚು ಬಡವರು ಓಡಾಡುವ ಸೇವೆ ಸಾರಿಗೆ ವ್ಯವಸ್ಥೆ. ಆದರೆ ಸಾರಿಗೆ ಚಾಲಕರು, ನಿರ್ವಾಹಕರಿಗೆ ಸೇವಾ ಭದ್ರತೆ ಇಲ್ಲ. ಬಡವರ ಸೇವೆ ಮಾಡುವುದರಲ್ಲಿ ತಪ್ಪೇನು. ಸಾರಿಗೆ ವ್ಯವಸ್ಥೆಯಲ್ಲಿ ಅಪಘಾತ ಸಂಭವ ಹೆಚ್ಚಾಗಿದೆ. ಈ ನಾಲ್ಕೂ ವ್ಯವಸ್ಥೆಯಲ್ಲಿ ಹೆಚ್ಚು ಬುದ್ಧಿವಂತ ಚಾಲಕಸಾರಿಗೆ ಚಾಲಕ. ಇಂಥವರಿಗೆ ಸರ್ಕಾರದಿಂದ ಹೆಚ್ಚಿನ ಸೌಲಭ್ಯ ದೊರಕಬೇಕು ಎಂದರು.

ಮುದ್ದೇಬಿಹಾಳ, ತಾಳಿಕೋಟೆ ಸಾರಿಗೆ ಘಟಕಗಳ ಆದಾಯ ಹೆಚ್ಚಾಗಿರುವುದು ಹೆಮ್ಮೆಯ ಸಂಗತಿ. ಇದಕ್ಕೆ ಕಾರಣ ಚಾಲಕ, ನಿರ್ವಾಹಕರು. ಇವರಿಗಿಂತ ಪ್ರಾಮಾಣಿಕರು ಬೇರೆ ಯಾರಿದ್ದಾರೆ. ನಾನು ಸಲ್ಲಿಸುವ ಸಂಸ್ಥೆಗೆ ಲಾಭ ತಂಡುಕೊಡಬೇಕು. ನಷ್ಟ ಕಡಿಮೆ ಮಾಡಬೇಕು ಅನ್ನೋ ಮನೋಭಾವ ಚಾಲಕರು, ನಿರ್ವಾಹಕರಲ್ಲಿ ಬಂದಾಗ ಇಂಥ ಸಾಧನೆಗಳು ಹೆಚ್ಚಾಗುತ್ತವೆ ಎಂದರು.

ವಿಭಾಗೀಯ ಸಂಚಾರಾಧಿಕಾರಿ ಡಿ.ಎ. ಬಿರಾದಾರ ಮಾತನಾಡಿ, ಹೆಚ್ಚು ಆದಾಯ ತಂದವರಿಗೆ ಶಾಸಕರು ಸನ್ಮಾನಿಸುತ್ತಿರುವುದು ರಾಜ್ಯದ ಸಾರಿಗೆ ಇತಿಹಾಸದಲ್ಲೇ ಇದೇ ಮೊದಲನೇಯದ್ದಾಗಿದೆ. ಅಕ್ಟೋಬರ್‌ ತಿಂಗಳಲ್ಲಿ 998460 ಕಿ.ಮೀ.ಸಂಚಾರ ನಡೆದಿದ್ದು 3.49 ಕೋಟಿ ಆದಾಯ ಬಂದಿದೆ. ಕಿ.ಮೀ. ಆಧಾರಿತ ಗಳಿಕೆ (ಇಪಿಕೆಎಂ) 23.88 ಇದ್ದರೆ ಲೀಟರ್‌ ಆಧಾರಿತ ಸಂಚಾರದ (ಕೆಎಂಪಿಎಲ್‌) ಸಾಧನೆ 5.65 ಕಿ.ಮೀ. ಇದೆ. ಕಳೆದ ವರ್ಷದ ಅಕ್ಟೋಬರ್‌ ತಿಂಗಳಿಗೆ ಹೋಲಿಸಿದರೆ ಇದು ಹೆಚ್ಚು. ಕೋವಿಡ್ ಸಂದರ್ಭದಲ್ಲೂ ನಮ್ಮ ಚಾಲಕರು, ನಿರ್ವಾಹಕರು ಉತ್ತಮ ಸೇವೆ ಸಲ್ಲಿಸಿದ್ದಕ್ಕೆ ಇದು ಸಾಕ್ಷಿ ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಮಾತನಾಡಿ, ಶಾಸಕ ನಡಹಳ್ಳಿ ಅವರು ಈ ಭಾಗದ ಅಭಿವೃದ್ಧಿಯ ಚಿತ್ರಣ ಬದಲಿಸಿದ್ದಾರೆ. ಮುಂಬರುವ ದಿನಗಳಲ್ಲಿ ಶಾಸಕರ ಅಪೇಕ್ಷೆಯಂತೆ ನೂತನ ಸಾರಿಗೆ ಘಟಕ ನಿರ್ಮಾಣಗೊಳ್ಳಲಿದೆ. ಸಾಧಕರನ್ನು ಸನ್ಮಾನಿಸುವ ವಿನೂತನ ಸಂಪ್ರದಾಯಕ್ಕೆ ಶಾಸಕರು ಚಾಲನೆ ನೀಡಿದ್ದು ಇದನ್ನು ಎಲ್ಲ ಸಿಬ್ಬಂದಿ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಹಿರಿಯ ಕಾರ್ಮಿಕ ಮುಖಂಡ ಅಬ್ದುಲ್‌ ರಹೆಮಾನ್‌ ಬಿದರಕುಂದಿ, ವಿಭಾಗೀಯ ತಾಂತ್ರಿಕ ಶಿಲ್ಪಿ ಎ.ಎಚ್‌.ಮದಭಾವಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಡಿ.ಬಿ. ವಡವಡಗಿ ಮಾತನಾಡಿದರು.

ಕಾರ್ಮಿಕ ಕಲ್ಯಾಣಾಧಿಕಾರಿ ಜ್ಞಾನಪ್ಪ ಹುಗ್ಗೆಣ್ಣವರ್‌, ಘಟಕ ವ್ಯವಸ್ಥಾಪಕ ರಾಹುಲ್‌ ಹೊನಸೂರೆ ವೇದಿಕೆಯಲ್ಲಿದ್ದರು. ಇಂಧನ ಉಳಿತಾಯ ಮತ್ತು ಆದಾಯ ಹೆಚ್ಚಿಸುವಲ್ಲಿ ಸಾಧನೆ ತೋರಿದ ಚಾಲಕರಾದ ಎಸ್‌.ಸಿ.ಮುರಾಳ, ಆರ್‌.ಎಸ್‌.ಅಂದೇಲಿ, ಬಿ.ಎಸ್‌.ಕೋಲಕಾರ, ಎಚ್‌.ಎ.ಗಂಗನಗೌಡರ, ಎಂ.ಆರ್‌.ಕೆಳಗಡೆ, ಇಪಿಕೆಎಂನಲ್ಲಿ ಹೆಚ್ಚು ಆದಾಯ ತಂದುಕೊಟ್ಟ ನಿರ್ವಾಹಕರಾದ ಎನ್‌.ಎಚ್‌.ಸುಲ್ತಾನಪುರ, ಎನ್‌.ಬಿ.ಲಮಾಣಿ, ರೇಖಾ ಗಂಗನ್ನವರ್‌, ಮುತ್ತು ತಿಡಗುಂದಿ, ಆನಂದಕುಮಾರ ಇವರನ್ನು ಶಾಸಕರು ಪ್ರಶಸ್ತಿ, ಸ್ಮರಣಿಕೆ ನೀಡಿ ಪುರಸ್ಕರಿಸಿದರು. ಘಟಕದಸಿಬ್ಬಂದಿ, ಚಾಲಕರು, ನಿರ್ವಾಹಕರು, ಸಾಧಕರ ಕುಟುಂಬದ ಸದಸ್ಯರು ಇದ್ದರು. ಶಾಮೀದಲಿ ಮುಲ್ಲಾ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next