ಮಡಿಕೇರಿ: ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದ್ದು, ಕನ್ನಡದ ದೀಪ ಮನೆ-ಮನಗಳಲ್ಲಿ ಬೆಳಗುವಂತಾ ಗಬೇಕು ಎಂದು ನಾಪೋಕ್ಲು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಅವನಿಜ ಸೋಮಯ್ಯ ತಿಳಿಸಿದರು. ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬುಧವಾರ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ವಿವಿಧ ಸ್ಪರ್ಧೆಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಭಾಷೆ, ಸಾಹಿತ್ಯಕ್ಕೆ ತನ್ನದೇ ಆದ ಇತಿಹಾಸವಿದೆ. ಲೇಖನವೆಂಬ ಆಯುಧದಿಂದ ಎಲ್ಲರ ಮನ ಗೆಲ್ಲುವ ಸಾಹಿತ್ಯವನ್ನು ರಚಿಸಿ ಕನ್ನಡ ಸಾಹಿತ್ಯ ಲೋಕವನ್ನು ಉತ್ತುಂಗಕ್ಕೆ ತಲುಪಿಸುವಂತೆ ಕರೆ ನೀಡಿದರು.
ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷರಾದ ಎಂ.ಪಿ.ಕೇಶವ ಕಾಮತ್ ಅವರು ಮಾತನಾಡಿ ನಿರಂತರ ಶ್ರದ್ಧೆ, ಅಭ್ಯಾಸದಿಂದ ವ್ಯಕ್ತಿಯು ಪರಿಪೂರ್ಣವಾದ ಶಕ್ತಿಯಾಗಿ ಹೊರಹೊಮ್ಮಲು ಸಹಕಾರಿಯಾಗಿದ್ದು, ಬಾಲ ಪ್ರತಿಭೆಗಳಲ್ಲಿ ಇರುವಂತಹ ಸಾಹಿತ್ಯ, ಕಲೆಯ ಪ್ರತಿಭೆಯನ್ನು ಹೊರತರುವ ಕೆಲಸವನ್ನು ಈ ಕಾರ್ಯಕ್ರಮದ ಮುಖೇನ ಮಾಡಲಾಗುತ್ತಿದ್ದು, ಆ ನಿಟ್ಟಿನಲ್ಲಿ ಕನ್ನಡ ಭಾಷೆ, ಕನ್ನಡ ಸಾಹಿತ್ಯವನ್ನು ಉಳಿಸಿ ಬೆಳೆಸಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ ಎಂದು ಅವರು ತಿಳಿಸಿದರು.
ನಗರಸಭಾ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಮಾತನಾಡಿ ಕನ್ನಡ ಸಾಹಿತ್ಯ, ಭಾಷೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು. ಕೊಡಗು ಪತ್ರಿಕಾ ಭವನದ ಮ್ಯಾನೇಜಿಂಗ್ ಟ್ರಸ್ಟಿಗಳಾದ ಬಿ. ಎನ್.ಮನುಶೆಣೈ ಅವರು ಮಾತ ನಾಡಿ ಕನ್ನಡವನ್ನು ಪ್ರತಿ ಹಂತದಲ್ಲಿ ಬಳಸುವುದರ ಮೂಲಕ ಕನ್ನಡ ಭಾಷೆ ಬೆಳೆಸಬೇಕಿದ್ದು ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕನ್ನಡ ಭಾಷೆಯ ಕೀರ್ತಿಯನ್ನು ಉತ್ತುಂಗಕ್ಕೆ ಕೊಂಡೊಯ್ಯಬೇಕು ಎಂದು ತಿಳಿಸಿದರು.
ಜಿಲ್ಲಾ ಕೇಂದ್ರದಲ್ಲಿ ಕಲಾವಿದರಿಗೆ ಸುಸಜ್ಜಿತವಾದ ರಂಗಮಂದಿರ ನಿರ್ಮಾಣ ಮಾಡುವಂತೆ ನಗರಸಭಾ ಅಧ್ಯಕ್ಷರಲ್ಲಿ ಮನುಶೆಣೈ ಅವರು ಮನವಿ ಮಾಡಿದರು. ಇತ್ತೀಚೆಗೆ ನಿಧನರಾದ ಚಿತ್ರನಟ, ಮಾಜಿ ಸಚಿವರಾದ ಅಂಬರೀಶ್, ಕೇಂದ್ರ ಸಚಿವರಾದ ಅನಂತ್ ಕುಮಾರ್, ಮಾಜಿ ಕೇಂದ್ರ ಸಚಿವರಾದ ಜಾಫರ್ ಶರೀಫ್, ಪೊನ್ನಂಪೇಟೆ ರಾಮಕೃಷ್ಣ ಆಶ್ರಮದ ಸ್ವಾಮಿ ಜಗದಾತ್ಮಾನಂದ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಕಾಶಿನಾಥ್, ವಿವಿಧ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಇತರರು ಇದ್ದರು. ಲಿಟ್ಲ ಫ್ಲವರ್ ಶಾಲಾ ಮಕ್ಕಳಿಂದ ಸ್ವಾಗತ ನೃತ್ಯ ನೀಡಿದರು. ಮುನೀರ್ ಅಹ್ಮದ್ ಅವರು ನಿರೂಪಿಸಿದರು. ಲಿಟ್ಲ ಫ್ಲವರ್ ಶಾಲೆಯ ಸುನೀತಾ ಪ್ರೀತ್ ವಂದಿಸಿದರು.
‘ಕನ್ನಡ ಸಾಹಿತ್ಯ ಹೆಚ್ಚು ಅಭ್ಯಾಸ ಮಾಡಿ’
ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಮಾಜಿ ಅಧ್ಯಕ್ಷ ಬಿ.ಎ.ಷಂಶುದ್ದೀನ್ ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಅನೇಕ ಕನ್ನಡಪರ ಸಂಘಟನೆಗಳು ವಿವಿಧ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಿದ್ದು, ಕನ್ನಡ ಭಾಷೆಯ ರಕ್ಷಣೆ ಮಾಡುತ್ತಿರುವುದು ಸಂತಸದ ವಿಚಾರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಓದಿನ ಮೂಲಕ ಕಲಿತ ಸಾಹಿತ್ಯ ಕೊನೆಯ ವರೆಗೂ ಉಳಿಯುತ್ತದೆ ವಿದ್ಯಾರ್ಥಿಗಳು ಇದನ್ನು ಮನಗಂಡು ಕನ್ನಡ ಸಾಹಿತ್ಯವನ್ನು ಹೆಚ್ಚು ಅಭ್ಯಾಸ ಮಾಡಿ ಕನ್ನಡ ಸಾಹಿತ್ಯ ಲೋಕವನ್ನು ಮತ್ತಷ್ಟು ವಿಶಾಲಗೊಳಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.