Advertisement

Kannada Rajyotsava: ಪಾಲಿಕೆ ಆಡಳಿತದಲ್ಲಿ  ಸಂಪೂರ್ಣ ಕನ್ನಡ: ತುಷಾರ್‌

12:50 PM Nov 02, 2024 | Team Udayavani |

ಬೆಂಗಳೂರು: ಕನ್ನಡ ಸಂಪೂರ್ಣ ಬಳಕೆ ಮಾಡಬೇಕು. ಭಾಷೆಯನ್ನು ಉಳಿಸಿ ಬೆಳೆಸಬೇಕು. ಈ ಹಿನ್ನೆಲೆಯಲ್ಲಿ ಬಿಬಿಎಂಪಿಯ ಆಡಳಿತ, ವ್ಯವಹಾರ ಸಂಪೂರ್ಣ ಕನ್ನಡದಲ್ಲೇ ನಡೆಯುತ್ತದೆ ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದರು.

Advertisement

ಪಾಲಿಕೆ ಆವರಣದಲ್ಲಿ ಶುಕ್ರವಾರ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಈಗಾಗಲೇ ನಾಮಫ‌ಲಕಗಳಲ್ಲಿ ಕನ್ನಡ ಕಡ್ಡಾಯ ಎಂಬ ಸರ್ಕಾರದ ಆದೇಶವನ್ನು ಸಂಪೂರ್ಣ ಜಾರಿಗೆ ತರಲಾಗಿದೆ. ಕನ್ನಡವನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ನಡೆದಿದೆ ಎಂದು ತಿಳಿಸಿದರು. ಕರ್ನಾಟಕ ಸುವರ್ಣ ಸಂಭ್ರಮ-50ರ ಹಿನ್ನೆಲೆಯಲ್ಲಿ ಈ ವರ್ಷ ವಿಶೇಷವಾಗಿ ಕನ್ನಡ ರಾಜ್ಯೋತ್ಸವ ಅಚರಿಸಲಾಗುತ್ತಿದೆ. ಉಪ ಮುಖ್ಯಮಂತ್ರಿ ಸಾಮಾಜಿಕ ಜಾಲತಾಣದ ಮೂಲಕ ಐಟಿ- ಬಿಟಿ ಮತ್ತು ವಾಣಿಜ್ಯ ಮಳಿಗೆ ಕನ್ನಡ ಬಾವುಟ ಪ್ರದರ್ಶಿಬೇಕು ಎಂದು ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ರಾಜಧಾನಿಯಾದ್ಯಂತ ಕನ್ನಡಮ್ಮನ ಹಬ್ಬನ್ನು ಅದ್ಧೂರಿಯಾಗಿ ಮಾಡಲಾಗಿದೆ ಎಂದು ಹೇಳಿದರು.

ಐಟಿ ಸಿಟಿಯಲ್ಲಿ ಕನ್ನಡ ಉಳಿಸೋಣ: ಬಿಬಿಎಂಪಿ ಆಡಳಿತಾಧಿಕಾರಿ ಎಸ್‌.ಆರ್‌.ಉಮಾಶಂಕರ್‌ ಮಾತನಾಡಿ, ಬೆಂಗಳೂರು ವಿಶ್ವಮಟ್ಟದಲ್ಲಿ ಸಿಲಿಕಾನ್‌ ಸಿಟಿಯಾಗಿ ಬೆಳೆದು ನಿಂತಿದೆ. ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಉತ್ತಮ ಯೋಜನೆ ರೂಪಿಸಿದೆ. ಪಾಲಿಕೆ ಕೂಡ ಕನ್ನಡ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದರು. ನಾಮ ಫಲಕಗಳಲ್ಲಿ ಕನ್ನಡ ಭಾಷೆ ಬಳಕೆ ಕಡ್ಡಾಯಗೊಳಿಸಲಾಗಿದೆ. ತನ್ನದೇ ಆದ ಐತಿಹಾಸಿಕ ಹಿನ್ನೆಲೆಯುಳ್ಳ ಕನ್ನಡ ಭಾಷೆಯನ್ನು ಎತ್ತಿಹಿಡಿಯುವ ಕೆಲಸವನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಉತ್ತಮವಾಗಿ ಮಾಡುತ್ತಿದೆ ಎಂದು ಎಂದು ತಿಳಿಸಿದರು.

ಬೋರ್ಡ್‌ಗಳಲ್ಲಿ ಕನ್ನಡ ಇಲ್ಲದಿದ್ರೆ ನೋಟಿಸ್‌ ನೀಡಿ: ಮಾಜಿ ಮೇಯರ್‌ ಜೆ.ಹುಚ್ಚಪ್ಪ ಮಾತನಾಡಿ, ಕನ್ನಡ ಭಾಷೆ ಉಳಿಸಿ, ಬೆಳೆಸಲು ಅಧಿಕಾರಿಗಳ ಪರಿಶ್ರಮ ಮುಖ್ಯ. ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಕೆ ಮಾಡಿ ಎಂದು ನೋಟಿಸ್‌ ಕೊಡಿ, ನೋಟಿಸ್‌ ಮಣಿಯದೇ ಹೋದರೆ ವಾಣಿಜ್ಯ ಮಳಿಗೆಗೆ ಬೀಗ ಹಾಕಬೇಕು ಎಂದು ಒತ್ತಾಯಿಸಿದರು.

ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘ ಅಧ್ಯಕ್ಷ ಎ.ಅಮೃತ್‌ ರಾಜ್‌ ಮಾತನಾಡಿ, ಕನ್ನಡ ವಿಶ್ವ ಭಾಷೆಯಾಗಬೇಕು ಎಂದು ಸಂಘದಿಂದ ಉತ್ತರಖಂಡ್‌ ನಲ್ಲಿ ಅದ್ಧೂರಿ ರಾಜ್ಯೋತ್ಸವ ಕಾರ್ಯಕ್ರಮವನ್ನು ನ.16ರಂದು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

Advertisement

ಈ ವೇಳೆ ಪಾಲಿಕೆ ವಿಶೇಷ ಆಯುಕ್ತರಾದ ಸುರಳ್ಕರ್‌ ವಿಕಾಸ್‌ ಕಿಶೋರ್‌, ಡಾ.ಕೆ.ಹರೀಶ್‌ಕುಮಾರ್‌, ಅವಿನಾಶ್‌ ಮೆನನ್‌ ರಾಜೇಂದ್ರನ್‌, ಉಪ ಆಯುಕ್ತರಾದ ಮಂಜುನಾಥ ಸ್ವಾಮಿ, ಪ್ರಧಾನ ಅಭಿಯಂತರರಾದ ಪ್ರಹ್ಲಾದ್‌, ಜಂಟಿ ಆಯುಕ್ತರಾದ ಲಕ್ಷ್ಮೀದೇವಿ, ಬಿಬಿಎಂಪಿ ನೌಕರರ ಕನ್ನಡ ಸಂಘದ ಅಧ್ಯಕ್ಷರಾದ ಸಾಯಿಶಂಕರ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next