Advertisement

ಎಲೆಮರೆಕಾಯಿಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಸ್ವಾಗತಾರ್ಹ ನಿರ್ಧಾರ

12:30 AM Oct 31, 2022 | Team Udayavani |

ಕರ್ನಾಟಕವು ನ.1ರಂದು ರಾಜ್ಯೋತ್ಸವ ಆಚರಣೆ ಮಾಡಿಕೊಳ್ಳಲಿದ್ದು, ಇದರ ಬೆನ್ನಲ್ಲೇ ರವಿವಾರ ರಾಜ್ಯೋತ್ಸವ ಪ್ರಶಸ್ತಿಯ ಪಟ್ಟಿ ಬಿಡುಗಡೆ ಮಾಡಿದೆ. ಪದ್ಮ ಪ್ರಶಸ್ತಿಯಂತೆಯೇ ಈ ಬಾರಿ ಎಲೆಮರೆಯ ಕಾಯಿಗಳನ್ನು ಗುರುತಿಸಬೇಕು ಎಂದು ರಾಜ್ಯ ಸರಕಾರ ಜನರ ಕಡೆಯಿಂದಲೇ ಅರ್ಜಿ ಆಹ್ವಾನಿಸಿತ್ತು. ಇದಕ್ಕೆ ಸಾವಿರಾರು ಅರ್ಜಿಗಳು ಬಂದಿದ್ದು, ಕಡೆಗೆ 67 ಮಂದಿಯನ್ನು ಪುರಸ್ಕಾರಕ್ಕೆ ಅಂತಿಮಗೊಳಿಸಿ ಬಿಡುಗಡೆ ಮಾಡಿದೆ.

Advertisement

ಈ ಬಾರಿಯ ಪ್ರಶಸ್ತಿಯ ಪಟ್ಟಿಯನ್ನು ಅತ್ಯಂತ ಅಚ್ಚುಕಟ್ಟಾಗಿ, ಯಾವುದೇ ರಾಜಕೀಯ ಬೆರೆಸದೇ ರೂಪಿಸಲಾಗಿದೆ ಎಂಬುದು ಗೋಚರಿಸುತ್ತದೆ. ಅಲ್ಲದೆ, ಕೆಲವೇ ಕೆಲವು ಮಂದಿ ಬಿಟ್ಟರೆ, ಬಹುತೇಕರು ಇದುವರೆಗೆ ಅಷ್ಟಾಗಿ ಎಲ್ಲಿಯೂ ಪ್ರಸಿದ್ಧಿಗೆ ಬಾರದಂಥವರೇ ಆಗಿದ್ದಾರೆ. ಅಷ್ಟೇ ಅಲ್ಲ, ನಿಜವಾದ ಸಾಧಕರನ್ನು ಹುಡುಕಿ ಶೋಧಿಸಲಾಗಿದೆ.

ಸಂಕೀರ್ಣ ಕ್ಷೇತ್ರದಲ್ಲಿ ಮೂವರು, ರಕ್ಷಣ ಕ್ಷೇತ್ರದಲ್ಲಿ ಒಬ್ಬರು, ಪತ್ರಿಕೋದ್ಯಮದಲ್ಲಿ ಇಬ್ಬರು, ವಿಜ್ಞಾನ ತಂತ್ರಜ್ಞಾನದಲ್ಲಿ ಇಬ್ಬರು, ಕೃಷಿಯಲ್ಲಿ ಇಬ್ಬರು, ಪರಿಸರ ಕ್ಷೇತ್ರದಲ್ಲಿ ಒಬ್ಬರು, ಒಬ್ಬ ಪೌರಕಾರ್ಮಿಕರು, ಆಡಳಿತ ವಿಭಾಗದಲ್ಲಿ ಇಬ್ಬರು, ಹೊರನಾಡು ವಿಭಾಗದಲ್ಲಿ ಮೂವರು, ಹೊರದೇಶದ ಒಬ್ಬರಿಗೆ, ವೈದ್ಯಕೀಯ ಕ್ಷೇತ್ರದಲ್ಲಿ ಇಬ್ಬರು, ಸಮಾಜಸೇವೆಯಲ್ಲಿ ಐವರು, ವಾಣಿಜ್ಯೋದ್ಯಮದಲ್ಲಿ ಮೂವರು, ರಂಗಭೂಮಿಯಲ್ಲಿ ಮೂವರು, ರಂಗಭೂಮಿಯಲ್ಲಿ ಐವರು, ಸಂಗೀತ ಕ್ಷೇತ್ರದಲ್ಲಿ ನಾಲ್ವರು, ಜಾನಪದದಲ್ಲಿ ಆರು ಮಂದಿ, ಶಿಲ್ಪಕಲೆಯಲ್ಲಿ ಇಬ್ಬರು, ಒಬ್ಬರು ಚಿತ್ರಕಲೆಯಲ್ಲಿ, ಚಲನಚಿತ್ರದಲ್ಲಿ ಇಬ್ಬರು, ಕಿರುತೆರೆಯಲ್ಲಿ ಒಬ್ಬರು, ಯಕ್ಷಗಾನದಲ್ಲಿ ಮೂವರು, ಬಯಲಾಟದಲ್ಲಿ ಮೂವರು, ಸಾಹಿತ್ಯ ಕ್ಷೇತ್ರದಲ್ಲಿ ಐವರು, ಶಿಕ್ಷಣದಲ್ಲಿ ಇಬ್ಬರು, ಕ್ರೀಡೆಯಲ್ಲಿ ಇಬ್ಬರು, ನ್ಯಾಯಾಂಗದಲ್ಲಿ ಇಬ್ಬರು ಮತ್ತು ನೃತ್ಯ ವಿಭಾಗದಲ್ಲಿ ಒಬ್ಬರಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ಬೆಂಗಳೂರಿನ ಒಟ್ಟು 12 ಮಂದಿ ಪ್ರಶಸ್ತಿ ಪಡೆದಿದ್ದಾರೆ. ಉಳಿದಂತೆ ಬಹುತೇಕ ಜಿಲ್ಲೆಗಳ ಸಾಧಕರಿಗೆ ಪ್ರಶಸ್ತಿ ಸಿಕ್ಕಿದೆ. ವಿಜ್ಞಾನ ತಂತ್ರಜ್ಞಾನದಲ್ಲಿ ಇಸ್ರೋದ ಮಾಜಿ ಅಧ್ಯಕ್ಷ ಕೆ.ಶಿವನ್‌ ಅವರಿಗೆ ಪ್ರಶಸ್ತಿ ನೀಡಿರುವುದು ಉತ್ತಮ ನಿರ್ಧಾರ. ಈ ಕ್ಷೇತ್ರದಲ್ಲಿನ ಅವರ ಸಾಧನೆಯನ್ನು ಯಾರೂ ತಳ್ಳಿಹಾಕುವಂತಿಲ್ಲ. ಪ್ರಶಸ್ತಿ ಘೋಷಣೆಯಾದ ಬಳಿಕ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್‌ಕುಮಾರ್‌ ಅವರು, ಪುರಸ್ಕೃತರ ಬಗ್ಗೆ ಮಾತನಾಡಿದ್ದು, ಅರ್ಹರನ್ನು ಹುಡುಕಿ ಪ್ರಶಸ್ತಿ ನೀಡಲಾಗಿದೆ ಎಂದಿದ್ದಾರೆ. ವಿಶೇಷವೆಂದರೆ, ಪ್ರಶಸ್ತಿ ಘೋಷಣೆ ಮಾಡುವ ಮುನ್ನ, ಕೆಲವು ಪುರಸ್ಕೃತರ ಬಳಿ ಭಾವಚಿತ್ರ ಕೇಳಿದ್ದು, ಇದುವರೆಗೆ ಒಂದು ಫೋಟೋವನ್ನೂ ತೆಗೆಸಿಲ್ಲ ಎಂದೂ ಕೆಲವರು ಹೇಳಿದ್ದಾರೆ. ಅಂದರೆ, ಇಂಥ ಮುಗ್ಧರನ್ನು ಶೋಧಿಸಲಾಗಿದೆ ಎಂದಿದ್ದಾರೆ.

ಯಾವುದೇ ಸಂದರ್ಭದಲ್ಲಿಯೇ ಆಗಲಿ, ಅರ್ಹರಿಗೆ ಪ್ರಶಸ್ತಿ ಸಿಕ್ಕಾಗಲೇ ಆ ಪ್ರಶಸ್ತಿಗಳ ಮೌಲ್ಯ ಹೆಚ್ಚಾಗುತ್ತದೆ. ಯಾವುದೇ ಪ್ರಭಾವಕ್ಕೋ ಅಥವಾ ಇನ್ನಾವುದೋ ಆಮಿಷಗಳಿಗೆ ಬಿದ್ದು ಪ್ರಶಸ್ತಿ ನೀಡಿದರೆ ಅಥವಾ ಪ್ರಶಸ್ತಿ ಪಡೆದರೆ ಅವುಗಳ ಮರ್ಯಾದೆ ಮುಕ್ಕಾಗುವ ಸಾಧ್ಯತೆಯೇ ಹೆಚ್ಚು. ಇತ್ತೀಚಿನ ದಿನಗಳಲ್ಲಿ ನಾವು ಪದ್ಮ ಪ್ರಶಸ್ತಿ ವಿಚಾರದಲ್ಲಿ ಈ ಬೆಳವಣಿಗೆಯನ್ನು ಗಮನಿಸಬಹುದು. ಅಲ್ಲಿ ನಿಜವಾಗಿಯೂ ಅರ್ಹರನ್ನೇ ಆರಿಸಿ, ಎಲೆಮರೆ ಕಾಯಿಯಂಥವರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಅದೇ ರೀತಿಯ ಬೆಳವಣಿಗೆ ಇಲ್ಲಿಯೂ ಕಂಡು ಬಂದಿದ್ದು, ಪ್ರಶಸ್ತಿಯ ಮೌಲ್ಯ ಹೆಚ್ಚಿದಂತೆ ಆಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next