Advertisement
ಹೀಗೆ ಒಮ್ಮೆ ಯೋಚಿಸಿ ‘ಮರಾಠಿ’ಯನ್ನು ಮರಾತಿ ಎಂದು ‘ತೆಲುಗು’ವನ್ನು ಟೆಳುಗು ಎಂದರೆ ಎಷ್ಟು ಕೆಟ್ಟದಾಗಿರುತ್ತದೋ ‘ಕನ್ನಡವನ್ನು’ ಕನಡಾ ಎಂದರೂನು ಅಷ್ಟೇ ಕೆಟ್ಟದಾಗಿರುತ್ತದೆ.ಕರುನಾಡೆ ಜೀವ ಕನ್ನಡವೇ ನಮ್ಮ ಭಾವ ಎನ್ನುತಾ ಬದುಕುವವರು ಇದ್ದಾರೆ.ಅಮರರಾದ ಅದೆಷ್ಟೋ ಮಹಾನುಭಾವರು ಕನ್ನಡ ಭಾಷೆಯಿಂದ ಮಾತ್ರವೇ ಇನ್ನೂ ಜೀವಂತವಾಗಿದ್ದಾರೆ.
Related Articles
Advertisement
ಕನ್ನಡ ನಮ್ಮ ತಾಯಿ ಭಾಷೆ ಅದರಲ್ಲಿ ಏನಿಲ್ಲ? ಕಲ್ಪನೆಯ ಲೋಕವಿದೆ,ಅನುಭವದ ಅಮ್ರತವಿದೆ.ಭಾವನೆಗಳಿಗೆ ಔದಾರ್ಯವಿದೆ,ಬಿಂಕವಿದೆ ಬಿನ್ನಾಣವಿದೆ.ಸೊಗಸಿದೆ ಕವಿಯ ಮನಸಿದೆ,ಸಮಾಜವಿದೆ ವಿಜ್ಞಾನವಿದೆ,ಅಗಿದಷ್ಟು ಆಳವಿದೆ,ಹೀರಿದಷ್ಟು ಹಿತವಿದೆ ಏರಿದಷ್ಟು ಎತ್ತರವಿದೆ.ಜೀವಮಾನವಿಡೀ ಕುಳಿತು ಓದಿದರೂ ಈ ಜನ್ಮ ಸಾಲದಷ್ಟು ಸಾಹಿತ್ಯವಿದೆ.ಸಂಗಿತದ ಪ್ರಕಾರವೇ ಇದೆ.ಹಾಸ್ಯವಿದೆ ಲಾಸ್ಯವಿದೆ ಅನನ್ಯವಾದ ವಿನೋದವಿದೆ. ಲಕ್ಷವೋ? ಕೊಟಿಯೊ ಶಬ್ದಗಳಿಗೆ ಮಿತಿಯೆಲ್ಲಿದೆ? ಬಲ್ಲವರಾರು?
ಶತಮಾನಗಳ ಇತಿಹಾಸವಿದೆ ಭವ್ಯ ಪರಂಪರೆ ಇದೆ ಇಂತಹ ನಮ್ಮ ಕನ್ನಡ ಭಾಷೆಯನ್ನು ಸರಿಯಾಗಿ ಸ್ಪಷ್ಟವಾಗಿ ಅಭಿಮಾನದಿಂದ ಮಾತನಾಡಲು ನಮಗೇತರ ಹಿಂಜರಿಕೆ? ಕೀಳು ಭಾವನೆ? ಯಾವುದೋ ಒಂದು ಸಾವಿರ ಜನರಿರುವ ,ಲಿಪಿಯೂ ಸಹ ಇಲ್ಲದಿರುವವರು ಸ್ವಾಭಿಮಾನದಿಂದ ತಮ್ಮ ಭಾಷೆಯನ್ನು ಮಾತನಾಡುವಾಗ ಅವರಿಗಿಲ್ಲದ, ಇರದ ಆತಂಕ,ಮುಜುಗರ ಏಳು ಕೋಟಿ ಕನ್ನಡಿಗರಿರುವ ನಮಗೇಕೆ? ಅಲ್ಲವೇ..
ಭಾಷೆ ಕೇವಲ ಮಾತನಾಡುವ ಒಂದು ಮಾಧ್ಯಮವೇ ?ಭಾಷಾ ಮಿತಿ ಸಂವಹನಕ್ಕೆ ಮಾತ್ರ ಸೀಮಿತವೇ ? ಖಂಡಿತ ಇಲ್ಲ.ಭಾಷೆ ಕೇವಲ ಸಂವಹನ ಮಾಧ್ಯಮವಲ್ಲ.ಬರೀ ಗುಣುಗುವ ಧ್ವನಿಯಲ್ಲ.ಭಾಷೆಯಲ್ಲಿ ಅಸಂಖ್ಯಾತ ಭಾವನೆಗಳಿವೆ.ಸಣ್ಣಗೆ ಮಳೆಬಂದು ಹೋದ ಮೇಲೆ ಮೂಡುವ ಸ್ವಚ್ಛ ಮಣ್ಣಿನ ವಾಸನೆಯ ಪರಿಮಳವಿದೆ.ಭಾಷೆಯಲ್ಲಿ ಒಲವಿದೆ ಗೆಲುವಿದೆ ನಾವಿದ್ದೇವೆ ಎಲ್ಲಕ್ಕಿಂತ ಮಿಗಿಲಾಗಿ ನಮ್ಮೊಳಗೊಂದು ಭಾಷೆಯಿದೆ.ನಮ್ಮೆಲ್ಲರ ಅಸ್ತಿತ್ವ ಈ ಭಾಷೆಯಲ್ಲಿದೆ.
ಪಕ್ಕದ ರಾಜ್ಯಕ್ಕೊ ರಾಷ್ಟ್ರಕ್ಕೊ ಹೋದಾಗ ಯಾರಾದರೂ’ ನೀವು ಎಲ್ಲಿಂದ ಬಂದಿದ್ದೀರೆಂದು’ ಕೇಳಿದರೆ ಖಂಡಿತ ವಾಗಿಯೂ ನಮ್ಮ ಉತ್ತರ: ಕರ್ನಾಟಕ ಎಂದೇ ಇರುತ್ತದೆ. ಇಲ್ಲವೇ ನಾವು ಬಿಹಾರಿಗಳೊ ಫ್ರೆಂಚರೊ ಎಂದು ಹೇಳಬಲ್ಲೇವೆ? ಅಲ್ಲಿ ನಮ್ಮತನ ಉತ್ತರಿಸುತ್ತದೆ.ಅದರ ಅಸ್ತಿತ್ವ ನಮ್ಮ ನಾಡು ಹಾಗೂ ಭಾಷೆ.ಅಂತಹ ಭಾಷೆಯನ್ನು ನಾವಿಂದು ಮಾಲಿನ್ಯ ಮಾಡುತ್ತಿದ್ದೇವೆ.ಇದನ್ನು ಭಾಷಾಮಾಲಿನ್ಯ ಎಂತಲೂ ಹೆಸರಿಸಬಹುದು.
ಇದನ್ನೂ ಓದಿ;- ಸೋಲು-ಗೆಲವು ಸಮನಾಗಿ ಸ್ವೀಕರಿಸಲು ಸಲಹೆ
ಏನೇ ಮಾತನಾಡಲು ಹೊರಟರು ಕೊನೆಗೆ ನಾವು ಇಂಗ್ಲಿಷ್ ನ್ನು ಬಳಸಿಯೇ ಇರುತ್ತೇವೆ.ಅತ್ತ ಸರಿಯಾಗಿ ಇಂಗ್ಲಿಷ್ ಕೂಡ ಬರದ ಮಂದಿ ಕನ್ನಡ-ಇಂಗ್ಲಿಷ್ ಬೆರೆಸಿ ಎರಡೂ ಭಾಷೆಗಳ ಕತ್ತು ಹಿಸುಕುವ ಪರಿ ಆ ಪರಮಾತ್ಮನಿಗೆ ಪ್ರೀತಿ. ಇಂಗ್ಲಿಷ್ ಅದ್ಹೇಗೆ ನಮ್ಮ ಹಳ್ಳಿ-ಹಳ್ಳಿಗೂ ಅನಕ್ಷರಸ್ಥರಿಗೂ ಪರಿಚಯವಾಯ್ತೊ ? ಅಚ್ಚರಿಯೇ ಸರಿ.ಕೆಲವು ಇಂಗ್ಲಿಷ್ ಶಬ್ದಗಳಂತೂ ನಮ್ಮವೇ ಆಗಿಬಿಟ್ಟಿವೆ.
ನಮ್ಮೂರಿನಲ್ಲಿ ಓದಲೂ ಬರೆಯಲೂ ಬಾರದ ಮಹಿಳೆಯೊಬ್ಬರು ‘ ತಮ್ಮ ನನಗೆ “ಅರ್ಜೆಂಟಾಗಿ” ನೂರು ರೂಪಾಯಿಯ ಚಿಲ್ಲರೆ ಬೇಕಾಗಿದೆ’ ಎಂದು ಕೇಳಿದಾಗ ಅವರ urgent ಗೆ ನಾನು ಬೆರಗಾಗಿದ್ದೆ.ಮತ್ತೊಮ್ಮೆ ವಯಸ್ಸಾದ ರೈತರೊಬ್ಬರು time ಎಷ್ಟು ಎಂದಾಗ ಕೂಡ ಇದೆ ಬಾಧೆ.ಶೀಘ್ರವಾಗಿ ಎನ್ನೊ ಪದವನ್ನು urgent ನುಂಗಿತು.
ಸಮಯ ಅನ್ನುವ ಪದವನ್ನು time ಕಬಳಿಸಿತು.ಕಿಲೋ ಗಳನ್ನು KG ಗಳು ಹೊಸಕಿ ಹಾಕಿದವು.ಅಬ್ಬಾ ದೇವ್ರೆ ಮಾಯವಾಗಿ my goodness ಆವರಿಸಿತು.sorry,please,actually, mostly, fever,curd ಗಳಿಗೆ ಕನ್ನಡದಲ್ಲಿ ಪರ್ಯಾಯ ಶಬ್ದಗಳೇ ಇಲ್ಲವೇನೋ ಎಂಬಂತೆ ಅತಿಯಾಗಿ ಬಳಸುತ್ತೇವೆ.
ಇಂತಹ ಅಸಂಬದ್ದತೆಗೆ ಕಾರಣ ಏನು ? ಇದರ ಸವಾಲು ಎಲ್ಲಿ ?
ಇದಕ್ಕೆ ನಾವೇ ಉತ್ತರ ಕಂಡುಕೊಳ್ಳುಬೇಕು.ನಮ್ಮ ಶಿಕ್ಷಣದ ಪದ್ದತಿಯು ಇದರಲ್ಲಿ ಪಾಲುಗೊಂಡಿದೆ.ಭಾರತದ ಷೆಕ್ಸಪಿಯರ್ ಯಾರೆಂದು ಮಕ್ಕಳನ್ನು ಕೇಳಿ ನೋಡಿ ಆಗ ಮಕ್ಕಳಷ್ಟೇ ಅಲ್ಲ ದೊಡ್ಡವರ ಬಾಯಿಂದ ಬರುವ ಉತ್ತರವೂ ‘ಕಾಳಿದಾಸನೆಂದು’..ಇದೆಂಥ ದುರ್ದೈವ! ಬ್ರಿಟಿಷ್ ರಿಗೆ ಕಾಳಿದಾಸನ ಶ್ರೇಷ್ಠತೆ ತಿಳಿದ ಮೇಲೆ ಅವನನ್ನು ಸದಾ ನೆನಪಿನಲ್ಲಟ್ಟುಕೊಳ್ಳಲು ತಮ್ಮ ಷೆಕ್ಸಪಿಯರ್ ನಿಗೆ ಹೋಲಿಸಿ ಕಾಳಿದಾಸನನ್ನು ‘ಭಾರತದ ಷೆಕ್ಸಪಿಯರ್’ ಎಂದು ಕರೆದರು.
ಬ್ರಿಟಿಷ್ರ ಪಾಲಿಗೆ ಕಾಳಿದಾಸ ಭಾರತದ ಷೆಕ್ಸಪಿಯರ್ ಆಗಬೇಕಿತ್ತು ಆದರೆ ದುರಂತ ನಮಗೂ ಅವನು ಭಾರತದ ಷೆಕ್ಸಪಿಯರ್ ಆಗಿಹೋದ. ನಾವದನ್ನು ಕುರುಡಾಗಿ ಮುಂದುವರೆಸುತ್ತಿದ್ದೇವೆ. ಕಾಳಿದಾಸನದಾವ ಕಾಲ ಷೆಕ್ಸಪಿಯರ್ ನದಾವ ಕಾಲ ? ಕಾಳಿದಾಸನದು ಐದನೆ ಶತಮಾನವಾದರೆ ಷೆಕ್ಸಪಿಯರ್ ನದು ಹದಿನಾರನೇ ಶತಮಾನ.ಹಾಗೇಯೇ ನಮ್ಮ ಚಾಣಕ್ಯ ಕೂಡ ಭಾರತದ ಮೆಕೆವೆಲ್ಲಿ ಆದನು.
ಜನಸಾಮಾನ್ಯರನು ಬಿಡಿ ನಮ್ಮ ಘನತೆವೆತ್ತ ಸರಕಾರ ಕೂಡ ಮೂರ್ಖತನದ ಪರಮಾವಧಿಯನ್ನು ತೋರುತ್ತದೆ.ಆಗಿನ ಹೈದರಾಬಾದ್ ಪ್ರಾಂತ್ಯವಾದ ರಾಯಚೂರು ಬೀದರ್ ಗಳನ್ನು ‘ಕಲ್ಯಾಣ ಕರ್ನಾಟಕ’ವೆಂದು ನಾಮಕರಣ ಮಾಡಿದರೂ ಆ ಹೊಸ ಹೆಸರನ್ನು ಕರೆಯಿಸಿಕೊಳ್ಳುವ ಭಾಗ್ಯ ಪಾಪ ಆ ಸೀಮೆಗೆ ಇನ್ನೂ ಬಂದಿಲ್ಲ.ಹೈದರಾಬಾದ್ ಕರ್ನಾಟಕವೆಂದೇ ನಮೂದಿಸುತ್ತಾರೆ.
ನಮ್ಮ ಭಾಷೆಯನ್ನು ನಾವೇ ಮಾತನಾಡಬೇಕು,ಬಳಸಬೇಕು.ಅದನ್ನು ಬಿಟ್ಟು ಕೇವಲ ಪೊಳ್ಳು ಭಕ್ತಿಯನ್ನು ಅಂಧಾಭಿಮಾನವನ್ನು ಮೆರೆದರೆ ಹೇಗೆ.ನಮ್ಮ ಭಾಷೆಯನ್ನು ಪರದೇಶಿಯರು ಬಳಸುವುದಿಲ್ಲ ಬೇಳೆಸುವುದೂ ಇಲ್ಲ.ನಿಜವಾಗಿಯೂ ಭಾಷೆಯನ್ನು ಬೇಳೆಸುವ ಸಾಹಸ ನಮಗೆ ಬೇಡವೇ ಬೇಡ ಅದಕ್ಕಾಗಿ ಅನೇಕ ಮಹನಿಯರಿದ್ದಾರೆ.ಆದರೆ ದಿನನಿತ್ಯ ನಾವದನ್ನು ಬಳಸಬೇಕು. ಆಗ ಅದು ತಂತಾನೆ ಬೆಳೆಯುತ್ತದೆ.
‘ನಾನೊಬ್ಬನೇ ಕನ್ನಡ ಬಳಸುವುದರಿಂದ ಏನು ಮಹಾನ್ ಪ್ರಯೋಜನ ‘ ಎಂಬ ಉತ್ರ್ಪೇಕ್ಷೆಯ ವ್ಯಾಧಿಯನ್ನು ಬಿಟ್ಟು ಈ ‘ ನಾನು’ ಸುಧಾರಿಸಬೇಕಿದೆ.ರಾಜ್ಯೋತ್ಸವವನ್ನು ವೈಭವದಿಂದ ಆಚರಿಸಿ ಮರುದಿನದಿಂದ ಮತ್ತದೇ ರಾಗ ಅದೆ ಹಾಡು ಎನ್ನುವುದಕ್ಕಿಂತಲೂ ” ಮೊದಲು ನಾವು ಸುಧಾರಿಸಬೇಕು ನಮ್ಮಿಂದ ಊರು ಸುಧಾರಿಸುತ್ತದೆ ಊರಿಂದ ಇಡೀಯ ಸಮಾಜವೇ ಸುಧಾರಿಸುತ್ತದೆ” ಎಂದ ಡಾ.ರಾಜಕುಮಾರ್ರಂತೆ ಇಚ್ಛೆಯಿಂದ ಶುದ್ಧವಾಗಿ ಅಚ್ಚಕನ್ನಡದಲ್ಲಲ್ಲದಿದ್ದರೂ ಕನಿಷ್ಟ ಸರಳ ಕನ್ನಡದಲ್ಲಾದರೂ ಮಾತನಾಡೋಣ.ಹಾಗೆಂದ ಮಾತ್ರಕ್ಕೆ ಬೇರೆ ಭಾಷೆಯನ್ನು ಕಲಿಯುವುದು ಬೇಡವೆಂದಲ್ಲ,ಬೇರೆ ಭಾಷೆಯನ್ನು ಶುದ್ದವಾಗಿ ಕಲಿಯುವುದು ಒಳ್ಳೆಯದೇ ಅದರ ಜೊತೆಗೆ ಸ್ವಾಭಿಮಾನವೂ ಇರಬೇಕು.
ಕನ್ನಡ ಎಂದಿಗೂ ಅಮರ.ಅದಕ್ಕೆ ಯಾವದೇ ಆತಂಕವಿಲ್ಲ,ಅದಕ್ಕೆ ಯಾರ ಅಭಯವೂ ಬೇಕಿಲ್ಲ.ಅದೂ ಎಂದೆಂದಿಗೂ ಉಳಿಯುತ್ತದೆ ಬಾಳುತ್ತದೆ.ಇಷ್ಟೊಂದು ಅಗಾಧವಾಗಿ ಬೆಳೆದ ಒಂದು ಭಾಷೆಯು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಪ್ರಮೇಯವೇ ಬರುವುದಿಲ್ಲ! ಆದರೆ ಪ್ರತಿಯೊಬ್ಬ ಕನ್ನಡಿಗನೂ ನಾವು ನಮ್ಮ ತಾಯಿನಾಡು ತಾಯಿಭಾಷೆಯನ್ನು ಅತಿ ಹೆಚ್ಚಾಗಿ ಪ್ರೀತಿಸುವ ಮತ್ತು ಆ ಪ್ರೀತಿಯನ್ನು ತೋರ್ಪಡಿಸುವ ಅಗತ್ಯತೆ ಗೆ ಈಗ ಹಿಂದೆಂದಿಗಿಂತಲೂ ಹೆಚ್ಚಾಗಿದೆ ಮತ್ತು ತುರ್ತಾಗಿದೆ.ನಾವು ನಮ್ಮ ಜವಾಬುದಾರಿಯನ್ನು ನಿಭಾಯಿಸೋಣ.
– ವಿಶಾಲಕುಮಾರ ಕುಲಕರ್ಣಿ, ಬದಾಮಿ.