Advertisement

ಕನ್ನಡ ರಕ್ಷಣೆ ಯುವಕರ ಜವಾಬ್ದಾರಿ

10:54 AM May 07, 2018 | Team Udayavani |

ಬೀದರ: ಕನ್ನಡ ವಿಶ್ವದ ಪ್ರಮುಖ ಭಾಷೆಗಳಲ್ಲಿ ಒಂದಾಗಿದ್ದು ಅದನ್ನು ಹಿಂದಿನವರು ಯಾವುದೆ ಪ್ರತಿಫಲಾಪೇಕ್ಷೆಯಿಲ್ಲದೆ ಈ ಎತ್ತರಕ್ಕೆ ತಂದಿದ್ದಾರೆ. ಈಗ ಅದನ್ನು ಉಳಿಸಿ ಬೆಳೆಸುವುದು ಯುವ ಜನಾಂಗದ ಬಹುದೊಡ್ಡ ಜವಾಬ್ದಾರಿಯಾಗಿದೆ ಎಂದು ಹಿರಿಯ ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿ ಹೇಳಿದರು.

Advertisement

ನಗರದ ಕರ್ನಾಟಕ ಶಿಕ್ಷಣ ಕಾಲೆಜಿನಲ್ಲಿ ಜಿಲ್ಲಾ ಕಸಾಪ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 103ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡಕ್ಕಾಗಿ ಪ್ರಾಮಾಣಿಕವಾಗಿ ದುಡಿದವರನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಸರ್ಕಾರ ಕೂಡ ಪ್ರತಿಭಾವಂತರನ್ನು ಮರೆಯಬಾರದು ಎಂದರು.
 
ಹಾಲಹಳ್ಳಿ ಸ್ನಾತ್ತಕೊತ್ತರ ಕೇಂದ್ರದ ಪ್ರಾಧ್ಯಾಪಕ ಡಾ| ರಾಮಚಂದ್ರ ಗಣಾಪುರ ಉಪನ್ಯಾಸ ನೀಡಿ, ಕನ್ನಡ ಸಮುದ್ರದಾಚೆಗೂ ಬೆಳೆದು ಜಾಗತಿಕ ಮನ್ನಣೆಗೆ ಮುಂದಾಗಿದೆ. ಕನ್ನಡತ್ವದ ಮೂಲ ಆಕರಗಳಾದ ಶಾಸನ, ಹಸ್ತಪ್ರತಿ ತಾಡೋಲೆಗಳ ಸಂರಕ್ಷಣೆ ಹಾಗೂ ದಾಖಲೀಕರಣದಂಥ ಮಹತ್ವಕಾಂಕ್ಷಿ ಯೋಜನೆಗಳ ಉದ್ದೇಶದಿಂದ ಹುಟ್ಟಿಕೊಂಡ ಕನ್ನಡ ಸಾಹಿತ್ಯ ಪರಿಷತ್ತು ದೀರ್ಘ‌ ಪರಂಪರೆ ಹೊಂದಿದೆ. ದಾಸರ, ವಚನಕಾರರ ಕಾಲಕ್ಕೆ ತನ್ನ ಆಸ್ತಿತ್ವವನ್ನು ಗಟ್ಟಿಗೊಳಿಸಿಕೊಂಡಿದೆ ಎಂದರು.

ಕನ್ನಡ ನಾಡು ನುಡಿ ಸಂಸ್ಕೃತಿಯ ಸಂವರ್ಧನೆಗಾಗಿಯೇ ನೂರಾ ಮೂರು ವರ್ಷಗಳ ಹಿಂದೆ ಕಸಾಪ ಅಸ್ತಿತ್ವಕ್ಕೆ ಬಂದಿದೆ. ಪರಿಷತ್ತಿನ ಏಳ್ಗೆಗೆ ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣ ರಾಜ ಒಡೆಯರು, ದಿವಾನರಾಗಿದ್ದ ಸರ್‌ ಎಂ. ವಿಶ್ವೇಶ್ವರಯ್ಯ ಸೇರಿದಂತೆ ಅನೇಕರು ಆವಿಸ್ಮರಣಿಯವಾಗಿ ಶ್ರಮಿಸಿದ್ದಾರೆ. ಸುಮಾರು 3 ಲಕ್ಷ ಸದಸ್ಯರನ್ನೊಳಗೊಂಡ ಕಸಾಪ ಸುಮಾರು 2 ಸಾವಿರಕ್ಕೂ ಹೆಚ್ಚು ಪುಸ್ತಕ ಪ್ರಕಟಿಸಿದ್ದು, ಪ್ರಪಂಚದ ಸಾಂಸ್ಕೃತಿಕ ಚರಿತ್ರೆಯಲ್ಲಿ ಗಮನಾರ್ಹ ಸಂಗತಿ ಎಂದು, ಇಡಿ ಕಸಾಪ ಪರಂಪರೆಯ ಇತಿಹಾಸ ತೆರೆದಿಟ್ಟರು. ಪಾಂಶುಪಾಲರಾದ ಡಾ| ರಾಜಶೇಖರ ಅಲ್ಮಾಜೆ, ವಿದ್ಯಾವತಿ ಬಲ್ಲೂರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ದೇವೇಂದ್ರ ಕರಂಜೆ ಹಾಗೂ ಕಾಲೇಜಿನ ಪ್ರಾಧ್ಯಾಪಕರು ಭಾಗವಹಿಸಿದ್ದರು.

ಜಿಲ್ಲಾ ಕಸಾಪ ಕಾರ್ಯದರ್ಶಿ ಡಾ| ಬಸವರಾಜ ಬಲ್ಲೂರ ಪ್ರಾಸ್ತಾವಿಕ ನುಡಿ ನುಡಿದರು. ಕೋಶಾಧ್ಯಕ್ಷ ಟಿ.ಎಂ. ಮಚ್ಚೆ ಸ್ವಾಗತಿಸಿದರು. ಉಪನ್ಯಾಸಕರಾದ ಪ್ರೊ| ಜಗನ್ನಾಥ ಕಮಲಾಪುರೆ ನಿರೂಪಿಸಿದರು. ಘುಡುಖಾನ್‌ ವಂದಿಸಿದರು.

ಕಸಾಪದಿಂದ 103 ಗ್ರಾಮದಲ್ಲಿ ಮತ ಜಾಗೃತಿ
ಕನ್ನಡ ಸಾಹಿತ್ಯ ಪರಿಷತ್ತು ನಾಡು ನುಡಿ ಸಂವರ್ಧನೆಯೊಂದಿಗೆ ರಾಷ್ಟ್ರೀಯ ಅಭಿವೃದ್ಧಿ ಕೆಲಸಗಳಿಗೂ ಕೈ ಜೋಡಿಸುತ್ತಿದ್ದು, 103ನೇ ಕಸಾಪ ಸಂಸ್ಥಾಪನೆ ದಿನಾಚರಣೆ ಸವಿನೆನಪಿಗಾಗಿ 103 ಗ್ರಾಮಗಳಲ್ಲಿ ಮತದಾನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನಶೆಟ್ಟಿ ಹೇಳಿದರು.

Advertisement

ಸಂಸ್ಥಾಪನಾ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅನ್ಯ ಭಾಷೆ ನಮಗೆ ಅಗತ್ಯವಿಲ್ಲ. ಒಂದು ಜನಾಂಗದ ಅಳಿವು ಆಯಾ ಜನಾಂಗದ ಭಾಷೆಯ ವಿನಾಶದಲ್ಲಿರುತ್ತದೆ. ಅನೇಕ ಕನ್ನಡ ಪರ ಘಟನೆಗಳಿದ್ದರೂ ಕನ್ನಡ ನೆಲದಲ್ಲಿಯೇ ಕನ್ನಡ ಉಳಿಸುವ ಸೊಲ್ಲು ಖೇದದ ಸಂಗತಿಯಾಗಿದೆ. ಆದ್ದರಿಂದ ಕನ್ನಡದ ಉಳಿವು ಭಾಷಣಗಳಿಂದ ಸಾಧ್ಯವಿಲ್ಲ. ದಿನದ ಬದುಕಲ್ಲಿ ಕನ್ನಡತ್ವದ ಆಚರಣೆ ತರಬೇಕು ಎಂದು ಕರೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next