Advertisement

‘ಸ್ತ್ರೀ’

12:07 PM Jul 02, 2019 | Nagendra Trasi |

ಹೊತ್ತಾರೆಯಿಂದ ಹೊತ್ತೇರುವ ತನಕ

Advertisement

ಎಡೆಬಿಡದೆ ಸೂರ್ಯನಂತಿವಳ ದುಡಿತ

ಮನೆಮಂದಿಯೆಲ್ಲ ಯೋಗಕ್ಷೇಮವೇ

ಹೃದಯದ ಮಿಡಿತ

ಆತನಿಗೋ ಜಗಕೆ ಬೆಳಕ ನೀಡೋ ಕಾಯಕ

Advertisement

ಈಕೆಗೋ ಬದುಕ ಕಟ್ಟಿಕೊಡುವ ತವಕ

ಬಾಲ್ಯದಲಿ ಅಪ್ಪನ ಜೇಬಿನಲ್ಲಿ ಚಿಂತೆ

ಹರೆಯದಲಿ ಹದ್ದು –ಕಾಕದೃಷ್ಟಿಗಳದ್ದೇ ಸಂತೆ

ಮುಚ್ಚಿಟ್ಟ ಮನಸ್ಸು, ಬಚ್ಚಿಟ್ಟ ಕನಸು

ರೆಕ್ಕೆ ಬಿಚ್ಚಲೇ ಇಲ್ಲ, ಗರಿಕೆದರಲೇ ಇಲ್ಲ

ದೋಸೆ ಬಿಸಿ ಇಲ್ಲ, ಪಲಾವು ರುಚಿ ಇಲ್ಲ

ಎಂದೆತ್ತಿ ಆಡಿತೋರಿದರಲ್ಲಾ

ಕೈಗಳಲ್ಲಾದ ‘ಬಿಸಿಯಕಲೆ’ಗಳರಿವು

ಯಾರಿಗೂ ಬರಲೇ ಇಲ್ಲ

ಇಡ್ಲಿಗೆ ಚಟ್ನಿ ಸಾಂಬಾರ್  ಬಯಸಿದವರೇ ಎಲ್ಲ

“ನಿನಗೆ ತಿಂಡಿ ಉಳಿದಿದೆಯೇ’…..?ಎಂದು

ಕೇಳಿದವರಾರೂ ಇಲ್ಲ

ಒಡನಾಡಿಗಳು ತುಸು ಕೆಮ್ಮಿದರೂ

ಒಡಲಲ್ಲಿ ಎಲ್ಲಿಲ್ಲದ ಸಂಕಟ

ತನ್ಮಡಿಲೇ ಒಡೆದು ಹೋದರೂ

ಗಣನೆಗೆ ಬಾರದಿರುವುದು ದೊಡ್ಡ‘ವಿಕಟ’

ಸೊರಗದಂತೆ ಸಾಂತ್ವನ ನೀಡುವ

ಸೆರಗಿನಲ್ಲಿ ಕಣ್ಣೀರ ಕಥೆಯಿದೆ.

ತಲೆನೇವರಿಸಿ ಭರವಸೆ ತುಂಬುವ

ಕೈಗಳಲಿ ಬಾಳಿನ ವ್ಯಥೆಯಿದೆ

ಎಲ್ಲರಿಗಾಗಿ ಬದುಕಿದಳು

ತಾ ಬಾಳುವುದಾ ಮರೆತಳು

‘ಗಾದೆ’ಗೆ ನುಡಿಯಾದಳು

‘ಶಾಸ್ತ್ರ’ಕ್ಕೆ ಅಸ್ತ್ರವಾದಳು

‘ಸಂಸ್ಕೃತಿ’ಗೆ ಕೃತಿಯಾದಳು

ವಿಕೃತಿಗೊಳಗಾದ ,’ಪ್ರಕೃತಿ’ ಮಾತೆಯಾದಳು

ತನ್ನಿರವ ಮರೆತು ತನ್ನವರಿಗಾಗಿ

ಬದುಕ ತೆತ್ತವಳು

ಆಹಾರ ನೀಡಿ ಆಸರೆಯಾದಳು

ಎಲ್ಲರ ಬಾಯಿಗೆ ತಾನೇ ‘ಆಹಾರ’ವಾದಳು

‘ಸ್ತ್ರೀ’ ಅಲ್ಲವೇ ದೇವತೆ ಬೇರಾರಾಗಲು ಸಾಧ್ಯ……?

ಮಲ್ಲಿಕಾ.ಐ

ಕನ್ನಡ ಶಿಕ್ಷಕಿ

ಸರಕಾರಿ ಪ್ರೌಢಶಾಲೆ ವಳಾಲು, ಬಜತ್ತೂರು, ಪುತ್ತೂರು. ದ.ಕ.

Advertisement

Udayavani is now on Telegram. Click here to join our channel and stay updated with the latest news.

Next