Advertisement

ಅದ್ಧೂರಿ ಮೆರವಣಿಗೆ ಇಲ್ಲದ ರಾಜ್ಯೋತ್ಸವ ಆಚರಣೆಗೆ ಸಮ್ಮತಿಯಿಲ್ಲ: ಕನ್ನಡ ಪರ ಸಂಘಟನೆಗಳು

03:51 PM Oct 16, 2021 | Team Udayavani |

ಬೆಳಗಾವಿ: ಕರ್ನಾಟಕ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸುವ ಸಂಬಂಧ ಶನಿವಾರ ಸಭೆ ಸೇರಿದ್ದ ಕನ್ನಡ ಪರ ಸಂಘಟನೆಗಳು ಅದ್ಧೂರಿ ಮೆರವಣಿಗೆ ಇಲ್ಲದ ರಾಜ್ಯೋತ್ಸವ ಆಚರಣೆಗೆ ಕನ್ನಡ ಪರ ಸಂಘಟನೆಗಳ ಸಮ್ಮತಿಯಿಲ್ಲ ಎಂದು ಸರ್ವಾನುಮತದಿಂದ ನಿರ್ಣಯ ಕೈಗೊಂಡಿವೆ.

Advertisement

ಈ ಸಂಬಂಧ ಶನಿವಾರ ಕನ್ನಡ ಸಾಹಿತ್ಯ ಭವನದಲ್ಲಿ ಸಭೆ ನಡೆಸಿದ ಕನ್ನಡ ಮುಖಂಡರು ಮೆರವಣಿಗೆಗೆ ಅವಕಾಶ ನೀಡಿ ರಾಜ್ಯ ಸರಕಾರ ನಿರ್ಧಾರ ಕೈಗೊಳ್ಳಲು ಅಕ್ಟೋಬರ್ 22ರವರೆಗೆ ಗಡುವು ನೀಡಿದರು.

ರಾಜ್ಯೋತ್ಸವಕ್ಕೆ ಸಂಬಂಧಿಸಿದ ಉಪಸಮಿತಿಗಳ ಸಭೆಗೆ ಹಾಜರಾಗದಿರಲು ನಿರ್ಧಾರ ಕೈಗೊಂಡಿದ್ದಲ್ಲದೆ ಬೆಳಗಾವಿಯ ಶಾಸಕರು ರಾಜ್ಯ ಸರಕಾರದ ಮೇಲೆ ಒತ್ತಡ ತರುವ ಮೂಲಕ ಅದ್ಧೂರಿ ಮೆರವಣಿಗೆಗೆ ಅವಕಾಶ ಸಿಗುವಂತೆ ನೋಡಿ ಕೊಳ್ಳುವ ಮೂಲಕ ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸಬೇಕು ಎಂದು ಒತ್ತಾಯಿಸಿದರು.

ಇದೇ ವರ್ಷ ಬೆಳಗಾವಿಯಲ್ಲಿ ನಡೆದ ರಾಜಕೀಯ ಪಕ್ಷಗಳ ಸಭೆ, ಮೆರವಣಿಗೆಗಳಿಗೆ ಅವಕಾಶ ಕೊಡಲಾಗಿದೆ. ಲೋಕಸಭೆ ಉಪಚುನಾವಣೆ, ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಸಭೆಗಳಿಗೆ, ದಸರಾ ಹಬ್ಬದಲ್ಲಿ ಮೆರವಣಿಗೆಗಳಿಗೆ ಅವಕಾಶ ನೀಡಲಾಗಿದೆ. ಆದರೆ ಕನ್ನಡಿಗರ ಏಕೈಕ ಹಬ್ಬವಾದ ರಾಜ್ಯೋತ್ಸವದ ಮೆರವಣಿಗೆಗೆ ಅವಕಾಶ ನೀಡಲು ಮೀನಮೇಷ ಎಣಿಸುತ್ತಿರುವದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಇದನ್ನೂ ಓದಿ:ಅಮರಮುಡ್ನೂರು,ಅಮರಪಡ್ನೂರು ಜಿಲ್ಲಾಧಿಕಾರಿಯವರ ಗ್ರಾಮ ವಾಸ್ತವ್ಯಕ್ಕೆ ಚಾಲನೆ

Advertisement

ಮೆರವಣಿಗೆಗೆ ಅವಕಾಶ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆಗ್ರಹಿಸಿದರು.

ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರ ಅಧ್ಯಕ್ಷತೆಯಲ್ಲಿ ಸೇರಿದ್ದ ಸಭೆಯಲ್ಲಿ ರಮೇಶ ಸೊಂಟಕ್ಕಿ, ಮಹಾದೇವ ತಳವಾರ, ಮೆಹಬೂಬ ಮಕಾನದಾರ, ದೀಪಕ ಗಡಗನಟ್ಟಿ, ಮಹಾಂತೇಶ ರಣಗಟ್ಟಿಮಠ ಬಾಬೂ ಸಂಗೋಡಿ ಸಾಗರ ಬೋರಗಲ್ಲ ಕಸ್ತೂರಿ ಭಾವಿ ವಾಜೀದ ಹಿರೇಕೋಡಿ, ಆರ್.ಅಭಿಲಾಷ, ಸಂಜಯ ರಜಪೂತ, ಗಣೇಶ ರೋಖಡೆ, ಬಾಳೂ ಜಡಗಿ ಇನ್ನಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next