ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರ ಅನ್ಯ ಭಾಷಿಕರ ಮೇಲೆ ಹಿಂದಿ ದಿವಸ, ಹಿಂದಿ ಮಾಸದ ಹೆಸರಲ್ಲಿ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಆರೋಪಿಸಿ ಶನಿವಾರ ಜಿಲ್ಲೆಯಲ್ಲಿನ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ರಾಷ್ಟ್ರದ ಎಲ್ಲಾ ರಾಜ್ಯಗಳ ಪ್ರಾದೇಶಿಕ ಭಾಷಿಗರ ತೆರಿಗೆ ಹಣವನ್ನು ಪಡೆಯುವ ಕೇಂದ್ರ ಸರ್ಕಾರ ಹಿಂದಿ ಭಾಷೆಯನ್ನು ವೈಭವಿ ಕರಿಸುತ್ತಿರುವುದು ಸರಿಯಲ್ಲ ಎಂದು ಪ್ರತಿಭಟನಾ ನಿರತ ಕಾರ್ಯಕರ್ತರೊಬ್ಬರು ಹೇಳಿದರು. ಜಿಲ್ಲೆಯ ಚಿಂತಾಮಣಿ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳು ಕೇಂದ್ರದ ನಿರ್ಧಾರವನ್ನು ಖಂಡಿಸಿ ಪ್ರತಿಭಟನೆ ನಡೆಸಿತು.
ಪ್ರತಿಕೃತಿ ದಹನ :
ಇದೇ ವೇಳೆ ಕನ್ನಡ ಸಂಘಟನೆಗಳ ಮುಖಂಡರು ಕೇಂದ್ರ ಸರ್ಕಾರದ ಪ್ರತಿಕೃತಿ ದಹಿಸುವ ಮೂಲಕ ಹಿಂದಿ ಹೇರಿಕೆಮಾಡುವ ಸರ್ಕಾರದ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯಲ್ಲಿ ಕರವೇ ಜಿಲ್ಲಾ ಅಧ್ಯಕ್ಷ ಎಂ.ಆರ್.ಲೋಕೇಶ್, ಎಂ.ವಿ.ನಾರಾಯಣಸ್ವಾಮಿ, ಶಬ್ಬೀರ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.