ಕೊರೊನಾ ಹೆಚ್ಚಾಗುತ್ತಲೇ ಇದೆ. ಸರ್ಕಾರ ಕೊರೊನಾ ಕಟ್ಟಿ ಹಾಕಲು ಸರ್ವ ಪ್ರಯತ್ನ ಮಾಡುತ್ತಲೇ ಇದೆ. ಆದರೆ, ಕೊರೊನಾ ಮಾತ್ರ ನಿಯಂತ್ರ ಣಕ್ಕೆ ಸಿಗುತ್ತಿಲ್ಲ. ಅದರಲ್ಲೂ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಕೇಕೆ ಜೋರಾಗುತ್ತಿದೆ. ಚಿತ್ರ ರಂಗದ ಮೇಲೂ ಕೊರೊನಾ ದೊಡ್ಡ ಪರಿಣಾಮ ಬೀರಿ ರೋದು ಗೊತ್ತೇ ಇದೆ. ಮುಖ್ಯವಾಗಿ ಹೊಸಬರ ಕನಸಿಗೆ ಕೊರೊನಾ ಕಲ್ಲು ಹಾಕಿದೆ. ಸ್ಟಾರ್ ಗಳ ಸಿನಿಮಾಗಳಿಗಾದರೆ ಬಿಡುಗಡೆಗೆ ಚಿತ್ರ ಮಂದಿರಗಳಲ್ಲದೇ, ಇತರ ವೇದಿಕೆಗಳು ಕೂಡಾ ಇವೆ. ಆಯಾ ಸಿನಿಮಾದ ನಿರ್ಮಾಪಕರು ಮನಸ್ಸು ಮಾಡಿದರೆ ಸಿನಿಮಾ ಬಿಡುಗಡೆಗೆ ಬೇರೆ ವೇದಿಕೆ ಹುಡುಕಿ ಕೊಳ್ಳಬಹುದು. ಜೊತೆಗೆ ಇವತ್ತಲ್ಲ, ನಾಳೆ ಸ್ಟಾರ್ ಸಿನಿಮಾಗಳು ಬಿಡುಗಡೆಯಾದರೆ ಜನ ಬರುತ್ತಾರೆ ಎಂಬ ನಂಬಿಕೆ ಇದೆ. ಅದ ಕ್ಕಿಂತ ಹೆಚ್ಚಾಗಿ ಸ್ಟಾರ್ ಗಳು ಈಗಾಗಲೇ ಚಿತ್ರರಂಗದಲ್ಲಿ ನೆಲೆಯೂರಿದ್ದಾರೆ. ಹಾಗಾಗಿ, ಅವರಿಗೆ ದೊಡ್ಡ ಮಟ್ಟದ ತೊಂದರೆಯಾಗದು. ಆದರೆ, ಸಿನಿಮಾ ಬಿಡುಗಡೆಯ ವಿಚಾರಕ್ಕೆ ಬರುವುದಾದರೆ ದೊಡ್ಡ ಹೊಡೆತ ಬೀಳುವುದು ಹೊಸಬರಿಗೆ.
ಪ್ರತಿ ವರ್ಷ ಕನ್ನಡ ಚಿತ್ರರಂಗವನ್ನು ಸದಾ ಕ್ರಿಯಾಶೀಲ ಹಾಗೂ ಆ್ಯಕ್ಟೀವ್ ಆಗಿ ಇಡುವಲ್ಲಿ ಹೊಸಬರ ಪಾತ್ರ ಮಹತ್ವದ್ದು. ವರ್ಷದಲ್ಲಿ ಸ್ಟಾರ್‌ಗಳ ಹಾಗೂ ಇತರ ಪರಿಚಿತ ಮುಖಗಳ ಸಿನಿಮಾಗಳೆಂದು 10-15 ಸಿನಿಮಾಗಳಷ್ಟೇ ಬಿಡುಗಡೆಯಾಗುತ್ತವೆ. ಮಿಕ್ಕಂತೆ ವಾರ ವಾರ ಚಿತ್ರ ಮಂದಿರಗಳನ್ನು ಸಿಂಗರಿಸುವವರು ಹೊಸಬರು. ಹೊಸಬರ ಸಿನಿಮಾ ಬಿಡುಗಡೆಯಾದರೆ, ಒಬ್ಬ ಹೊಸ ನಟ, ನಟಿ, ನಿರ್ದೇಶಕ, ತಂತ್ರಜ್ಞ ಬೆಳಕಿಗೆ ಬರುತ್ತಾರೆ. ಅದರಲ್ಲೂ ಸಿನಿಮಾ ಒಂದು ಮಟ್ಟಕ್ಕೆ ಚೆನ್ನಾಗಿದೆ ಎಂಬ ಮಾತು ಕೇಳಿ ಬಂದರೆ ಆ ಸಿನಿಮಾದ ಇಡೀ ತಂಡ ಚಿತ್ರ ರಂಗ ದಲ್ಲಿ ಒಂದಷ್ಟು ವರ್ಷ ಬದುಕು ಕಟ್ಟಿಕೊಳ್ಳುತ್ತಾರೆ. ಏಕೆಂದರೆ ಇವತ್ತು ಚಿತ್ರ ರಂಗಕ್ಕೆ ಬರುತ್ತಿರುವ ಹೊಸಬರ ಯೋಚನೆ ವಿಭಿನ್ನವಾಗಿದೆ. ತಾಂತ್ರಿಕವಾಗಿಯೂ ಅಪ್ ಡೇಟ್ ಆಗಿರುತ್ತಾರೆ. ಅದೇ ಕಾರಣದಿಂದ ಒಂದೊಂದು ಸಿನಿಮಾಗಳ ಮೇಲೂ ಹೊಸಬರು ನಿರೀಕ್ಷೆಯಿಂದ ಎದುರು ನೋಡುತ್ತಾರೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಹೊಸಬರ ಸಿನಿಮಾಗಳು ಮುಂದೆ ಬಿಡುಗಡೆಯ ಗೋದೇ ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
“ರಾಬರ್ಟ್’ಚಿತ್ರದ ದೊಡ್ಡ ಗೆಲುವನ್ನು ಕಂಡು ಖುಷಿಯಾದ ಅದೆಷ್ಟೋ ಹೊಸಬರು ತಮ್ಮ ಸಿನಿಮಾವನ್ನು ಕೂಡಾ ಬಿಡುಗಡೆ ಮಾಡಲು ಮುಂದಾಗಿದ್ದರು. ಆದರೆ, ಸದ್ಯದ ಅವೆ ಲ್ಲವೂ ದೂರದ ಮಾತು ಎಂಬಂತಾ ಗಿದೆ. ಮತ್ತೆ ಹೊಸ ಸಿನಿಮಾಗಳ ನಿರ್ಮಾಪಕರು ಸಂಕಷ್ಟಕ್ಕೀ ಡಾಗಿದ್ದಾರೆ. ಇದು ಬಿಡುಗಡೆಗೆ ಸಿದ್ಧವಾಗಿರುವ ಸಿನಿಮಾಗಳ ಕಥೆಯಾದರೆ, ಸಿನಿಮಾ ಆರಂಭಿಸಲು ಮುಂದಾಗಿದ್ದ, ಅರ್ಧ ಚಿತ್ರೀಕರಣವಾಗಿದ್ದ ಸಿನಿಮಾಗಳು ಮುಂದೆ ಮತ್ತೆ ಟೇಕಾಫ್ ಆಗುತ್ತವೆ ಎಂಬ ಯಾವ ನಂಬಿಕೆಯೂ ಇಲ್ಲ. ಹೀಗಾದಾಗ ಹೊಸ ಪ್ರತಿಭೆಗಳ ಕನಸು ಕಮರಿ ಹೋಗುತ್ತವೆ.
ಹೇಗಾದರೂ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಬೇಕು, ಕನಸು ನನಸು ಮಾಡಿಕೊಳ್ಳ ಬೇಕೆಂದು ಇದ್ದ ಕೆಲಸಗಳಿಗೂ ಗುಡ್ ಬೈ ಹೇಳಿ ಅದೆಷ್ಟೋ ನವ ಪ್ರತಿಭೆಗಳು ಸಿನಿಮಾ ರಂಗವನ್ನೇ ಫುಲ್ ಟೈಮ್ ಕಾರ್ಯ ಕ್ಷೇತ್ರವಾಗಿ ಆಯ್ಕೆ ಮಾಡಿಕೊಂಡಿವೆ. ಆದರೆ, ಕೊರೊನಾ ದಿಂದ ಹೊಸಬರಲ್ಲಿ ಭಯ ಶುರುವಾಗಿರೋದು ಸುಳ್ಳಲ್ಲ. ಒಂದು ಕಡೆ ಸಿನಿಮಾ ಬಿಡುಗಡೆಯಾಗುವ ಯಾವ ಲಕ್ಷ ಣವೂ ಕಾಣು ತ್ತಿಲ್ಲ, ಇನ್ನೊಂದು ಕಡೆ ಮತ್ತೆ ತಮ್ಮ ಹಳೆಯ ಕಾರ್ಯಕ್ಷೇತ್ರಕ್ಕೂ ವಾಪಾಸ್ ಆಗಲು ಆಗುತ್ತಿಲ್ಲ. ಕಳೆದ ಐದಾರು ವರ್ಷಗಳಿಂದ ಚಿತ್ರರಂಗಕ್ಕೆ ಇಂಜಿನಿಯರಿಂಗ್, ಐಟಿ, ಮ್ಯಾನೇಜ್ ಮೆಂಟ್ … ಹೀಗೆ ಬೇರೆ ಬೇರೆ ಹಿನ್ನೆಲೆಯ ಸಾಕಷ್ಟು ಮಂದಿ ಚಿತ್ರ ರಂಗಕ್ಕೆ ಪ್ರವೇಶ ಪಡೆಯುತ್ತಿದ್ದಾರೆ. ಕೆಲವರು ಈಗಾಗಲೇ ಸಿನಿಮಾಗಳಲ್ಲಿ ಕೆಲಸ ಮಾಡಿ ಒಂದಷ್ಟು ಅನುಭವವನ್ನು ಗಿಟ್ಟಿಸಿ ಕೊಂಡಿದ್ದಾರೆ. ಹೀಗಿರುವಾಗ ವಾಪಾಸ್ ಹೋಗಲು ಆಗದೇ, ಇಲ್ಲೂ ಇರಲು ಆಗದೇ ಕವಲು ದಾರಿಯಲ್ಲಿದ್ದಾರೆ. ಏಕೆಂದರೆ ಇಂಜಿನಿಯರಿಂಗ್, ಐಟಿ-ಬಿಟಿ, ಖಾಸಗಿ ವಲಯಗಳು ಗಣನೀಯ ಪ್ರಮಾಣದಲ್ಲಿ ಉದ್ಯೋಗ ಕಡಿತ ಮಾಡುತ್ತಿದ್ದು, ಕಳೆದ ಒಂದು ವರ್ಷಗಳಿಂದ ಕಾಲೇಜುಗಳಿಂದ ಪದವಿ ಪಡೆದವರೇ ಕೆಲಸಕ್ಕಾಗಿ ಎದುರು ನೋಡುತ್ತಿದ್ದಾರೆ. ಹೀಗಿರುವಾಗ ಚಿತ್ರ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡ ನವ ಪ್ರತಿಭೆಗಳಿಗೆ ಮುಂದೇನು ಎಂಬ ಭವಿಷ್ಯದ ಆತಂಕ ಎದುರಾಗಿದೆ.
ನಾವೆಲ್ಲ ಹೊಸಬರೇ ಸೇರಿ ಹೇಗೋ ಬಂಡವಾಳ ಹೊಂದಿಸಿ ಸಿನಿಮಾ ಮಾಡಿದ್ದೇವೆ. ನಮ್ಮ ಪ್ಲಾನ್ ಪ್ರಕಾರ ಇದೇ ಮೇ ಅಥವಾ ಜೂನ್ ವೇಳೆಗೆ ಥಿಯೇಟರ್‌ನಲ್ಲಿ ಸಿನಿಮಾ ರಿಲೀಸ್ ಮಾಡಬೇಕೆಂದಿದ್ದೆವು. ಆದ್ರೆ ಈಗ ಲಾಕ್‌ಡೌನ್ ಬಗ್ಗೆ ಇನ್ನೂ ಅನಿಶ್ಚಿತತೆ ಇರುವುದರಿಂದ, ಯಾವಾ ಸಿನಿಮಾ ರಿಲೀಸ್ ಮಾಡುತ್ತೇವೋ ಅನ್ನೋದು ನಮಗೂ ಸ್ಪಷ್ಟತೆ ಇಲ್ಲ. ಹೀಗಾಗಿ ಸದ್ಯಕ್ಕೆ ಬೇರೆ ದಾರಿ ಇಲ್ಲದೆ ಓಟಿಟಿ ಪ್ಲಾಟ್‌ಫಾರ್ಮ್ಗೆ ಸಿನಿಮಾ ಕೊಡುವ ಬಗ್ಗೆ ಯೋಚಿಸುತ್ತಿದ್ದೇವೆ. ಬರೀ ರಿಲೀಸ್ ಬಗ್ಗೆ ಮಾತ್ರವಲ್ಲ ಮುಂದೆ ನಮ್ಮ ಸಿನಿಮಾ ಭವಿಷ್ಯ ಏನಾಗಬಹುದು ಎಂಬ ಆತಂಕ ಕೂಡ ಕಾಡುತ್ತಿದೆ
-ಪ್ರವೀಣ್, “ಎವಿಡೆನ್ಸ್’ ಚಿತ್ರದ ನಿರ್ದೇಶಕ
ರವಿ ಪ್ರಕಾಶ್ ರೈ