Advertisement

ಕನ್ನಡ ಫಲಕ ಕಡ್ಡಾಯಕ್ಕೆ ಜಿಲ್ಲಾಧಿಕಾರಿ ಸೂಚನೆ ! ಕನ್ನಡದಲ್ಲೇ ನೋಟಿಸ್‌ ಜಾರಿ

02:40 PM Nov 08, 2020 | sudhir |

ಬೆಳಗಾವಿ: ಎಲ್ಲ ಸರಕಾರಿ ಕಚೇರಿ ಮತ್ತು ಶಾಲೆಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳನ್ನು ಮತ್ತು ಅಂಗಡಿ-ಮುಂಗಟ್ಟುಗಳ ಮುಂದೆ ಕನ್ನಡ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಲು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ
ಎಂ.ಜಿ. ಹಿರೇಮಠ ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗಡಿಭಾಗದಲ್ಲಿರುವ ಬೆಳಗಾವಿಯಲ್ಲಿ ಆಡಳಿತದಲ್ಲಿ ಕನ್ನಡ ಬಳಕೆ ಮತ್ತು ಅನುಷ್ಠಾನವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಸರಕಾರಿ ಕಚೇರಿಗಳು ಹಾಗೂ ಶಾಲೆಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳನ್ನು ಅಳವಡಿಸಬೇಕು. ಆದರೆ ಬಹುತೇಕ ಕಚೇರಿಗಳಲ್ಲಿ ಭಾವಚಿತ್ರ ಅಳವಡಿಸಿಲ್ಲ. ಆದ್ದರಿಂದ ನ. 30ರೊಳಗೆ ಅಳವಡಿಸಲು ಮತ್ತೂಮ್ಮೆ ಸುತ್ತೋಲೆ ಕಳಿಸಲಾಗುವುದು ಎಂದು ಹೇಳಿದರು.

ನಗರದ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಸಮೀಕ್ಷೆ ಕೈಗೊಂಡು ಫಲಕಗಳಲ್ಲಿ ಎಲ್ಲಿ ನಿಯಮಾವಳಿ ಪ್ರಕಾರ ಕನ್ನಡ ಬಳಕೆ
ಮಾಡುತ್ತಿಲ್ಲವೋ ಅಂತಹ ಮಳಿಗೆಗಳಿಗೆ ತಕ್ಷಣ ನೋಟಿಸ್‌ ಜಾರಿಗೊಳಿಸಿ ಕನ್ನಡ ಫಲಕ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದನ್ನೂ ಓದಿ:“ಶಾಂತಪ್ಪ ಚಡಚಣನಿಂದ ಭೈರಗೊಂಡನವರೆಗೆ”; ಶರಣನಾಡಿನ ಶಾಂತಿ ಕದಡಿದ ‘ಭೀಮಾ ತೀರ’ದ ಕ್ರೂರ ಕಥಾನಕ

Advertisement

ಕನ್ನಡ ಕಲಿಸುವ ಪ್ರಯತ್ನ ಮಾಡಿ: ಮರಾಠಿ ಶಾಲೆಗಳಲ್ಲಿ ಕನ್ನಡ ಶಿಕ್ಷಕರ ಕೊರತೆ ಇದ್ದರೆ ಬೇರೆ ಶಾಲೆಯ ಶಿಕ್ಷಕರನ್ನು ನಿಯೋಜನೆ ಮೇರೆಗೆ ವ್ಯವಸ್ಥೆ ಮಾಡುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಮನೆಯ ಭಾಷೆ ಮರಾಠಿಯಾಗಿದ್ದರೂ ಪರವಾಗಿಲ್ಲ. ಆದರೆ ಅಂಗನವಾಡಿಗಳಲ್ಲಿ ಕನ್ನಡ ಕಲಿಸುವ ಪ್ರಯತ್ನವನ್ನು ಅಂಗನವಾಡಿ
ಕಾರ್ಯಕರ್ತೆಯರು ಮಾಡಬೇಕು ಎಂದು ಸಲಹೆ ನೀಡಿದರು.

ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಗೆ ಗೈರಾಗುವ ಅಧಿಕಾರಿಗಳಿಗೆ ನೋಟಿಸ್‌ ನೀಡುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಒಂದು ವೇಳೆ ಯಾರಾದರೂ ಪದೆ ಪದೇ ಸಭೆಗೆ ಗೈರಾದರೆ ಅಂತಹವರ ಬಗ್ಗೆ ಕನ್ನಡ ಅಭಿವೃದ್ಧಿ
ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಸಭೆ ನಿರ್ವಹಿಸಿದರು. ಚಿಕ್ಕೋಡಿ ಡಿಡಿಪಿಐ ಗಜಾನನ ಮನ್ನಿಕೇರಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಾನಂದ ಮಗದುಮ್‌, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕ ಗುರುನಾಥ ಕಡಬೂರ ಇದ್ದರು.

ಕನ್ನಡದಲ್ಲೇ ನೋಟಿಸ್‌ ಜಾರಿ
ಟ್ರೇಡ್‌ ಲೈಸನ್ಸ್‌ ಹೊಸದಾಗಿ ನೀಡುವಾಗ ಮತ್ತು ನವೀಕರಣಕ್ಕೆ ಬಂದ ಸಂದರ್ಭದಲ್ಲಿ ಫಲಕಗಳು ಕಡ್ಡಾಯವಾಗಿ ಕನ್ನಡದಲ್ಲಿ ಇರುವುದನ್ನು ತೋರಿಸಿದಾಗ ಮಾತ್ರ ಲೈಸನ್ಸ್‌ ನೀಡಲಾಗುತ್ತಿದೆ ಎಂದು ಪಾಲಿಕೆ ಆಯುಕ್ತ ಜಗದೀಶ್‌ ಕೆ.ಎಚ್‌. ಹೇಳಿದರು. ಡಿಸಿಪಿ ವಿಕ್ರಮ್‌ ಆಮಟೆ ಮಾತನಾಡಿ, ಪೊಲೀಸ್‌ ಇಲಾಖೆಯ ನೋಟಿಸ್‌ಗಳನ್ನು ಈಗ ಕನ್ನಡದಲ್ಲಿ ನೀಡಲಾಗುತ್ತಿದೆ. ದೂರುಗಳನ್ನು ಸಹ ಕನ್ನಡದಲ್ಲಿ ಪಡೆಯಲಾಗುತ್ತಿದ್ದು, ದೋಷಾರೋಪಣೆ ಪಟ್ಟಿಯನ್ನು ಕೂಡ ಕನ್ನಡದಲ್ಲಿ ಸಲ್ಲಿಸಲಾಗುತ್ತಿದೆ ಎಂದು
ತಿಳಿಸಿದರು. ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ನೀಡುವ ನೋಟಿಸ್‌ ಹಾಗೂ ದಂಡದ ರಶೀದಿಯ ಮಾದರಿಯನ್ನು ಕನ್ನಡದಲ್ಲಿ ಸಿದ್ಧಪಡಿಸಲಾಗುತ್ತಿದ್ದು, ಸದ್ಯದಲ್ಲಿಯೇ ಅದು ಕೂಡ ಜಾರಿಗೆ ಬರಲಿದೆ ಎಂದು ಉಪ ಪೊಲೀಸ್‌ ಆಯುಕ್ತ ವಿಕ್ರಮ್‌ ಆಮಟೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next