ಸದ್ಯ “ವೈರ’ ಸಿನಿಮಾ ನಿರ್ದೇಶಿಸಿ, ನಟಿಸಿರುವ ನವರಸನ್ ಅವರಿಗೆ ಈ ಸಿನಿಮಾ ನಿರ್ದೇಶಿಸಬೇಕೆಂಬ ಯಾವ ಆಸೆಯೂ ಇರಲಿಲ್ಲವಂತೆ. ಯಾರಾದರೂ ಬೇರೆ ನಿರ್ದೇಶಕರಿಂದ ಈ ಕಥೆ ಮಾಡಿಸಿ, ತಾನು ನಟಿಸಬೇಕೆಂದುಕೊಂಡಿದ್ದರಂತೆ.
ಅದೇ ಉದ್ದೇಶದಿಂದ ನಿರ್ಮಾಪಕ ಧರ್ಮಶ್ರೀ ಮಂಜುನಾಥ್ ಅವರಲ್ಲಿ ಕಥೆ ಹೇಳಿದರಂತೆ. ಕಥೆ ಕೇಳಿ ಖುಷಿಯಾದ
ಮಂಜುನಾಥ್ ಅವರು, ನಿಮ್ಮ ಕನಸನ್ನು ಬೇರೆಯವರ ಕೈಗೆ ಕೊಡುವ ಬದಲು ನೀವೇ ನಿರ್ದೇಶಿಸಿ, ನಟಿಸಿ ಎಂದರಂತೆ. ಹಾಗಾಗಿ, ತಾನು “ವೈರ’ ಸಿನಿಮಾವನ್ನು ನಿರ್ದೇಶಿಸಬೇಕಾಯಿತು ಎಂದು ಹೇಳಿಕೊಂಡರು ನವರಸನ್. ಅವರ ಮಾತಿಗೆ ವೇದಿಕೆಯಾಗಿದ್ದು “ವೈರ’ ಚಿತ್ರದ ಟ್ರೇಲರ್ ಬಿಡುಗಡೆ. ಇತ್ತೀಚೆಗೆ ಚಿತ್ರತಂಡ ಜೊತೆಯಾಗಿ “ವೈರ’
ಚಿತ್ರದ ಟ್ರೇಲರ್ ಬಿಡುಗಡೆ ಮಾಡಿತು.
ನಿರ್ಮಾಪಕ ಮಂಜುನಾಥ್ ಅವರು ಈ ಸಿನಿಮಾ ನಿರ್ಮಿಸಲು ಕಾರಣ ಚಿತ್ರದ ಕಥೆಯಂತೆ. “ನನಗೆ ಸಣ್ಣ ಸಿನಿಮಾ ದೊಡ್ಡ ಸಿನಿಮಾ ಎಂದಿಲ್ಲ. ಕಥೆ ಮುಖ್ಯ. ಕಥೆ ಚೆನ್ನಾಗಿದ್ದರೆ ನಾನು ಸಿನಿಮಾ ಮಾಡುತ್ತೇನೆ. ನವರಸನ್ ಬಂದು ಕಥೆ ಹೇಳಿದರು. ಆ ಸಿನಿಮಾವನ್ನು ನಾನು ಕನಸು ಕಂಡೆ. ನನ್ನ ಕನಸಿನಂತೆ ಈ ಸಿನಿಮಾವನ್ನು ಮಾಡಿಕೊಡಿ ಎಂದೆ. ಅದರಂತೆ ನವರಸನ್ ಚೆನ್ನಾಗಿ ಸಿನಿಮಾ ಮಾಡಿದ್ದಾರೆ. ಕನ್ನಡಕ್ಕೆ ಇದು ಒಳ್ಳೆಯ ಸಿನಿಮಾವಾಗುವ ವಿಶ್ವಾಸವಿದೆ’ ಎನ್ನುವುದು ಮಂಜುನಾಥ್ ಮಾತು.
ಚಿತ್ರಕ್ಕೆ ರವಿ ಬಸ್ರೂರು ಸಂಗೀತ, ಹಿನ್ನೆಲೆ ಸಂಗೀತ ನೀಡಿದ್ದಾರೆ. ನಿರ್ದೇಶಕರು ಬಂದು ತಮ್ಮ ಸಿನಿಮಾಕ್ಕೆ ಕೆಲಸ ಮಾಡಿಕೊಡಿ ಎಂದಾಗ, “ಫ್ರೆಂಡ್‌ಶಿಪ್ ಇದ್ದರೆ ಜೊತೆಗೆ ಟಿ ಕುಡಿಯುವ, ಊಟ ಮಾಡುವ. ಕೆಲಸ ಮಾತ್ರ ನನಗೆ ಇಷ್ಟವಾದರೆ ಮಾತ್ರ ಮಾಡುತ್ತೇನೆ’ ಎಂದರಂತೆ ರವಿ ಬಸ್ರೂರು. ಆದರೆ, ಸಿನಿಮಾ ನೋಡಿದ ಕೂಡಲೇ ಖುಷಿಯಿಂದ ಕೆಲಸ ಮಾಡಿಕೊಡುತ್ತೇನೆ ಎಂದರಂತೆ. ಹೀಗೆ ಖುಷಿಯಿಂದ ಹೇಳಿಕೊಂಡೆ ರವಿ ಬಸ್ರೂರುಗೆ ಮೈಕ್ ಕೊಟ್ಟರು ನವರಸನ್. ಚಿತ್ರ ಕತೆಯಿಂದ ಹಿಡಿದು ತಾಂತ್ರಿಕವಾಗಿ ಸಿನಿಮಾ ಚೆನ್ನಾಗಿ ಬಂದಿದ್ದು, ಹಿನ್ನೆಲೆ ಸಂಗೀತಕ್ಕೆ ಹೆಚ್ಚಿನ ಮಹತ್ವವಿದೆಯಂತೆ. ಆ ಕಾರಣದಿಂದ ತಾನು ಒಪ್ಪಿಕೊಂಡಿದ್ದಾಗಿ ಹೇಳಿದರು. ನಾಯಕಿ ಪ್ರಿಯಾಂಕಾ
ಮಲಾ°ಡ್ ಅವರದ್ದು ಕಥೆಗೆ ಟ್ವಿಸ್ಟ್ ಕೊಡುವ ಪಾತ್ರವಂತೆ. ಹಿರಿಯ ನಿರ್ಮಾಪಕ ಜಿ.ಕೆ.ರೆಡ್ಡಿ ಕೂಡಾ ತಂಡಕ್ಕೆ
ಶುಭಕೋರಿದರು.