ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿ ನಾಯಕ ನಟನಾಗಿ ಸ್ಯಾಂಡಲ್‌ವುಡ್‌ಗೆ ಪರಿಚಯವಾಗುತ್ತಿದ್ದಾರೆ. ಅಂದಹಾಗೆ, ಪ್ರವೀರ್ ಶೆಟ್ಟಿ ಅಭಿನಯದ ಚೊಚ್ಚಲ ಚಿತ್ರ “ಸೈರನ್’ ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
“ಡೆಕ್ಕನ್ ಕಿಂಗ್’ ಬ್ಯಾನರ್‌ನಲ್ಲಿ ಬಿಜು ಶಿವಾನಂದ್ ನಿರ್ಮಿಸುತ್ತಿರುವ, ಸಸ್ಪೆನ್ಸ್ ಕಂ ಆ್ಯಕ್ಷನ್ ಕ್ರೈಂ-ಥ್ರಿಲ್ಲರ್ ಕಥಾಹಂದರದ “ಸೈರನ್’ ಚಿತ್ರಕ್ಕೆ ರಾಜ ವೆಂಕಯ್ಯ ನಿರ್ದೇಶನವಿದೆ. ಚಿತ್ರದಲ್ಲಿ ಪ್ರವೀರ್ ಶೆಟ್ಟಿಗೆ ಮಲೆಯಾಳಿ ಬೆಡಗಿ ಲಾಸ್ಯ ನಾಯಕಿಯಾಗಿ ಜೋಡಿಯಾಗಿದ್ದು, ಉಳಿದಂತೆ ಅಚ್ಯುತ ಕುಮಾರ್, ಶರತ್ ಲೋಹಿತಾಶ್ವ, ಪವಿತ್ರಾ ಲೋಕೇಶ್, ಸ್ಪರ್ಶ ರೇಖಾ, ಸುಕನ್ಯಾ, ಸಾಯಿ ದೀನಾ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ “ಸೈರನ್’ ಸಿನಿಮಾದ ಟೀಸರ್, ಟ್ರೇಲರ್ ಮತ್ತು ಹಾಡುಗಳು ಮಾಸ್ ಆಡಿಯನ್ಸ್ ಗಮನ ಸೆಳೆಯಲು ಯಶಸ್ವಿಯಾಗಿದ್ದು, ಸಿನಿಮಾ ಕೂಡ ಥಿಯೇಟರ್‌ನಲ್ಲಿ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂಬ ವಿಶ್ವಾಸದಲ್ಲಿದೆ ಚಿತ್ರತಂಡ.
“ಇದೊಂದು ಸಸ್ಪೆನ್ಸ್, ಕ್ರೈಂ-ಥ್ರಿಲ್ಲರ್ ಶೈಲಿಯ ಸಿನಿಮಾ. ಸಿನಿಮಾದ ಕಥೆ ಚೆನ್ನಾಗಿದ್ದ ಕಾರಣ ಈ ಸಿನಿಮಾ ಒಪ್ಪಿಕೊಂಡೆ. ಸಿನಿಮಾ ಚೆನ್ನಾಗಿ ಮೂಡಿಬಂದಿದ್ದು, ಆಡಿಯನ್ಸ್‌ಗೆ ಇಷ್ಟವಾಗುವಂತ ಒಂದೊಳ್ಳೆ ಸಿನಿಮಾ ಇದಾಗಲಿದೆ’ ಎಂದು “ಸೈರನ್’ ಬಗ್ಗೆ ಭರವಸೆಯ ಮಾತುಗಳ ನ್ನಾಡುತ್ತಾರೆ ಯುವ ನಾಯಕ ಪ್ರವೀರ್ ಶೆಟ್ಟಿ.