ತೆಲುಗು-ತಮಿಳು ಸೇರಿದಂತೆ ಪರಭಾಷೆಗಳಿಗೆ ಡಬ್ ಆಗಿ ಬಿಡುಗಡೆಯಾಗುತ್ತಿರುವ ಕನ್ನಡ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಿದೆ. ಹೀಗೆ ಆರಂಭದಲ್ಲಿ ತಮ್ಮ ಪರಭಾಷಾ ಬಿಡುಗಡೆಯನ್ನು ಘೋಷಿಸಿಕೊಂಡ ಚಿತ್ರಗಳು ನಿಜಕ್ಕೂ ಬಿಡುಗಡೆಯಾಗಿವೆಯಾ? ಅಲ್ಲಿನ ವಿತರಕರು ಸಿನಿಮಾ ಬಿಡುಗಡೆಗೆ ಮುಂದಾಗುತ್ತಾರಾ? ಅಲ್ಲಿ ಥಿಯೇಟರ್ ಸಿಗುತ್ತಾ? ಎಂಬ ಪ್ರಶ್ನೆಗಳು ಎದುರಾಗುತ್ತವೆ. ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದರೆ, ಹೊಸಬರಿಗೆ ತುಂಬಾನೇ ಕಷ್ಟವಿದೆ ಎಂಬ ಉತ್ತರ ಬರುತ್ತದೆ.
ಕನ್ನಡ ಚಿತ್ರಗಳು ಗಡಿದಾಟಿ ಹೋಗುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಬೇರೆ ಬೇರೆ ರಾಜ್ಯಗಳಲ್ಲಿ ಬಿಡುಗಡೆಯಾಗುತ್ತಿರೋದು ಒಂದು ವಿಚಾರವಾದರೆ, ಈಗ ಕನ್ನಡ ಸಿನಿಮಾಗಳು ಕನ್ನಡದ ಜೊತೆಗೆ ತೆಲುಗು, ತಮಿಳು ಸೇರಿದಂತೆ ಇತರ ಭಾಷೆಗಳಲ್ಲೂ ತಯಾರಾಗುತ್ತಿವೆ. ಆಯಾ ಭಾಷೆಯ ಜನರಿಗೆ ಅವರ ಭಾಷೆಯಲ್ಲೇ ಸಿನಿಮಾ ಕೊಡುವ ಪ್ರಯತ್ನ ಒಂದಾದರೆ, ತನ್ನ ಮಾರುಕಟ್ಟೆಯ ವಿಸ್ತರಣೆಯ ಮತ್ತೂಂದು ಭಾಗ ಕೂಡಾ ಇದು. ಈಗಾಗಲೇ ಅನೇಕ ಕನ್ನಡ ಚಿತ್ರಗಳು ಕನ್ನಡದ ಜೊತೆಗೆ ತಮಿಳು, ತೆಲುಗಿನಲ್ಲೂ ಬಿಡುಗಡೆಯಾಗಿವೆ. ತಯಾರಾಗುತ್ತಿರುವ ಇನ್ನೊಂದಿಷ್ಟು ಚಿತ್ರಗಳು ಕೂಡಾ ಮಲ್ಟಿಲಾಂಗ್ವೇಜ್ ಕಾನ್ಸೆಪ್ಟ್ನಲ್ಲೇ ಬರುತ್ತಿವೆ. ಇತ್ತೀಚೆಗೆ ಬಹುಭಾಷೆಯಲ್ಲಿ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡ ಚಿತ್ರವೆಂದರೆ “ಕೆಜಿಎಫ್’. ತೆರೆಕಂಡ ಎಲ್ಲಾ ಭಾಷೆಯಲ್ಲೂ ಚಿತ್ರಕ್ಕೆ ಅದ್ಧೂರಿ ಸ್ವಾಗತ ಸಿಗುವ ಮೂಲಕ ಸಿನಿಮಾ ಹಿಟ್‌ಲಿಸ್ಟ್ ಸೇರಿದ್ದು ಗೊತ್ತೇ ಇದೆ. ಇದು ಅನೇಕ ಕನ್ನಡ ಚಿತ್ರಗಳಿಗೆ ಸ್ಫೂರ್ತಿ ತಂದಿದ್ದು ಸುಳ್ಳಲ್ಲ. ಹಾಗಂತ ಬಿಡುಗಡೆಯಾದ ಎಲ್ಲಾ ಚಿತ್ರಗಳು “ಕೆಜಿಎಫ್’ ಆಗಲ್ಲ. “ಕೆಜಿಎಫ್’ ಮೇಕಿಂಗ್, ಸ್ಟಾರ್‌ವ್ಯಾಲ್ಯೂ, ಕಂಟೆಂಟ್ ಮೂಲಕ ಗಮನ ಸೆಳೆಯುವ ಜೊತೆಗೆ ಎಲ್ಲಾ ಭಾಷೆಗಳಲ್ಲೂ ದೊಡ್ಡ ದೊಡ್ಡ ವಿತರಕರು ಮುಂದೆ ಬರುವ ಮೂಲಕ “ಕೆಜಿಎಫ್’ ಮತ್ತೂಂದು ಲೆವೆಲ್‌ಗೆ ಹೋಗುವಂತಾಯಿತು. ಇವೆಲ್ಲವೂ “ಕೆಜಿಎಫ್’ನ ಯಶಸ್ಸಿನಲ್ಲಿ ಸೇರಿಕೊಂಡಿವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.
ಸದ್ಯ ಬಹುತೇಕ ಕನ್ನಡ ಸಿನಿಮಾಗಳು ಪರಭಾಷೆಯಲ್ಲೂ ತಯಾರಾಗುತ್ತಿವೆ ಎಂದು ಹೇಳಿಕೊಳ್ಳುವುದನ್ನು ನೀವು ಕೇಳಿರಬಹುದು. ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ “ಉದ^ರ್ಷ’ ತಮಿಳು, ತೆಲುಗು, ಮಲಯಾಳಂನಲ್ಲೂ ತಯಾರಾಗಿತ್ತು. ಹಾಗಾದರೆ ಆ ಚಿತ್ರ ಅಲ್ಲಿ ಬಿಡುಗಡೆಯಾಯಿತಾ, ಬಿಡುಗಡೆಯಾದರೆ ಪ್ರತಿಕ್ರಿಯೆ ಹೇಗಿತ್ತು ಎಂಬ ಕುತೂಹಲವೂ ಪ್ರೇಕ್ಷಕರಿಗಿರುತ್ತದೆ. ಇಷ್ಟೇ ಅಲ್ಲದೇ, ಮೊನ್ನೆ ಮೊನ್ನೆ ಕನ್ನಡದಲ್ಲಿ ಬಿಡುಗಡೆಯಾದ “ಖನನ’, “ಅನುಷ್ಕಾ’ ಚಿತ್ರಗಳು ಕೂಡಾ ತಮಿಳು-ತೆಲುಗಿನಲ್ಲೂ ತಯಾರಾಗಿವೆ. ಆ ಚಿತ್ರಗಳ ಪರಭಾಷಾ ಕಥೆಯೇನು ಎಂಬ ಪ್ರಶ್ನೆಗಳು ಸಹಜ. ಪರಭಾಷೆಯಲ್ಲಿ ಕನ್ನಡ ಚಿತ್ರವೊಂದು ಡಬ್ ಆಗಿ ಬಿಡುಗಡೆಯಾದಾಗ ಅದಕ್ಕೆ ಅಲ್ಲಿ ಮಾರುಕಟ್ಟೆ ಇದೆಯಾ, ಅಲ್ಲಿನ ವಿತರಕರು ಮುಂದೆ ಬರುತ್ತಾರಾ ಎಂಬ ಪ್ರಶ್ನೆಗೆ ಸಿನಿಮಾ ಮಂದಿಯಿಂದ ಮಿಶ್ರಪ್ರತಿಕ್ರಿಯೆ ಬರುತ್ತದೆ. ಏಕೆಂದರೆ ಪರಭಾಷೆಯ ಸಿನಿಮಾಗಳು ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿವೆ ಮತ್ತು ಅಷ್ಟೇ ಸದ್ದು ಮಾಡುತ್ತಿವೆ. ಹಾಗಾದರೆ, ತೆಲುಗು-ತಮಿಳು ಸೇರಿದಂತೆ ಪರಭಾಷೆಗಳಿಗೆ ಡಬ್ ಆಗಿ ಬಿಡುಗಡೆಯಾಗುತ್ತಿರುವ ಕನ್ನಡ ಸಿನಿಮಾಗಳ ಕಥೆಯೇನು? ಅಲ್ಲಿನ ವಿತರಕರು ಸಿನಿಮಾ ಬಿಡುಗಡೆಗೆ ಮುಂದಾಗುತ್ತಾರಾ? ಥಿಯೇಟರ್ ಸಿಗುತ್ತಾ? ಎಂಬ ಪ್ರಶ್ನೆಗಳು ಎದುರಾಗುತ್ತವೆ. ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದರೆ, ಹೊಸಬರಿಗೆ ತುಂಬಾನೇ ಕಷ್ಟವಿದೆ ಎಂಬ ಉತ್ತರ ಬರುತ್ತದೆ.
ಇತ್ತೀಚೆಗೆ ಸುನೀಲ್ ಕುಮಾರ್ ದೇಸಾಯಿಯವರು ತಮ್ಮ “ಉದ^ರ್ಷ’ ಚಿತ್ರದ ತಮಿಳು ಅವತರಣಿಕೆಯನ್ನು ಬಿಡುಗಡೆ ಮಾಡಿದರು. ಅವರ ಅನುಭವ ಪ್ರಕಾರ, ಹೊಸಬರಿಗೆ ಪರಭಾಷೆಯಲ್ಲಿ ಸಿನಿಮಾ ಬಿಡುಗಡೆ ಮಾಡುವುದು ಸುಲಭದ ಕೆಲಸವಲ್ಲ. “ಸ್ಟಾರ್‌ಗಳ ಸಿನಿಮಾವಾದರೆ ಪರಭಾಷೆಯಲ್ಲಿ ಬಿಡುಗಡೆಗೆ ವಿತರಕರು ಮುಂದೆ ಬರುತ್ತಾರೆ, ಒಂದು ಮಟ್ಟಿಗೆ ಥಿಯೇಟರ್ ಕೂಡಾ ಸಿಗುತ್ತದೆ. ಆದರೆ, ಹೊಸಬರು ಪರಭಾಷೆಯಲ್ಲಿ ತಮ್ಮ ಸಿನಿಮಾ ಬಿಡುಗಡೆ ಮಾಡೋದು ಕಷ್ಟ. ಹೊಸಬರ ಸಿನಿಮಾಕ್ಕೆ ವಿತರಕರು ಮುಂದೆ ಬರೋದಿಲ್ಲ. ನಾವೇ ಯಾರೋ ವಿತರಕರನ್ನು ಹಿಡಿದು ಚಿತ್ರಮಂದಿರದ ಬಾಡಿಗೆ ಕಟ್ಟಿ ಬಿಡುಗಡೆ ಮಾಡಬೇಕು. ಹಾಗಂತ ದೊಡ್ಡ ಮಟ್ಟದ ಓಪನಿಂಗ್ ಸಿಗುತ್ತದೆ ಎನ್ನುವಂತಿಲ್ಲ’ ಎನ್ನುವುದು ದೇಸಾಯಿ ಮಾತು. ಇನ್ನು, “ಉದ^ರ್ಷ’ ಚಿತ್ರ ತೆಲುಗಿನಲ್ಲೂ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿತ್ತು. ಆದರೆ, ಅಲ್ಲಿ ಇನ್ನೂ ಬಿಡುಗಡೆಯಾಗಿಲ್ಲ. “ದಿ ವಿಲನ್’ ಚಿತ್ರ ಕೂಡಾ ತೆಲುಗಿನಲ್ಲಿ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.
ಕೆಲವೊಮ್ಮೆ ಸಿನಿಮಾಗಳ ಫಲಿತಾಂಶ, ಜನರ ಪ್ರತಿಕ್ರಿಯೆ ಮೇಲೆ ಪರಭಾಷಾ ಚಿತ್ರ ಬಿಡುಗಡೆ ನಿರ್ಧಾರವಾಗಿರುತ್ತದೆ ಕೂಡಾ. ಇನ್ನು, ಕನ್ನಡದಿಂದ ತೆಲುಗು ಅಥವಾ ಇನ್ಯಾವುದೋ ಭಾಷೆಗೆ ಡಬ್ ಮಾಡಿ, ಒಳ್ಳೆಯ ಗುಣಮಟ್ಟದೊಂದಿಗೆ ಬಿಡುಗಡೆ ಮಾಡಲು ಏನಿಲ್ಲವೆಂದರೆ 20 ರಿಂದ 30 ಲಕ್ಷ ರೂಪಾಯಿ ಬೇಕಾಗುತ್ತದೆ. ಹಾಗಾದರೆ, ಹೊಸಬರು ಇಷ್ಟೊಂದು ಖರ್ಚು ಮಾಡಿ ಬಿಡುಗಡೆ ಮಾಡಿ, ಹಾಕಿದ ಹಣ ಬರದಿದ್ದರೆ ಎಂಬ ಪ್ರಶ್ನೆಗೆ ಉತ್ತರ ಡಿಜಿಟಲ್, ಸ್ಯಾಟಲೈಟ್. ನಿಮ್ಮ ಸಿನಿಮಾ ಬಗ್ಗೆ ಒಂದು ಮಟ್ಟಕ್ಕೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾದರೂ, ಆ ಭಾಷೆಯಲ್ಲಿ ನಿಮಗೆ ಟಿವಿರೈಟ್ಸ್ ಸೇರಿದಂತೆ ಇತರ ಡಿಜಿಟಲ್ ರೈಟ್ಸ್ ಮಾರಾಟವಾಗುತ್ತವೆ. ಅದು ನಿರ್ಮಾಪಕರನ್ನು ಕಾಯುತ್ತದೆಯಷ್ಟೇ. ಇತ್ತೀಚೆಗಷ್ಟೇ ಕನ್ನಡದಲ್ಲಿ ತೆರೆಕಂಡಿರುವ ಹೊಸಬರ “ಖನನ’ ಚಿತ್ರ ಕೂಡಾ ತೆಲುಗು, ತಮಿಳಿನಲ್ಲಿ ತೆರೆಕಾಣಲಿದೆ. ಈ ಬಗ್ಗೆ ಮಾತನಾಡುವ “ಖನನ’ ನಿರ್ದೇಶಕ ರಾಧಾ, “ನಮ್ಮ ಚಿತ್ರ ಮೇ 24ರಂದು ತೆಲುಗಿನಲ್ಲಿ ತೆರೆಕಾಣುತ್ತಿದೆ. ನಾನು ತೆಲುಗಿನಲ್ಲಿ ಕೆಲಸ ಮಾಡಿರುವುದರಿಂದ ನನಗೆ ಅಲ್ಲೊಂದಿಷ್ಟು ಪರಿಚಯವಿದೆ. ಹಾಗಾಗಿ, ವಿತರಕರು ಸೇರಿದಂತೆ ಚಿತ್ರಮಂದಿರ ಸಿಕ್ಕಿದೆ. ನಮ್ಮ ಸಿನಿಮಾದ ಟ್ರೇಲರ್ ಹಿಟ್ ಆಗುವ ಜೊತೆಗೆ ಕನ್ನಡದಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿರುವುದರಿಂದ ಅಲ್ಲೂ ಸಿನಿಮಾ ಬಗ್ಗೆ ವಿಶ್ವಾಸ ಮೂಡಿದೆ’ ಎನ್ನುತ್ತಾರೆ ರಾಧಾ. ಇನ್ನು, ಪರಭಾಷೆಯಲ್ಲಿ ನಮ್ಮ ಸಿನಿಮಾ ಬಗ್ಗೆ ಒಂದಷ್ಟು ನಿರೀಕ್ಷೆ ಮೂಡಲು, ಅಲ್ಲಿನ ಚಿತ್ರರಂಗ ತಿರುಗಿ ನೋಡುವಂತಾಗಲು ಆ ಚಿತ್ರರಂಗದ ದೊಡ್ಡ ನಿರ್ದೇಶಕ, ನಿರ್ಮಾಪಕ, ವಿತರಕರ ಪ್ರೋತ್ಸಾಹವೂ ಮುಖ್ಯ ಎನ್ನುವುದು ರಾಧಾ ಮಾತು. ಅಲ್ಲಿನ ಚಿತ್ರರಂಗದ ಮಂದಿ ಪರಭಾಷೆಯಿಂದ ಬಂದವರ ಬೆನ್ನುತಟ್ಟಿದಾಗ ಹೊಸಬರಿಗೆ ಅಲ್ಲೊಂದು ಮಾರುಕಟ್ಟೆ ಸೃಷ್ಟಿಯಾಗುತ್ತದೆ ಎನ್ನುತ್ತಾರೆ. ಹಾಗಾಗಿ, ಸಿನಿಮಾದ ಕಂಟೆಂಟ್, ಪ್ರಚಾರ ಜೊತೆಗೆ ಪರಭಾಷೆಯಲ್ಲಿ ನಮ್ಮ ಸಿನಿಮಾ ಕ್ಲಿಕ್ ಆಗಲು ಅಲ್ಲಿನ ಚಿತ್ರರಂಗದವರ ಬೆಂಬಲ ಕೂಡಾ ಮುಖ್ಯ ಎಂಬಂತಾಯಿತು. ಈಗಾಗಲೇ ತೆಲುಗಿನಲ್ಲಿ ಸಿನಿಮಾ ಮಾಡಿರುವ ನಿರ್ದೇಶಕ ಆರ್.ಚಂದ್ರು ಕೂಡಾ ಹೊಸಬರಿಗೆ ಪರಭಾಷೆಯಲ್ಲಿ ಮಾರುಕಟ್ಟೆ ಸೃಷ್ಟಿಸುವುದು ಕಷ್ಟ ಎನ್ನುತ್ತಾರೆ. “ಸುದೀಪ್, ಉಪೇಂದ್ರ ಸೇರಿದಂತೆ ಸ್ಟಾರ್‌ಗಳ ಸಿನಿಮಾಗಳಿಗೆ ಪರಭಾಷೆಯಲ್ಲಿ ಒಳ್ಳೆಯ ಮಾರುಕಟ್ಟೆ ಇದೆ. ವಿತರಕರು ಅವರಾಗಿಯೇ ಮುಂದೆ ಬರುತ್ತಾರೆ. ಅದೇ ನೀವು ಹೊಸಬರಾದರೆ ಅಲ್ಲಿ ಚಿತ್ರಮಂದಿರ ಸಿಗೋದು ಸುಲಭವಲ್ಲ’ ಎನ್ನುತ್ತಾರೆ.
ವಿತರಕ ಜಾಕ್ ಮಂಜು ಮಾತ್ರ ಸಿನಿಮಾದ ಕಂಟೆಂಟ್ ಚೆನ್ನಾಗಿದ್ದರೆ ಪರಭಾಷೆಯಲ್ಲೂ ಮಿಂಚಬಹುದು ಎನ್ನುತ್ತಾರೆ. “ಇವತ್ತು ಸಿನಿಮಾ ಭಾಷೆಯ ಗಡಿದಾಟಿದೆ. ನಿಮ್ಮ ಸಿನಿಮಾದ ಕಂಟೆಂಟ್ ಚೆನ್ನಾಗಿದ್ದರೆ, ಎಲ್ಲಾ ಭಾಷೆಗಳಿಗೂ ಹೊಂದುವಂತಿದ್ದರೆ ಖಂಡಿತಾ ಪರಭಾಷೆಯಲ್ಲೂ ಮಾರುಕಟ್ಟೆ ಸೃಷ್ಟಿಯಾಗುತ್ತದೆ. ಆದರೆ, ಇಲ್ಲಿಗಿಂತ ಹೆಚ್ಚು ಶ್ರಮ ಹಾಕಬೇಕಾಗುತ್ತದೆ. ಈಗಾಗಲೇ ಸುದೀಪ್, ಉಪೇಂದ್ರ ಸೇರಿದಂತೆ ಅನೇಕ ಹೀರೋಗಳ ಸಿನಿಮಾಗಳು ಅಲ್ಲಿ ಬಿಡುಗಡೆಯಾಗಿವೆ ಮತ್ತು ಯಶಸ್ಸು ಕಂಡಿವೆ’ ಎನ್ನುತ್ತಾರೆ.
ಯಾವುದೇ ಕ್ಷೇತ್ರವಾದರೂ ಸೋಲು-ಗೆಲುವು ಸಹಜ. ಈಗ ಮಲ್ಟಿಲಾಂಗ್ವೇಜ್ ಕಾನ್ಸೆಪ್ಟ್ನಲ್ಲೂ ಇದೇ ಮುಂದುವರೆಯುತ್ತಿದೆ. ಆದರೆ, ಈ ತರಹದ ಒಂದು ಪ್ರಯತ್ನದ ಮೂಲಕ ಕನ್ನಡ ಚಿತ್ರ ಗಡಿದಾಟುತ್ತಿದೆ ಎಂಬುದು ಖುಷಿಯ ವಿಚಾರವೇ ಸರಿ.
ರವಿಪ್ರಕಾಶ್ ರೈ