“ನಾನು ಬ್ಯಾಚುಲರ್ ಆಗಿದ್ದಾಗ ಶುರು ಮಾಡಿದ ಸಿನಿಮಾ, ಮದುವೆಯಾದ ನಂತರ ಬಿಡುಗಡೆಯಾಗುತ್ತಿದೆ. ಸ್ವಲ್ಪ ತಡವಾದರೂ, ತುಂಬ ಚೆನ್ನಾಗಿ ಸಿನಿಮಾ ಬಂದಿದೆ. ಎಲ್ಲ ಬ್ಯಾಚುಲರ್‌ಗಳು ಎದುರಿಸುವ ಸಂಕಟ, ಸಮಸ್ಯೆಯನ್ನು ತುಂಬಾ ಫನ್ ಆಗಿ ಈ ಸಿನಿಮಾದಲ್ಲಿ ಹೇಳಲಾಗಿದೆ. ಎಂಟರ್‌ಟೈನ್ಮೆಂಟ್ ಜೊತೆಗೆ ಒಂದಷ್ಟು ಎಮೋಶನ್ಸ್ ಕೂಡ ಇದೆ. ಈ ಸಿನಿಮಾ ಕೇವಲ ಬ್ಯಾಚುಲರ್ಗೆ ಮಾತ್ರವಲ್ಲದೆ, ಮದುವೆಯಾದವರಿಗೂ ಇಷ್ಟವಾಗುತ್ತದೆ’ ಇದು ನಾಯಕ ನಟ ಡಾರ್ಲಿಂಗ್ ಕೃಷ್ಣ ಮಾತು. ಅಂದಹಾಗೆ, ಕೃಷ್ಣ ಇಂಥದ್ದೊಂದು ಮಾತನಾಡಿರುವುದು ಬಿಡುಗಡೆಗೆ ರೆಡಿಯಾಗಿರುವ ತಮ್ಮ “ಮಿ. ಬ್ಯಾಚುಲರ್’ ಸಿನಿಮಾದ ಬಗ್ಗೆ.
ಹೌದು, ಸುಮಾರು ನಾಲ್ಕು ವರ್ಷಗಳ ಹಿಂದೆ ಶುರುವಾಗಿದ್ದ “ಮಿ. ಬ್ಯಾಚುಲರ್’ ಸಿನಿಮಾ ಈಗ ತೆರೆಗೆ ಬರಲು ಮುಹೂರ್ತ ಫಿಕ್ಸ್ ಆಗಿದೆ. ಅಂದಹಾಗೆ, “ಮಿ. ಬ್ಯಾಚುಲರ್’ ಇದೇ ಜನವರಿ. 6ರಂದು ತೆರೆಗೆ ಬರುತ್ತಿದ್ದು, ಸದ್ಯ ನಿಧಾನವಾಗಿ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚೆಗಷ್ಟೇ “ಮಿ. ಬ್ಯಾಚುಲರ್’ ಸಿನಿಮಾದ ಮೊದಲ ಹಾಡನ್ನು ಬಿಡುಗಡೆ ಮಾಡಿದೆ.
ಇದೇ ವೇಳೆ ಮಾತನಾಡಿದ ನಟ ಕೃಷ್ಣ, “ಮೊದಲ ಬಾರಿಗೆ ತೆಲುಗಿನ ರೆಡ್ಡಿ ಬಂಡಾರು ಕನ್ನಡದಲ್ಲಿ ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಸಿನಿಮಾದ ಕಥೆ, ಮೇಕಿಂಗ್ ಎಲ್ಲವೂ ಹೊಸಥರದಲ್ಲಿದೆ. ನಾನು ಬ್ಯಾಚುಲರ್ ಆಗಿದ್ದಾಗ ಈ ಸಿನಿಮಾ ಶುರುವಾಯ್ತು. ಈ ಸಿನಿಮಾದಿಂದ ಬಂದ ಸಂಭಾವನೆಯಿಂದಲೇ “ಲವ್ ಮಾಕ್ಟೇಲ್’ ಸಿನಿಮಾ ಕಂಪ್ಲೀಟ್ ಮಾಡಿದ್ದೆ. ಕಷ್ಟಕಾಲದಲ್ಲಿ ನನ್ನನ್ನು ಹುಡುಕಿಕೊಂಡು ಬಂದ ಸಿನಿಮಾ ಇದು. ಈ ಸಿನಿಮಾದ ಬಗ್ಗೆ ಮತ್ತು ತಂಡದ ಬಗ್ಗೆ ನನಗೂ ಒಂದು ವಿಶೇಷ ಪ್ರೀತಿ, ಕಾಳಜಿಯಿದೆ. ಕನ್ನಡ ಸರಿಯಾಗಿ ಬಾರದಿದ್ದರೂ, ನಿರ್ದೇಶಕ ರೆಡ್ಡಿ ಕನ್ನಡ ಆಡಿಯನ್ಸ್ ಮನಮುಟ್ಟುವಂತೆ ಸಿನಿಮಾ ಮಾಡಿದ್ದಾರೆ. ತುಂಬಾ ರಿಚ್ ಮೇಕಿಂಗ್ ಸಿನಿಮಾದಲ್ಲಿದೆ. ಸಿನಿಮಾ ಕನ್ನಡದ ಆಡಿಯನ್ಸ್‌ಗೆ ಖಂಡಿತವಾಗಿಯೂ ಇಷ್ಟವಾಗುತ್ತದೆ’ ಎಂದು ಭರವಸೆ ವ್ಯಕ್ತಪಡಿಸಿದರು.
“ಮಿ. ಬ್ಯಾಚುಲರ್’ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣಗೆ ನಿಮಿಕಾ ರತ್ನಾಕರ್ ನಾಯಕಿಯಾಗಿ ಜೋಡಿಯಾಗಿದ್ದು, ಮತ್ತೂಬ್ಬ ನಟಿ ಮಿಲನಾ ನಾಗರಾಜ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. “ನಾನು ತುಂಬ ಖುಷಿಯಿಂದ ಮಾಡಿದ ಸಿನಿಮಾ “ಮಿ. ಬ್ಯಾಚುಲರ್’ ಆಡಿಯನ್ಸ್‌ಗೂ ಅಷ್ಟೇ ಖುಷಿ ಕೊಡುತ್ತದೆ ಎಂಬ ನಂಬಿಕೆಯಿದೆ. ಹಾಡಿನಲ್ಲೇ ಸಿನಿಮಾದ ಕ್ವಾಲಿಟಿ, ರಿಚ್‌ನೆಸ್ ಕಾಣುತ್ತಿದೆ. ಸಿನಿಮಾ ಕೂಡ ಹಾಗೇ ಬಂದಿದೆ’ ಎಂಬುದು ನಿಮಿಕಾ ಮಾತು.
“ಮಿ. ಬ್ಯಾಚುಲರ್’ ಸಿನಿಮಾದ ಹಾಡುಗಳಿಗೆ ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸಿದ್ದು, ವಿಜಯ ಪ್ರಕಾಶ್ ಮೊದಲಾದ ಗಾಯಕರು ಹಾಡುಗಳಿಗೆ ಧ್ವನಿಯಾಗಿದ್ದಾರೆ. “ಮಿ. ಬ್ಯಾಚುಲರ್’ ಸಿನಿಮಾದ ಮೊದಲ ಸಾಂಗ್ ಬಿಡುಗಡೆ ವೇಳೆ ಹಾಜರಿದ್ದ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ. ಮ ಹರೀಶ್, “ಝೇಂಕಾರ್ ಮ್ಯೂಸಿಕ್’ನ ಭರತ್ ಜೈನ್ ಮೊದಲಾದವರು ಚಿತ್ರತಂಡಕ್ಕೆ ಶುಭ ಹಾರೈಸಿದರು.
“ಮಿಲಿಂದ್ ರಾಸೊ ಸಿನಿಮಾಸ್’ ಮತ್ತು “ಶ್ರೀಚಂದ್ರ ಪ್ರೊಡಕ್ಷನ್ಸ್’ ಬ್ಯಾನರಿನಲ್ಲಿ ನಿರ್ಮಾಣವಾಗಿರುವ “ಮಿ. ಬ್ಯಾಚುಲರ್’ ಸಿನಿಮಾಕ್ಕೆ ರೆಡ್ಡಿ ಬಂಗಾರು ನಿರ್ದೇಶನವಿದ್ದು, “ಬೆಂಗಳೂರು ಕುಮಾರ್ ಫಿಲಂಸ್’ ಸಿನಿಮಾದ ಬಿಡುಗಡೆಯ ಹೊಣೆ ವಹಿಸಿಕೊಂಡಿದೆ. “ಒಳ್ಳೆಯ ಸಿನಿಮಾಗಳನ್ನು ನಮ್ಮ ಸಂಸ್ಥೆಯಿಂದ ಬಿಡುಗಡೆ ಮಾಡಲು ಸಿದ್ಧ’ ಎನ್ನುವುದು ಕುಮಾರ್ ಮಾತು.