ಒಂದು ಕಡೆ ಕಣ್ಣೀರು, ಇನ್ನೊಂದು ಕಡೆ ಭಾವುಕ ಹೃದಯದಲ್ಲೇ “ಜೇಮ್ಸ್’ ರಿಲೀಸ್ ಸಂಭ್ರಮ… – ಇದು ಗುರುವಾರ ರಾಜ್ಯದ ಚಿತ್ರ ಮಂದಿರಗಳಲ್ಲಿ ಕಂಡು ಬಂದ ದೃಶ್ಯ. ಇವೆರಡಕ್ಕೂ ಕಾರಣ ಪುನೀತ್ ರಾಜ್‌ಕುಮಾರ್ ಅಂಥ ಪ್ರತ್ಯೇಕವಾಗಿ ಹೇಳ ಬೇಕಿಲ್ಲ. ಅಗಲಿದ ತಮ್ಮ ನಾಯಕನ ಹುಟ್ಟುಹಬ್ಬವನ್ನು ಅಭಿಮಾನಿಗಳು ಕಣ್ಣಂಚಲ್ಲಿ ನೀರು ತುಂಬಿಕೊಂಡೇ ಆಚರಿಸಿದರೆ, ಪುನೀತ್ ನಾಯಕರಾಗಿ ನಟಿಸಿದ ಕೊನೆಯ ಸಿನಿಮಾ “ಜೇಮ್ಸ್’ ಅನ್ನು ಅದ್ಧೂರಿಯಾಗಿ ಸ್ವಾಗತಿಸುವ ಮೂಲಕ ಅಭಿಮಾನಿಗಳು ಸಂಭ್ರಮಿಸಿದರು.
ಮುಂಜಾನೆಯಿಂದಲೇ ಚಿತ್ರಮಂದಿರಗಳ ಮುಂದೆ ಸೇರಿದ್ದ ಅಭಿಮಾನಿಗಳು ಪುನೀತ್ ಚಿತ್ರವನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದರು.ಅನೇಕ ಚಿತ್ರಮಂದಿರಗಳಲ್ಲಿ ಮುಂಜಾನೆ 4 ಗಂಟೆಯಿಂದಲೇ ಪ್ರದರ್ಶನ ಆಯೋಜಿಸಿದ್ದು, ಅಭಿಮಾನಿಗಳ ಹಷೊದ್ಗಾರದೊಂದಿಗೆ ಸಿನಿಮಾ ಆರಂಭವಾಯಿತು.
ಸಿನಿಮಾದುದ್ದಕ್ಕೂ ಸ್ಕ್ರೀನ್ ಮುಂದೆ ಜೈಕಾರ ಹಾಕುತ್ತಾ, ಪುನೀತ್ ಅವರ ಸ್ಮರಣೆ ಮಾಡುವ ಅಭಿಮಾನಿಗಳನ್ನು ಕಂಡಾಗ ಪುನೀತ್ ಸಂಪಾದಿಸಿದ ಅಮೂಲ್ಯ ಎಂಥದ್ದು ಎಂಬುದು ಎದ್ದು ಕಾಣುತ್ತಿತ್ತು. ಒಂದು ಕಡೆ ಕಟೌಟ್‌ಗೆ ಹಾರ, ಹಾಲಿನಾಭಿಷೇಕ, ಪಟಾಕಿಗಳ ಸಂಭ್ರಮ ವಾದರೆ ಮತ್ತೂಂದು ಕಡೆ ಅಭಿಮಾನಿಗಳ ಜೈಕಾರ, ಕುಣಿತ ಈ ಹಿಂದಿನ ಯಾವ ಸಿನಿಮಾ ರಿಲೀಸ್‌ನಲ್ಲೂ ಕಂಡು ಬಂದಿರಲಿಲ್ಲ.
ಇನ್ನು, ಕೆಲ ಚಿತ್ರಮಂದಿರ ಗಳಲ್ಲಿ ಮೊದಲ ಪ್ರದರ್ಶನದಲ್ಲಿ 17 ಸಂಖ್ಯೆಯ ಆಸನವನ್ನು ಖಾಲಿ ಬಿಡಲಾಗಿದ್ದು, ಪುನೀತ್ ಅವರಿಗೆ ಮೀಸಲಾಗಿಟ್ಟಿದ್ದು ವಿಶೇಷವಾಗಿತ್ತು. ಬೆಂಗಳೂರಿನಲ್ಲಿ ಬಾನೆತ್ತರದಲ್ಲಿ “ಹ್ಯಾಪಿ ಬರ್ತ್ ಡೇ ಪುನೀತ್’ ಎಂಬ ಬ್ಯಾನರ್‌ಅನ್ನು ಸಣ್ಣ ಜೆಟ್ ಮೂಲಕ ಹಾರಿಸಿ ಶುಭಕೋರಿದ್ದಾರೆ. ಜಕ್ಕೂರು, ಮಲ್ಲೇಶ್ವರಂ, ಸದಾಶಿವನಗರ, ರಾಜಾಜಿನಗರ, ಮೆಜೆಸ್ಟಿಕ್ ಇತರ ಪ್ರದೇಶಗಳಲ್ಲಿ ಬ್ಯಾನರ್ ಹಾರಾಟ ನಡೆಸಿದೆ
ಅಭಿಮಾನಿಗಳಿಂದ ಅನ್ನದಾನ
ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬ ಹಾಗೂ “ಜೇಮ್ಸ್’ ರಿಲೀಸ್ ಪ್ರಯುಕ್ತ ರಾಜ್ಯದ ವಿವಿಧ ಚಿತ್ರಮಂದಿರಗಳಲ್ಲಿ ಸಿಹಿ ಹಂಚುವ ಜೊತೆಗೆ ಅನ್ನದಾನ ಕೂಡಾ ಆಯೋಜಿಸಲಾಗಿತ್ತು. ಕೆಲವು ಅಭಿಮಾನಿಗಳಿಗೆ ಬಿರಿಯಾನಿ ಕೂಡಾ ವಿತರಿಸಲಾಯಿತು. ಬೆಂಗಳೂರಿನ ವೀರಭದ್ರೇಶ್ವರ ಚಿತ್ರ ಮಂದಿರದಲ್ಲಿ ಬೆಳ್ಳಂಬೆಳಗ್ಗೆ ಅಪ್ಪು ಚಿತ್ರ ನೋಡಲು ಬಂದವರಿಗೆ ಚಹಾ ವ್ಯವಸ್ಥೆಯನ್ನು ಮಾಡಲಾಗಿದೆ. ದೋಸೆ ವ್ಯವಸ್ಥೆಯನ್ನು ಮಾಡಲಾಗಿದ್ದು, ಮಧ್ಯಾಹ್ನ ಚಿಕನ್ ಬಿರಿಯಾನಿ, ಸಂಜೆ ಸಮೋಸ ವಿತರಿಸಲಾಗಿದೆ. ಇನ್ನು ಕೆಲವು ಚಿತ್ರಮಂದಿರಗಳ ಮುಂದೆ 1001 ಈಡುಗಾಯಿ ಒಡೆಯುವ ಮೂಲಕ ಅಪ್ಪು ಬರ್ತ್‌ಡೇ ಹಾಗೂ “ಜೇಮ್ಸ್’ ರಿಲೀಸ್ ಅನ್ನು ಆಚರಿಸಲಾಯಿತು.
ದಿನಾಲೂ ಪುನೀತ್ ನಮನ
ಕನ್ನಡ ಚಿತ್ರರಂಗ ಪುನೀತ್‌ರಾಜ್‌ಕುಮಾರ್ ಅವರನ್ನು ಯಾವ ಮಟ್ಟಕ್ಕೆ ಪ್ರೀತಿಸುತ್ತಿತ್ತು ಎಂಬುದು ಪುನೀತ್ ಸಾವಿನ ನಂತರ ಸಾಬೀತಾಗುತ್ತಿದೆ. ಅಕ್ಟೋಬರ್ 29 ಪುನೀತ್ ನಮ್ಮನ್ನಗಲಿದ ದಿನ. ಪುನೀತ್ ಇಲ್ಲದೇ 4 ತಿಂಗಳು ಕಳೆದರೂ ಕನ್ನಡ ಚಿತ್ರರಂಗ ಮಾತ್ರ ಅವರನ್ನು ನೆನಯದ ದಿನವಿಲ್ಲ. ಅಂದಿನಿಂದ ಇಂದಿನವರೆಗೆ ಯಾವ್ಯಾವ ಸಿನಿಮಾ ಕಾರ್ಯಕ್ರಮವಾಯಿತೋ, ಅಷ್ಟೂ ಕಾರ್ಯಕ್ರಮಗಳಲ್ಲಿ ಪುನೀತ್ ಅವರಿಗೆ ನಮನ ಸಲ್ಲಿಸುತ್ತಲೇ ಬರುತ್ತಿದ್ದಾರೆ. ಈ ಮೂಲಕ ಪುನೀತ್ ಅವರನ್ನು ಅನುದಿನವೂ ಚಿತ್ರರಂಗ ನೆನೆಯುತ್ತಿದೆ.
ಅಪ್ಪು ನೆನೆದ ಸ್ಯಾಂಡಲ್‌ವುಡ್
ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗ ಪುನೀತ್ ರಾಜ್‌ಕುಮಾರ್ ಅವರನ್ನು ಸ್ಮರಿಸಿದೆ. ನಟ, ನಟಿ, ತಂತ್ರಜ್ಞರು ತಮ್ಮ ಸೋಶಿಯಲ್ ಮೀಡಿಯಾ, ವಾಟ್ಸಪ್ ಸ್ಟೇಟಸ್ ಗಳಲ್ಲಿ ಅಪ್ಪು ಅವರ ಫೋಟೋ ಹಾಕಿಕೊಂಡು ಅವರನ್ನು ಸ್ಮರಿಸಿದ್ದಾರೆ. ನಟರಾದ ದರ್ಶನ್, ಯಶ್, ಉಪೇಂದ್ರ ಸೇರಿ ಅನೇಕರು ಅಪ್ಪು ಸ್ಮರಣೆಗೈದಿದ್ದಾರೆ. ಇದಲ್ಲದೇ ಶ್ರೀಕಾಂತ್ ಮೆಕ್, ಮೋಹನ್ ಲಾಲ್, ವರುಣ್ ತೇಜ ಇತರರು ಟ್ಟಿಟರ್ ಮೂಲಕ ಶುಭಾಶಯಗಳನ್ನು ಕೋರಿದ್ದಾರೆ.
ನಾಲ್ಕು ಸಾವಿರಕ್ಕೂ ಹೆಚ್ಚು ಶೋ
“ಜೇಮ್ಸ್’ ಚಿತ್ರ ವಿಶ್ವದಾದ್ಯಂತ ನಾಲ್ಕು ಸಾವಿರಕ್ಕೂ ಹೆಚ್ಚು ಶೋಗೆ ಸಾಕ್ಷಿಯಾಯಿತು. ಕೇವಲ ಕನ್ನಡವಷ್ಟೇ ಅಲ್ಲದೇ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿದೆ. ಜೊತೆಗೆ ಹೊರರಾಜ್ಯ ಹಾಗೂ ಹೊರದೇಶಗಳಲ್ಲಿ ಪುನೀತ್ ಚಿತ್ರ ಏಕಕಾಲಕ್ಕೆ ಬಿಡುಗಡೆಯಾಗಿದ್ದು, ಈಗಾಗಲೇ ಎಲ್ಲಾ ಚಿತ್ರಮಂದಿರಗಳಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗಿದೆ
ಅಭಿಮಾನಿಗಳ ಕಣ್ಣೀರು
ದೊಡ್ಡ ತೆರೆಮೇಲೆ ಪುನೀತ್ ಅವರ ಕೊನೆಯ ಚಿತ್ರವನ್ನು ಕಣ್ತುಂಬಿಕೊಳ್ಳುತ್ತಿದ್ದ ಅಭಿಮಾನಿಗಳ ಭಾವುಕರಾಗಿದ್ದರು. ಅದರಲ್ಲೂ ಪುನೀತ್ ಅವರ ಎಂಟ್ರಿ, ಫೈಟ್, ಸಖತ್ ಡ್ಯಾನ್ಸ್ ನೋಡುತ್ತಿದ್ದಂತೆ ಅಭಿಮಾನಿಗಳ ಕಣ್ಣಂಚು ಒದ್ದೆಯಾಗುತ್ತಿತ್ತು. ಇಷ್ಟೊಂದು ಪವರ್‌ಫುಲ್ ಹೀರೋ ಈಗ ನಮ್ಮೊಂದಿಗಿಲ್ಲವಲ್ಲ ಎಂಬ ನೋವು ಅಭಿಮಾನಿಗಳನ್ನು ಬಲವಾಗಿ ಕಾಡುತ್ತಿತ್ತು. ಅನೇಕ ಅಭಿಮಾನಿಗಳು ಚಿತ್ರಮಂದಿರದಲ್ಲಿ ಕಣ್ಣೀರು ಹಾಕುವ ದೃಶ್ಯ ಕಂಡು ಬಂತು