ವಿ.ಮನೋಹರ್ ನಿರ್ದೇಶನದ “ದರ್ಬಾರ್’ ಚಿತ್ರ ಇಂದು ತೆರೆಕಾಣುತ್ತಿದೆ. ಔಟ್ ಅಂಡ್ ಔಟ್ ಕಾಮಿಡಿ ಅಂಶವನ್ನಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಚಿತ್ರದ ಬಗ್ಗೆ ಮಾತನಾಡುವ ವಿ.ಮನೋಹರ್, “23 ವರ್ಷಗಳ ವನವಾಸ ಮುಗಿಸಿ ಬಂದಿದ್ದೀನೆ. ನಮ್ಮ ನೋವು ದುಃಖಗಳನ್ನು ಕಾಮಿಡಿಯಾಗಿ ತಗೊಂಡಾಗ
ತೃಪ್ತಿಯಾಗುತ್ತದೆ. ಮ್ಯೂಸಿಕ್ ಮಾಡುವುದು ಇನ್ನೊಬ್ಬರ ಕನಸಿಗೆ, ಸಿನಿಮಾ ಮಾಡುವುದು ನಮ್ಮ ಕನಸಿಗೆ. ಸತೀಶ್ ನಮ್ಮ ಕನಸಿಗೆ ಜೊತೆಯಾದರು. ಚಿತ್ರದ ಟೆಸ್ಟ್ ಷೋ ಮಾಡಿದಾಗ ಒಳ್ಳೆಯ ಅಭಿಪ್ರಾಯ ಬಂತು. ಥಿಯೇಟರಿಗೆ ಬಂದ ಪ್ರೇಕ್ಷಕರಿಗೆ ಮನರಂಜನೆ ಖಚಿತ’ ಎಂದರು.
ಚಿತ್ರವನ್ನು ನಿರ್ಮಿಸಿ, ನಾಯಕರಾಗಿ ನಟಿಸಿರುವ ಸತೀಶ್ ಅವರಿಗೆ ಒಂದೊಳ್ಳೆಯ ಸಿನಿಮಾ ಮಾಡಿದ ಖುಷಿ ಇದೆ. ಈ ಕುರಿತು ಮಾತನಾಡುವ ಅವರು, “ಸಿನಿಮಾದಲ್ಲಿ ಪಾತ್ರಗಳು ಗಂಭೀರವಾಗಿರುತ್ತವೆ. ಅದು ನೋಡುಗರಿಗೆ ಮನರಂಜನೆ ನೀಡುವುದರಲ್ಲಿ ಸಂದೇಹವಿಲ್ಲ. ಸಾಂದರ್ಭಿಕ ಹಾಸ್ಯ ದೃಶ್ಯಗಳನ್ನು ಜಾಸ್ತಿ ಇಟ್ಟಿದ್ದೇವೆ ಚಿತ್ರರಂಗ ಮತ್ತೆ ಮೊದಲಿನಂತಾಗಬೇಕು. ಅದು ನಮ್ಮ ಚಿತ್ರದಿಂದಲೇ ಆಗಲಿ. ನಾನು ಸಿನಿಮಾದಲ್ಲಿ ದುಡ್ಡು ಮಾಡಲು ಬಂದಿಲ್ಲ. ಜನರಿಗೆ ಒಳ್ಳೆಯ ಸಿನಿಮಾ ಕೊಡಬೇಕು ಅಂತ ಬಂದಿದ್ದೇನೆ. ಹತ್ತು ಜನ ಬಂದು ಸಿನಿಮಾ ನೋಡಿದರೆ, ಅವರು ನೂರು ಜನಕ್ಕೆ ಖಂಡಿತ ಹೇಳ್ತಾರೆ. ಸಿನಿಮಾ ಕಮರ್ಷಿಯಲ್ ಆಗಿ ಏನಾಗುತ್ತೋ ಗೊತ್ತಿಲ್ಲ. ಒಳ್ಳೆಯ ಸಿನಿಮಾ ಟೀಮ್ ನೊಂದಿಗೆ ಕೆಲಸ ಮಾಡಿದ ತೃಪ್ತಿಯಿದೆ’ಎಂದು ಹೇಳಿದರು.
ನಾಯಕಿ ಜಾಹ್ನವಿ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಉಳಿದಂತೆ ಚಿತ್ರದಲ್ಲಿ ನಟಿಸಿರುವ ಹುಲಿ ಕಾರ್ತಿಕ್ ಸಿನಿಮಾ ನೋಡಿ ಫಿದಾ ಆದ ಬಗ್ಗೆ ಹೇಳಿಕೊಂಡರು. ಕಾಮಿಡಿ ಪಾತ್ರದಲ್ಲಿ ನಟಿಸಿರುವ ಸಂತು ಮಾತನಾಡಿದರು.