ಬೆಂಗಳೂರು: ಜಾನಪದ ನೆಲೆಯಲ್ಲಿ ಕನ್ನಡವನ್ನು ಆಧುನಿಕಗೊಳಿಸಿದ ಅಪರೂಪದ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಎಂದು ಸಾಹಿತಿ ಪ್ರೊ.ಎಲ್.ಎನ್. ಮುಕುಂದರಾಜ್ ವಿಶ್ಲೇಷಿಸಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಗುರುವಾರ ಕನ್ನಡಕ್ಕೆ ಪ್ರಪ್ರಥಮ ಜ್ಞಾನಪೀಠ ಪ್ರಶಸ್ತಿ ಸಂದ ಸುವರ್ಣ ಸಂಭ್ರಮ ವಿಚಾರ ಸಂಕಿರಣ ಮಾಲಿಕೆ-8ರಡಿ ಸದ್ಭಾವನಾ ಪ್ರತಿಷ್ಠಾನ ಹಮ್ಮಿಕೊಂಡಿದ್ದ “ಡಾ.ಚಂದ್ರಶೇಖರ ಕಂಬಾರರ ನಾಟಕಗಳು ಮತ್ತು ಕನ್ನಡತನದ ನೆಲೆಗಳು’ ಕುರಿತ ಚಿಂತನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಂಬಾರರು ಜಾನಪದ ಪ್ರಜ್ಞೆವುಳ್ಳ ಸಾಹಿತಿ, ಕವಿ, ನಾಟಕಕಾರ, ಕಾದಂಬರಿಗಾರ. ತಮ್ಮ ನಾಟಕಗಳಲ್ಲಿ ಸ್ತ್ರೀ ಸಂಕಟಗಳ ಅನಾವರಣ ಮಾಡುವುದರ ಜತೆಗೆ ಅವಳಲ್ಲಿನ ಗಟ್ಟಿತನ ಹಾಗೂ ಪುರುಷನ ಅಹಂಕಾರ ಹಾಗೂ ದೌರ್ಬಲ್ಯಗಳನ್ನು ತೋರಿಸಿದ್ದಾರೆ. ಇದು ಸಾಧ್ಯವಾಗಿದ್ದು ಅವರಲ್ಲಿರುವ ಆಳವಾದ ಜಾನಪದೀಯ ಪ್ರಜ್ಞೆ. ಜಾನಪದ ತಮ್ಮ ಧರ್ಮ ಎಂದು ಕೃತಿಗಳ ಮೂಲಕ ಬಿಂಬಿಸಿದವರು ಎಂದು ಬಣ್ಣಿಸಿದರು.
ಕನ್ನಡ ಸಾಹಿತ್ಯ ಲೋಕಕ್ಕೆ ಅತ್ಯುತ್ತಮ ಕೃತಿಗಳನ್ನು ನೀಡಿರುವ ಕಂಬಾರರು, ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಶ್ರೀಮಂತಗೊಳಿಸುವಲ್ಲಿ ಅದ್ಭುತವಾದ ಹಂಪಿ ವಿಶ್ವವಿದ್ಯಾಲಯ ಕಟ್ಟಿಕೊಟ್ಟಿದ್ದಾರೆ. ಇದು ಕವಿಯಾದವನು ಅದ್ಬುತಗಳನ್ನು ನೀಡುತ್ತಾನೆ ಎಂಬುದಕ್ಕೆ ಸಾಕ್ಷಿ. ಕುವೆಂಪು ಅವರು ಮೈಸೂರು ವಿವಿ ಕುಲಪತಿಯಾಗಿದ್ದಾಗ ಮೈಸೂರು ವಿವಿಗೆ ಹೊಸ ರೂಪ ನೀಡಿದ್ದರು ಎಂದು ಮೆಲುಕು ಹಾಕಿದರು.
ಶಿಕ್ಷಣ ತಜ್ಞ ಪ್ರೊ.ಕೆ.ಇ.ರಾಧಾಕೃಷ್ಣ ಮಾತನಾಡಿ, ಕೇವಲ ಪೆನ್ನು ಹಿಡಿದು ಬರೆಯುವುದಲ್ಲ; ಮನಸ್ಸಿನಾಳದಿಂದ ಬರೆಯುವುದು ಬರಹ. ಜಾನಪದ ಪರಿಸರದಲ್ಲಿ ಭಾರತೀಯ ಕಥನ ಪರಂಪರೆಯಲ್ಲಿ ಬೆಳೆದ ಕಂಬಾರರು ಮನಸ್ಸಿನಿಂದ ಬರೆದ ಸಾಹಿತಿ. ಆ ಮೂಲಕ ಕನ್ನಡಕ್ಕೆ ಅತ್ಯುತ್ತಮ ಸಾಹಿತ್ಯ ಕೃತಿಗಳನ್ನು ನೀಡಿದ್ದಾರೆ ಎಂದರು.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಪ್ರೊ. ಬೇಲೂರು ರಘುನಂದನ್ “ಡಾ. ಚಂದ್ರಶೇಖರ ಕಂಬಾರರ ನಾಟಕಗಳು: ದೇಸಿ ಪ್ರಜ್ಞೆ’ ಬಗ್ಗೆ ಹಾಗೂ ಸಂಶೋಧಕ ಪ್ರೊ. ರಾಜಕುಮಾರ ಬಡಿಗೇರ “ಡಾ.ಚಂದ್ರಶೇಖರ ಕಂಬಾರರು ಮತ್ತು ಕನ್ನಡಪರ ಕಾಳಜಿ’ ಕುರಿತು ಮಾತನಾಡಿದರು. ಪ್ರತಿಷ್ಠಾನದ ಅಧ್ಯಕ್ಷ ಎಂ. ಪ್ರಕಾಶ್‌ಮೂರ್ತಿ ಇದ್ದರು.