Advertisement

ಒಂದೂವರೆ ಶತಮಾನದತ್ತ ದಾಪುಗಾಲಿಡುತ್ತಿರುವ ಕಳವಾರು ಅನುದಾನಿತ ಹಿ. ಪ್ರಾ.ಶಾಲೆ

10:45 PM Dec 01, 2019 | Sriram |

19ನೇ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

ಸುರತ್ಕಲ್‌: ದ.ಕ. ಜಿಲ್ಲೆಯ ಮಂಗಳೂರು ತಾಲೂಕಿನ ಕಳವಾರು ಗ್ರಾಮದಲ್ಲಿ ಹಿರಿಯರಾದ ದಿ| ಕಳವಾರು ಶ್ಯಾನುಭೋಗರ ಮನೆ ಶಾಮರಾವ್‌, ದಿ| ಚಂದ್ರಹಾಸಯ್ಯ ಕಳವಾರು, ಶ್ಯಾನುಭೋಗ್‌ ಬಾಳ ಗೋಪಾಲಕೃಷ್ಣಯ್ಯ, ಪಠೇಲ್‌ ರಾಮಚಂದ್ರಯ್ಯ ಮೊದಲಾದವರ ಸಹಕಾರದಿಂದ ದಿ| ಬಾಳ ಮಜಲು ಮನೆ ಸುಬ್ಬರಾಯರು 1884ರ ಮಾಚ್‌ 6 ರಂದು ಕಳವಾರು ಮೂಲ ಪಾಠ ಶಾಲೆ ಎಂಬ ಹೆಸರಿನಲ್ಲಿ ಶಾಲೆಯನ್ನು ಆರಂಭಿಸಿದರು. ಈ ಶಾಲೆ ಆರಂಭವಾಗಿ 136 ವರ್ಷಗಳು ಕಳೆದಿವೆ.

ಪ್ರತಿಭಾವಂತರನ್ನು ಸಮಾಜಕ್ಕೆ ನೀಡಿದೆ
ಆ ಕಾಲದಲ್ಲಿ ಸೋರಂದಡಿ ಅನಂತಯ್ಯನವರ 0.09 ಸೆಂಟ್ಸ್‌ ಮೂಲ ಗೇಣಿ ಜಾಗದಲ್ಲಿ ಪ್ರಾರಂಭವಾದ ಕಿರಿಯ ಪ್ರಾಥಮಿಕ (1 ರಿಂದ 5) ಶಾಲೆಯು 1964ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ (6-7) ಮಾರ್ಪಟ್ಟಿತು. ಕಳವಾರು ಗುತ್ತು ಅಪ್ಪಯ್ಯ ಶೆಟ್ಟಿಯವರ ಸೊಸೆ ದಿ|ಅಂಬಾ ಶೆಟ್ಟಿ ಮತ್ತು ಮಕ್ಕಳು ದಾನವಾಗಿ ಕೊಟ್ಟ 0. 45 ಸೆಂಟ್ಸ್‌ ಜಾಗದಲ್ಲಿ ಶಾಲೆಗೆ ನೂತನ ಕಟ್ಟಡವಾಯಿತು.

ಅನುದಾನಿತ ಕಳವಾರು ಹಿರಿಯ ಪ್ರಾಥಮಿಕ ಶಾಲೆ ಬ್ರಿಟೀಷ್‌ ಆಡಳಿತದ ಅಂತಿಮ ಘಟ್ಟದ ಕಾಲದಲ್ಲಿ ಶಿಕ್ಷಣದ ಮಹತ್ವ ಅರಿತ ಮೇಧಾವಿಗಳಿಂದ ಅಸ್ತಿತ್ವಕ್ಕೆ ಬಂದ ಶಾಲೆ ಸಾವಿರಾರು ಪ್ರತಿಭಾವಂತರನ್ನು ಸಮಾಜಕ್ಕೆ ಅರ್ಪಿಸಿದೆ.

ಪ್ರಾರಂಭದಲ್ಲಿ ದಿ| ಸುಬ್ಬರಾಯರೇ ಮುಖ್ಯ ಶಿಕ್ಷಕರಾಗಿದ್ದರು. ಅನಂತರದಲ್ಲಿ ದಿ| ಬಾಳ ಮಜಲು ಮನೆ ನಾರಾಯಣ ರಾವ್‌, ದಿ| ಬಾಳ ವಾಸುದೇವ ರಾವ್‌, ದಿ| ಬಾಳ ಸುಬ್ರಹ್ಮಣ್ಯ ರಾವ್‌, ದಿ| ಬಾಳ ಜಯರಾಮ ರಾವ್‌, ದಿ| ಬಿ. ಮುರಲೀಧರ ರಾವ್‌, ಬಿ. ರವೀಂದ್ರ ರಾವ್‌ ಮೊದಲಾದವರು, ಸಹ ಶಿಕ್ಷಕರಾಗಿ ದಿ|ಬಿ. ಸಂಜೀವ ರಾವ್‌, ದಿ| ಪಠೇಲ್‌ ಸುಂದರ ರಾವ್‌, ದಿ| ಬಾಳ ಕುದುಕೋಳಿ ನಾರಾಯಣ ರಾವ್‌, ದಿ|ಬಾಳ ರಘುರಾಜ ರಾವ್‌, ದಿ| ಬಾಳ ಲಕ್ಷ್ಮೀ ನಾರಾಯಣ ರಾವ್‌, ದಿ| ಬಾಳ ಶ್ರೀನಿವಾಸ ರಾವ್‌, ದಿ| ಬಾಳ ಸಂಕಪ್ಪ ಮಾಸ್ತರ್‌, ಲಕ್ಷ್ಮೀಬಾಯಿ, ಸಂಪಾಬಾಯಿ, ವಿಜಯಲಕ್ಷ್ಮೀ ಬಿ. ಶೆಟ್ಟಿ, ಲೀನಾ ಲೋಬೋ, ಟಿ. ಹರಿರಾವ್‌, ದಿ| ಕೆ. ರಾಜಾರಾವ್‌, ಬಿ. ಪ್ರೇಮಚಂದ್ರ ಶೆಟ್ಟಿ ಮೊದಲಾದವರು ಶಾಲೆಗೆ ಸೇವೆಗೈದಿದ್ದಾರೆ.

Advertisement

ಎಂ.ಆರ್‌.ಪಿ.ಎಲ್‌. ಸಂಸ್ಥೆಗೆ ಜಾಗ ಸ್ವಾ ಧೀನವಾದ ಕಾರಣ ಎ. 10, 1994ರ ಕಳವಾರು ಗ್ರಾಮದಲ್ಲಿದ್ದ ಶಾಲೆಯು ಜೂ. 1 1994ರಿಂದ ಮಂಗಳೂರು ತಾಲೂಕಿನ ಚೇಳಾçರು ಗ್ರಾಮದ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಗೊಂಡಿತು. ಪ್ರಾರಂಭದಲ್ಲಿ ಆಡಳಿತ ಮಂಡಳಿ ನೆಲ ಅಂತಸ್ತನ್ನು ಕಟ್ಟಿತು. 1ನೇ ಮಾಳಿಗೆಯನ್ನು ಎಂ.ಆರ್‌.ಪಿ.ಎಲ್‌. ಸಂಸ್ಥೆಯು ನಿರ್ಮಿಸಿಕೊಟ್ಟಿದೆ. ಸರಕಾರದ ಇತ್ತೀಚೆಗಿನ ನಿಯಮದಿಂದಾಗಿ ಕನ್ನಡ ಮಾಧ್ಯಮಕ್ಕೆ ಮಕ್ಕಳು ಬರುವುದು ಕಡಿಮೆಯಾಗಿದೆ.ಅಧ್ಯಾಪಕರ ನೇಮಕ ಸಮಸ್ಯೆಯಾಗಿದೆ. ಈಗ 60 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ ಎನ್ನುತ್ತಾರೆ ನಿವೃತ್ತ ಮುಖ್ಯ ಶಿಕ್ಷಕ ಬಿ. ರವೀಂದ್ರರಾವ್‌.

ಈಗ ಶಾಲೆಯ ಆಡಳಿತವನ್ನು ಸೆ. 2012ರಿಂದ ವಿದ್ಯಾವಿಕಾಸ ಟ್ರಸ್ಟ್‌ ಸಂಪೂರ್ಣವಾಗಿ ನಡೆಸುತ್ತಿದೆ. ಅಧ್ಯಕ್ಷರಾಗಿ ಬಿ. ರಾಧಾಕೃಷ್ಣರಾವ್‌, ಸಂಚಾಲಕಿಯಾಗಿ ಬಿ. ಅಂಬಾ ಕುಮಾರಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಶೋಭಾ ಸಿ. ಹಾಗೂ ಅಭಿನೇತ್ರಿ, ತೇಜಶ್ರೀ ಎಂ., ಬಬಿತಾ, ಪ್ರೀತಿಕಾ ಸಹ ಶಿಕ್ಷಕಿಯಾಗಿ ದುಡಿಯುತ್ತಿದ್ದಾರೆ. ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಹಳೆ ವಿದ್ಯಾರ್ಥಿ ಸಂಘ, ರಕ್ಷಕ- ಶಿಕ್ಷಕ ಸಂಘವೂ ಇದೆ. ಜತೆಯಲ್ಲಿ ಶಾಲಾಭಿವೃದ್ಧಿ ಸಮಿತಿಯೂ ಇದೆ. ಪ್ರಸ್ತುತ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಬಿ. ರಾಘವ ಸನಿಲ್‌, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿ ರಾಜೇಶ್‌ ಶೆಟ್ಟಿ ಹಾಗೂ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಬಿ.ಗಂಗಾಧರ ಪೂಜಾರಿಯವರು ಸೇವೆ ಸಲ್ಲಿಸುತ್ತಿದ್ದಾರೆ.

ದತ್ತಿನಿಧಿ ಸ್ಥಾಪನೆ
ಕನ್ನಡ ಶಾಲೆಗಳ ಅಭಿವೃದ್ಧಿಗಾಗಿ ಎಂ.ಆರ್‌.ಪಿ.ಎಲ್‌. ಸಂಸ್ಥೆಯು ಶಾಲೆಯ ಎಲ್ಲ ಮಕ್ಕಳಿಗೆ ಸಮವಸ್ತ್ರ, ಪುಸ್ತಕಗಳು, ಪಠ್ಯ ಸಾಮಗ್ರಿ, ವಿದ್ಯಾರ್ಥಿವೇತನವನ್ನು ಕೂಡ ನೀಡುತ್ತಿದೆ. ಅಲ್ಲದೇ ಕೆಲವು ವಿದ್ಯಾಭಿಮಾನಿಗಳು ಹಾಗೂ ಹಳೆ ವಿದ್ಯಾರ್ಥಿಗಳು ದತ್ತಿನಿ ಧಿಗಳನ್ನು ಸ್ಥಾಪಿಸಿದ್ದಾರೆ.

ಶತ ಮಾನ ಗಳಿಂದ ಈ ಶಾಲೆ ಸಮಾಜಕ್ಕೆ ಶಿಕ್ಷಣದ ಮೂಲಕ ಸೇವೆ ಅರ್ಪಿಸುತ್ತಾ ಬಂದಿದೆ. ಈ ಶಾಲೆ ಅಂದಿನಿಂದ ಇಂದಿಗೂ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಕನ್ನಡದ ಜತೆ, ಆಂಗ್ಲ ಮಾಧ್ಯಮ ಆರಂಭಿಸಿದೆ. ಶಿಕ್ಷಕ ವರ್ಗದವರೂ ಸಂತಸದಿಂದಲೇ ಶಿಕ್ಷಣ ಸೇವೆಗೈಯುತ್ತಿದ್ದಾರೆ.
-ಶೋಭಾ ಚಿತ್ರಾಪುರ,
ಪ್ರಭಾರ ಮುಖ್ಯ ಶಿಕ್ಷಕಿ

ನಾನು ಕಲಿತ ಶಾಲೆಯಲ್ಲಿಯೇ ನನ್ನ ಇಬ್ಬರು ಪುತ್ರಿಯರನ್ನು ಕಲಿಸಿದ್ದೇನೆ. ಉತ್ತಮ ಸಂಸ್ಕಾರವಂತ ಶಿಕ್ಷಣ ಪಡೆದ ಹೆಮ್ಮೆ ನಮಗಿದೆ.
-ಗಂಗಾಧರ ಪೂಜಾರಿ
ಹಳೆ ವಿದ್ಯಾರ್ಥಿ

-ಲಕ್ಷ್ಮೀ ನಾರಾಯಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next